Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 21:1-19

ನಿಜವಾದ ಕಾಣಿಕೆ

(ಮಾರ್ಕ 12:41-44)

21 ಕೆಲವು ಐಶ್ವರ್ಯವಂತರು ದೇವಾಲಯದ ಹಣದ ಪೆಟ್ಟಿಗೆಯಲ್ಲಿ ದೇವರಿಗಾಗಿ ತಮ್ಮ ಕಾಣಿಕೆಗಳನ್ನು ಹಾಕುವುದನ್ನು ಯೇಸು ಗಮನಿಸಿದನು. ಅಷ್ಟರಲ್ಲಿ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕನಾಣ್ಯಗಳನ್ನು ಪೆಟ್ಟಿಗೆಯಲ್ಲಿ[a] ಹಾಕಿದಳು. ಅದನ್ನು ಕಂಡ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ. ಈ ಬಡ ವಿಧವೆ ಕೇವಲ ಎರಡು ಚಿಕ್ಕ ತಾಮ್ರದ ನಾಣ್ಯಗಳನ್ನು ಕೊಟ್ಟಳು. ಆದರೆ ಆಕೆ ನಿಜವಾಗಿಯೂ, ಆ ಐಶ್ವರ್ಯವಂತರೆಲ್ಲರಿಗಿಂತ ಹೆಚ್ಚು ಕೊಟ್ಟಳು. ಐಶ್ವರ್ಯವಂತರಿಗೆ ಬೇಕಾದಷ್ಟು ಇದೆ. ಅವರು ಕೇವಲ ತಮಗೆ ಅವಶ್ಯವಿಲ್ಲದ್ದನ್ನು ಕೊಟ್ಟರು. ಈ ಸ್ತ್ರೀ ಬಹಳ ಬಡವಳಾಗಿದ್ದರೂ ತನ್ನಲ್ಲಿ ಇದ್ದದ್ದೆಲ್ಲವನ್ನೂ ಕೊಟ್ಟಳು. ಈಕೆಗೆ ಆ ಹಣದ ಅವಶ್ಯವಿತ್ತು” ಎಂದು ಹೇಳಿದನು.

ದೇವಾಲಯದ ನಾಶನ

(ಮತ್ತಾಯ 24:1-14; ಮಾರ್ಕ 13:1-13)

ಶಿಷ್ಯರಲ್ಲಿ ಕೆಲವರು ದೇವಾಲಯದ ಕುರಿತು ಮಾತಾಡುತ್ತಾ, “ಇದು ಅಂದವಾದ ಕಲ್ಲುಗಳಿಂದಲೂ ಹರಕೆಯ ಕೊಡುಗೆಗಳಿಂದಲೂ ಎಷ್ಟೊಂದು ಸುಂದರವಾಗಿದೆ!” ಎಂದರು.

ಆದರೆ ಯೇಸು ಅವರಿಗೆ, “ನೀವು ಇಲ್ಲಿ ನೋಡುವಂಥದ್ದೆಲ್ಲವೂ ನಾಶವಾಗುವ ಕಾಲ ಬರುವುದು. ಈ ಕಟ್ಟಡಗಳ ಪ್ರತಿಯೊಂದು ಕಲ್ಲನ್ನು ನೆಲಕ್ಕೆ ಕೆಡವಲಾಗುವುದು. ಇಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲ!” ಎಂದು ಹೇಳಿದನು.

ಶಿಷ್ಯರಲ್ಲಿ ಕೆಲವರು ಯೇಸುವಿಗೆ, “ಗುರುವೇ, ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ? ಆ ಸಮಯವನ್ನು ಯಾವ ಸೂಚನೆಗಳಿಂದ ತಿಳಿದುಕೊಳ್ಳಬೇಕು?” ಎಂದು ಕೇಳಿದರು.

ಯೇಸು ಅವರಿಗೆ, “ಎಚ್ಚರಿಕೆಯಾಗಿರಿ! ಮೋಸ ಹೋಗಬೇಡಿರಿ. ನನ್ನ ಹೆಸರನ್ನು ಹೇಳುತ್ತಾ ಅನೇಕರು ಬರುವರು. ಅವರು, ‘ನಾನೇ ಕ್ರಿಸ್ತನು’ ಎಂದೂ, ‘ಸರಿಯಾದ ಸಮಯ ಬಂದಿದೆ’ ಎಂದೂ ಹೇಳುವರು. ಆದರೆ ಅವರನ್ನು ಹಿಂಬಾಲಿಸಬೇಡಿರಿ. ಯುದ್ಧಗಳ ಬಗ್ಗೆ ಮತ್ತು ದಂಗೆಗಳ ಬಗ್ಗೆ ನೀವು ಕೇಳುವಾಗ ಹೆದರಬೇಡಿರಿ. ಇವುಗಳೆಲ್ಲಾ ಮೊದಲು ಸಂಭವಿಸಬೇಕು. ಆದರೂ ಆ ಕೂಡಲೇ ಅಂತ್ಯ ಬರುವುದಿಲ್ಲ” ಎಂದು ಹೇಳಿದನು.

10 ಬಳಿಕ ಯೇಸು ಅವರಿಗೆ, “ಜನಾಂಗಗಳು ಬೇರೆ ಜನಾಂಗಗಳಿಗೆ ವಿರುದ್ಧವಾಗಿ ಹೋರಾಡುವವು. ರಾಜ್ಯಗಳು ಬೇರೆ ರಾಜ್ಯಗಳಿಗೆ ವಿರುದ್ಧವಾಗಿ ಹೋರಾಡುವವು. 11 ಭೀಕರ ಭೂಕಂಪಗಳಾಗುವವು. ಕ್ಷಾಮಗಳೂ ಉಪದ್ರವಗಳೂ ತಲೆದೋರುವವು. ಭಯಂಕರ ಘಟನೆಗಳೂ ಆಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವವು.

12 “ಆದರೆ ಈ ಎಲ್ಲಾ ಸಂಗತಿಗಳು ಸಂಭವಿಸುವ ಮೊದಲು, ಜನರು ನಿಮ್ಮನ್ನು ಬಂಧಿಸುವರು ಮತ್ತು ಹಿಂಸಿಸುವರು. ಸಭಾಮಂದಿರಗಳಲ್ಲಿ ಜನರು ನಿಮಗೆ ತೀರ್ಪು ನೀಡಿ ಸೆರೆಮನೆಗೆ ಹಾಕುವರು. ರಾಜರ ಮುಂದೆ ಮತ್ತು ರಾಜ್ಯಪಾಲರ ಮುಂದೆ ನಿಮ್ಮನ್ನು ಬಲವಂತವಾಗಿ ನಿಲ್ಲಿಸುವರು. ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರು ನಿಮಗೆ ಹೀಗೆಲ್ಲಾ ಮಾಡುವರು. 13 ಆದರೆ ನನ್ನ ಕುರಿತು ಹೇಳುವುದಕ್ಕೆ ನಿಮಗೆ ಅದು ಸುಸಂದರ್ಭವಾಗಿರುವುದು. 14 ನೀವು ಏನು ಹೇಳಬೇಕೆಂದು ಚಿಂತಿಸಬೇಡಿರಿ. 15 ಏಕೆಂದರೆ ನಾನೇ ನಿಮಗೆ ಜ್ಞಾನವನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ವೈರಿಗಳಲ್ಲಿ ಯಾರೂ ನಿಮ್ಮ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಾಧ್ಯವಿಲ್ಲ. 16 ನಿಮ್ಮ ತಂದೆತಾಯಿಗಳು, ಸಹೋದರರು, ಸಂಬಂಧಿಕರು ಮತ್ತು ಸ್ನೇಹಿತರು ಸಹ ನಿಮಗೆ ವಿರುದ್ಧವಾಗುವರು. ನಿಮ್ಮಲ್ಲಿ ಕೆಲವರನ್ನು ಅವರು ಕೊಲ್ಲುವರು. 17 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುವರು. 18 ಆದರೆ ಇವುಗಳಿಂದ ನೀವೇನೂ ನಾಶವಾಗುವುದಿಲ್ಲ. 19 ನೀವು ನಿಮ್ಮ ನಂಬಿಕೆಯಲ್ಲಿ ದೃಢವಾಗಿದ್ದರೆ ನಿಮ್ಮನ್ನು ರಕ್ಷಿಸಿಕೊಳ್ಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International