New Testament in a Year
24 ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ! 25 ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
ಯಾರಿಗೆ ರಕ್ಷಣೆಯಾಗುವುದು?
26 ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು.
27 ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು.
28 ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು.
29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು. 30 ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
(ಮತ್ತಾಯ 20:17-19; ಮಾರ್ಕ 10:32-34)
31 ಬಳಿಕ ಯೇಸು ತನ್ನ ಹನ್ನೆರಡು ಮಂದಿ ಅಪೊಸ್ತಲರೊಂದಿಗೆ ಪ್ರತ್ಯೇಕವಾಗಿ ಮಾತಾಡಿದನು. ಅವರಿಗೆ, “ಕೇಳಿರಿ! ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ದೇವರು ತನ್ನ ಪ್ರವಾದಿಗಳ ಮೂಲಕ ಮನುಷ್ಯಕುಮಾರನ ಬಗ್ಗೆ ಬರೆಸಿರುವ ಪ್ರತಿಯೊಂದು ಸಂಗತಿಯೂ ಸಂಭವಿಸುವುದು! 32 ಆತನ ಜನರೇ ಆತನಿಗೆ ವಿರೋಧವಾಗಿ ಎದ್ದು ಯೆಹೂದ್ಯರಲ್ಲದ ಜನರಿಗೆ ಆತನನ್ನು ಒಪ್ಪಿಸಿಕೊಡುವರು. ಅವರು ಆತನನ್ನು ಗೇಲಿಮಾಡಿ ಆತನ ಮುಖಕ್ಕೆ ಉಗುಳುವರು. ಆತನಿಗೆ ಅವಮಾನ ಮಾಡುವರು ಮತ್ತು ನಾಚಿಕೆಪಡಿಸುವರು. 33 ಅವರು ಆತನಿಗೆ ಕೊರಡೆಗಳಿಂದ ಹೊಡೆಯುವರು ಮತ್ತು ಆತನನ್ನು ಕೊಲ್ಲುವರು! ಆದರೆ ಆತನು ತನ್ನ ಮೂರನೇ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದುಬರುವನು” ಅಂದನು. 34 ಅಪೊಸ್ತಲರು ಇದನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಅರ್ಥವು ಅವರಿಗೆ ಮರೆಯಾಗಿತ್ತು.
ಯೇಸುವಿನಿಂದ ಕಣ್ಣುಪಡೆದ ಕುರುಡ
(ಮತ್ತಾಯ 20:29-34; ಮಾರ್ಕ 10:46-52)
35 ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆ ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡನು ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36 ಆ ರಸ್ತೆಯಲ್ಲಿ ಜನಸಮೂಹದ ಶಬ್ದವನ್ನು ಕೇಳಿ ಆ ಕುರುಡನು, “ಯಾವ ಸಮಾರಂಭ ನಡೆಯುತ್ತಿದೆ?” ಎಂದು ಕೇಳಿದನು.
37 ಜನರು ಅವನಿಗೆ, “ನಜರೇತಿನ ಯೇಸು ಬರುತ್ತಿದ್ದಾನೆ” ಎಂದು ತಿಳಿಸಿದರು.
38 ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.
39 ಜನಸಮೂಹದ ಮುಂದಿದ್ದ ಜನರು ಕುರುಡನನ್ನು ಗದರಿಸಿ, ಅವನಿಗೆ ಮಾತಾಡಕೂಡದೆಂದು ಹೇಳಿದರು. ಆದರೆ ಆ ಕುರುಡನು ಮತ್ತಷ್ಟು ಗಟ್ಟಿಯಾಗಿ, “ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.
40 ಯೇಸು ಅಲ್ಲೇ ನಿಂತು, “ಆ ಕುರುಡನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ಆ ಕುರುಡನು ಹತ್ತಿರಕ್ಕೆ ಬಂದಾಗ, ಯೇಸು ಅವನಿಗೆ 41 “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.
ಕುರುಡನು, “ಪ್ರಭುವೇ, ನನಗೆ ಮತ್ತೆ ಕಣ್ಣು ಕಾಣುವಂತೆ ಮಾಡು” ಅಂದನು.
42 ಯೇಸು ಅವನಿಗೆ, “ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಎಂದು ಹೇಳಿದನು.
43 ಆಗ ಆ ಕುರುಡನಿಗೆ ದೃಷ್ಟಿ ಬಂದಿತು. ಅವನು ದೇವರನ್ನು ಸ್ತುತಿಸುತ್ತಾ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ಈ ಮಹತ್ಕಾರ್ಯಕ್ಕಾಗಿ ದೇವರನ್ನು ಕೊಂಡಾಡಿದರು.
Kannada Holy Bible: Easy-to-Read Version. All rights reserved. © 1997 Bible League International