Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 10:25-42

ಒಳ್ಳೆಯ ಸಮಾರ್ಯದವನ ಸಾಮ್ಯ

25 ಆಗ ಧರ್ಮೋಪದೇಶಕನೊಬ್ಬನು ಯೇಸುವನ್ನು ಪರೀಕ್ಷಿಸಲು ಎದ್ದುನಿಂತು, “ಬೋಧಕನೇ, ನಾನು ನಿತ್ಯಜೀವ ಹೊಂದಲು ಏನು ಮಾಡಬೇಕು?” ಎಂದು ಕೇಳಿದನು.

26 ಯೇಸು ಅವನಿಗೆ, “ಧರ್ಮಶಾಸ್ತ್ರದಲ್ಲಿ ಇದರ ಕುರಿತು ಏನು ಬರೆದಿದೆ?” ಎಂದು ಕೇಳಿದನು.

27 ಅದಕ್ಕೆ ಅವನು, “‘ನೀನು ನಿನ್ನ ಪ್ರಭುವಾದ ದೇವರನ್ನು ಪೂರ್ಣಹೃದಯದಿಂದ, ಪೂರ್ಣಪ್ರಾಣದಿಂದ, ಪೂರ್ಣಶಕ್ತಿಯಿಂದ ಮತ್ತು ಪೂರ್ಣಮನಸ್ಸಿನಿಂದ ಪ್ರೀತಿಸಬೇಕು’(A) ಮತ್ತು ‘ನೀನು ನಿನ್ನನ್ನು ಪ್ರೀತಿಸುವಂತೆ ನಿನ್ನ ನೆರೆಯವರನ್ನು ಪ್ರೀತಿಸಬೇಕು’(B) ಎಂದು ಬರೆದಿದೆ” ಎಂಬುದಾಗಿ ಹೇಳಿದನು.

28 ಯೇಸು, “ನಿನ್ನ ಉತ್ತರ ಸರಿಯಾಗಿದೆ. ನೀನು ಹಾಗೆಯೇ ಮಾಡು, ಆಗ ನಿನಗೆ ನಿತ್ಯಜೀವ ದೊರೆಯುವುದು” ಅಂದನು.

29 ಆದರೆ ಆ ಮನುಷ್ಯನು ತನ್ನನ್ನು ನೀತಿವಂತನೆಂದು ತೋರಿಸಿಕೊಳ್ಳಲು ಬಯಸಿ, ಯೇಸುವಿಗೆ, “ನಾನು ಪ್ರೀತಿಸಬೇಕಾದ ನೆರೆಯವರು ಯಾರು?” ಎಂದು ಕೇಳಿದನು.

30 ಆಗ ಯೇಸು ಅವನಿಗೆ ಹೇಳಿದ್ದೇನೆಂದರೆ: “ಒಬ್ಬ ಮನುಷ್ಯನು ಜೆರುಸಲೇಮಿನಿಂದ ಇಳಿದು ಜೆರಿಕೊವಿನ ಮಾರ್ಗವಾಗಿ ಹೋಗುತ್ತಿದ್ದನು. ಕೆಲವು ದರೋಡೆಗಾರರು ಅವನನ್ನು ಸುತ್ತುಗಟ್ಟಿದರು. ಅವರು ಅವನ ಬಟ್ಟೆಯನ್ನು ಹರಿದುಹಾಕಿ ಅವನನ್ನು ಹೊಡೆದರು. ಅವನು ಮೇಲೇಳಲಾರದೆ ನೆಲದಮೇಲೆ ಬಿದ್ದುಕೊಂಡನು. ದರೋಡೆಗಾರರು ಅವನನ್ನು ನೆಲದ ಮೇಲೆಯೇ ಬಿಟ್ಟುಹೋದರು. ಅವನು ಸಾಯುವ ಸ್ಥಿತಿಯಲ್ಲಿದ್ದನು.

31 “ಅದೇ ಸಮಯದಲ್ಲಿ ಯೆಹೂದ್ಯ ಯಾಜಕನು ಆ ದಾರಿಯಲ್ಲಿ ಹೋಗುತ್ತಿದ್ದನು. ಯಾಜಕನು ಆ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯಮಾಡದೆ, ತನ್ನ ಪ್ರಯಾಣವನ್ನು ಮುಂದುವರಿಸಿದನು. 32 ನಂತರ, ಒಬ್ಬ ಲೇವಿಯು ಅದೇ ದಾರಿಯಲ್ಲಿ ಹೋಗುತ್ತಾ ಅವನ ಹತ್ತಿರ ಬಂದನು. ಲೇವಿಯು ಗಾಯಗೊಂಡಿದ್ದ ಮನುಷ್ಯನನ್ನು ನೋಡಿದರೂ ಅವನಿಗೆ ಸಹಾಯ ಮಾಡದೆ ತನ್ನ ಪ್ರಯಾಣವನ್ನು ಮುಂದುವರಿಸಿದನು.

33 “ಬಳಿಕ ಒಬ್ಬ ಸಮಾರ್ಯದವನು ಆ ದಾರಿಯಲ್ಲಿ ಪ್ರಯಾಣ ಮಾಡುತ್ತಾ ಆ ಸ್ಥಳಕ್ಕೆ ಬಂದನು. ಅವನು ಗಾಯಗೊಂಡಿದ್ದ ಮತ್ತು ದಾರಿಯಲ್ಲಿ ಬಿದ್ದುಕೊಂಡಿದ್ದ ಮನುಷ್ಯನನ್ನು ನೋಡಿ ಬಹಳ ಮರುಕಗೊಂಡನು. 34 ಸಮಾರ್ಯದವನು ಅವನ ಬಳಿಗೆ ಹೋಗಿ ಅವನ ಗಾಯಗಳಿಗೆ ಆಲಿವ್ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಬಟ್ಟೆಯಿಂದ ಕಟ್ಟಿದನು. ಸಮಾರ್ಯದವನು ಒಂದು ಕತ್ತೆಯ ಮೇಲೆ ಪ್ರಯಾಣ ಮಾಡುತ್ತಾ ಅಲ್ಲಿಗೆ ಬಂದಿದ್ದನು. ಗಾಯಗೊಂಡಿದ್ದ ಆ ಮನುಷ್ಯನನ್ನು ಅವನು ತನ್ನ ಕತ್ತೆಯ ಮೇಲೆ ಕುಳ್ಳಿರಿಸಿ, ಛತ್ರಕ್ಕೆ ಕರೆದುಕೊಂಡು ಹೋಗಿ, ಅವನನ್ನು ಆರೈಕೆ ಮಾಡಿದನು. 35 ಮರುದಿನ, ಸಮಾರ್ಯದವನು ಎರಡು ಬೆಳ್ಳಿ ನಾಣ್ಯಗಳನ್ನು ಆ ಛತ್ರದವನಿಗೆ ಕೊಟ್ಟು, ‘ಗಾಯಗೊಂಡ ಇವನನ್ನು ಆರೈಕೆ ಮಾಡು. ಇದಕ್ಕಿಂತ ಹೆಚ್ಚಾಗಿ ಖರ್ಚಾದರೆ ನಾನು ಮತ್ತೆ ಬಂದಾಗ ನಿನಗೆ ಕೊಡುತ್ತೇನೆ’ ಎಂದು ಹೇಳಿದನು.”

36 ಯೇಸು ಅವನಿಗೆ, “ಈ ಮೂವರಲ್ಲಿ (ಯಾಜಕ, ಲೇವಿ ಮತ್ತು ಸಮಾರ್ಯದವನು) ಯಾವನು ದರೋಡೆಗಾರರಿಂದ ಗಾಯಗೊಂಡಿದ್ದ ಮನುಷ್ಯನಿಗೆ ಪ್ರೀತಿ ತೋರಿಸಿದನು?” ಎಂದು ಕೇಳಿದನು.

37 ಧರ್ಮೋಪದೇಶಕನು, “ಅವನಿಗೆ ಸಹಾಯ ಮಾಡಿದವನೇ” ಎಂದು ಉತ್ತರಿಸಿದನು.

ಆಗ ಯೇಸು ಅವನಿಗೆ, “ಹಾಗಾದರೆ, ನೀನು ಹೋಗಿ ನೆರೆಯವರಿಗೆ[a] ಹಾಗೆಯೇ ಮಾಡು!” ಎಂದನು.

ಮರಿಯಳು ಮತ್ತು ಮಾರ್ಥಳು

38 ಯೇಸು ಮತ್ತು ಆತನ ಶಿಷ್ಯರು ಪ್ರಯಾಣ ಮಾಡುತ್ತಾ ಒಂದು ಊರಿಗೆ ಬಂದರು. ಮಾರ್ಥಳೆಂಬ ಸ್ತ್ರೀ ಯೇಸುವನ್ನು ತನ್ನ ಮನೆಗೆ ಆಮಂತ್ರಿಸಿದಳು. 39 ಆಕೆಗೆ ಮರಿಯಳೆಂಬ ತಂಗಿ ಇದ್ದಳು. ಮರಿಯಳು ಯೇಸುವಿನ ಪಾದಗಳ ಬಳಿ ಕುಳಿತುಕೊಂಡು ಆತನ ಉಪದೇಶವನ್ನು ಕೇಳುತ್ತಿದ್ದಳು. ಆದರೆ ಆಕೆಯ ಸಹೋದರಿಯಾದ ಮಾರ್ಥಳು ಅತಿಥಿಸತ್ಕಾರ ಮಾಡುತ್ತಿದ್ದಳು. 40 ಮನೆಯಲ್ಲಿ ಬಹಳ ಕೆಲಸವಿದ್ದುದರಿಂದ ಮಾರ್ಥಳು ಕೋಪಗೊಂಡು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ತಂಗಿಯು ಮನೆಯ ಕೆಲಸವನ್ನೆಲ್ಲಾ ನನಗೇ ಬಿಟ್ಟುಬಂದಿದ್ದಾಳೆ. ಇದರ ಬಗ್ಗೆ ನಿನಗೆ ಚಿಂತೆಯಿಲ್ಲವೋ? ನನಗೆ ಸಹಾಯ ಮಾಡಲು ಆಕೆಗೆ ಹೇಳು?” ಎಂದಳು.

41 ಆದರೆ ಪ್ರಭುವು ಅವಳಿಗೆ, “ಮಾರ್ಥಾ, ಮಾರ್ಥಾ, ನೀನು ಅನೇಕ ಕೆಲಸಗಳ ಬಗ್ಗೆ ಚಿಂತಿಸುತ್ತಾ ಗಲಿಬಿಲಿಯಾಗಿರುವೆ. 42 ಒಂದೇ ಒಂದು ಮುಖ್ಯವಾದದ್ದು. ಮರಿಯಳು ಮಾಡಿದ ಆಯ್ಕೆ ಸರಿಯಾದದ್ದು. ಆಕೆಯಿಂದ ಅದು ಎಂದಿಗೂ ತೆಗೆಯಲ್ಪಡುವುದಿಲ್ಲ” ಎಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International