New Testament in a Year
31 “ಈ ಕಾಲದ ಜನರ ಬಗ್ಗೆ ನಾನು ಏನು ಹೇಳಲಿ? ನಾನು ಅವರನ್ನು ಯಾವುದಕ್ಕೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? 32 ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಹೋಲುತ್ತಾರೆ. ಒಂದು ಗುಂಪಿನ ಮಕ್ಕಳು ಇನ್ನೊಂದು ಗುಂಪಿನ ಮಕ್ಕಳನ್ನು ಕರೆದು,
‘ನಾವು ನಿಮಗೋಸ್ಕರ ವಾದ್ಯಬಾರಿಸಿದೆವು,
ಆದರೆ ನೀವು ಕುಣಿಯಲಿಲ್ಲ;
ನಾವು ದುಃಖದ ಹಾಡನ್ನು ಹಾಡಿದೆವು,
ಆದರೆ ನೀವು ಅಳಲಿಲ್ಲ’
ಎಂದು ಹೇಳುತ್ತಾರೆ. 33 ಸ್ನಾನಿಕ ಯೋಹಾನನು ಬಂದನು. ಅವನು ಇತರರಂತೆ ತಿನ್ನಲಿಲ್ಲ ಅಥವಾ ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ನೀವು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತೀರಿ. 34 ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ‘ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!’ ಎನ್ನುತ್ತೀರಿ. 35 ಆದರೆ ಜ್ಞಾನವು ತನ್ನ ಕಾರ್ಯಗಳಿಂದಲೇ ತನ್ನನ್ನು ಸಮರ್ಥಿಸಿಕೊಳ್ಳುವುದು” ಎಂದು ಹೇಳಿದನು.
ಫರಿಸಾಯನಾದ ಸಿಮೋನನು
36 ಫರಿಸಾಯರಲ್ಲಿ ಒಬ್ಬನು ಯೇಸುವನ್ನು ಊಟಕ್ಕೆ ಬರಬೇಕೆಂದು ಕೇಳಿಕೊಂಡನು. ಆದ್ದರಿಂದ ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತುಕೊಂಡನು.
37 ಆ ಊರಿನಲ್ಲಿ ಪಾಪಿಷ್ಠಳಾದ ಒಬ್ಬ ಸ್ತ್ರೀ ಇದ್ದಳು. ಯೇಸುವು ಫರಿಸಾಯನ ಮನೆಯಲ್ಲಿ ಊಟಮಾಡುತ್ತಿದ್ದಾನೆಂದು ಆಕೆಗೆ ತಿಳಿಯಿತು. ಆದ್ದರಿಂದ ಆಕೆ ಭರಣಿಯಲ್ಲಿ[a] ಸ್ವಲ್ಪ ಪರಿಮಳತೈಲವನ್ನು ತೆಗೆದುಕೊಂಡು ಬಂದಳು. 38 ಆಕೆ ಯೇಸುವಿನ ಪಾದಗಳ ಬಳಿ ಅಳುತ್ತಾ, ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿನಿಂದ ಯೇಸುವಿನ ಪಾದಗಳನ್ನು ಒರೆಸಿದಳು. ಆಕೆ ಅನೇಕಸಲ ಆತನ ಪಾದಗಳಿಗೆ ಮುದ್ದಿಟ್ಟು ಪರಿಮಳತೈಲವನು ಹಚ್ಚಿದಳು.
39 ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.
40 ಅದಕ್ಕೆ ಯೇಸು ಫರಿಸಾಯನಿಗೆ, “ಸಿಮೋನನೇ, ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದನು.
ಸಿಮೋನನು, “ಗುರುವೇ, ಹೇಳು!” ಎಂದನು.
41 ಯೇಸು, “ಇಬ್ಬರು ಮನುಷ್ಯರಿದ್ದರು. ಅವರಿಬ್ಬರೂ ಒಬ್ಬನೇ ಸಾಹುಕಾರನಿಂದ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು[b] ತೆಗೆದುಕೊಂಡಿದ್ದನು. ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು. 42 ಅವರಲ್ಲಿ ಹಣವಿರಲಿಲ್ಲ. ಆದ್ದರಿಂದ ಅವರು ಸಾಲ ತೀರಿಸಲು ಆಗಲಿಲ್ಲ. ಸಾಹುಕಾರನು ಅವರಿಗೆ, ‘ನೀವು ಸಾಲ ತೀರಿಸಬೇಕಾಗಿಲ್ಲ’ ಎಂದು ಹೇಳಿದನು. ಆ ಇಬ್ಬರಲ್ಲಿ ಯಾರು ಹೆಚ್ಚಾಗಿ ಸಾಹುಕಾರನನ್ನು ಪ್ರೀತಿಸುವರು?” ಎಂದು ಕೇಳಿದನು.
43 ಸಿಮೋನನು, “ಹೆಚ್ಚು ಸಾಲ ತೆಗೆದುಕೊಂಡಿದ್ದವನೇ ಎಂದು ತೋರುತ್ತದೆ” ಎಂದನು.
ಯೇಸು ಸಿಮೋನನಿಗೆ, “ನೀನು ಸರಿಯಾಗಿ ಹೇಳಿದೆ” ಎಂದನು. 44 ಬಳಿಕ ಯೇಸು ಸ್ತ್ರೀಯ ಕಡೆಗೆ ನೋಡಿ ಸಿಮೋನನಿಗೆ, “ಈ ಸ್ತ್ರೀಯು ನಿನಗೆ ಕಾಣುತ್ತಿರುವಳೇ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಪಾದಗಳಿಗೆ ನೀರು ಕೊಡಲಿಲ್ಲ. ಆದರೆ ಈಕೆ ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿಂದ ಒರೆಸಿದಳು. 45 ನೀನು ನನಗೆ ಮುದ್ದಿಡಲಿಲ್ಲ. ಈಕೆಯಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುದ್ದಿಡುತ್ತಿದ್ದಾಳೆ! 46 ನೀನು ನನ್ನ ತಲೆಗೆ ಎಣ್ಣೆಯನ್ನು ಹಚ್ಚಲಿಲ್ಲ. ಈಕೆಯಾದರೋ ನನ್ನ ಪಾದಗಳಿಗೆ ಪರಿಮಳತೈಲವನ್ನು ಹಚ್ಚಿದಳು. 47 ಈಕೆಯ ಅನೇಕ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ಈಕೆ ಅಧಿಕವಾದ ಪ್ರೀತಿಯನ್ನು ತೋರಿದಳು. ಆದರೆ ಸ್ವಲ್ಪ ಕ್ಷಮೆ ಹೊಂದುವವನು ಕೇವಲ ಸ್ವಲ್ಪ ಪ್ರೀತಿಯನ್ನೇ ತೋರುವನು” ಎಂದು ಹೇಳಿದನು.
48 ಬಳಿಕ ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
49 ಊಟಕ್ಕೆ ಕುಳಿತುಕೊಂಡಿದ್ದವರು, “ಇವನು (ಯೇಸು) ತನ್ನನ್ನು ಯಾರೆಂದುಕೊಂಡಿದ್ದಾನೆ? ಪಾಪಗಳನ್ನು ಕ್ಷಮಿಸಲು ಇವನಿಗೆ ಹೇಗೆ ಸಾಧ್ಯ?” ಎಂದು ತಮ್ಮೊಳಗೆ ಅಂದುಕೊಂಡರು.
50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯಿಂದಲೇ ನಿನಗೆ ರಕ್ಷಣೆ ಆಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International