Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 22:31-46

ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ!

(ಮತ್ತಾಯ 26:31-35; ಮಾರ್ಕ 14:27-31; ಯೋಹಾನ 13:36-38)

31 “ಒಬ್ಬ ರೈತನು ತನ್ನ ಗೋಧಿಯನ್ನು ತೂರುವಂತೆ ಸೈತಾನನು ನಿಮ್ಮನ್ನು ಶೋಧಿಸಲು ಕೇಳಿಕೊಂಡನು. ಸೀಮೋನನೇ, ಸೀಮೋನನೇ (ಪೇತ್ರ) 32 ನಿನ್ನ ನಂಬಿಕೆಯು ಕುಂದಿಹೋಗಬಾರದೆಂದು ನಾನು ಪ್ರಾರ್ಥಿಸಿದೆನು! ನೀನು ಪರಿವರ್ತನೆಗೊಂಡ ನಂತರ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು.

33 ಅದಕ್ಕೆ ಪೇತ್ರನು ಯೇಸುವಿಗೆ, “ಪ್ರಭುವೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು.

34 ಅದಕ್ಕೆ ಯೇಸು, “ಪೇತ್ರನೇ, ನಾಳೆ ಬೆಳಿಗ್ಗೆ ಕೋಳಿ ಕೂಗುವ ಮೊದಲು ನನ್ನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವೆ!” ಅಂದನು.

ಕಷ್ಟವನ್ನು ಎದುರಿಸಲು ಸಿದ್ಧರಾಗಿರಿ

35 ಬಳಿಕ ಯೇಸು ಅಪೊಸ್ತಲರಿಗೆ, “ಜನರಿಗೆ ಬೋಧಿಸುವುದಕ್ಕೆ ನಾನು ನಿಮ್ಮನ್ನು ಹಣವಿಲ್ಲದೆ, ಚೀಲವಿಲ್ಲದೆ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದೆನು. ಆದರೆ ನಿಮಗೆ ಏನಾದರೂ ಕೊರತೆ ಆಯಿತೇ?” ಎಂದು ಕೇಳಿದನು.

ಅಪೊಸ್ತಲರು, “ಇಲ್ಲ” ಅಂದರು.

36 ಯೇಸು ಅವರಿಗೆ, “ಆದರೆ ಈಗ ನಿಮ್ಮಲ್ಲಿ ಹಣವಾಗಲಿ ಚೀಲವಾಗಲಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿರಿ. ನಿಮ್ಮಲ್ಲಿ ಖಡ್ಗವಿಲ್ಲದಿದ್ದರೆ, ನಿಮ್ಮ ಮೇಲಂಗಿಯನ್ನು ಮಾರಿ ಒಂದು ಖಡ್ಗವನ್ನು ಕೊಂಡುಕೊಳ್ಳಿರಿ.

37 ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನನ್ನ ಬಗ್ಗೆ ಬರೆಯಲ್ಪಟ್ಟಿರುವ ಈ ಮಾತು ನೆರವೇರಬೇಕಾಗಿದೆ ಮತ್ತು ಈಗ ನೆರವೇರುತ್ತಿದೆ” ಎಂದು ಹೇಳಿದನು.

38 ಶಿಷ್ಯರು, “ಪ್ರಭುವೇ, ಇಲ್ಲಿ ನೋಡು, ಎರಡು ಖಡ್ಗಗಳಿವೆ” ಎಂದು ಹೇಳಿದರು.

ಯೇಸು “ಅಷ್ಟು ಸಾಕು” ಅಂದನು.

ಅಪೊಸ್ತಲರ ಪ್ರಾರ್ಥನೆಯ ಅಗತ್ಯತೆ

(ಮತ್ತಾಯ 26:36-46; ಮಾರ್ಕ 14:32-42)

39 ಯೇಸು ಪಟ್ಟಣದಿಂದ (ಜೆರುಸಲೇಮ್) ಆಲಿವ್ ಮರಗಳ ಗುಡ್ಡಕ್ಕೆ ಹೋದನು. 40 ಆತನ ಶಿಷ್ಯರೂ ಆತನೊಡನೆ ಹೋದರು. (ಯೇಸು ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದನು.) ಯೇಸು ತನ್ನ ಶಿಷ್ಯರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

41 ಬಳಿಕ ಯೇಸು ಅವರಿಂದ ಸುಮಾರು ನೂರೈವತ್ತು ಅಡಿ ದೂರ ಹೋದನು. ಆತನು ಮೊಣಕಾಲೂರಿ, 42 “ತಂದೆಯೇ, ನಿನಗೆ ಇಷ್ಟವಿದ್ದರೆ, ಈ ಶ್ರಮೆಯ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಇಷ್ಟದಂತಾಗದೆ ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 43 ಆಗ ಪರಲೋಕದಿಂದ ಒಬ್ಬ ದೇವದೂತನು ಕಾಣಿಸಿಕೊಂಡನು. ಯೇಸುವನ್ನು ಬಲಪಡಿಸುವುದಕ್ಕಾಗಿ ಈ ದೇವದೂತನನ್ನು ಕಳುಹಿಸಲಾಗಿತ್ತು. 44 ಯೇಸುವಿಗೆ ತುಂಬಾ ವೇದನೆಯಿತ್ತು. ಆತನು ಪ್ರಾರ್ಥನೆಯಲ್ಲಿ ಕಷ್ಟಪಟ್ಟು ಹೋರಾಡಿದನು. ಆತನ ಮುಖದಲ್ಲಿ ಬೆವರು ರಕ್ತದೋಪಾದಿಯಲ್ಲಿ ತೊಟ್ಟಿಕ್ಕತೊಡಗಿತು. 45 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.) 46 ಯೇಸು ಅವರಿಗೆ, “ನೀವು ಏಕೆ ನಿದ್ರಿಸುತ್ತಿದ್ದೀರಿ? ಎದ್ದೇಳಿರಿ! ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International