Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 17:1-19

ಪಾಪ

(ಮತ್ತಾಯ 18:6-7,21-22; ಮಾರ್ಕ 9:42)

17 ಯೇಸು ತನ್ನ ಶಿಷ್ಯರಿಗೆ, “ಜನರನ್ನು ಪಾಪಕ್ಕೆ ನಡೆಸುವಂಥ ಸಂಗತಿಗಳು ಖಂಡಿತವಾಗಿ ಬರುತ್ತವೆ. ಆದರೆ ಅವುಗಳನ್ನು ಬರಮಾಡುವವನ ಗತಿಯನ್ನು ಏನು ಹೇಳಲಿ! ಬಲಹೀನರಾದ ಇವರನ್ನು ಪಾಪಕ್ಕೆ ನಡೆಸುವವನು ತನ್ನ ಕುತ್ತಿಗೆಗೆ ಒಂದು ದೊಡ್ಡ ಕಲ್ಲನ್ನು ಕಟ್ಟಿಕೊಂಡು ನೀರಿನಲ್ಲಿ ಮುಳುಗುವುದೇ ಉತ್ತಮ. ಆದ್ದರಿಂದ ಎಚ್ಚರಿಕೆಯಾಗಿರಿ!

“ನಿನ್ನ ಸಹೋದರನು ಪಾಪಮಾಡಿದರೆ, ಅವನನ್ನು ಖಂಡಿಸು. ಒಂದುವೇಳೆ ಅವನೇನಾದರೂ ತನ್ನ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರೆ ಅವನನ್ನು ಕ್ಷಮಿಸು. ನಿನ್ನ ಸಹೋದರನು ನಿನಗೆ ಒಂದು ದಿನದಲ್ಲಿ ಏಳು ಸಲ ತಪ್ಪುಮಾಡಿ, ಪ್ರತಿಸಲವೂ, ‘ನನ್ನನ್ನು ಕ್ಷಮಿಸು’ ಎಂದು ಕೇಳಿಕೊಂಡರೆ, ನೀನು ಅವನನ್ನು ಕ್ಷಮಿಸಬೇಕು” ಎಂದು ಹೇಳಿದನು.

ನಿಮ್ಮ ನಂಬಿಕೆ ಎಷ್ಟು ದೊಡ್ಡದು?

ಅಪೊಸ್ತಲರು ಪ್ರಭುವಿಗೆ (ಯೇಸು), “ನಮ್ಮ ನಂಬಿಕೆಯನ್ನು ಹೆಚ್ಚಿಸು!” ಎಂದು ಕೇಳಿಕೊಂಡರು.

ಪ್ರಭುವು ಅವರಿಗೆ ಹೀಗೆಂದನು: “ನಿಮ್ಮ ನಂಬಿಕೆ ಸಾಸಿವೆ ಕಾಳಷ್ಟು ದೊಡ್ಡದಾಗಿದ್ದರೆ, ನೀವು ಈ ಅತ್ತಿಮರಕ್ಕೆ, ‘ಇಲ್ಲಿಂದ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿದರೂ ಅದು ನಿಮಗೆ ವಿಧೇಯವಾಗುತ್ತದೆ.

ಒಳ್ಳೆಯ ಸೇವಕರಾಗಿರಿ

“ನಿಮ್ಮಲ್ಲಿ ಒಬ್ಬನಿಗೆ ಹೊಲದಲ್ಲಿ ಕೆಲಸ ಮಾಡುವಂಥ ಒಬ್ಬ ಸೇವಕನಿದ್ದಾನೆಂದು ಭಾವಿಸಿಕೊಳ್ಳೋಣ. ಆ ಸೇವಕನು ಭೂಮಿಯನ್ನು ಉಳುತ್ತಿರುತ್ತಾನೆ ಅಥವಾ ಕುರಿಗಳನ್ನು ಮೇಯಿಸುತ್ತಿರುತ್ತಾನೆ. ಆ ಸೇವಕನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ನೀನು ಅವನಿಗೆ ಏನು ಹೇಳುವೆ? ‘ಒಳಗೆ ಬಾ! ಊಟಕ್ಕೆ ಕುಳಿತುಕೊ’ ಎಂದು ಹೇಳುವಿಯೋ? ಇಲ್ಲ! ನೀನು ಅವನಿಗೆ, ‘ನನಗೋಸ್ಕರ ಅಡಿಗೆ ಮಾಡು. ಬಳಿಕ ಶುಭ್ರವಾದ ಬಟ್ಟೆಯನ್ನು ಧರಿಸಿಕೊಂಡು ಬಂದು ನನಗೆ ಊಟಬಡಿಸು. ನಾನು ತಿಂದು ಕುಡಿದ ಮೇಲೆ ನೀನು ಊಟಮಾಡು’ ಎಂದು ಹೇಳುವೆಯಷ್ಟೇ. ಆ ಸೇವಕನು ತನ್ನ ಕೆಲಸ ಮಾಡಿದ್ದಕ್ಕಾಗಿ ನೀನೇನೂ ಅವನಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿಲ್ಲ. ಸೇವಕನಿರುವುದು ಯಜಮಾನನು ಹೇಳಿದ್ದನ್ನು ಮಾಡುವುದಕ್ಕಾಗಿಯಷ್ಟೇ. 10 ಇದೇ ನಿಯಮ ನಿಮಗೂ ಅನ್ವಯಿಸುತ್ತದೆ. ನಿಮಗೆ ನೇಮಿಸಿದ ಕೆಲಸಗಳನ್ನು ನೀವು ಮಾಡಿ ಪೂರೈಸಿದಾಗ, ‘ನಾವು ಆಳುಗಳು, ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ’ ಎಂದು ಹೇಳಬೇಕು.”

ಕೃತಜ್ಞತೆಯುಳ್ಳವರಾಗಿರಿ

11 ಯೇಸುವು ಜೆರುಸಲೇಮಿಗೆ ಪ್ರಯಾಣಮಾಡುತ್ತಾ ಗಲಿಲಾಯದಿಂದ ಸಮಾರ್ಯಕ್ಕೆ ಹೋದನು. 12 ಅಲ್ಲಿ ಆತನು ಒಂದು ಗ್ರಾಮಕ್ಕೆ ಬಂದನು. ಅಲ್ಲಿ ಹತ್ತು ಜನರು ಆತನನ್ನು ಭೇಟಿಯಾದರು. ಅವರು ಯೇಸುವಿನ ಸಮೀಪಕ್ಕೆ ಬರಲಿಲ್ಲ. ಏಕೆಂದರೆ ಅವರೆಲ್ಲರೂ ಕುಷ್ಠರೋಗಿಗಳಾಗಿದ್ದರು. 13 ಆದರೆ ಅವರು, “ಯೇಸುವೇ! ಗುರುವೇ! ದಯಮಾಡಿ ನಮಗೆ ಸಹಾಯಮಾಡು!” ಎಂದು ಕೂಗಿಕೊಂಡರು.

14 ಯೇಸು ಅವರನ್ನು ನೋಡಿ, “ಹೋಗಿ, ನಿಮ್ಮನ್ನು ಯಾಜಕರಿಗೆ ತೋರಿಸಿಕೊಳ್ಳಿರಿ” ಎಂದು ಹೇಳಿದನು.

ಅವರು ಯಾಜಕರ ಬಳಿಗೆ ಹೋಗುತ್ತಿದ್ದಾಗ ಅವರಿಗೆ ವಾಸಿಯಾಯಿತು. 15 ಅವರಲ್ಲಿ ಒಬ್ಬನು ತನಗೆ ಗುಣವಾದುದ್ದನ್ನು ಕಂಡು ಯೇಸುವಿನ ಬಳಿಗೆ ಹಿಂತಿರುಗಿ ಬಂದು ಗಟ್ಟಿಯಾದ ಧ್ವನಿಯಿಂದ ದೇವರನ್ನು ಕೊಂಡಾಡಿದನು. 16 ಅವನು ಯೇಸುವಿನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ವಂದನೆ ಸಲ್ಲಿಸಿದನು. (ಅವನು ಸಮಾರ್ಯದವನು, ಯೆಹೂದ್ಯನಲ್ಲ.) 17 ಯೇಸು, “ಹತ್ತು ಜನರಿಗೆ ವಾಸಿಯಾಯಿತಲ್ಲಾ! ಇನ್ನುಳಿದ ಒಂಭತ್ತು ಮಂದಿ ಎಲ್ಲಿ? 18 ದೇವರಿಗೆ ಕೃತಜ್ಞತೆ ಸಲ್ಲಿಸಲು ಈ ಸಮಾರ್ಯದವನನ್ನು ಬಿಟ್ಟು ಬೇರೆ ಯಾರೂ ಬರಲಿಲ್ಲವೇ?” ಎಂದು ಕೇಳಿದನು. 19 ಬಳಿಕ ಯೇಸು ಅವನಿಗೆ, “ಎದ್ದೇಳು! ಈಗ ನೀನು ಮನೆಗೆ ಹೋಗು! ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಅಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International