New Testament in a Year
ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ
(ಮತ್ತಾಯ 6:9-15)
11 ಒಮ್ಮೆ ಯೇಸು ಒಂದು ಸ್ಥಳದಲ್ಲಿ ಪ್ರಾರ್ಥಿಸುತ್ತಿದ್ದನು. ಯೇಸು ಪ್ರಾರ್ಥನೆ ಮಾಡಿ ಮುಗಿಸಿದಾಗ, ಆತನ ಶಿಷ್ಯರಲ್ಲೊಬ್ಬನು, “ಪ್ರಭುವೇ, ಯೋಹಾನನು ತನ್ನ ಶಿಷ್ಯರಿಗೆ ಪ್ರಾರ್ಥಿಸುವ ವಿಧಾನವನ್ನು ಕಲಿಸಿದಂತೆ, ದಯಮಾಡಿ ನಮಗೂ ಪ್ರಾರ್ಥಿಸುವ ವಿಧಾನವನ್ನು ಹೇಳಿಕೊಡು” ಎಂದನು.
2 ಯೇಸು ಅವರಿಗೆ ಹೀಗೆಂದನು: “ನೀವು ಹೀಗೆ ಪ್ರಾರ್ಥಿಸಿರಿ:
‘ತಂದೆಯೇ, ನಿನ್ನ ನಾಮವು ಯಾವಾಗಲೂ ಪರಿಶುದ್ಧವಾಗಿರಲಿ.
ನಿನ್ನ ರಾಜ್ಯವು ಬರಲಿ.
3 ನಮ್ಮ ಅನುದಿನದ ಆಹಾರವನ್ನು ನಮಗೆ ದಯಪಾಲಿಸು.
4 ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವಂತೆ
ನಮ್ಮಪಾಪಗಳನ್ನೂ ಕ್ಷಮಿಸು.
ನಮ್ಮನ್ನು ಶೋಧನೆಗೆ ಒಳಪಡಿಸಬೇಡ.’”
ಎಡಬಿಡದೆ ಪ್ರಾರ್ಥಿಸಿ
(ಮತ್ತಾಯ 7:7-11)
5-6 ಆಗ ಯೇಸು ಅವರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನೊಬ್ಬನ ಮನೆಗೆ ರಾತ್ರಿ ಬಹಳ ತಡವಾಗಿ ಹೋಗಿದ್ದಾನೆ ಎಂದು ಭಾವಿಸಿಕೊಳ್ಳೋಣ. ಅವನು ತನ್ನ ಸ್ನೇಹಿತನಿಗೆ, ‘ನನ್ನ ಗೆಳೆಯನೊಬ್ಬನು ನನ್ನನ್ನು ನೋಡಲು ದೂರದಿಂದ ನಮ್ಮ ಮನೆಗೆ ಬಂದಿದ್ದಾನೆ. ಆದರೆ ಅವನಿಗೆ ಊಟಕ್ಕೆ ಕೊಡಲು ನನಲ್ಲಿ ಏನೂ ಇಲ್ಲ. ದಯಮಾಡಿ ನನಗೆ ಮೂರು ರೊಟ್ಟಿಗಳನ್ನು ಕೊಡು’ ಎಂದು ಕೇಳುತ್ತಾನೆ. 7 ಮನೆಯೊಳಗಿರುವ ಸ್ನೇಹಿತನು, ‘ಹೊರಟುಹೋಗು! ನನಗೆ ತೊಂದರೆ ಕೊಡಬೇಡ! ಬಾಗಿಲು ಮುಚ್ಚಿದೆ! ನಾನು ಮತ್ತು ನನ್ನ ಮಕ್ಕಳು ಮಲಗಿದ್ದೇವೆ. ಈಗ ಎದ್ದು ನಿನಗೆ ರೊಟ್ಟಿ ಕೊಡಲಾರೆ’ ಎಂದು ಉತ್ತರಕೊಡುತ್ತಾನೆ. 8 ಕೇವಲ ಸ್ನೇಹವೊಂದೇ ಅವನನ್ನು ಏಳಿಸಿ ರೊಟ್ಟಿ ಕೊಡುವಂತೆ ಮಾಡಲಾರದೆಂದು ನಾನು ನಿಮಗೆ ಹೇಳುತ್ತೇನೆ. ಆದರೆ ಅವನು ಎಡಬಿಡದೆ ಕೇಳುತ್ತಲೇ ಇದ್ದರೆ, ಅವನು ಎದ್ದು ತನ್ನ ಸ್ನೇಹಿತನಿಗೆ ಬೇಕಾಗಿರುವ ರೊಟ್ಟಿಯನ್ನು ಖಂಡಿತವಾಗಿ ಕೊಡುವನು. 9 ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ತಟ್ಟಿರಿ, ಆಗ ನಿಮಗೆ ಬಾಗಿಲು ತೆರೆಯುವುದು. 10 ಹೌದು, ಎಡಬಿಡದೆ ಬೇಡಿಕೊಳ್ಳುವವನಿಗೆ ದೊರೆಯುವುದು. ಎಡಬಿಡದೆ ಹುಡುಕುವವನು ಕಂಡುಕೊಳ್ಳುವನು. ಒಬ್ಬನು ಎಡಬಿಡದೆ ತಟ್ಟುತ್ತಿದ್ದರೆ, ಅವನಿಗೆ ಬಾಗಿಲು ತೆರೆಯಲ್ಪಡುವುದು. 11 ನಿಮ್ಮಲ್ಲಿ ಎಷ್ಟು ಜನರು ತಂದೆಗಳಾಗಿದ್ದೀರಿ? ನಿಮ್ಮ ಮಗನು ಮೀನನ್ನು ಕೇಳಿದರೆ, ನೀವು ಅವನಿಗೆ ಹಾವನ್ನು ಕೊಡುವಿರೋ? ಇಲ್ಲ! ನೀವು ಮೀನನ್ನೇ ಕೊಡುತ್ತೀರಿ. 12 ನಿಮ್ಮ ಮಗನು ಮೊಟ್ಟೆಯನ್ನು ಕೇಳಿದರೆ, ನೀವು ಅವನಿಗೆ ಚೇಳನ್ನು ಕೊಡುವಿರೋ? ಇಲ್ಲ! 13 ನೀವು ಇತರ ಜನರಂತೆ ಕೆಟ್ಟವರಾಗಿದ್ದೀರಿ. ಆದರೆ ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುತ್ತೀರಿ. ಅದೇ ರೀತಿಯಲ್ಲಿ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮನನ್ನು ಖಂಡಿತವಾಗಿ ಕೊಡುತ್ತಾನೆ” ಎಂದು ಹೇಳಿದನು.
ಯೇಸುವಿನ ಶಕ್ತಿ ದೇವರಿಂದ ಬಂದದ್ದು
(ಮತ್ತಾಯ 12:22-30; ಮಾರ್ಕ 3:20-27)
14 ಒಮ್ಮೆ ಯೇಸು ಮೂಕದೆವ್ವದಿಂದ ಪೀಡಿತನಾಗಿದ್ದ ಒಬ್ಬನನ್ನು ಬಿಡಿಸುತ್ತಿದ್ದನು. ಆ ದೆವ್ವವು ಅವನನ್ನು ಬಿಟ್ಟು ಹೊರಗೆ ಬಂದಾಗ ಅವನು ಮಾತಾಡಿದನು. ಇದನ್ನು ಕಂಡ ಜನರು ಬೆರಗಾದರು. 15 ಆದರೆ ಕೆಲವರು, “ದೆವ್ವದಿಂದ ಪೀಡಿತರಾಗಿರುವವರನ್ನು ಇವನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದು ಹೇಳಿದರು.
16 ಇತರ ಜನರು ಯೇಸುವನ್ನು ಪರೀಕ್ಷಿಸಬೇಕೆಂದು ದೇವರಿಂದ ಒಂದು ಸೂಚಕಕಾರ್ಯವನ್ನು ನಮಗೆ ತೋರಿಸು ಎಂದು ಕೇಳಿದರು. 17 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ಒಡೆದುಹೋದ ಮತ್ತು ತನಗೆ ವಿರುದ್ಧವಾಗಿ ತಾನೇ ಕಾದಾಡುವ ರಾಜ್ಯವು ನಾಶವಾಗುವುದು. ಭೇದಭಾವದಿಂದ ಕೂಡಿರುವ ಕುಟುಂಬವು ಮುರಿದು ಹೋಗುವುದು. 18 ಅಂತೆಯೇ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕಾದಾಡಿದರೆ ಅವನ ರಾಜ್ಯವು ಮುಂದುವರಿಯಲು ಹೇಗೆ ಸಾಧ್ಯ? ನಾನು ದೆವ್ವಗಳನ್ನು ಬೆಲ್ಜೆಬೂಲನ ಶಕ್ತಿಯಿಂದ ಬಿಡಿಸುತ್ತೇನೆಂದು ನೀವು ಹೇಳುತ್ತೀರಿ. 19 ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾಗಿದ್ದರೆ, ನಿಮ್ಮ ಜನರು ದೆವ್ವಗಳನ್ನು ಯಾವ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನು ತಪ್ಪಿತಸ್ಥರೆಂದು ಹೇಳುತ್ತಾರೆ. 20 ಆದರೆ ನಾನು ದೆವ್ವಗಳನ್ನು ದೇವರ ಬಲದಿಂದ ಹೊರಡಿಸುವುದಾದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ.
21 “ಒಬ್ಬ ಬಲಿಷ್ಠನು ಅನೇಕ ಆಯುಧಗಳಿಂದ ಸುಸಜ್ಜಿತನಾಗಿ ತನ್ನ ಮನೆಯನ್ನು ಕಾಯುತ್ತಿರುವಾಗ, ಮನೆಯೊಳಗಿರುವ ವಸ್ತುಗಳು ಸುರಕ್ಷಿತವಾಗಿರುತ್ತವೆ. 22 ಆದರೆ ಅವನಿಗಿಂತಲೂ ಬಲಿಷ್ಠನಾದ ಮತ್ತೊಬ್ಬನು ಬಂದು ಅವನನ್ನು ಸೋಲಿಸಿದರೆ, ಮೊದಲನೆಯ ಬಲಿಷ್ಠನು ತನ್ನ ಮನೆಯನ್ನು ಸುರಕ್ಷಿತವಾಗಿಡುವುದಕ್ಕಾಗಿ ಅವಲಂಬಿಸಿಕೊಂಡಿದ್ದ ಆಯುಧಗಳನ್ನೆಲ್ಲಾ ಆ ಮತ್ತೊಬ್ಬ ಬಲಿಷ್ಠನು ತೆಗೆದುಕೊಂಡು ಹೋಗುವನು. ಬಳಿಕ ಆ ಮತ್ತೊಬ್ಬ ಬಲಿಷ್ಠನು ಆ ಮನುಷ್ಯನ ವಸ್ತುಗಳನ್ನು ತನಗೆ ಇಷ್ಟಬಂದ ಹಾಗೆ ಮಾಡುವನು.
23 “ನನ್ನೊಂದಿಗಿಲ್ಲದವನು ನನಗೆ ವಿರೋಧವಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.
ಬರಿದಾದ ಹೃದಯ
(ಮತ್ತಾಯ 12:43-45)
24 “ದೆವ್ವವು ಒಬ್ಬ ವ್ಯಕ್ತಿಯಿಂದ ಹೊರಗೆ ಬಂದ ಮೇಲೆ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಅಲೆದಾಡುತ್ತದೆ. ಆದರೆ ವಿಶ್ರಮಿಸಿಕೊಳ್ಳಲು ಅದಕ್ಕೆ ಸ್ಥಳ ದೊರೆಯುವುದಿಲ್ಲ. ಆದ್ದರಿಂದ ‘ನಾನು ಬಿಟ್ಟುಬಂದ ಮನೆಗೆ (ವ್ಯಕ್ತಿ) ಹಿಂತಿರುಗುವೆನು’ ಎಂದುಕೊಳ್ಳುತ್ತದೆ. 25 ಅದು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ ಬಂದಾಗ, ಆ ಮನೆಯನ್ನು (ವ್ಯಕ್ತಿ) ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆಗ ಹೊರಟುಹೋಗಿ ತನಗಿಂತಲೂ ಹೆಚ್ಚು ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಬಳಿಕ ಆ ದೆವ್ವಗಳೆಲ್ಲಾ ಆ ಮನುಷ್ಯನೊಳಗೆ ಹೋಗಿ ಅಲ್ಲೇ ವಾಸಿಸುತ್ತವೆ. ಆಗ ಆ ವ್ಯಕ್ತಿಯು ಮೊದಲಿಗಿಂತಲೂ ಹೆಚ್ಚಿನ ಸಂಕಟಕ್ಕೆ ಒಳಗಾಗುತ್ತಾನೆ” ಎಂದು ಹೇಳಿದನು.
ನಿಜವಾದ ಭಾಗ್ಯವಂತರು
27 ಯೇಸು ಈ ಸಂಗತಿಗಳನ್ನು ಹೇಳಿದಾಗ, ಅಲ್ಲಿ, ಜನರೊಂದಿಗಿದ್ದ ಒಬ್ಬ ಸ್ತ್ರೀ ಯೇಸುವಿಗೆ, “ನಿನ್ನನ್ನು ಹೆತ್ತು ಪೋಷಿಸಿದ ತಾಯಿ ಭಾಗ್ಯವಂತಳೇ ಸರಿ!” ಎಂದು ಹೇಳಿದಳು.
28 ಆದರೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದಕ್ಕೆ ವಿಧೇಯರಾಗುವ ಜನರೇ ಭಾಗ್ಯವಂತರು!” ಎಂದನು.
Kannada Holy Bible: Easy-to-Read Version. All rights reserved. © 1997 Bible League International