Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮಾರ್ಕ 16

ಯೇಸುವಿನ ಪುನರುತ್ಥಾನ

(ಮತ್ತಾಯ 28:1-8; ಲೂಕ 24:1-12; ಯೋಹಾನ 20:1-10)

16 ಸಬ್ಬತ್ ದಿನದ ಮರುದಿನ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬನ ತಾಯಿಯಾದ ಮರಿಯಳು ಕೆಲವು ಸುಗಂಧದ್ರವ್ಯಗಳನ್ನು ಯೇಸುವಿನ ದೇಹಕ್ಕೆ ಹಚ್ಚಬೇಕೆಂದಿದ್ದರು. ವಾರದ ಮೊದಲನೆಯ ದಿನ, ಮುಂಜಾನೆಯಲ್ಲಿಯೇ, ಅವರು ಸಮಾಧಿಗೆ ಹೊರಟರು. ಆಗ ಸೂರ್ಯೋದಯವಾಗಿದ್ದರೂ ಇನ್ನೂ ನಸುಕಾಗಿತ್ತು. ಆ ಸ್ತ್ರೀಯರು ಒಬ್ಬರಿಗೊಬ್ಬರು, “ದೊಡ್ಡ ಬಂಡೆಯಿಂದ ಸಮಾಧಿಯ ಬಾಗಿಲನ್ನು ಮುಚ್ಚಲಾಗಿದೆ. ಈ ಬಂಡೆಯನ್ನು ನಮಗಾಗಿ ಯಾರು ಉರುಳಿಸುತ್ತಾರೆ?” ಎಂದುಕೊಂಡರು.

ಆ ಸ್ತ್ರೀಯರು ಸಮಾಧಿಯನ್ನು ತಲುಪಿದಾಗ ಆ ಬಂಡೆ ಉರುಳಿರುವುದನ್ನು ಕಂಡರು. ಆ ಬಂಡೆಯು ಬಹಳ ದೊಡ್ಡದಾಗಿತ್ತು ಆದರೆ ಅದನ್ನು ಬಾಗಿಲಿನಿಂದ ದೂರಕ್ಕೆ ಉರುಳಿಸಲಾಗಿತ್ತು. ಆ ಸ್ತ್ರೀಯರು ಸಮಾಧಿಯೊಳಗೆ ಹೋದಾಗ ಬಿಳುಪಾದ ನಿಲುವಂಗಿ ಧರಿಸಿದ್ದ ಒಬ್ಬ ಯುವಕನು ಸಮಾಧಿಯ ಬಲಗಡೆ ಕುಳಿತಿರುವುದನ್ನು ಕಂಡು ಭಯಗೊಂಡರು.

ಆದರೆ ಅವನು, “ಭಯಪಡಬೇಡಿ! ಶಿಲುಬೆಗೇರಿಸಲ್ಪಟ್ಟ ನಜರೇತಿನ ಯೇಸುವನ್ನು ನೀವು ಹುಡುಕುತ್ತಿದ್ದೀರಲ್ಲವೇ? ಆತನು ಜೀವಂತನಾಗಿ ಎದ್ದಿದ್ದಾನೆ. ಆತನು ಇಲ್ಲಿಲ್ಲ. ನೋಡಿರಿ, ಆತನ ದೇಹವನ್ನು ಇಟ್ಟಿದ್ದ ಸ್ಥಳ ಇದೇ. ಈಗ ಹೋಗಿ ಆತನ ಶಿಷ್ಯರಿಗೆ ತಿಳಿಸಿರಿ. ಪೇತ್ರನಿಗಂತೂ ಖಂಡಿತವಾಗಿ ತಿಳಿಸಿರಿ. ನೀವು ಅವರಿಗೆ, ‘ಯೇಸು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ಆತನು ನಿಮಗಿಂತ ಮುಂಚೆ ಅಲ್ಲಿರುತ್ತಾನೆ. ಆತನು ನಿಮಗೆ ಮೊದಲೇ ಹೇಳಿದಂತೆ ನೀವು ಆತನನ್ನು ಅಲ್ಲಿ ನೋಡುವಿರಿ’ ಎಂದು ಹೇಳಿರಿ” ಎಂದನು.

ಆ ಸ್ತ್ರೀಯರು ಬಹಳ ಭಯದಿಂದ ಗಲಿಬಿಲಿಗೊಂಡು, ಸಮಾಧಿಯನ್ನು ಬಿಟ್ಟು ಓಡಿಹೋದರು. ಅವರು ಬಹಳ ಭಯಗೊಂಡಿದ್ದರಿಂದ ಈ ವಿಷಯವನ್ನು ಯಾರಿಗೂ ಹೇಳಲಿಲ್ಲ.[a]

ಶಿಷ್ಯರಿಗೆ ಯೇಸುವಿನ ದರ್ಶನ

(ಮತ್ತಾಯ 28:9-10; ಯೋಹಾನ 20:11-18; ಲೂಕ 24:13-35)

ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಜೀವಂತನಾಗಿ ಎದ್ದನು. ಯೇಸು ಮೊಟ್ಟಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು. ಹಿಂದೊಮ್ಮೆ ಯೇಸು ಮರಿಯಳಿಂದ ಏಳು ದೆವ್ವಗಳನ್ನು ಬಿಡಿಸಿದ್ದನು. 10 ಮರಿಯಳು ಹೋಗಿ ಆತನ ಶಿಷ್ಯರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಿದ್ದರು. 11 ಯೇಸು ಬದುಕಿರುವುದಾಗಿಯೂ ತಾನು ಆತನನ್ನು ನೋಡಿದ್ದಾಗಿಯೂ ಮರಿಯಳು ತಿಳಿಸಿದಾಗ ಶಿಷ್ಯರು ಅವಳನ್ನು ನಂಬಲಿಲ್ಲ.

12 ನಂತರ, ಇಬ್ಬರು ಶಿಷ್ಯರು ಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಯೇಸು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು. 13 ಈ ಶಿಷ್ಯರು ಇತರ ಶಿಷ್ಯರ ಬಳಿಗೆ ಹಿಂತಿರುಗಿ, ಈ ವಿಷಯವನ್ನು ತಿಳಿಸಿದರು. ಆದರೆ ಆ ಶಿಷ್ಯರು ಅವರನ್ನು ನಂಬಲಿಲ್ಲ.

ಯೇಸು ಮತ್ತು ಅಪೊಸ್ತಲರ ಸಂಭಾಷಣೆ

(ಮತ್ತಾಯ 28:16-20; ಲೂಕ 24:36-49; ಯೋಹಾನ 20:19-23; ಅ.ಕಾ. 1:6-8)

14 ನಂತರ ಹನ್ನೊಂದು ಜನ ಶಿಷ್ಯರು ಊಟ ಮಾಡುತ್ತಿರುವಾಗ, ಯೇಸು ಅವರಿಗೆ ಕಾಣಿಸಿಕೊಂಡನು. ಶಿಷ್ಯರಲ್ಲಿ ಕೊಂಚ ನಂಬಿಕೆ ಇದ್ದುದರಿಂದ ಯೇಸು ಅವರನ್ನು ಖಂಡಿಸಿದನು. ಏಕೆಂದರೆ, ಯೇಸು ಸಾವಿನಿಂದ ಎದ್ದುಬಂದಿದ್ದಾನೆಂದು ದೃಢವಾಗಿ ಹೇಳಿದ ಮಾತನ್ನು ಅವರು ನಂಬಲಿಲ್ಲ.

15 ಯೇಸು ಶಿಷ್ಯರಿಗೆ, “ಪ್ರಪಂಚದ ಎಲ್ಲಾ ಕಡೆಗೆ ಹೋಗಿರಿ. ಪ್ರತಿಯೊಬ್ಬನಿಗೂ ಸುವಾರ್ತೆಯನ್ನು ಹೇಳಿರಿ. 16 ನಂಬಿಕೆಯಿಟ್ಟು, ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು. ಆದರೆ ನಂಬದವನು ಅಪರಾಧಿ ಎಂಬ ನಿರ್ಣಯ ಹೊಂದುವನು. 17 ನಂಬುವವರಾದರೋ ಅದ್ಭುತಕಾರ್ಯಗಳನ್ನು ಮಾಡುವರು. ಅವರು ನನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುವರು. ತಾವೆಂದೂ ಕಲಿತಿಲ್ಲದ ಭಾಷೆಗಳಲ್ಲಿ ಮಾತನಾಡುವರು. 18 ಅವರು ಹಾವುಗಳನ್ನು ಹಿಡಿದುಕೊಂಡರೂ ಅವು ಅವರನ್ನು ಕಚ್ಚುವುದಿಲ್ಲ. ವಿಷಕುಡಿದರೂ ಅವರಿಗೆ ಯಾವ ತೊಂದರೆಯೂ ಆಗುವುದಿಲ್ಲ. ಅವರು ಮುಟ್ಟಿದರೆ ರೋಗಿಗಳು ಗುಣಹೊಂದುವರು” ಎಂದು ಹೇಳಿದನು.

ಯೇಸುವಿನ ಪರಲೋಕಾರೋಹಣ

(ಲೂಕ 24:50-53; ಅ.ಕಾ. 1:9-11)

19 ಪ್ರಭುವಾದ ಯೇಸು ಈ ಸಂಗತಿಗಳನ್ನು ಶಿಷ್ಯರಿಗೆ ಹೇಳಿದ ಮೇಲೆ, ಸ್ವರ್ಗದೊಳಗೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಕುಳಿತುಕೊಂಡನು. 20 ಶಿಷ್ಯರು ಪ್ರಪಂಚದ ಎಲ್ಲಾ ಕಡೆಗೆ ಹೋಗಿ, ಜನರಿಗೆ ಸುವಾರ್ತೆಯನ್ನು ಸಾರಿದರು. ಪ್ರಭುವು ಅವರೊಂದಿಗೆ ಕಾರ್ಯಸಾಧಿಸುತ್ತಾ, ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ಬಲಪಡಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International