Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಲೂಕ 4:31-44

ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ

(ಮಾರ್ಕ 1:21-28)

31 ಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್‌ದಿನದಂದು ಯೇಸು ಜನರಿಗೆ ಉಪದೇಶಿಸಿದನು. 32 ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು.

33 ಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ, 34 “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು. 35 ಆದರೆ ಯೇಸು ಆ ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು.

36 ಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು. 37 ಹೀಗಾಗಿ ಯೇಸುವಿನ ಸುದ್ದಿಯು ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು.

ಯೇಸುವಿನಿಂದ ಗುಣಹೊಂದಿದ ಸ್ತ್ರೀ

(ಮತ್ತಾಯ 8:14-17; ಮಾರ್ಕ 1:29-34)

38 ಯೇಸು ಸಭಾಮಂದಿರದಿಂದ ಹೊರಟು ಸೀಮೋನನ[a] ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು. 39 ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಆ ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು.

ಅನೇಕರಿಗೆ ಆರೋಗ್ಯದಾನ

40 ಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು. 41 ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ಆ ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು.

ಇತರ ಊರುಗಳಿಗೆ ಯೇಸುವಿನ ಸಂದರ್ಶನ

(ಮಾರ್ಕ 1:35-39)

42 ಮರುದಿನ ಯೇಸು ನಿರ್ಜನ ಸ್ಥಳಕ್ಕೆ ಹೋದನು. ಜನರು ಯೇಸುವಿಗಾಗಿ ಹುಡುಕುತ್ತಾ ಅಲ್ಲಿಗೆ ಬಂದು, ತಮ್ಮನ್ನು ಬಿಟ್ಟುಹೋಗದಂತೆ ಆತನನ್ನು ತಡೆಯಲು ಪ್ರಯತ್ನಿಸಿದರು. 43 ಆದರೆ ಯೇಸು ಅವರಿಗೆ, “ನಾನು ಬೇರೆ ಊರುಗಳವರಿಗೂ ಸಹ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಬೇಕು. ಇದಕ್ಕಾಗಿಯೇ ನನ್ನನ್ನು ಕಳುಹಿಸಲಾಗಿದೆ” ಎಂದು ಹೇಳಿದನು.

44 ಬಳಿಕ ಯೇಸು ಜುದೇಯದ ಸಭಾಮಂದಿರಗಳಲ್ಲಿ ಬೋಧಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International