New Testament in a Year
ಸುವಾರ್ತಾಸೇವೆಗೆ ಹೊರಟ ಎಪ್ಪತ್ತೆರಡು ಮಂದಿ
10 ಇದಾದನಂತರ, ಯೇಸು ಇನೂ ಎಪ್ಪತ್ತೆರಡು[a] ಮಂದಿಯನ್ನು ಆರಿಸಿಕೊಂಡು ತಾನು ಹೋಗಬೇಕೆಂದು ಯೋಚಿಸಿದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಅವರನ್ನು ಇಬ್ಬಿಬ್ಬರನ್ನಾಗಿ ಮುಂಚಿತವಾಗಿ ಕಳುಹಿಸಿದನು. 2 ಯೇಸು ಅವರಿಗೆ, “ಬೆಳೆಯು ಬಹಳ, ಆದರೆ ಕೆಲಸಗಾರರು ಕೆಲವರೇ. ದೇವರೇ ಬೆಳೆಗೆ (ಜನರ) ಯಜಮಾನನು. ಬೆಳೆಯನ್ನು ಒಟ್ಟುಗೂಡಿಸುವುದಕ್ಕಾಗಿ ಹೆಚ್ಚು ಕೆಲಸಗಾರರನ್ನು ಕಳುಹಿಸಿಕೊಡುವಂತೆ ಯಜಮಾನನನ್ನು ಬೇಡಿಕೊಳ್ಳಿರಿ.
3 “ಈಗ ನೀವು ಹೋಗಬಹುದು. ಆದರೆ ನನ್ನ ಈ ಮಾತನ್ನು ಕೇಳಿರಿ! ತೋಳಗಳ ಮಧ್ಯೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನು ಕಳುಹಿಸುತ್ತಿದ್ದೇನೆ. 4 ಕೈಚೀಲವನ್ನಾಗಲಿ ಹಣವನ್ನಾಗಲಿ ಅಥವಾ ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ನಿಂತುಕೊಂಡು ಜನರೊಡನೆ ಮಾತನಾಡಬೇಡಿ. 5 ನೀವು ಮನೆಯೊಳಗೆ ಹೋಗುವ ಮೊದಲು, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. 6 ಆ ಮನೆಯಲ್ಲಿ ಶಾಂತಸ್ವಭಾವದ ಮನುಷ್ಯನಿದ್ದರೆ, ನಿಮ್ಮ ಆಶೀರ್ವಾದ ಅವನಿಗೆ ದೊರೆಯುವುದು. ಅವನು ಶಾಂತಸ್ವಭಾವದವನಾಗಿಲ್ಲದಿದ್ದರೆ ನಿಮ್ಮ ಆಶೀರ್ವಾದ ನಿಮಗೇ ಹಿಂತಿರುಗಿ ಬರುವುದು. 7 ಆ ಮನೆಯಲ್ಲಿ ಇಳಿದುಕೊಂಡು ಅವರು ಕೊಡುವುದನ್ನು ತಿನ್ನಿರಿ, ಕುಡಿಯಿರಿ. ಕೆಲಸಗಾರನು ಸಂಬಳಕ್ಕೆ ಯೋಗ್ಯನಾಗಿದ್ದಾನೆ. ಆದ್ದರಿಂದ ಇಳಿದುಕೊಳ್ಳುವುದಕ್ಕಾಗಿ ಆ ಮನೆಯನ್ನು ಬಿಟ್ಟು ಇನ್ನೊಂದು ಮನೆಗೆ ಹೋಗಬೇಡಿರಿ.
8 “ನೀವು ಒಂದು ಊರಿಗೆ ಹೋದಾಗ ಆ ಊರಿನ ಜನರು ನಿಮ್ಮನ್ನು ಸ್ವಾಗತಿಸಿದರೆ, ಅವರು ಕೊಡುವ ಆಹಾರವನ್ನು ಊಟಮಾಡಿರಿ. 9 ಅಲ್ಲಿಯ ರೋಗಿಗಳನ್ನು ವಾಸಿಮಾಡಿರಿ. ಅಲ್ಲಿಯ ಜನರಿಗೆ, ‘ದೇವರ ರಾಜ್ಯವು ಸಮೀಪಿಸುತ್ತಿದೆ!’ ಎಂದು ತಿಳಿಸಿರಿ.
10 “ಆದರೆ ನೀವು ಒಂದು ಊರಿಗೆ ಹೋದಾಗ, ಅಲ್ಲಿಯ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ನೀವು ಆ ಊರಿನ ಬೀದಿಗಳಿಗೆ ಹೋಗಿ, 11 ‘ನಮ್ಮ ಕಾಲುಗಳಿಗೆ ಹತ್ತಿದ ನಿಮ್ಮ ಊರಿನ ಧೂಳನ್ನು ನಿಮಗೆ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ದೇವರ ರಾಜ್ಯ ಸಮೀಪಿಸುತ್ತಿದೆ ಎಂಬುದು ನಿಮಗೆ ತಿಳಿದಿರಲಿ’ ಎಂದು ಹೇಳಿರಿ. 12 ನ್ಯಾಯತೀರ್ಪಿನ ದಿನದಲ್ಲಿ ಆ ಜನರ ಗತಿಯು ಸೊದೋಮಿನ[b] ಜನರ ಗತಿಗಿಂತಲೂ ಕಠಿಣವಾಗಿರುವುದು” ಎಂದು ಹೇಳಿದನು.
ನಂಬಲೊಲ್ಲದ ಜನರಿಗೆ ಯೇಸುವಿನ ಎಚ್ಚರಿಕೆ
(ಮತ್ತಾಯ 11:20-24)
13 “ಕೊರಾಜಿನೇ, ಬೆತ್ಸಾಯಿದವೇ,[c] ನಿಮ್ಮ ಗತಿಯನ್ನು ಏನು ಹೇಳಲಿ! ನಿಮ್ಮಲ್ಲಿ ನಾನು ಅನೇಕ ಸೂಚಕಕಾರ್ಯಗಳನ್ನು ಮಾಡಿದೆನು. ಅದೇ ಸೂಚಕ ಕಾರ್ಯಗಳು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅವುಗಳ ಜನರು ಬಹಳ ಹಿಂದೆಯೇ, ತಮ್ಮ ಜೀವಿತಗಳನ್ನು ಮಾರ್ಪಡಿಸಿಕೊಂಡು, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ಗೋಣಿತಟ್ಟನ್ನು ಧರಿಸಿಕೊಂಡು, ಬೂದಿಯನ್ನು ಬಳಿದುಕೊಳ್ಳುತ್ತಿದ್ದರು. 14 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಸ್ಥಿತಿಯು ಟೈರ್ ಮತ್ತು ಸಿದೋನ್‌ಗಳ ಸ್ಥಿತಿಗಿಂತಲೂ ಕಠಿಣವಾಗಿರುವುದು. 15 ಕಪೆರ್ನೌಮೇ,[d] ನೀನು ಪರಲೋಕಕ್ಕೆ ಏರಿಸಲ್ಪಡುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ!
16 “ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನೇ ಕೇಳುವವನಾಗಿದ್ದಾನೆ. ನಿಮ್ಮನ್ನು ಅಂಗೀಕರಿಸದವನು ನನ್ನನ್ನೇ ಅಂಗಿಕರಿಸದವನಾಗಿದ್ದಾನೆ. ನನ್ನನ್ನು ನಿರಾಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ (ದೇವರು) ನಿರಾಕರಿಸುವವನಾಗಿದ್ದಾನೆ” ಎಂದು ಹೇಳಿದನು.
ಸೈತಾನನ ಬೀಳುವಿಕೆ
17 ಎಪ್ಪತ್ತೆರಡು ಮಂದಿ ಶಿಷ್ಯರು ತಮ್ಮ ಪ್ರವಾಸದಿಂದ ಹಿಂತಿರುಗಿ ಬಂದಾಗ ಬಹಳ ಸಂತೋಷವಾಗಿದ್ದರು. ಅವರು ಯೇಸುವಿಗೆ, “ಪ್ರಭುವೇ, ನಾವು ನಿನ್ನ ಹೆಸರನ್ನು ಹೇಳಿದಾಗ ದೆವ್ವಗಳು ಸಹ ನಮಗೆ ವಿಧೇಯವಾದವು!” ಎಂದು ಹೇಳಿದರು.
18 ಯೇಸು ಅವರಿಗೆ, “ಸೈತಾನನು ಮಿಂಚಿನೋಪಾದಿಯಲ್ಲಿ ಆಕಾಶದಿಂದ ಕೆಳಗೆ ಬೀಳುವುದನ್ನು ನಾನು ನೋಡಿದೆನು. 19 ಕೇಳಿರಿ! ಹಾವುಗಳ ಮತ್ತು ಚೇಳುಗಳ ಮೇಲೆ ನಡೆಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ವೈರಿಗಿರುವ ಅಧಿಕಾರಕ್ಕಿಂತಲೂ (ಸೈತಾನ) ಹೆಚ್ಚಿನ ಅಧಿಕಾರವನ್ನು ನಿಮಗೆ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದಿಲ್ಲ. 20 ಹೌದು, ದೆವ್ವಗಳೂ ನಿಮಗೆ ವಿಧೇಯವಾಗುತ್ತವೆ. ಈ ಅಧಿಕಾರ ನಿಮಗಿದೆ ಎಂಬುದರ ನಿಮಿತ್ತ ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂಬುದಕ್ಕಾಗಿ ಸಂತೋಷಪಡಿರಿ” ಅಂದನು.
ಯೇಸು ತಂದೆಗೆ ಮಾಡಿದ ಪ್ರಾರ್ಥನೆ
(ಮತ್ತಾಯ 11:25-27; 13:16-17)
21 ಬಳಿಕ ಯೇಸು ಪವಿತ್ರಾತ್ಮನ ಮೂಲಕ ಬಹಳ ಸಂತೋಷಗೊಂಡು ಹೀಗೆ ಪ್ರಾರ್ಥಿಸಿದನು: “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಾನು ನಿನ್ನನ್ನು ಸ್ತುತಿಸುತ್ತೇನೆ. ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಸಂಗತಿಗಳನ್ನು ಮರೆಮಾಡಿದ್ದಕ್ಕಾಗಿ ನಾನು ನಿನ್ನನ್ನು ಸ್ತುತಿಸುತ್ತೇನೆ. ಆದರೆ ನೀನು ಚಿಕ್ಕಮಕ್ಕಳಂತಿರುವ ಜನರಿಗೆ ಈ ಸಂಗತಿಗಳನ್ನು ಪ್ರಕಟಮಾಡಿದೆ. ಹೌದು, ತಂದೆಯೇ, ಅದೇ ನಿನ್ನ ಅಪೇಕ್ಷೆಯಾಗಿತ್ತು.
22 “ನನ್ನ ತಂದೆಯು ಎಲ್ಲವನ್ನೂ ನನಗೆ ಕೊಟ್ಟಿದ್ದಾನೆ. ಮಗನು ಯಾರೆಂಬುದು ಯಾರಿಗೂ ಗೊತ್ತಿಲ್ಲ. ತಂದೆಯೊಬ್ಬನಿಗೇ ಗೊತ್ತಿದೆ. ತಂದೆಯು ಯಾರೆಂಬುದು ಮಗನಿಗೆ ಮಾತ್ರ ಗೊತ್ತಿದೆ. ಮಗನು ತಂದೆಯ ಬಗ್ಗೆ ಯಾರಿಗೆ ತಿಳಿಸುತ್ತಾನೋ ಅವರು ಮಾತ್ರ ತಂದೆಯ ಬಗ್ಗೆ ತಿಳಿದುಕೊಳ್ಳುವರು.”
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ತಿರುಗಿ ನೋಡಿದನು. ಅಲ್ಲಿ ಆತನ ಶಿಷ್ಯರು ಮಾತ್ರವಿದ್ದರು. ಯೇಸು ಅವರಿಗೆ, “ಈಗ ನಡೆಯುವ ಸಂಗತಿಗಳನ್ನು ನೋಡುತ್ತಿರುವ ನೀವು ಧನ್ಯರು! 24 ಅನೇಕ ಪ್ರವಾದಿಗಳೂ ಅರಸರೂ ಈಗ ನೀವು ನೋಡುತ್ತಿರುವ ಈ ಸಂಗತಿಗಳನ್ನು ನೋಡಬೇಕೆಂದು ಮತ್ತು ಈಗ ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದನು.
Kannada Holy Bible: Easy-to-Read Version. All rights reserved. © 1997 Bible League International