New Testament in a Year
ಯೋಜನೆಯ ಅಗತ್ಯತೆ
(ಮತ್ತಾಯ 10:37-38)
25 ಅನೇಕ ಜನರು ಯೇಸುವಿನೊಂದಿಗೆ ಗುಂಪುಗುಂಪಾಗಿ ಹೋಗುತ್ತಿದ್ದಾಗ ಆತನು ಅವರಿಗೆ ಹೀಗೆಂದನು: 26 “ನನ್ನ ಬಳಿಗೆ ಬರುವವನು ನನ್ನನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚಾಗಿ ತನ್ನ ತಂದೆತಾಯಿಗಳನ್ನು, ಹೆಂಡತಿಯನ್ನು, ಮಕ್ಕಳನ್ನು, ಸಹೋದರ ಸಹೋದರಿಯರನ್ನು ಮತ್ತು ತನ್ನನ್ನು ಪ್ರೀತಿಸುವುದಾದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ. 27 ನನ್ನನ್ನು ಹಿಂಬಾಲಿಸುವವನು ತನಗೆ ಕೊಡಲ್ಪಟ್ಟಿರುವ ಶಿಲುಬೆಯನ್ನು (ಶ್ರಮೆ) ಹೊತ್ತುಕೊಂಡು ಹೋಗದಿದ್ದರೆ, ಅವನು ನನ್ನ ಶಿಷ್ಯನಾಗಿರಲು ಸಾಧ್ಯವಿಲ್ಲ.
28 “ನೀನು ಒಂದು ಕಟ್ಟಡವನ್ನು ಕಟ್ಟಬೇಕೆಂದಿದ್ದರೆ ಮೊದಲು ನೀನು ಕುಳಿತುಕೊಂಡು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ಆಲೋಚಿಸು. ಆ ಕಟ್ಟಡವನ್ನು ಪೂರೈಸಲು ನಿನ್ನಲ್ಲಿ ಸಾಕಷ್ಟು ಹಣವಿದೆಯೋ ಎಂದು ಲೆಕ್ಕಹಾಕಿ ನೋಡು. 29 ಇಲ್ಲವಾದರೆ, ನೀನು ಕಟ್ಟಡದ ಕೆಲಸವನ್ನು ಪ್ರಾರಂಭಿಸಿದರೂ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ನಿನ್ನನ್ನು ನೋಡಿ, 30 ‘ಇವನು ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನು. ಆದರೆ ಪೂರೈಸಲು ಅವನಿಂದಾಗಲಿಲ್ಲ’ ಎಂದು ಗೇಲಿ ಮಾಡುವರು.
31 “ಒಬ್ಬ ಅರಸನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವಾಗ, ಮೊದಲು ಅವನು ಕುಳಿತುಕೊಂಡು ಯೋಜನೆ ಮಾಡುವನು. ಅರಸನ ಬಳಿಯಲ್ಲಿ ಕೇವಲ ಹತ್ತುಸಾವಿರ ಮಂದಿ ಸೈನಿಕರಿದ್ದರೆ, ಇಪ್ಪತ್ತುಸಾವಿರ ಮಂದಿ ಸೈನಿಕರಿರುವ ಇನ್ನೊಬ್ಬ ಅರಸನನ್ನು ಸೋಲಿಸಲು ತನಗೆ ಸಾಧ್ಯವೇ ಎಂದು ಆಲೋಚಿಸುವನು. 32 ಅವನು ಇನ್ನೊಬ್ಬ ಅರಸನನ್ನು ಸೋಲಿಸಲಾಗದಿದ್ದರೆ, ತನ್ನ ರಾಯಭಾರಿಗಳನ್ನು ಕಳುಹಿಸಿ, ಶಾಂತಿಒಪ್ಪಂದಕ್ಕಾಗಿ ಕೇಳಿಕೊಳ್ಳುವನು.
33 “ಅದೇರೀತಿಯಲ್ಲಿ ನೀವೆಲ್ಲರೂ ಮೊದಲು ಯೋಜನೆ ಮಾಡಬೇಕು. ನೀವು ನನ್ನನ್ನು ಹಿಂಬಾಲಿಸಬೇಕೆಂದಿದ್ದರೆ ನಿಮ್ಮಲ್ಲಿರುವ ಪ್ರತಿಯೊಂದನ್ನೂ ತ್ಯಜಿಸಿಬಿಡಬೇಕು. ಇಲ್ಲವಾದರೆ, ನನ್ನ ಶಿಷ್ಯರಾಗಲು ಸಾಧ್ಯವಿಲ್ಲ!
ನಿಮ್ಮ ಪ್ರಭಾವವನ್ನು ಕಳೆದುಕೊಳ್ಳಬೇಡಿರಿ
(ಮತ್ತಾಯ 5:13; ಮಾರ್ಕ 9:50)
34 “ಉಪ್ಪು ಒಳ್ಳೆಯ ಪದಾರ್ಥ. ಆದರೆ ಉಪ್ಪು ತನ್ನ ರುಚಿ ಕಳೆದುಕೊಂಡರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ನೀವು ಅದಕ್ಕೆ ಮತ್ತೆ ಉಪ್ಪಿನ ರುಚಿಯನ್ನು ಕೊಡಲು ಸಾಧ್ಯವಿಲ್ಲ. 35 ಅದರಿಂದ ಮಣ್ಣಿಗಾಗಲಿ ಗೊಬ್ಬರಕ್ಕಾಗಲಿ ಪ್ರಯೋಜನವಿಲ್ಲ. ಜನರು ಅದನ್ನು ಹೊರಗೆ ಬಿಸಾಡುತ್ತಾರೆ.
“ನನ್ನ ಮಾತನ್ನು ಕೇಳುವ ಜನರೇ, ಆಲಿಸಿರಿ!”
Kannada Holy Bible: Easy-to-Read Version. All rights reserved. © 1997 Bible League International