Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಹಾನ 3:1-18

ಯೇಸು ಮತ್ತು ನಿಕೊದೇಮ

ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು. ಒಂದು ರಾತ್ರಿ ನಿಕೊದೇಮನು ಯೇಸುವಿನ ಬಳಿಗೆ ಬಂದನು. ನಿಕೊದೇಮನು, “ಗುರುವೇ, ನೀನು ದೇವರಿಂದ ಕಳುಹಿಸಲ್ಪಟ್ಟ ಉಪದೇಶಕನೆಂದು ನಮಗೆ ಗೊತ್ತಿದೆ. ನೀನು ಮಾಡುವ ಈ ಸೂಚಕಕಾರ್ಯಗಳನ್ನು ದೇವರ ಸಹಾಯದಿಂದಲ್ಲದೆ ಯಾರೂ ಮಾಡಲಾರರು” ಎಂದು ಹೇಳಿದನು.

ಯೇಸು “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಹೊಸದಾಗಿ ಹುಟ್ಟಲೇಬೇಕು. ಒಬ್ಬನು ಹೊಸದಾಗಿ ಹುಟ್ಟಿಲ್ಲದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಉತ್ತರಿಸಿದನು.

ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಒಬ್ಬನು ತನ್ನ ತಾಯಿಯ ಗರ್ಭದೊಳಗೆ ಮತ್ತೆ ಪ್ರವೇಶಿಸಲು ಸಾಧ್ಯವೇ?” ಎಂದು ಕೇಳಿದನು.

ಅದಕ್ಕೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟಲೇಬೇಕು. ಇಲ್ಲವಾದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು. ದೇಹವು ಮಾನುಷ ತಂದೆತಾಯಿಗಳಿಂದ ಹುಟ್ಟಿದ್ದು. ಆದರೆ ಆತ್ಮಿಕ ಜೀವನವು ಆತ್ಮನಿಂದ ಹುಟ್ಟಿದ್ದು. ‘ನೀನು ಹೊಸದಾಗಿ ಹುಟ್ಟಲೇಬೇಕು’ ಎಂದು ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ. ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.

ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.

10 ಯೇಸು, “ನೀನು ಇಸ್ರೇಲಿನ ಉಪದೇಶಕನಾಗಿರುವೆ. ಆದರೆ ನಿನಗೆ ಈ ಸಂಗತಿಗಳು ಇನ್ನೂ ಅರ್ಥವಾಗುವುದಿಲ್ಲವೇ? 11 ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನಮಗೆ ಗೊತ್ತಿರುವುದರ ಬಗ್ಗೆ ನಾವು ಮಾತಾಡುತ್ತೇವೆ. ನಾವು ಕಂಡದ್ದರ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ನಾವು ಹೇಳುವುದನ್ನು ನೀವು ಸ್ವೀಕರಿಸಿಕೊಳ್ಳುವುದಿಲ್ಲ. 12 ನಾನು ನಿಮಗೆ ಭೂಲೋಕದ ಸಂಗತಿಗಳ ಬಗ್ಗೆ ಹೇಳಿದೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. ಆದ್ದರಿಂದ ನಾನು ಪರಲೋಕದ ಸಂಗತಿಗಳ ಬಗ್ಗೆ ನಿನಗೆ ಹೇಳಿದರೂ ನೀವು ಖಂಡಿತವಾಗಿ ನಂಬುವುದಿಲ್ಲ! 13 ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.

14 “ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು. 15 ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.

16 ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17 ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು. 18 ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International