New Testament in a Year
ಯೇಸುವನ್ನು ಹಿಂಬಾಲಿಸಿದ ಪೇತ್ರ, ಯಾಕೋಬ, ಯೋಹಾನ
(ಮತ್ತಾಯ 4:18-22; ಮಾರ್ಕ 1:16-20)
5 ಯೇಸು ಗೆನೆಸರೇತ್ (ಗಲಿಲಾಯ) ಸರೋವರದ ಬಳಿ ನಿಂತುಕೊಂಡಿದ್ದಾಗ, ದೇವರ ವಾಕ್ಯವನ್ನು ಕೇಳಲು ಅನೇಕ ಜನರು ನೂಕಾಡುತ್ತಾ ಆತನ ಸುತ್ತಲೂ ಸೇರಿಬಂದರು. 2 ಸರೋವರದ ದಡದಲ್ಲಿ ನಿಂತಿದ್ದ ಎರಡು ದೋಣಿಗಳನ್ನು ಯೇಸು ನೋಡಿದನು. ಬೆಸ್ತರು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3 ಯೇಸು ಸೀಮೋನನ ದೋಣಿಯಲ್ಲಿ ಹತ್ತಿ ಕುಳಿತುಕೊಂಡು ದೋಣಿಯನ್ನು ದಡದಿಂದ ಸ್ವಲ್ಪದೂರಕ್ಕೆ ನೂಕಬೇಕೆಂದು ಸೀಮೋನನಿಗೆ ಹೇಳಿದನು.
4 ಉಪದೇಶ ಮಾಡಿದಮೇಲೆ ಯೇಸು ಸೀಮೋನನಿಗೆ, “ದೋಣಿಯನ್ನು ಆಳವಾದ ನೀರಿನ ಸ್ಥಳಕ್ಕೆ ನಡೆಸಿ, ಮೀನುಹಿಡಿಯಲು ನಿಮ್ಮ ಬಲೆಗಳನ್ನು ನೀರಿನಲ್ಲಿ ಹಾಕಿರಿ” ಎಂದು ಹೇಳಿದನು.
5 ಸೀಮೋನನು, “ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಒಂದು ಮೀನೂ ಸಿಕ್ಕಲಿಲ್ಲ. ಆದರೆ, ನೀನು ಹೇಳಿದ್ದರಿಂದ ಬೀಸುತ್ತೇವೆ” ಎಂದನು. 6 ಬೆಸ್ತರು ತಮ್ಮ ಬಲೆಗಳನ್ನು ನೀರಿನೊಳಗೆ ಬೀಸಿದಾಗ, ಅವರ ಬಲೆಗಳು ಹರಿದುಹೋಗುವಷ್ಟು ಮೀನುಗಳು ರಾಶಿರಾಶಿಯಾಗಿ ಬಲೆಗಳಲ್ಲಿ ತುಂಬಿಕೊಂಡವು. 7 ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಸ್ನೇಹಿತರಿಗೆ ಸನ್ನೆಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಮೀನುಗಳನ್ನು ತುಂಬಿಸಲು ದೋಣಿಗಳೆರಡೂ ಮುಳುಗುವಂತಾದವು.
8-9 ಇದನ್ನು ಕಂಡ ಬೆಸ್ತರಿಗೆಲ್ಲಾ ವಿಸ್ಮಯವಾಯಿತು. ಸೀಮೋನ್ ಪೇತ್ರನಂತೂ ಯೇಸುವಿನ ಮುಂದೆ ಮೊಣಕಾಲೂರಿ “ಪ್ರಭುವೇ ನನ್ನನ್ನು ಬಿಟ್ಟುಹೋಗು, ನಾನು ಪಾಪಿಯಾಗಿದ್ದೇನೆ!” ಎಂದನು. 10 ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೂ ಆಶ್ಚರ್ಯಪಟ್ಟರು. (ಇವರಿಬ್ಬರೂ ಸೀಮೋನನ ಪಾಲುಗಾರರಾಗಿದ್ದರು.)
ಯೇಸು ಸೀಮೋನನಿಗೆ, “ಭಯಪಡಬೇಡ. ಇಂದಿನಿಂದ ನೀನು ಮೀನನ್ನು ಹಿಡಿಯದೆ, ಮನುಷ್ಯರನ್ನು ಒಟ್ಟುಗೂಡಿಸಲು ದುಡಿಯುವೆ!” ಎಂದು ಹೇಳಿದನು.
11 ಅವರು ತಮ್ಮ ದೋಣಿಗಳನ್ನು ದಡಕ್ಕೆ ಸಾಗಿಸಿದ ಮೇಲೆ ಎಲ್ಲವನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ಯೇಸುವಿನಿಂದ ಗುಣಹೊಂದಿದ ಕುಷ್ಠರೋಗಿ
(ಮತ್ತಾಯ 8:1-4; ಮಾರ್ಕ 1:40-45)
12 ಒಮ್ಮೆ ಯೇಸು ಒಂದು ಊರಿನಲ್ಲಿದ್ದಾಗ ಕುಷ್ಠರೋಗಿಯೊಬ್ಬನು ಆತನನ್ನು ಕಂಡು, ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಮನಸ್ಸು ಮಾಡಿದರೆ ನನ್ನನ್ನು ಗುಣಪಡಿಸಬಲ್ಲೆ ಎಂದು ನನಗೆ ಗೊತ್ತಿದೆ” ಎಂದು ಬೇಡಿಕೊಂಡನು.
13 ಯೇಸು, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸುಂಟು. ನಿನಗೆ ಗುಣವಾಗಲಿ!” ಎಂದು ಹೇಳಿ ಅವನನ್ನು ಮುಟ್ಟಿದನು. ಕೂಡಲೆ ಅವನಿಗೆ ಗುಣವಾಯಿತು. 14 ಯೇಸು ಅವನಿಗೆ, “ನಿನಗೆ ಹೇಗೆ ಗುಣವಾಯಿತು ಎಂಬುದರ ಬಗ್ಗೆ ಯಾರಿಗೂ ಹೇಳದೆ ಯಾಜಕನ ಬಳಿಗೆ ಹೋಗಿ ನಿನ್ನ ಮೈಯನ್ನು ತೋರಿಸಿ ಮೋಶೆಯ ನಿಯಮಗಳಿಗನುಸಾರವಾಗಿ ಕಾಣಿಕೆಯನ್ನು ದೇವರಿಗೆ ಸಮರ್ಪಿಸು. ನಿನಗೆ ವಾಸಿಯಾಯಿತೆಂಬುದಕ್ಕೆ ಇದೇ ಜನರಿಗೆಲ್ಲಾ ಸಾಕ್ಷಿಯಾಗಿರುವುದು” ಎಂದು ಹೇಳಿದನು. ಆದರೆ ಯೇಸುವಿನ ಸುದ್ದಿಯು ಹೆಚ್ಚೆಚ್ಚಾಗಿ ಹಬ್ಬಿತು.[a]
15 ಅನೇಕ ಜನರು ಆತನ ಬೋಧನೆಗಳನ್ನು ಕೇಳುವುದಕ್ಕೂ ತಮ್ಮ ಕಾಯಿಲೆಗಳನ್ನು ವಾಸಿಮಾಡಿಸಿಕೊಳ್ಳುವುದಕ್ಕೂ ಬಂದರು. 16 ಯೇಸು ಆಗಾಗ್ಗೆ ನಿರ್ಜನ ಸ್ಥಳಗಳಿಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದನು.
Kannada Holy Bible: Easy-to-Read Version. All rights reserved. © 1997 Bible League International