Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 12:32-59

ಹಣದಲ್ಲಿ ಭರವಸೆ ಇಡಬೇಡಿ

32 “ಚಿಕ್ಕ ಮಂದೆಯೇ, ಹೆದರಬೇಡ, ನಿಮಗೆ ರಾಜ್ಯವನ್ನು ಕೊಡಲು ನಿಮ್ಮ ತಂದೆ ಬಯಸಿದ್ದಾನೆ. 33 ನಿಮ್ಮಲ್ಲಿರುವ ಆಸ್ತಿಯನ್ನು ಮಾರಿ, ಬಂದ ಹಣವನ್ನು ಕೊರತೆಯಲ್ಲಿರುವ ಜನರಿಗೆ ಕೊಡಿರಿ. ಈ ಲೋಕದ ಐಶ್ವರ್ಯ ಶಾಶ್ವತವಲ್ಲ. ಆದ್ದರಿಂದ ಶಾಶ್ವತವಾದ ಐಶ್ವರ್ಯವನ್ನು ಗಳಿಸಿಕೊಳ್ಳಿರಿ. ಲಯವಾಗದ ಸಂಪತ್ತನ್ನು ಪರಲೋಕದಲ್ಲಿ ಶೇಖರಿಸಿಟ್ಟುಕೊಳ್ಳಿರಿ. ಆ ಭಂಡಾರವನ್ನು ಕಳ್ಳರು ಕದಿಯಲಾಗುವುದಿಲ್ಲ ಮತ್ತು ಹುಳಗಳು ನಾಶಮಾಡಲಾಗುವುದಿಲ್ಲ. 34 ನಿಮ್ಮ ಭಂಡಾರ ಎಲ್ಲಿದೆಯೋ ಅಲ್ಲಿಯೇ ನಿಮ್ಮ ಹೃದಯವೂ ಇರುತ್ತದೆ.

ಯಾವಾಗಲೂ ಸಿದ್ಧವಾಗಿರಿ

(ಮತ್ತಾಯ 24:42-44)

35 “ಉಡುಪನ್ನು ಧರಿಸಿಕೊಂಡು ಪೂರ್ಣಸಿದ್ಧರಾಗಿರಿ! ನಿಮ್ಮ ದೀಪಗಳು ಉರಿಯುತ್ತಿರಲಿ. 36 ಮದುವೆಯ ಔತಣದಿಂದ ಮನೆಗೆ ಮರಳಿಬರುವ ಯಜಮಾನನನ್ನು ಎದುರುನೋಡುತ್ತಿರುವ ಸೇವಕರಂತಿರಿ. ಯಜಮಾನನು ಬಂದು ಬಾಗಿಲನ್ನು ತಟ್ಟಿದಾಗ ಸೇವಕರು ಬಾಗಿಲನ್ನು ತೆರೆಯುತ್ತಾರೆ. 37 ಆ ಸೇವಕರೇ ಧನ್ಯರು. ಏಕೆಂದರೆ, ಅವರು ಸಿದ್ಧರಾಗಿದ್ದು ತನಗೋಸ್ಕರ ಕಾಯುತ್ತಿದ್ದುದನ್ನು ಯಜಮಾನನು ನೋಡುತ್ತಾನೆ. ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ಆಗ ಯಜಮಾನನು ತಾನೇ ಸೇವಕರ ಉಡುಪನ್ನು ಧರಿಸಿಕೊಂಡು, ಆ ಸೇವಕರನ್ನು ಕುಳ್ಳಿರಿಸಿ, ಅವರಿಗೆ ಊಟ ಬಡಿಸುತ್ತಾನೆ. 38 ಆ ಆಳುಗಳು ತಮ್ಮ ಯಜಮಾನನಿಗಾಗಿ ಮಧ್ಯರಾತ್ರಿಯವರೆಗೆ ಅಥವಾ ಇನ್ನೂ ಹೆಚ್ಚು ಸಮಯದವರೆಗೆ ಎಚ್ಚರದಿಂದ ಇರಬೇಕಾಗಬಹುದು. ಆದರೆ ಯಜಮಾನನು ಬಂದು, ಇನ್ನೂ ಎಚ್ಚರದಿಂದಿರುವ ಅವರನ್ನು ಕಂಡಾಗ ಅವರಿಗೆ ಸಂತೋಷವಾಗುವುದು.

39 “ಇದು ನಿಮ್ಮ ನೆನಪಿನಲ್ಲಿರಲಿ: ಕಳ್ಳನು ಬರುವ ಗಳಿಗೆಯು ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ! 40 ಅಂತೆಯೇ, ನೀವೂ ಸಿದ್ಧರಾಗಿರಿ! ನೀವು ನಿರೀಕ್ಷಿಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುವನು!”

ನಂಬಿಗಸ್ತನಾದ ಆಳು ಯಾರು?

41 ಪೇತ್ರನು, “ಪ್ರಭುವೇ, ನೀನು ಈ ಸಾಮ್ಯವನ್ನು ಹೇಳಿದ್ದು ನಮಗಾಗಿಯೋ ಅಥವಾ ಎಲ್ಲಾ ಜನರಿಗಾಗಿಯೋ?” ಎಂದು ಕೇಳಿದನು.

42 ಪ್ರಭುವು ಹೀಗೆಂದನು: “ವಿವೇಕಿಯೂ ನಂಬಿಗಸ್ತನೂ ಆದ ಆಳು ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸಧಾನ್ಯವನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಿಸಲ್ಪಟ್ಟವನೇ. 43 ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡುತ್ತಿದ್ದರೆ, ಯಜಮಾನನು ಬಂದಾಗ ಅವನಿಗೆ ಬಹಳ ಸಂತೋಷವಾಗುವುದು. 44 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಯಜಮಾನನು ಆ ಸೇವಕನನ್ನು ತನ್ನ ಆಸ್ತಿಗೆಲ್ಲಾ ಮೇಲ್ವಿಚಾರಕನನ್ನಾಗಿ ನೇಮಿಸುವನು.

45 “ಆದರೆ ಆ ಸೇವಕನು ದುಷ್ಟನಾಗಿ ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದುಕೊಂಡರೆ ಏನಾಗುವುದು? ಆ ಸೇವಕನು ಯಜಮಾನನ ಇತರ ದಾಸದಾಸಿಯರನ್ನು ಹೊಡೆಯುವುದಕ್ಕೂ ತಿಂದುಕುಡಿದು ಮತ್ತನಾಗುವುದಕ್ಕೂ ತೊಡಗುವನು. 46 ಬಳಿಕ ಅವನು ನಿರೀಕ್ಷಿಸಿಲ್ಲದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ದಂಡಿಸಿ ಅಪನಂಬಿಗಸ್ತರಿರುವ ಸ್ಥಳಕ್ಕೆ ದಬ್ಬುವನು.

47 “ತನ್ನ ಯಜಮಾನನು ತನ್ನಿಂದ ಏನು ಅಪೇಕ್ಷಿಸುತ್ತಾನೆ ಎಂಬುದು ಆ ಸೇವಕನಿಗೆ ಗೊತ್ತಿತ್ತು. ಆದರೆ ಅವನು ತನ್ನನ್ನು ಸಿದ್ಧಪಡಿಸಿಕೊಳ್ಳಲಿಲ್ಲ ಮತ್ತು ತನ್ನ ಕೆಲಸವನ್ನು ಪೂರೈಸಲು ಪ್ರಯತ್ನಿಸಲಿಲ್ಲ. ಆದ್ದರಿಂದ ಅವನು ಕಠಿಣ ದಂಡನೆಗೆ ಗುರಿಯಾಗುವನು! 48 ಆದರೆ ತನ್ನ ಯಜಮಾನನ ಬಯಕೆಯನ್ನು ತಿಳಿದಿಲ್ಲದ ಸೇವಕನಿಗೆ ಏನಾಗುವುದು? ಇವನು ಸಹ ದಂಡನೆಗೆ ಅರ್ಹವಾದ ಕಾರ್ಯಗಳನ್ನು ಮಾಡುತ್ತಾನೆ. ಆದರೆ ತನ್ನ ಕರ್ತವ್ಯವನ್ನು ತಿಳಿದಿದ್ದರೂ ಮಾಡದೆಹೋದ ಸೇವಕನಿಗಿಂತ ಇವನಿಗೆ ಕಡಿಮೆ ದಂಡನೆ ಆಗುವುದು. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ಪಡೆದವನಿಂದ ಇನ್ನೂ ಹೆಚ್ಚಾಗಿ ನಿರೀಕ್ಷಿಸಲಾಗುವುದು.”

ಯೇಸುವಿನ ಬಗ್ಗೆ ಭಿನ್ನಾಭಿಪ್ರಾಯ

(ಮತ್ತಾಯ 10:34-36)

49 ಯೇಸು ತನ್ನ ಮಾತನ್ನು ಮುಂದುವರೆಸಿ ಹೀಗೆಂದನು: “ನಾನು ಈ ಲೋಕಕ್ಕೆ ಬೆಂಕಿಹಾಕಲು ಬಂದೆನು! ಅದು ಇಷ್ಟರೊಳಗೆ ಉರಿಯುತ್ತಿದ್ದರೆ ನನಗೆ ಸಂತೋಷ! 50 ನಾನು ಬೇರೊಂದು ರೀತಿಯ ದೀಕ್ಷಾಸ್ನಾನ ಹೊಂದಬೇಕು. ಅದನ್ನು ಹೊಂದುವ ತನಕ ನಾನು ಬಹಳ ತೊಂದರೆಯಲ್ಲಿದ್ದೇನೆ. 51 ನಾನು ಲೋಕಕ್ಕೆ ಸಮಾಧಾನವನ್ನು ಕೊಡುವುದಕ್ಕೆ ಬಂದೆನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ಲೋಕದಲ್ಲಿ ಭೇದವನ್ನು ಉಂಟುಮಾಡಲು ಬಂದೆನು! 52 ಇಂದಿನಿಂದ, ಐದು ಜನರಿರುವ ಕುಟುಂಬದಲ್ಲಿ ಭೇದ ಉಂಟಾಗುವುದು. ಅವರಲ್ಲಿ ಮೂವರು ಇಬ್ಬರಿಗೆ ವಿರೋಧವಾಗುವರು ಮತ್ತು ಇಬ್ಬರು ಮೂವರಿಗೆ ವಿರೋಧವಾಗುವರು.

53 ತಂದೆಗೂ ಮಗನಿಗೂ ಭೇದ ಉಂಟಾಗುವುದು.
    ಮಗನು ತನ್ನ ತಂದೆಗೆ ವಿರೋಧವಾಗುವನು.
    ತಂದೆಯು ತನ್ನ ಮಗನಿಗೆ ವಿರೋಧವಾಗುವನು,
ತಾಯಿಗೂ ಮಗಳಿಗೂ ಭೇದ ಉಂಟಾಗುವುದು.
    ಮಗಳು ತನ್ನ ತಾಯಿಗೆ ವಿರೋಧವಾಗುವಳು,
    ತಾಯಿ ತನ್ನ ಮಗಳಿಗೆ ವಿರೋಧವಾಗುವಳು.
ಅತ್ತೆಗೂ ಸೊಸೆಗೂ ಭೇದವಿರುವುದು.
    ಸೊಸೆಯು ತನ್ನ ಅತ್ತೆಗೆ ವಿರೋಧವಾಗುವಳು,
    ಅತ್ತೆಯು ತನ್ನ ಸೊಸೆಗೆ ವಿರೋಧವಾಗುವಳು.”[a]

ಕಾಲಮಾನವನ್ನು ಗ್ರಹಿಸಿಕೊಳ್ಳಿರಿ

(ಮತ್ತಾಯ 16:2-3)

54 ಬಳಿಕ ಯೇಸು ಜನರಿಗೆ ಹೀಗೆಂದನು: “ಮೋಡವು ಪಶ್ಚಿಮ ದಿಕ್ಕಿನಲ್ಲಿ ದೊಡ್ಡದಾಗುತ್ತಿರುವುದನ್ನು ನೀವು ನೋಡುವಾಗ ‘ಇಂದು ಮಳೆ ಬರುತ್ತದೆ’ ಎಂದು ಹೇಳುತ್ತೀರಿ. ಅಂತೆಯೇ ಅಂದು ಮಳೆಯಾಗುತ್ತದೆ. 55 ದಕ್ಷಿಣ ದಿಕ್ಕಿನಿಂದ ಗಾಳಿ ಬೀಸತೊಡಗಿದಾಗ, ‘ಈ ದಿನ ತುಂಬಾ ಸೆಕೆ ಇರುವುದು’ ಎನ್ನುತ್ತೀರಿ. ಅಂತೆಯೇ ಸೆಕೆ ಇರುವುದು. 56 ನೀವು ಕಪಟಿಗಳು! ಹವಾಮಾನವನ್ನು ತಿಳಿದುಕೊಳ್ಳಬಲ್ಲ ನೀವು ಈಗ ನಡೆಯುತ್ತಿರುವುದನ್ನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲವೇ?

ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿರಿ

(ಮತ್ತಾಯ 5:25-26)

57 “ನೀವೇ ನ್ಯಾಯನಿರ್ಣಯವನ್ನು ಮಾಡಬಾರದೇಕೆ? 58 ಒಬ್ಬನು ನಿಮ್ಮ ಮೇಲೆ ದಾವೆ ಹೂಡಲು ನ್ಯಾಯಾಲಯಕ್ಕೆ ಹೋಗುತ್ತಿರುವಾಗ ನಿಮ್ಮ ಸಮಸ್ಯೆಯನ್ನು ದಾರಿಯಲ್ಲಿಯೇ ಪರಿಹರಿಸಲು ನಿಮ್ಮಿಂದಾದಷ್ಟು ಪ್ರಯತ್ನಿಸಿರಿ. ಇಲ್ಲವಾದರೆ, ಅವನು ನಿಮ್ಮನ್ನು ನ್ಯಾಯಾಧೀಶನ ಬಳಿಗೆ ಕೊಂಡೊಯ್ಯುವನು. ನ್ಯಾಯಾಧೀಶನು ನಿಮ್ಮನ್ನು ಸೆರೆಮನೆಗೆ ಹಾಕಿಸುವನು. 59 ನೀವು ನಿಮ್ಮ ಸಾಲವನ್ನೆಲ್ಲಾ ಕೊನೆಯ ಪೈಸದವರೆಗೆ ತೀರಿಸುವ ತನಕ ಸೆರೆಮನೆಯಿಂದ ಹೊರಗೆ ಬರಲು ಸಾಧ್ಯವೇ ಇಲ್ಲ!”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International