New Testament in a Year
ಯೇಸುವಿನ ಜೀವನದ ಬಗ್ಗೆ ಲೂಕನ ಬರಹ
1 ಸನ್ಮಾನ್ಯ ಥೆಯೊಫಿಲನೇ,
ನಮ್ಮ ಮಧ್ಯದಲ್ಲಿ ಸಂಭವಿಸಿದ ಸಂಗತಿಗಳ ಚರಿತ್ರೆಯನ್ನು ತಿಳಿಸುವುದಕ್ಕೆ ಅನೇಕರು ಪ್ರಯತ್ನಿಸಿದ್ದಾರೆ. 2 ಪ್ರಾರಂಭದಿಂದಲೂ ಆ ಸಂಗತಿಗಳನ್ನು ಕಣ್ಣಾರೆ ಕಂಡು ದೇವರ ಸಂದೇಶವನ್ನು ಸಾರಿದವರಿಂದ ನಾವು ಕೇಳಿದ ಸಂಗತಿಗಳನ್ನೇ ಅವರು ಬರೆದಿದ್ದಾರೆ. 3 ಪ್ರತಿಯೊಂದು ಸಂಗತಿಯನ್ನು ಪ್ರಾರಂಭದಿಂದ ನಾನೇ ಶ್ರದ್ಧೆವಹಿಸಿ ಅಧ್ಯಯನ ಮಾಡಿರುವುದರಿಂದ ಅವೆಲ್ಲವನ್ನೂ ನಿನಗೆ ಕ್ರಮಬದ್ಧವಾಗಿ ತಿಳಿಸಲು ಪುಸ್ತಕ ರೂಪದಲ್ಲಿ ಬರೆದಿದ್ದೇನೆ. 4 ನಿನಗೆ ಉಪದೇಶಿಸಿರುವ ವಿಷಯಗಳು ಸತ್ಯವಾದವುಗಳೆಂದು ಇದರಿಂದ ನಿನಗೆ ಸ್ಪಷ್ಟವಾಗಿರುವುದು.
ಜಕರೀಯ ಮತ್ತು ಎಲಿಜಬೇತ್
5 ಹೆರೋದನು[a] ಜುದೇಯವನ್ನು ಆಳುತ್ತಿದ್ದ ಕಾಲದಲ್ಲಿ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಜಕರೀಯನು ಅಬೀಯನ ವರ್ಗಕ್ಕೆ[b] ಸೇರಿದವನು. ಜಕರೀಯನ ಹೆಂಡತಿ ಆರೋನನ ಕುಟುಂಬದವಳು. ಆಕೆಯ ಹೆಸರು ಎಲಿಜಬೇತ್. 6 ಜಕರೀಯನು ಮತ್ತು ಎಲಿಜಬೇತಳು ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಒಳ್ಳೆಯವರಾಗಿದ್ದರು. ಪ್ರಭುವಿನ (ದೇವರ) ಆಜ್ಞೆಗಳನ್ನೆಲ್ಲಾ ಕೈಕೊಂಡು ನಡೆಯುತ್ತಿದ್ದ ಅವರು, ಅದೇರೀತಿ ಬಾಳಲು ಇತರರಿಗೂ ಉಪದೇಶಿಸುತ್ತಿದ್ದರು. ಅವರು ತಪ್ಪಿಲ್ಲದವರಾಗಿದ್ದರು. 7 ಅವರಿಗೆ ಮಕ್ಕಳಿರಲಿಲ್ಲ. ಎಲಿಜಬೇತಳು ಬಂಜೆಯಾಗಿದ್ದಳು; ಮತ್ತು ಅವರಿಬ್ಬರೂ ಬಹಳ ಮುಪ್ಪಿನವರಾಗಿದ್ದರು.
8 ಒಮ್ಮೆ ತನ್ನ ವರ್ಗದ ಸರದಿ ಬಂದಾಗ, ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕಸೇವೆ ಸಲ್ಲಿಸುತ್ತಿದ್ದನು. 9 ಯಾಜಕರು ಧೂಪವನು ಅರ್ಪಿಸುವುದಕ್ಕಾಗಿ ತಮ್ಮ ಸಂಪ್ರದಾಯದ ಪ್ರಕಾರ ಚೀಟಿಹಾಕಿ ಒಬ್ಬ ಯಾಜಕನನ್ನು ಆರಿಸುತ್ತಿದ್ದರು. ಈ ಸಲ ಅದು ಜಕರೀಯನ ಪಾಲಿಗೆ ಬಂದಿತು. ಆದ್ದರಿಂದ ಜಕರೀಯನು ಧೂಪ ಅರ್ಪಿಸುವುದಕ್ಕಾಗಿ ಪ್ರಭುವಿನ ಆಲಯದೊಳಗೆ ಹೋದನು. 10 ಹೊರಗಡೆ ಬಹು ಜನರಿದ್ದರು. ಧೂಪವನ್ನರ್ಪಿಸುತ್ತಿದ್ದ ಸಮಯದಲ್ಲಿ ಅವರು ಪ್ರಾರ್ಥಿಸುತ್ತಿದ್ದರು.
11 ಆಗ, ಧೂಪಪೀಠದ ಬಲಗಡೆಯಲ್ಲಿ, ಪ್ರಭುವಿನ ದೂತನೊಬ್ಬನು ಬಂದು ಜಕರೀಯನ ಮುಂದೆ ನಿಂತನು. 12 ಅವನು ದೇವದೂತನನ್ನು ನೋಡಿ ಗಲಿಬಿಲಿಗೊಂಡು ಬಹು ಭಯಪಟ್ಟನು. 13 ಆದರೆ ದೇವದೂತನು ಅವನಿಗೆ, “ಜಕರೀಯನೇ, ಹೆದರಬೇಡ. ನಿನ್ನ ಪ್ರಾರ್ಥನೆ ದೇವರಿಗೆ ಕೇಳಿಸಿತು. ನಿನ್ನ ಹೆಂಡತಿಯಾದ ಎಲಿಜಬೇತಳು ಒಂದು ಗಂಡುಮಗುವನ್ನು ಹೆರುವಳು. ನೀನು ಅವನಿಗೆ ಯೋಹಾನ ಎಂದು ಹೆಸರಿಡಬೇಕು. 14 ಅವನ ಜನನದಿಂದ ನಿಮಗೆ ಹರ್ಷಾನಂದವಾಗುವುದು. ಬಹುಜನರು ಸಂತೋಷಪಡುವರು. 15 ಪ್ರಭುವಿನ ದೃಷ್ಟಿಯಲ್ಲಿ ಯೋಹಾನನು ಮಹಾಪುರುಷನಾಗಿರುವನು. ಅವನು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯುವುದಿಲ್ಲ. ಯೋಹಾನನು ಹುಟ್ಟಿದಂದಿನಿಂದಲೇ ಪವಿತ್ರಾತ್ಮಭರಿತನಾಗಿರುವನು.[c]
16 “ಅನೇಕ ಯೆಹೂದ್ಯರು ತಮ್ಮ ದೇವರಾದ ಪ್ರಭುವಿನ ಕಡೆಗೆ ತಿರುಗಿಕೊಳ್ಳಲು ಅವನು ಸಹಾಯ ಮಾಡುವನು. 17 ಅವನು ಪ್ರಭುವಿಗೆ ಮುಂದೂತನಾಗಿ ಹೋಗುವನು. ಅವನು ಎಲೀಯನ[d] ಗುಣಶಕ್ತಿಗಳಿಂದ ಕೂಡಿದವನಾಗಿರುವನು; ತಂದೆ ಮತ್ತು ಮಕ್ಕಳ ನಡುವೆ ಸಮಾಧಾನವನ್ನು ಉಂಟುಮಾಡುವನು; ಅವಿಧೇಯರಾದ ಅನೇಕರನ್ನು ನೀತಿವಂತರ ಜ್ಞಾನದ ಕಡೆಗೆ ನಡೆಸುವನು; ಜನರನ್ನು ಪ್ರಭುವಿನ ಆಗಮನಕ್ಕೆ ಸಿದ್ಧಪಡಿಸುವನು” ಎಂದು ಹೇಳಿದನು.
18 ಜಕರೀಯನು ದೇವದೂತನಿಗೆ, “ನೀನು ಹೇಳುತ್ತಿರುವುದು ಸತ್ಯವೆಂಬುದಕ್ಕೆ ಆಧಾರವೇನು? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಸಹ ಮುಪ್ಪಿನವಳಾಗಿದ್ದಾಳೆ” ಎಂದು ಹೇಳಿದನು.
19 ದೇವದೂತನು, “ನನ್ನ ಹೆಸರು ಗಬ್ರಿಯೇಲ. ನಾನು ದೇವರ ಸನ್ನಿಧಿಯಲ್ಲಿ ನಿಂತುಕೊಂಡಿರುವವನು. ನಿನಗೆ ಈ ಶುಭಸಮಾಚಾರವನ್ನು ತಿಳಿಸಲು ದೇವರು ನನ್ನನ್ನು ಕಳುಹಿಸಿದ್ದಾನೆ. 20 ಈಗ ಕೇಳು! ಈ ಸಂಗತಿಗಳು ನೆರವೇರುವ ತನಕ ನೀನು ಮೂಕನಾಗಿರುವೆ. ಏಕೆಂದರೆ ನೀನು ನನ್ನ ಮಾತನ್ನು ನಂಬಲಿಲ್ಲ. ಆದರೆ ನಾನು ಹೇಳಿದ ಈ ಸಂಗತಿಗಳು ಖಂಡಿತವಾಗಿ ನೆರವೇರುತ್ತವೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International