New Testament in a Year
ಯೇಸುವಿನ ಜನನ
(ಮತ್ತಾಯ 1:18-25)
2 ಆ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಸರನು ರೋಮನ್ನರ ಆಳ್ವಿಕೆಗೆ ಒಳಪಟ್ಟಿದ್ದ ಎಲ್ಲಾ ದೇಶಗಳಲ್ಲಿ ಜನಗಣತಿ ಆಗಬೇಕೆಂದು ಆಜ್ಞಾಪಿಸಿದನು. 2 ಇದು ಮೊಟ್ಟಮೊದಲನೆಯ ಜನಗಣತಿಯಾಗಿತ್ತು. ಕುರೇನ್ಯನು ಸಿರಿಯ ದೇಶದ ರಾಜ್ಯಪಾಲನಾಗಿದ್ದಾಗ ಇದು ಸಂಭವಿಸಿತು. 3 ಜನರೆಲ್ಲರೂ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಮ್ಮತಮ್ಮ ಊರುಗಳಿಗೆ ಪ್ರಯಾಣ ಮಾಡಿದರು.
4 ಆದ್ದರಿಂದ ಯೋಸೇಫನು ಗಲಿಲಾಯದಲ್ಲಿನ ನಜರೇತ್ ಎಂಬ ಊರಿನಿಂದ ಹೊರಟು ಜುದೇಯದಲ್ಲಿನ ಬೆತ್ಲೆಹೇಮ್ ಎಂಬ ಊರಿಗೆ ಹೋದನು. ಯೋಸೇಫನು ದಾವೀದನ ಮನೆತನದವನಾಗಿದ್ದುದರಿಂದ ದಾವೀದನ ಊರಾದ ಬೆತ್ಲೆಹೇಮಿಗೆ ಹೋದನು. 5 ಅವನು ತನ್ನೊಂದಿಗೆ ಮರಿಯಳನ್ನೂ ಕರೆದುಕೊಂಡು ಹೋದನು. ಆಕೆಗೆ ಅವನೊಂದಿಗೆ ನಿಶ್ಚಿತಾರ್ಥವಾಗಿತ್ತು. (ಮರಿಯಳು ಆಗ ಗರ್ಭಿಣಿಯಾಗಿದ್ದಳು.) 6 ಅವರು ಬೆತ್ಲೆಹೇಮಿನಲ್ಲಿದ್ದಾಗ ಮರಿಯಳಿಗೆ ಹೆರಿಗೆಕಾಲ ಬಂತು. 7 ಆಕೆ ತನ್ನ ಚೊಚ್ಚಲಮಗುವನ್ನು (ಯೇಸು) ಹೆತ್ತಳು. ಅವರಿಗೆ ಇಳಿದುಕೊಳ್ಳಲು ಛತ್ರದಲ್ಲಿ ಸ್ಥಳ ದೊರೆಯಲಿಲ್ಲ. ಆದ್ದರಿಂದ ಮರಿಯಳು ಮಗುವನ್ನು ಬಟ್ಟೆಯಿಂದ ಸುತ್ತಿ ದನದ ಕೊಟ್ಟಿಗೆಯಲ್ಲಿ ಮೇವು ಹಾಕುತ್ತಿದ್ದ ತೊಟ್ಟಿಯಲ್ಲಿ ಮಲಗಿಸಿದಳು.
ಕುರುಬರಿಗೆ ದೊರೆತ ಸಂದೇಶ
8 ಆ ರಾತ್ರಿ, ಕೆಲವು ಕುರುಬರು ಹೊಲಗಳ ಸಮೀಪದಲ್ಲಿ ತಮ್ಮ ಕುರಿಗಳನ್ನು ಕಾಯುತ್ತಿದ್ದರು. 9 ಪ್ರಭುವಿನ ದೂತನೊಬ್ಬನು ಕುರುಬರ ಮುಂದೆ ನಿಂತನು. ಅವರ ಸುತ್ತಲೂ ಪ್ರಭುವಿನ ಪ್ರಭೆಯು ಪ್ರಕಾಶಿಸಿತು. ಕುರುಬರು ಬಹಳವಾಗಿ ಹೆದರಿದರು. 10 ದೇವದೂತನು ಅವರಿಗೆ, “ಹೆದರಬೇಡಿರಿ, ಜನರೆಲ್ಲರಿಗೆ ಮಹಾಸಂತೋಷವನ್ನು ಉಂಟುಮಾಡುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: 11 ಈ ದಿನ ನಿಮಗೋಸ್ಕರ ದಾವೀದನ ಊರಿನಲ್ಲಿ ರಕ್ಷಕನು ಜನಿಸಿದ್ದಾನೆ. ಆತನೇ ಪ್ರಭುವಾದ ಕ್ರಿಸ್ತನು. 12 ಬಟ್ಟೆಯಲ್ಲಿ ಸುತ್ತಿರುವ ಒಂದು ಮಗು ದನದ ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೀವು ಕಾಣುವಿರಿ. ನೀವು ಆತನನ್ನು ಗೊತ್ತುಪಡಿಸಿಕೊಳ್ಳಲು ಅದೇ ಗುರುತಾಗಿದೆ” ಎಂದು ಹೇಳಿದನು.
13 ತಕ್ಷಣವೇ ಪರಲೋಕದಿಂದ ದೇವದೂತರು ಬಹು ದೊಡ್ಡ ಗುಂಪಾಗಿ ಬಂದು ಮೊದಲನೆಯ ದೇವದೂತನೊಡನೆ ಸೇರಿಕೊಂಡರು. ಅವರೆಲ್ಲರೂ,
14 “ಮೇಲಿನಲೋಕಗಳಲ್ಲಿ ದೇವರಿಗೆ ಮಹಿಮೆ;
ಭೂಲೋಕದಲ್ಲಿ ದೇವರೊಲಿದವರಿಗೆ ಸಮಾಧಾನ”
ಎಂದು ಹೇಳುತ್ತಾ ದೇವರನ್ನು ಸ್ತುತಿಸಿದರು.
15 ದೇವದೂತರು ಕುರುಬರ ಬಳಿಯಿಂದ ಪರಲೋಕಕ್ಕೆ ಹಿಂತಿರುಗಿದ ಮೇಲೆ ಕುರುಬರು, “ನಾವು ಈಗಲೇ ಬೆತ್ಲೆಹೇಮಿಗೆ ಹೋಗಿ, ಪ್ರಭುವು ನಮಗೆ ತಿಳಿಸಿದ ಈ ಘಟನೆಯನ್ನು ನೋಡೋಣ” ಎಂದು ಮಾತಾಡಿಕೊಂಡರು.
16 ಆದ್ದರಿಂದ ಕುರುಬರು ಬೇಗನೆ ಹೋಗಿ ಮರಿಯಳನ್ನೂ ಯೋಸೇಫನನ್ನೂ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ಮಗುವನ್ನೂ ಕಂಡುಕೊಂಡರು. 17 ಕುರುಬರು ಮಗುವನ್ನು ನೋಡಿದಾಗ ಅದರ ವಿಷಯವಾಗಿ ತಮಗೆ ದೇವದೂತರು ತಿಳಿಸಿದ್ದನ್ನು ಅವರಿಗೆ ತಿಳಿಯಪಡಿಸಿದರು. 18 ಕುರುಬರು ತಿಳಿಸಿದ್ದನ್ನು ಕೇಳಿದ ಅವರೆಲ್ಲರೂ ಆಶ್ಚರ್ಯಪಟ್ಟರು. 19 ಮರಿಯಳು ಈ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟುಕೊಂಡು, ಅವುಗಳ ಬಗ್ಗೆ ಯೋಚಿಸತೊಡಗಿದಳು. 20 ಕುರುಬರು ತಾವು ಕಂಡು ಕೇಳಿದ ಪ್ರತಿಯೊಂದು ಸಂಗತಿಗಾಗಿ ದೇವರನ್ನು ಕೊಂಡಾಡುತ್ತಾ ಆತನನ್ನು ಸ್ತುತಿಸುತ್ತಾ ತಮ್ಮ ಕುರಿಗಳಿದ್ದಲ್ಲಿಗೆ ಮರಳಿಹೋದರು. ದೇವದೂತರು ಅವರಿಗೆ ತಿಳಿಸಿದಂತೆಯೇ ಪ್ರತಿಯೊಂದು ಸಂಗತಿಯೂ ನಡೆದಿತ್ತು.
21 ಮಗುವಿಗೆ ಎಂಟು ದಿನವಾದಾಗ ಸುನ್ನತಿ[a] ಆಯಿತು ಮತ್ತು ಆತನಿಗೆ “ಯೇಸು” ಎಂದು ಹೆಸರಿಡಲಾಯಿತು. ಮರಿಯಳ ಗರ್ಭದಲ್ಲಿ ಮಗುವು ಬೆಳೆಯುವುದಕ್ಕೆ ಪ್ರಾರಂಭಿಸುವ ಮೊದಲೇ ದೇವದೂತನು ಈ ಹೆಸರನ್ನೇ ಕೊಡಬೇಕೆಂದು ಸೂಚಿಸಿದ್ದನು.
ದೇವಾಲಯದಲ್ಲಿ ಯೇಸುವಿನ ಪ್ರತಿಷ್ಠೆ
22 ಶುದ್ಧೀಕರಣದ[b] ಬಗ್ಗೆ ಮೋಶೆಯ ಧರ್ಮಶಾಸ್ತ್ರವು ಬೋಧಿಸಿದ್ದ ಕಾರ್ಯಗಳನ್ನು ಮರಿಯಳು ಮತ್ತು ಯೋಸೇಫನು ಮಾಡುವ ಸಮಯ ಬಂತು. ಯೇಸುವನ್ನು ಪ್ರಭುವಿಗೆ (ದೇವರಿಗೆ) ಪ್ರತಿಷ್ಠಿಸಲು ಯೋಸೇಫನು ಮತ್ತು ಮರಿಯಳು ಆತನನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು. 23 ಏಕೆಂದರೆ “ಪ್ರತಿ ಕುಟುಂಬದಲ್ಲಿ, ‘ಚೊಚ್ಚಲು ಗಂಡುಮಗುವನ್ನು ಪ್ರಭುವಿಗೆ ಪ್ರತಿಷ್ಠಿಸಬೇಕು’”[c] ಎಂದು ಪ್ರಭುವಿನ ಧರ್ಮಶಾಸ್ತ್ರದಲ್ಲಿ ಬರೆದಿದೆ. 24 “ಎರಡು ಪಾರಿವಾಳಗಳನ್ನು ಅಥವಾ ಎರಡು ಬೆಳವಕ್ಕಿಗಳನ್ನು ಯಜ್ಞವಾಗಿ ಸಮರ್ಪಿಸಬೇಕು”(A) ಎಂದು ಸಹ ಪ್ರಭುವಿನ ಧರ್ಮಶಾಸ್ತ್ರವು ಹೇಳುತ್ತದೆ. ಆದ್ದರಿಂದ ಯೋಸೇಫನು ಮತ್ತು ಮರಿಯಳು ಜೆರುಸಲೇಮಿಗೆ ಹೋದರು.
Kannada Holy Bible: Easy-to-Read Version. All rights reserved. © 1997 Bible League International