Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 24:36-53

ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು

(ಮತ್ತಾಯ 28:16-20; ಮಾರ್ಕ 16:14-18; ಯೋಹಾನ 20:19-23; ಅ.ಕಾ. 1:6-8)

36 ಅವರಿಬ್ಬರೂ ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಯೇಸುವು ಶಿಷ್ಯರ ಗುಂಪಿನ ಮಧ್ಯದಲ್ಲಿ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಾಗಲಿ” ಅಂದನು.

37 ಆಗ ಶಿಷ್ಯರು ಬೆರಗಾದರು. ಅವರಿಗೆ ಭಯವಾಯಿತು. ಅದು ಭೂತವೇ ಇರಬೇಕೆಂದು ಅವರು ಭಾವಿಸಿದರು. 38 ಆದರೆ ಯೇಸು, “ನೀವು ಏಕೆ ಗಲಿಬಿಲಿಗೊಂಡಿದ್ದೀರಿ? ನೀವು ಕಣ್ಣಾರೆ ಕಂಡರೂ ಏಕೆ ಸಂಶಯಪಡುತ್ತೀರಿ? 39 ನನ್ನ ಕೈಗಳನ್ನು ಮತ್ತು ಪಾದಗಳನ್ನು ನೋಡಿರಿ. ನಾನೇ ಅಲ್ಲವೇ! ನನ್ನನ್ನು ಮುಟ್ಟಿರಿ. ನನ್ನ ಈ ಜೀವಂತ ದೇಹವನ್ನು ನೀವೇ ನೋಡಿರಿ. ಭೂತಕ್ಕೆ ಈ ರೀತಿಯ ದೇಹವಿರುವುದಿಲ್ಲ” ಅಂದನು.

40 ಯೇಸು ಅವರಿಗೆ ಇದನ್ನು ಹೇಳಿದ ನಂತರ, ತನ್ನ ಕೈಗಳಲ್ಲಿ ಮತ್ತು ಪಾದಗಳಲ್ಲಿರುವ ಗಾಯದ ಗುರುತುಗಳನ್ನು ತೋರಿಸಿದನು. 41 ಶಿಷ್ಯರು ಅತ್ಯಾಶ್ಚರ್ಯಗೊಂಡರು ಮತ್ತು ಯೇಸುವನ್ನು ಜೀವಂತವಾಗಿ ಕಂಡು ಅತ್ಯಂತ ಸಂತೋಷಪಟ್ಟರು. ಆದರೆ ಅವರಿಗಿನ್ನೂ ನಂಬಲಾಗಲಿಲ್ಲ. ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದನು. 42 ಅವರು ಸುಟ್ಟ ಮೀನಿನ ತುಂಡನ್ನು ಕೊಟ್ಟರು. 43 ಶಿಷ್ಯರ ಕಣ್ಣೆದುರಿನಲ್ಲಿಯೇ, ಯೇಸು ಆ ಮೀನನ್ನು ತೆಗೆದುಕೊಂಡು ತಿಂದನು.

44 ಯೇಸು ಅವರಿಗೆ, “ನಾನು ಮೊದಲು ನಿಮ್ಮ ಸಂಗಡ ಇದ್ದುದನ್ನು ಜ್ಞಾಪಕಮಾಡಿಕೊಳ್ಳಿರಿ. ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವಾದಿಗಳ ಗ್ರಂಥಗಳಲ್ಲಿ, ಕೀರ್ತನೆಗಳಲ್ಲಿ ಬರೆದಿರುವ ಪ್ರತಿಯೊಂದು ಸಂಗತಿಯೂ ನೆರವೇರಬೇಕಾಗಿದೆ ಎಂದು ನಾನು ಹೇಳಿದೆನು” ಅಂದನು.

45 ಬಳಿಕ ಯೇಸು ಪವಿತ್ರ ಗ್ರಂಥವನ್ನು ತನ್ನ ಶಿಷ್ಯರಿಗೆ ವಿವರಿಸಿದನು. ತನ್ನ ಬಗ್ಗೆ ಬರೆದಿರುವ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿದನು. 46 ಬಳಿಕ ಯೇಸು ಅವರಿಗೆ, “ಕ್ರಿಸ್ತನು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎದ್ದುಬರುವನು ಎಂದು ಬರೆಯಲ್ಪಟ್ಟಿದೆ. 47-48 ಈ ಸಂಗತಿಗಳು ನೆರವೇರುವುದನ್ನು ನೀವು ನೋಡಿದಿರಿ. ನೀವೇ ಇದಕ್ಕೆ ಸಾಕ್ಷಿಗಳು. ನೀವು ಜನರ ಬಳಿಗೆ ಹೋಗಿ, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವವರಿಗೆ ಪಾಪಕ್ಷಮೆಯಾಗುತ್ತದೆ ಎಂದು ತಿಳಿಸಿರಿ. ನೀವು ಈ ಸುವಾರ್ತೆಯನ್ನು ಜೆರುಸಲೇಮಿನಲ್ಲಿ ಪ್ರಾರಂಭಿಸಿ ಲೋಕದ ಜನರೆಲ್ಲರಿಗೂ ನನ್ನ ಹೆಸರಿನಲ್ಲಿ ತಿಳಿಸಬೇಕು. 49 ಕೇಳಿರಿ! ನನ್ನ ತಂದೆ ನಿಮಗೆ ವಾಗ್ದಾನ ಮಾಡಿದ್ದನ್ನು ನಾನು ನಿಮಗೆ ಕಳುಹಿಸಿಕೊಡುತ್ತೇನೆ. ಆದರೆ ನೀವು ಪರಲೋಕದಿಂದ ಆ ಶಕ್ತಿಯನ್ನು ಪಡೆಯುವ ತನಕ ಜೆರುಸಲೇಮಿನಲ್ಲೇ ಕಾದುಕೊಂಡಿರಿ” ಅಂದನು.

ಯೇಸುವಿನ ಪರಲೋಕಾರೋಹಣ

(ಮಾರ್ಕ 16:19-20; ಅ.ಕಾ. 1:9-11)

50 ಯೇಸು ತನ್ನ ಶಿಷ್ಯರನ್ನು ಜೆರುಸಲೇಮಿನ ಹೊರಗೆ ಬೆಥಾನಿಯದ ಸಮೀಪಕ್ಕೆ ಕರೆದುಕೊಂಡು ಹೋದನು. ಯೇಸು ತನ್ನ ಕೈಗಳನ್ನು ಎತ್ತಿ ಶಿಷ್ಯರನ್ನು ಆಶೀರ್ವದಿಸಿದನು. 51 ಯೇಸು ಅವರನ್ನು ಆಶೀರ್ವದಿಸುತ್ತಿದ್ದಾಗ ಅವರಿಂದ ಬೇರ್ಪಟ್ಟು ಪರಲೋಕಕ್ಕೆ ಎತ್ತಲ್ಪಟ್ಟನು. 52 ಶಿಷ್ಯರು ಅಲ್ಲಿ ಆತನನ್ನು ಆರಾಧಿಸಿದರು. ಬಳಿಕ ಅವರು ಪಟ್ಟಣಕ್ಕೆ ಹಿಂತಿರುಗಿ ಹೋದರು. ಅವರು ಬಹಳ ಸಂತೋಷಗೊಂಡಿದ್ದರು. 53 ಅವರು ಯಾವಾಗಲೂ ದೇವಾಲಯದಲ್ಲಿ ದೇವರನ್ನು ಸ್ತುತಿಸುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International