New Testament in a Year
21 ಜನರು ಜಕರೀಯನಿಗಾಗಿ ಎದುರುನೋಡುತ್ತಾ ದೇವಾಲಯದೊಳಗೆ ಅವನು ಇಷ್ಟುಹೊತ್ತು ಇರಲು ಕಾರಣವೇನಿರಬಹುದೆಂದು ಆಶ್ಚರ್ಯಚಕಿತರಾದರು. 22 ಬಳಿಕ ಜಕರೀಯನು ಹೊರಗೆ ಬಂದಾಗ, ಅವನಿಗೆ ಅವರೊಡನೆ ಮಾತಾಡಲಾಗಲಿಲ್ಲ. ಆದ್ದರಿಂದ ಅವನಿಗೆ ದೇವಾಲಯದಲ್ಲಿ ದರ್ಶನವಾಗಿರಬೇಕೆಂದು ಅವರು ತಿಳಿದುಕೊಂಡರು. ಅಂದಿನಿಂದ ಅವನು ಮಾತಾಡಲಾಗದೆ ಕೇವಲ ಸನ್ನೆಗಳ ಮೂಲಕ ತಿಳಿಸುತ್ತಿದ್ದನು. 23 ತನ್ನ ಯಾಜಕಸೇವೆಯ ಸರದಿಯು ಮುಗಿದ ಮೇಲೆ ಜಕರೀಯನು ಮನೆಗೆ ಹಿಂತಿರುಗಿ ಹೋದನು.
24 ಆ ಬಳಿಕ, ಜಕರೀಯನ ಹೆಂಡತಿಯಾದ ಎಲಿಜಬೇತಳು ಗರ್ಭಿಣಿಯಾದಳು. ಆದ್ದರಿಂದ ಆಕೆ ಐದು ತಿಂಗಳವರೆಗೆ ತನ್ನ ಮನೆಯಿಂದ ಹೊರಗೆ ಹೋಗಲಿಲ್ಲ. 25 ಎಲಿಜಬೇತಳು, “ನೋಡಿ, ಪ್ರಭುವು ನನಗೋಸ್ಕರ ಎಂಥಾ ಕಾರ್ಯಮಾಡಿದ್ದಾನೆ! ನನ್ನ ಜನರ ನಡುವೆ ನನಗಿದ್ದ ಅವಮಾನವನ್ನು ಪ್ರಭುವು ತೊಲಗಿಸಿದ್ದಾನೆ” ಎಂದು ಹೇಳಿದಳು.
ಕನ್ಯೆ ಮರಿಯಳು
26-27 ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನನ್ನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು. ಆಕೆಗೆ ದಾವೀದನ ಮನೆತನದ ಯೋಸೇಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. 28 ದೇವದೂತನು ಆಕೆಯ ಬಳಿಗೆ ಬಂದು, “ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭುವು ನಿನ್ನೊಡನೆ ಇದ್ದಾನೆ” ಎಂದು ಹೇಳಿದನು.
29 ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು, “ಇದರ ಅರ್ಥವೇನಿರಬಹುದು?” ಎಂದು ಆಶ್ಚರ್ಯಪಟ್ಟಳು.
30 ದೇವದೂತನು ಆಕೆಗೆ, “ಮರಿಯಳೇ, ಭಯಪಡಬೇಡ. ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ. 31 ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡುಮಗುವನ್ನು ಹೆರುವೆ. ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. 32 ಆತನು ಮಹಾಪುರುಷನಾಗುವನು. ಜನರು ಆತನನ್ನು ಮಹೋನ್ನತನ (ದೇವರ) ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು. 33 ಯೇಸುವು ಯಾಕೋಬನ ಜನರನ್ನು ಸದಾಕಾಲ ಆಳುವನು. ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ” ಎಂದು ಹೇಳಿದನು.
34 ಮರಿಯಳು ದೇವದೂತನಿಗೆ, “ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲಾ!” ಎಂದು ಹೇಳಿದಳು.
35 ದೇವದೂತನು ಮರಿಯಳಿಗೆ, “ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು. ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರಮಗುವು ‘ದೇವರ ಮಗ’ ಎನಿಸಿಕೊಳ್ಳುವನು. 36 ಇದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ. ಆಕೆಯು ಬಹಳ ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು. ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. 37 ದೇವರಿಗೆ ಯಾವುದೂ ಅಸಾಧ್ಯವಲ್ಲ,” ಎಂದು ಹೇಳಿದನು.
38 ಮರಿಯಳು, “ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!” ಅಂದಳು. ಬಳಿಕ ದೇವದೂತನು ಹೊರಟುಹೋದನು.
Kannada Holy Bible: Easy-to-Read Version. All rights reserved. © 1997 Bible League International