New Testament in a Year
ಯೇಸುವನ್ನು ಕೊಲ್ಲಲು ಯೆಹೂದ್ಯನಾಯಕರ ಸಂಚು
(ಮತ್ತಾಯ 26:1-5,14-16; ಮಾರ್ಕ 14:1-2,10-11; ಯೋಹಾನ 11:45-53)
22 ಯೆಹೂದ್ಯರ ಹುಳಿಯಿಲ್ಲದ ರೊಟ್ಟಿಯ ಹಬ್ಬ ಅಂದರೆ ಪಸ್ಕಹಬ್ಬವು ಹತ್ತಿರವಾಗಿತ್ತು. 2 ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸುತ್ತಾ ಜನರ ಭಯದಿಂದ ತಕ್ಕ ಮಾರ್ಗವನ್ನು ಹುಡುಕತೊಡಗಿದರು.
ಯೇಸುವಿನ ವಿರುದ್ಧ ಯೂದನು ಮಾಡಿದ ಸಂಚು
3 ಯೇಸುವಿನ ಹನ್ನೆರಡು ಅಪೊಸ್ತಲರಲ್ಲಿ ಇಸ್ಕರಿಯೋತ ಯೂದನು ಒಬ್ಬನಾಗಿದ್ದನು. ಸೈತಾನನು ಇವನೊಳಗೆ ಪ್ರವೇಶಿಸಿ ಕೆಟ್ಟಕಾರ್ಯವೊಂದನ್ನು ಮಾಡುವಂತೆ ಪ್ರೇರೇಪಿಸಿದನು. 4 ಯೂದನು ಮಹಾಯಾಜಕರ ಮತ್ತು ದೇವಾಲಯವನ್ನು ಕಾಯುತ್ತಿದ್ದ ಕೆಲವು ಸೈನಿಕರ ಬಳಿಗೆ ಹೋಗಿ, ಯೇಸುವನ್ನು ಹಿಡಿದುಕೊಡುವುದರ ಬಗ್ಗೆ ಅವರೊಂದಿಗೆ ಮಾತಾಡಿದನು. 5 ಯಾಜಕರಿಗೆ ಬಹಳ ಸಂತೋಷವಾಯಿತು. ಯೇಸುವನ್ನು ತಮಗೆ ಹಿಡಿದುಕೊಟ್ಟರೆ ಹಣ ಕೊಡುವುದಾಗಿ ಅವರು ಯೂದನಿಗೆ ಮಾತುಕೊಟ್ಟರು. 6 ಯೂದನು ಅದಕ್ಕೆ ಒಪ್ಪಿದನು. ಬಳಿಕ ಯೇಸುವನ್ನು ಅವರಿಗೆ ಹಿಡಿದುಕೊಡಲು ಉತ್ತಮವಾದ ಸಮಯಕ್ಕಾಗಿ ಕಾಯತೊಡಗಿದನು. ತನ್ನ ಈ ಕಾರ್ಯವನ್ನು ಯಾರಿಗೂ ತಿಳಿಯದಂಥ ಸಮಯದಲ್ಲಿ ಮಾಡಬೇಕೆಂಬುದು ಅವನ ಬಯಕೆಯಾಗಿತ್ತು.
ಪಸ್ಕದ ಊಟಕ್ಕೆ ಸಿದ್ಧತೆ
(ಮತ್ತಾಯ 26:17-25; ಮಾರ್ಕ 14:12-21; ಯೋಹಾನ 13:21-30)
7 ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿನ ಬಂತು. ಯೆಹೂದ್ಯರು ಪಸ್ಕದ ಕುರಿಮರಿಗಳನ್ನು ಕೊಯ್ಯುವ ದಿನ ಅದಾಗಿತ್ತು. 8 ಯೇಸುವು ಪೇತ್ರ ಮತ್ತು ಯೋಹಾನರಿಗೆ, “ಹೋಗಿ, ಪಸ್ಕದ ಊಟವನ್ನು ನಮಗಾಗಿ ಸಿದ್ಧಮಾಡಿರಿ” ಎಂದು ಹೇಳಿದನು.
9 ಪೇತ್ರ ಮತ್ತು ಯೋಹಾನರು, “ಊಟವನ್ನು ಎಲ್ಲಿ ಸಿದ್ಧಮಾಡಬೇಕು?” ಎಂದು ಯೇಸುವಿಗೆ ಕೇಳಿದರು.
10 ಯೇಸು ಅವರಿಗೆ, “ಕೇಳಿರಿ! ನೀವು ಪಟ್ಟಣದೊಳಗೆ (ಜೆರುಸಲೇಮಿಗೆ) ಹೋದನಂತರ, ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನನ್ನು ನೋಡುವಿರಿ. ಅವನನ್ನೇ ಹಿಂಬಾಲಿಸಿರಿ. ಅವನು ಒಂದು ಮನೆಯೊಳಗೆ ಹೋಗುವನು. ನೀವು ಅವನೊಂದಿಗೆ ಹೋಗಿರಿ. 11 ಆ ಮನೆಯ ಯಜಮಾನನಿಗೆ, ‘ಗುರುವು ತನ್ನ ಶಿಷ್ಯರೊಂದಿಗೆ ಯಾವ ಕೋಣೆಯಲ್ಲಿ ಪಸ್ಕದ ಊಟವನ್ನು ಮಾಡಬೇಕೆಂಬುದನ್ನು ದಯಮಾಡಿ ತೋರಿಸು’ ಎಂದು ಹೇಳಿರಿ. 12 ಆಗ ಮನೆಯ ಯಜಮಾನನು ಮೇಲಂತಸ್ತಿನಲ್ಲಿ ಒಂದು ದೊಡ್ಡ ಕೋಣೆಯನ್ನು ತೋರಿಸುವನು. ಈ ಕೋಣೆಯು ನಿಮಗಾಗಿ ಸಿದ್ಧವಾಗಿರುವುದು. ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿರಿ” ಅಂದನು.
13 ಆದ್ದರಿಂದ ಪೇತ್ರ ಮತ್ತು ಯೋಹಾನ ಹೊರಟರು. ಯೇಸು ಹೇಳಿದ ಹಾಗೆ ಪ್ರತಿಯೊಂದೂ ನಡೆಯಿತು. ಅವರು ಪಸ್ಕದ ಊಟವನ್ನು ಅಲ್ಲಿ ಸಿದ್ಧಮಾಡಿದರು.
ಪ್ರಭುವಿನ ರಾತ್ರಿ ಭೋಜನ
(ಮತ್ತಾಯ 26:26-30; ಮಾರ್ಕ 14:22-26; 1 ಕೊರಿಂಥ. 11:23-25)
14 ಪಸ್ಕದ ಊಟಮಾಡುವ ಸಮಯ ಬಂತು. ಯೇಸು ಮತ್ತು ಅಪೊಸ್ತಲರು ಮೇಜಿನ ಸುತ್ತಲೂ ಊಟಕ್ಕೆ ಕುಳಿತುಕೊಂಡರು. 15 ಯೇಸು ಅವರಿಗೆ, “ನಾನು ಸಾಯುವ ಮೊದಲು ಈ ಪಸ್ಕದ ಊಟ ಮಾಡಲು ಬಹಳವಾಗಿ ಅಪೇಕ್ಷಿಸಿದ್ದೇನೆ. 16 ಇದರ ನಿಜವಾದ ಅರ್ಥವು ದೇವರ ರಾಜ್ಯದಲ್ಲಿ ನೆರವೇರುವ ತನಕ, ನಾನೆಂದಿಗೂ ಇನ್ನೊಂದು ಪಸ್ಕದ ಊಟವನ್ನು ಮಾಡುವುದೇ ಇಲ್ಲ” ಅಂದನು.
17 ಬಳಿಕ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಆತನು, “ಈ ಪಾತ್ರೆಯಲ್ಲಿರುವ ದ್ರಾಕ್ಷಾರಸವನ್ನು ನೀವೆಲ್ಲರೂ ಹಂಚಿಕೊಳ್ಳಿರಿ. 18 ದೇವರ ರಾಜ್ಯ ಬರುವ ತನಕ, ನಾನೆಂದಿಗೂ ತಿರುಗಿ ದ್ರಾಕ್ಷಾರಸ ಕುಡಿಯುವುದಿಲ್ಲ” ಅಂದನು.
19 ಆಮೇಲೆ ಯೇಸು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ರೊಟ್ಟಿಗಾಗಿ ದೇವರಿಗೆ ಸ್ತೋತ್ರಮಾಡಿ ಅದನ್ನು ಮುರಿದು ಅಪೊಸ್ತಲರಿಗೆ ಕೊಟ್ಟನು. ಬಳಿಕ ಯೇಸು, “ನಾನು ನಿಮಗೋಸ್ಕರ ಕೊಡುತ್ತಿರುವ ನನ್ನ ದೇಹವಿದು. ನನ್ನನ್ನು ನೆನಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿರಿ” ಅಂದನು. 20 ಅದೇ ರೀತಿಯಾಗಿ, ಊಟವಾದ ನಂತರ, ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, “ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯನ್ನು ಇದು ಸೂಚಿಸುತ್ತದೆ. ನಾನು ನಿಮಗಾಗಿ ಕೊಡುತ್ತಿರುವ ರಕ್ತದಿಂದ ಈ ಹೊಸ ಒಡಂಬಡಿಕೆ ಪ್ರಾರಂಭವಾಗುತ್ತದೆ” ಅಂದನು.
ಯೇಸುವಿಗೆ ಯಾರು ವಿರೋಧಿಗಳಾಗುವರು?
21 ಯೇಸು, “ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ. 22 ಮನುಷ್ಯಕುಮಾರನು ದೇವರ ಯೋಜನೆಗನುಸಾರವಾಗಿ ಮರಣಹೊಂದುವನು. ಆದರೆ ಮನುಷ್ಯಕುಮಾರನನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಡುವ ವ್ಯಕ್ತಿಗೆ ಬಹಳ ಕೇಡಾಗುವುದು” ಎಂದು ಹೇಳಿದನು.
23 ಆಗ ಅಪೊಸ್ತಲರು, “ನಮ್ಮಲ್ಲಿ ಯಾವನು ಇಂಥ ದುಷ್ಕೃತ್ಯ ಮಾಡುವನು?” ಎಂದು ಒಬ್ಬರನ್ನೊಬ್ಬರು ಕೇಳಿಕೊಂಡರು.
ಸೇವಕರಂತಿರಿ
24 ಬಳಿಕ ಅಪೊಸ್ತಲರು ತಮ್ಮಲ್ಲಿ ಯಾರು ಅತಿ ಶ್ರೇಷ್ಠರೆಂದು ವಾದ ಮಾಡತೊಡಗಿದರು. 25 ಆಗ ಯೇಸು ಅವರಿಗೆ, “ಈ ಲೋಕದ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ. ಜನರ ಮೇಲೆ ಅಧಿಕಾರ ಹೊಂದಿರುವವರನ್ನು ಧರ್ಮಿಷ್ಠರೆಂದು ಕರೆಯುತ್ತಾರೆ. 26 ಆದರೆ ನೀವು ಹಾಗಾಗಬಾರದು. ಅತ್ಯಂತ ದೊಡ್ಡ ವ್ಯಕ್ತಿಯು ಅತ್ಯಂತ ಚಿಕ್ಕ ವ್ಯಕ್ತಿಯಾಗಬೇಕು. ನಾಯಕರು ಸೇವಕರಂತಿರಬೇಕು. 27 ಶ್ರೇಷ್ಠನಾದವನು ಯಾರು? ಊಟಕ್ಕೆ ಕುಳಿತವನೋ? ಅಥವಾ ಅವನಿಗೆ ಸೇವೆ ಮಾಡುವವನೋ? ಊಟಕ್ಕೆ ಕುಳಿತಿರುವವನೇ ಶ್ರೇಷ್ಠನೆಂದು ನೀವು ಭಾವಿಸುತ್ತೀರೋ? ಆದರೆ ನಾನು ನಿಮ್ಮಲ್ಲಿ ಸೇವಕನಂತಿದ್ದೇನೆ!
28 “ನೀವು ನನ್ನ ಅನೇಕ ಕಷ್ಟಗಳಲ್ಲಿ ನನ್ನ ಸಂಗಡ ಇದ್ದವರು. 29 ನನ್ನ ತಂದೆ ನನಗೆ ರಾಜ್ಯವನ್ನು ಕೊಟ್ಟಿದ್ದಾನೆ. ನನ್ನ ಸಂಗಡ ಆಳುವುದಕ್ಕೆ ನಾನು ಸಹ ನಿಮಗೆ ಅಧಿಕಾರ ಕೊಡುತ್ತೇನೆ. 30 ನನ್ನ ರಾಜ್ಯದಲ್ಲಿ ನೀವು ನನ್ನ ಸಂಗಡ ಊಟಮಾಡುವಿರಿ ಮತ್ತು ಕುಡಿಯುವಿರಿ. ನೀವು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
Kannada Holy Bible: Easy-to-Read Version. All rights reserved. © 1997 Bible League International