Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 11:29-54

ನಮಗೆ ಸಾಕ್ಷಿ ಕೊಡು!

(ಮತ್ತಾಯ 12:38-42; ಮಾರ್ಕ 8:12)

29 ಜನರ ಗುಂಪು ದೊಡ್ಡದಾಗುತ್ತಿರಲು ಯೇಸು ಅವರಿಗೆ, “ಈ ಸಂತತಿಯು ಕೆಟ್ಟ ಸಂತತಿಯೇ ಸರಿ! ಇದು ಸೂಚಕಕಾರ್ಯವನ್ನು ನೋಡಬೇಕೆನ್ನುತ್ತದೆ. ಆದರೆ ಯೋನನ ಜೀವಿತದಲ್ಲಾದ ಸೂಚಕಕಾರ್ಯದ ಹೊರತು ಬೇರೆ ಯಾವುದೂ ಇದಕ್ಕೆ ದೊರೆಯುವುದಿಲ್ಲ. 30 ನಿನೆವೆಯಲ್ಲಿ ಜೀವಿಸುತ್ತಿದ್ದ ಜನರಿಗೆ ಯೋನನು ಒಂದು ಸೂಚನೆಯಾಗಿದ್ದನು. ಅದೇ ರೀತಿಯಲ್ಲಿ ಈ ಕಾಲದ ಜನರಿಗೆ ಮನುಷ್ಯಕುಮಾರನು ಸೂಚನೆಯಾಗಿದ್ದಾನೆ.

31 “ನ್ಯಾಯತೀರ್ಪಿನ ದಿನದಲ್ಲಿ ದಕ್ಷಿಣ ದೇಶದ ರಾಣಿಯು ಈ ಪೀಳಿಗೆಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು. ಏಕೆಂದರೆ ಆ ರಾಣಿಯು ಬಹುದೂರದಿಂದ ಸೊಲೊಮೋನನ ಜ್ಞಾನಬೋಧನೆಯನ್ನು ಕೇಳಲು ಬಂದಳು. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಾನು ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ!

32 “ನ್ಯಾಯತೀರ್ಪಿನ ದಿನದಲ್ಲಿ ನಿನೆವೆ ಪಟ್ಟಣದವರು ಈ ಸಂತತಿಗೆ ಎದುರಾಗಿ ನಿಂತು ಇವರನ್ನು ಅಪರಾಧಿಗಳೆಂದು ತೋರಿಸುವರು. ಏಕೆಂದರೆ ಅವರು ಪ್ರವಾದಿಯಾದ ಯೋನನ ಬೋಧನೆಯನ್ನು ಕೇಳಿ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡರು. ಆದರೆ ನಾನು ಪ್ರವಾದಿ ಯೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ.

ಲೋಕಕ್ಕೆ ಬೆಳಕಾಗಿರಿ!

(ಮತ್ತಾಯ 5:15; 6:22-23)

33 “ದೀಪವನ್ನು ಹಚ್ಚಿ ಪಾತ್ರೆಯೊಳಗಾಗಲಿ ಬೇರೆ ಎಲ್ಲೇ ಆಗಲಿ ಅಡಗಿಸಿಡುವುದಿಲ್ಲ. ಒಳಗೆ ಬರುವವರಿಗೆ ಬೆಳಕು ಕಾಣಿಸಲೆಂದು ದೀಪವನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. 34 ನಿನ್ನ ಕಣ್ಣು ದೇಹಕ್ಕೆ ಬೆಳಕಾಗಿದೆ, ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣ ಬೆಳಕಾಗಿರುವುದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಪೂರ್ಣಕತ್ತಲಾಗಿರುವುದು. 35 ಆದ್ದರಿಂದ ಎಚ್ಚರಿಕೆಯಾಗಿರು! ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೊ. 36 ನಿನ್ನ ದೇಹವೆಲ್ಲಾ ಬೆಳಕಿನಿಂದ ತುಂಬಿದ್ದು ಯಾವ ಭಾಗದಲ್ಲಿಯೂ ಕತ್ತಲಿಲ್ಲದಿದ್ದರೆ ನೀನು ಪ್ರಜ್ವಲಿಸುವ ಬೆಳಕಿನಂತಿರುವೆ” ಎಂದು ಹೇಳಿದನು.

ಯೇಸು ಫರಿಸಾಯರನ್ನು ಖಂಡಿಸಿದನು

(ಮತ್ತಾಯ 23:1-36; ಮಾರ್ಕ 12:38-40; ಲೂಕ 20:45-47)

37 ಯೇಸು ಮಾತಾಡಿ ಮುಗಿಸಿದ ಮೇಲೆ ಫರಿಸಾಯನೊಬ್ಬನು ಯೇಸುವನ್ನು ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಕರೆದನು. ಆದ್ದರಿಂದ ಯೇಸು ಅವನ ಮನೆಯೊಳಗೆ ಹೋಗಿ ಊಟಕ್ಕೆ ಕುಳಿತುಕೊಂಡನು. 38 ಆದರೆ ಯೇಸು ತನ್ನ ಕೈಗಳನ್ನು ತೊಳೆದುಕೊಳ್ಳದೆ ಊಟಕ್ಕೆ ಕುಳಿತಿರುವುದನ್ನು ಕಂಡಾಗ ಫರಿಸಾಯನಿಗೆ ಆಶ್ಚರ್ಯವಾಯಿತು. 39 ಪ್ರಭುವು (ಯೇಸು) ಅವನಿಗೆ ಹೇಳಿದ್ದೇನೆಂದರೆ: “ಫರಿಸಾಯರಾದ ನೀವು ಪಾತ್ರೆಯ ಮತ್ತು ಬಟ್ಟಲಿನ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ನಿಮ್ಮ ಒಳಭಾಗವು ಮೋಸದಿಂದಲೂ ಕೆಟ್ಟತನದಿಂದಲೂ ತುಂಬಿಹೋಗಿದೆ. 40 ನೀವು ಬುದ್ಧಿಹೀನರು! ಹೊರಭಾಗವನ್ನು ಮಾಡಿದಾತನೇ (ದೇವರು) ಒಳಭಾಗವನ್ನೂ ಮಾಡಿದ್ದಾನೆ. 41 ಆದ್ದರಿಂದ ಪಾತ್ರೆ ಮತ್ತು ಬಟ್ಟಲುಗಳ ಒಳಗಿರುವುದನ್ನು ಬಡವರಿಗೆ ದಾನಮಾಡಿರಿ. ಆಗ ನೀವು ಪೂರ್ಣಶುದ್ಧರಾಗುತ್ತೀರಿ.

42 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ದೇವರಿಗೆ ನಿಮ್ಮಲ್ಲಿರುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ನಿಮ್ಮ ತೋಟದಲ್ಲಿ ಬೆಳೆಯುವ ಮರುಗ, ಸದಾಪು ಮುಂತಾದ ಚಿಕ್ಕ ಸಸಿಗಳಲ್ಲಿಯೂ ಹತ್ತನೆಯ ಒಂದು ಭಾಗವನ್ನು ಕೊಡುತ್ತೀರಿ. ಆದರೆ ಬೇರೆಯವರಿಗೆ ನ್ಯಾಯತೋರಿಸುವುದನ್ನೂ ದೇವರನ್ನು ಪ್ರೀತಿಸುವುದನ್ನೂ ಮರೆತುಬಿಟ್ಟಿದ್ದೀರಿ. ನೀವು ಮೊದಲು ಇವುಗಳನ್ನು ಮಾಡಬೇಕು ಮತ್ತು ಉಳಿದವುಗಳನ್ನು ಕಡೆಗಣಿಸಬಾರದು.

43 “ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸಭಾಮಂದಿರಗಳಲ್ಲಿ ಉನ್ನತಪೀಠಗಳನ್ನೂ ಮಾರುಕಟ್ಟೆಗಳಲ್ಲಿ ಜನರಿಂದ ಗೌರವವನ್ನೂ ಆಶಿಸುತ್ತೀರಿ. 44 ನೀವು ಮರೆಯಾಗಿರುವ ಸಮಾಧಿಗಳಂತಿದ್ದೀರಿ. ಜನರು ಸಮಾಧಿಗಳೆಂದು ತಿಳಿಯದೆ ಅವುಗಳ ಮೇಲೆ ನಡೆಯುತ್ತಾರೆ.”

ಧರ್ಮೋಪದೇಶಕನಿಗೆ ಯೇಸು ನೀಡಿದ ಉತ್ತರ

45 ಧರ್ಮೋಪದೇಶಕನೊಬ್ಬನು ಯೇಸುವಿಗೆ, “ಬೋಧಕನೇ, ನೀನು ಫರಿಸಾಯರ ಕುರಿತಾಗಿ ಈ ಸಂಗತಿಗಳನ್ನು ಹೇಳಿದಾಗ ನಮ್ಮನ್ನು ಸಹ ಖಂಡಿಸಿದಂತಾಯಿತು” ಎಂದು ಹೇಳಿದನು.

46 ಅದಕ್ಕೆ ಯೇಸು, “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ಜನರು ಅನುಸರಿಸಲಾಗದ ನಿಯಮಗಳನ್ನು ನೀವು ಮಾಡುತ್ತೀರಿ.[a] ಆ ನಿಯಮಗಳಿಗೆ ವಿಧೇಯರಾಗುವಂತೆ ಬೇರೆಯವರಿಗೆ ಬಲವಂತ ಮಾಡುತ್ತೀರಿ. ಆದರೆ ಆ ನಿಯಮಗಳಲ್ಲಿ ಒಂದನ್ನಾದರೂ ಪಾಲಿಸಲು ನೀವು ಪ್ರಯತ್ನಿಸುವುದಿಲ್ಲ. 47 ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳಿಗೆ ಗೋರಿಗಳನ್ನು[b] ಕಟ್ಟುತ್ತೀರಿ. ಆದರೆ ಆ ಪ್ರವಾದಿಗಳನ್ನು ಕೊಂದವರು ನಿಮ್ಮ ಪಿತೃಗಳೇ! 48 ಇದರಿಂದಾಗಿ, ನಿಮ್ಮ ಪಿತೃಗಳು ಮಾಡಿದ ಕೃತ್ಯಗಳನ್ನು ನೀವು ಒಪ್ಪಿಕೊಂಡಿದ್ದೀರೆಂಬುದನ್ನು ಎಲ್ಲಾ ಜನರಿಗೆ ತೋರಿಸುತ್ತೀರಿ. ಅವರು ಪ್ರವಾದಿಗಳನ್ನು ಕೊಂದರು. ನೀವು ಆ ಪ್ರವಾದಿಗಳಿಗಾಗಿ ಗೋರಿಗಳನ್ನು ಕಟ್ಟುತ್ತೀರಿ! 49 ಆದಕಾರಣ ದೇವರ ಜ್ಞಾನವು ಹೇಳಿದ್ದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು. ನನ್ನ ಕೆಲವು ಪ್ರವಾದಿಗಳು ಮತ್ತು ಅಪೊಸ್ತಲರು ಕೆಡುಕರಿಂದ ಹತರಾಗುವರು. ಬೇರೆ ಕೆಲವರು ಸಂಕಟಕ್ಕೆ ಗುರಿಯಾಗುವರು.’

50 “ಆದ್ದರಿಂದ ಲೋಕಾದಿಯಿಂದ ಹತರಾದ ಎಲ್ಲಾ ಪ್ರವಾದಿಗಳ ಸಾವಿಗೆ ಈ ಕಾಲದ ಜನರಾದ ನೀವು ದಂಡನೆ ಹೊಂದುವಿರಿ. 51 ಹೇಬೆಲನನ್ನು ಕೊಂದದ್ದಕ್ಕಾಗಿಯೂ ಜಕರೀಯನನ್ನು ಕೊಂದದ್ದಕ್ಕಾಗಿಯೂ ನಿಮಗೆ ದಂಡನೆಯಾಗುವುದು. ಜಕರೀಯನನ್ನು ಯಜ್ಞವೇದಿ ಮತ್ತು ದೇವಾಲಯದ ನಡುವೆ ಕೊಲ್ಲಲಾಯಿತು. ಹೌದು, ಅವರೆಲ್ಲರ ಕೊಲೆಗಳಿಗಾಗಿ ಈಗ ಜೀವಿಸುತ್ತಿರುವ ನಿಮಗೆ ದಂಡನೆ ಆಗುವುದು.

52 “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ! ದೇವರ ಕುರಿತಾಗಿ ಕಲಿಯಲು ಸಾಧನವಾಗಿರುವ ಬೀಗದ ಕೈಯನ್ನು ನೀವು ಬಚ್ಚಿಟ್ಟಿದ್ದೀರಿ. ನೀವೂ ಕಲಿಯುವುದಿಲ್ಲ, ಬೇರೆಯವರಿಗೂ ಕಲಿಯಲು ಬಿಡುವುದಿಲ್ಲ” ಎಂದು ಹೇಳಿದನು.

53 ಯೇಸು ಅಲ್ಲಿಂದ ಹೊರಟಾಗ ಧರ್ಮೋಪದೇಶಕರು ಮತ್ತು ಫರಿಸಾಯರು ಆತನಿಗೆ ಮತ್ತಷ್ಟು ತೊಂದರೆ ಕೊಡಲು ಪ್ರಾರಂಭಿಸಿದರು. ಅವರು ಅನೇಕ ಸಂಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಆತನಿಂದ ಉತ್ತರ ಹೇಳಿಸುವುದಕ್ಕೆ ಪ್ರಯತ್ನಿಸಿದರು. 54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International