Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಹಾನ 1:1-28

ಜಗತ್ತಿಗೆ ಕ್ರಿಸ್ತನ ಆಗಮನ

ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ[a] ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು. ಆರಂಭದಲ್ಲಿ ಆತನು ದೇವರೊಂದಿಗೆ ಇದ್ದನು. ಎಲ್ಲಾ ವಸ್ತುಗಳು ಆತನ ಮೂಲಕ ನಿರ್ಮಾಣಗೊಂಡವು. ಆತನಿಲ್ಲದೆ ಯಾವುದೂ ನಿರ್ಮಿತವಾಗಲಿಲ್ಲ. ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ. ಆದರೆ ಕತ್ತಲೆಯು ಬೆಳಕನ್ನು ಮುಸುಕಲಿಲ್ಲ.

ಯೋಹಾನ[b] ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು. ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು. ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು. ನಿಜವಾದ ಬೆಳಕು ಈ ಲೋಕಕ್ಕೆ ಆಗಮಿಸಲಿತ್ತು. ಈ ನಿಜವಾದ ಬೆಳಕೇ ಎಲ್ಲಾ ಜನರಿಗೆ ಬೆಳಕನ್ನು ಕೊಡುತ್ತದೆ.

10 ವಾಕ್ಯ ಎಂಬಾತನು ಆಗಲೇ ಈ ಲೋಕದಲ್ಲಿದ್ದನು. ಈ ಲೋಕವು ವಾಕ್ಯ ಎಂಬಾತನ ಮೂಲಕ ನಿರ್ಮಾಣಗೊಂಡಿತು. ಆದರೆ ಈ ಲೋಕದವರು ಆತನನ್ನು ತಿಳಿದಿರಲಿಲ್ಲ. 11 ಆತನು ತನ್ನ ಸ್ವಾಸ್ತ್ಯಕ್ಕೆ ಬಂದನು. ಆದರೆ ಆತನ ಸ್ವಂತ ಜನರು ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ. 12 ಯಾರ್ಯಾರು ಆತನನ್ನು ಸ್ವೀಕರಿಸಿಕೊಂಡರೋ ಅಂದರೆ ಆತನಲ್ಲಿ ನಂಬಿಕೆ ಇಟ್ಟರೋ ಅವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. 13 ಇವರು ರಕ್ತದಿಂದಾಗಲಿ ಕಾಮದಿಂದಾಗಲಿ ಪುರುಷನ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ. ಇವರು ದೇವರಿಂದಲೇ ಹುಟ್ಟಿದವರು.

14 ವಾಕ್ಯ ಎಂಬಾತನು ಮನುಷ್ಯನಾಗಿ ನಮ್ಮೊಂದಿಗೆ ವಾಸಿಸಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಒಬ್ಬನೇ ಮಗನಿಗಿರುವ ಮಹಿಮೆಯಾಗಿತ್ತು. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. 15 ಯೋಹಾನನು ಆತನ ಬಗ್ಗೆ ಜನರಿಗೆ ತಿಳಿಸುತ್ತಾ, “‘ನನ್ನ ನಂತರ ಬರುವ ಒಬ್ಬನು ನನಗಿಂತಲೂ ಶ್ರೇಷ್ಠನಾಗಿದ್ದಾನೆ. ಆತನು ನನಗಿಂತ ಮೊದಲೇ ಜೀವಿಸುತ್ತಿದ್ದನು’ ಎಂದು ನಾನು ಹೇಳಿದಾಗ ಈತನ ಬಗ್ಗೆಯೇ ಮಾತಾಡುತ್ತಿದ್ದೆನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.

16 ವಾಕ್ಯ ಎಂಬಾತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಆತನಿಂದಲೇ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 17 ಧರ್ಮಶಾಸ್ತ್ರವು ಮೋಶೆಯ ಮೂಲಕ ಕೊಡಲ್ಪಟ್ಟಿತು. ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮೂಲಕ ಬಂದವು. 18 ದೇವರನ್ನು ಯಾರೂ ಎಂದೂ ಕಂಡಿಲ್ಲ. ಆದರೆ ಒಬ್ಬನೇ ಮಗನು (ಯೇಸು) ದೇವರಾಗಿದ್ದಾನೆ ಮತ್ತು ಆತನು ತಂದೆಯ (ದೇವರ) ಎದೆಯಲ್ಲಿದ್ದಾನೆ. ಆತನೇ ತಂದೆಯನ್ನು ತಿಳಿಯಪಡಿಸಿದ್ದಾನೆ.

ಯೇಸುವಿನ ಕುರಿತು ಯೋಹಾನನ ಸಂದೇಶ

(ಮತ್ತಾಯ 3:1-12; ಮಾರ್ಕ 1:2-8; ಲೂಕ 3:15-17)

19 “ನೀನು ಯಾರು?” ಎಂದು ಯೋಹಾನನನ್ನು ಕೇಳುವುದಕ್ಕಾಗಿ ಜೆರುಸಲೇಮಿನ ಯೆಹೂದ್ಯರು ಯೋಹಾನನ ಬಳಿಗೆ ಕೆಲವು ಯಾಜಕರನ್ನು ಮತ್ತು ಲೇವಿಯರನ್ನು ಕಳುಹಿಸಿದರು. 20 ಯೋಹಾನನು ಮರೆಮಾಚದೆ, “ನಾನು ಕ್ರಿಸ್ತನಲ್ಲ” ಎಂದು ಹೇಳಿದನು.

21 ಯೆಹೂದ್ಯರು ಯೋಹಾನನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೋ?”[c] ಎಂದು ಕೇಳಿದರು.

ಅವನು, “ಇಲ್ಲ, ನಾನು ಎಲೀಯನಲ್ಲ” ಎಂದು ಉತ್ತರಿಸಿದನು.

ಯೆಹೂದ್ಯರು, “ನೀನು ಪ್ರವಾದಿಯೋ?” ಎಂದು ಕೇಳಿದರು.

ಯೋಹಾನನು, “ಇಲ್ಲ, ನಾನು ಪ್ರವಾದಿಯಲ್ಲ” ಎಂದು ಉತ್ತರಕೊಟ್ಟನು.

22 ಆಗ ಯೆಹೂದ್ಯರು, “ನಮಗೆ ಹೇಳು. ನಮ್ಮನ್ನು ಕಳುಹಿಸಿದವರಿಗೆ ನಾವು ತಿಳಿಸಬೇಕಾಗಿದೆ. ನಿನ್ನ ಬಗ್ಗೆ ನೀನು ಏನು ಹೇಳುವೆ?” ಎಂದು ಕೇಳಿದರು.

23 ಅದಕ್ಕೆ ಯೋಹಾನನು,

“‘ಪ್ರಭುವಿಗಾಗಿ ನೇರವಾದ ದಾರಿಯನ್ನು ಸಿದ್ಧಗೊಳಿಸಿರಿ’
    ಎಂದು ಅಡವಿಯಲ್ಲಿ ಕೂಗುವವನ ಸ್ವರವೇ ನಾನು”(A)

ಎಂದು ಪ್ರವಾದಿಯಾದ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು.

24 ಕಳುಹಿಸಲ್ಪಟ್ಟಿದ್ದವರಲ್ಲಿ ಕೆಲವು ಮಂದಿ ಫರಿಸಾಯರೂ[d] ಇದ್ದರು. 25 ಅವರು ಅವನಿಗೆ, “ನೀನು ನಿನ್ನ ಬಗ್ಗೆ, ‘ನಾನು ಕ್ರಿಸ್ತನೂ ಅಲ್ಲ, ಎಲೀಯನೂ ಅಲ್ಲ, ಪ್ರವಾದಿಯೂ ಅಲ್ಲ’ ಎಂದು ಹೇಳುತ್ತಿರುವೆ. ಹಾಗಾದರೆ ನೀನು ಜನರಿಗೆ ಏಕೆ ದೀಕ್ಷಾಸ್ನಾನ ಮಾಡಿಸುವೆ?” ಎಂದು ಕೇಳಿದರು.

26 ಯೋಹಾನನು, “ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನಿಮಗೆ ಗೊತ್ತಿಲ್ಲದ ಒಬ್ಬನು ಇಲ್ಲಿದ್ದಾನೆ. 27 ನನ್ನ ನಂತರ ಬರುವವನು ಆತನೇ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಎಂದು ಹೇಳಿದನು.

28 ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿ ಎಂಬ ಊರಲ್ಲಿ ಈ ಸಂಗತಿಗಳೆಲ್ಲಾ ನಡೆದವು. ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದದ್ದು ಇಲ್ಲಿಯೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International