New Testament in a Year
26 ಯೇಸುವಿನ ವಿರುದ್ಧ ಮಾಡಲಾದ ಆಪಾದನೆಯನ್ನು ಅಂದರೆ “ಯೆಹೂದ್ಯರ ರಾಜ” ಎಂದು ಶಿಲುಬೆಯ ಮೇಲೆ ಬರೆಯಲಾಗಿತ್ತು. 27 ಅಲ್ಲದೆ ಅವರು ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದರು. ಅವರು ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು. 28 [a]
29 ಅಲ್ಲಿ ನಡೆದುಹೋಗುತ್ತಿದ್ದವರು ತಮ್ಮ ತಲೆಯಾಡಿಸುತ್ತಾ, “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ಕಟ್ಟುತ್ತೇನೆಂದು ಹೇಳಿದೆ. 30 ಈಗ ಶಿಲುಬೆಯಿಂದ ಕೆಳಗಿಳಿದು ಬಂದು ನಿನ್ನನ್ನು ರಕ್ಷಿಸಿಕೊ!” ಎಂದು ಅಪಹಾಸ್ಯ ಮಾಡಿದರು.
31 ಅಲ್ಲಿದ್ದ ಮಹಾಯಾಜಕರು ಹಾಗೂ ಧರ್ಮೋಪದೇಶಕರು ಸಹ, “ಅವನು ಇತರ ಜನರನ್ನು ರಕ್ಷಿಸಿದನು. ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 32 ಅವನು ನಿಜವಾಗಲೂ ಇಸ್ರೇಲರ ರಾಜನಾದ ಕ್ರಿಸ್ತನಾಗಿದ್ದರೆ, ಈಗ ಶಿಲುಬೆಯಿಂದ ಕೆಳಗಿಳಿದು ಬಂದು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ. ಆಗ ನಾವು ಅವನನ್ನು ನಂಬುತ್ತೇವೆ” ಎಂದು ಅಪಹಾಸ್ಯ ಮಾಡಿದರು. ಯೇಸುವಿನ ಪಕ್ಕದ ಶಿಲುಬೆಗಳಿಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ಗೇಲಿಮಾಡಿದರು.
ಯೇಸುವಿನ ಮರಣ
(ಮತ್ತಾಯ 27:45-56; ಲೂಕ 23:44-49; ಯೋಹಾನ 19:28-30)
33 ಮಧ್ಯಾಹ್ನವಾದಾಗ, ಇಡೀ ದೇಶವೇ ಕತ್ತಲಾಯಿತು. ಈ ಕತ್ತಲೆಯು ಸಾಯಂಕಾಲ ಮೂರು ಗಂಟೆಯವರೆಗೆ ಇತ್ತು. 34 ಮೂರು ಗಂಟೆಗೆ, ಯೇಸು ದೊಡ್ಡ ಧ್ವನಿಯಿಂದ, “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದು ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟೆ?”(A) ಎಂಬುದೇ ಇದರರ್ಥ.
35 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ನೋಡಿ! ಆತನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದರು.
36 ಅಲ್ಲಿದ್ದ ಒಬ್ಬನು ಓಡಿಹೋಗಿ, ಸ್ಪಂಜನ್ನು ತೆಗೆದುಕೊಂಡು ಅದನ್ನು ಹುಳಿರಸದಿಂದ ತುಂಬಿಸಿ, ಒಂದು ಕೋಲಿಗೆ ಕಟ್ಟಿ ಯೇಸುವಿಗೆ ಕುಡಿಯಲು ಕೊಡುತ್ತಾ, “ಎಲೀಯನು ಇವನನ್ನು ಶಿಲುಬೆಯಿಂದ ಕೆಳಗಿಳಿಸಲು ಬರಬಹುದೇನೋ ನಾವು ಕಾಯ್ದು ನೋಡಬೇಕು” ಎಂದನು.
37 ನಂತರ ಯೇಸು ಮಹಾಧ್ವನಿಯಿಂದ ಕೂಗಿ, ಪ್ರಾಣಬಿಟ್ಟನು.
38 ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗಗಳಾಗಿ ಹರಿದುಹೋಯಿತು. 39 ಶಿಲುಬೆಯ ಮುಂದೆ ನಿಂತಿದ್ದ ಸೈನ್ಯದ ಅಧಿಕಾರಿಯು ಯೇಸು ಪ್ರಾಣಬಿಟ್ಟಾಗ ನಡೆದದ್ದನ್ನು ನೋಡಿ, “ಈ ಮನುಷ್ಯನು ನಿಜವಾಗಿಯೂ ದೇವರ ಮಗನು” ಎಂದನು.
40 ಕೆಲವು ಸ್ತ್ರೀಯರು ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ನೋಡುತ್ತಾ ಇದ್ದರು. ಈ ಸ್ತ್ರೀಯರಲ್ಲಿ ಕೆಲವರೆಂದರೆ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬ ಯೋಸೆಯರ ತಾಯಿಯಾದ ಮರಿಯಳು (ಯಾಕೋಬನು ಅವಳ ಕಿರಿಯ ಮಗ.) 41 ಈ ಸ್ತ್ರೀಯರು ಗಲಿಲಾಯದಲ್ಲಿ ಯೇಸುವನ್ನು ಹಿಂಬಾಲಿಸಿ ಆತನ ಸೇವೆ ಮಾಡಿದವರು. ಯೇಸುವಿನೊಡನೆ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಅಲ್ಲಿದ್ದರು.
ಯೇಸುವಿನ ಸಮಾಧಿ
(ಮತ್ತಾಯ 27:57-61; ಲೂಕ 23:50-56; ಯೋಹಾನ 19:38-42)
42 ಆಗ ಕತ್ತಲಾಗತೊಡಗಿತ್ತು. ಅಂದು ಸಿದ್ಧತೆಯ ದಿನವಾಗಿದ್ದರಿಂದ (ಅಂದರೆ ಸಬ್ಬತ್ತಿನ ಹಿಂದಿನ ದಿನ), 43 ಅರಿಮಥಾಯ ಊರಿನ ಯೋಸೇಫ ಎಂಬವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಧೈರ್ಯದಿಂದ ಕೇಳಿದನು. ಯೋಸೇಫನು ಯೆಹೂದ್ಯರ ಸಮಿತಿಯಲ್ಲಿ ಒಬ್ಬ ಮುಖ್ಯ ಸದಸ್ಯನಾಗಿದ್ದನು. ದೇವರರಾಜ್ಯ ಬರಲೆಂದು ಬಯಸಿದ ಜನರಲ್ಲಿ ಇವನೂ ಒಬ್ಬನಾಗಿದ್ದನು.
44 ಯೇಸು ಇಷ್ಟು ಬೇಗನೆ ಸತ್ತದ್ದನ್ನು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಯೇಸುವನ್ನು ಕಾವಲು ಕಾಯುತ್ತಿದ್ದ ಸೈನ್ಯಾಧಿಕಾರಿಯನ್ನು ಪಿಲಾತನು ಕರೆದು, “ಯೇಸು ಸತ್ತುಹೋದನೇ?” ಎಂದು ಕೇಳಿದನು. 45 ಆ ಅಧಿಕಾರಿಯು, “ಹೌದು” ಎಂದು ಹೇಳಿದ್ದರಿಂದ ಆತನ ದೇಹವನ್ನು ತೆಗೆದುಕೊಳ್ಳಲು ಪಿಲಾತನು ಯೋಸೇಫನಿಗೆ ಅಪ್ಪಣೆಕೊಟ್ಟನು.
46 ಯೋಸೇಫನು ನಾರುಬಟ್ಟೆಯನ್ನು ತೆಗೆದುಕೊಂಡು ಬಂದು, ಶಿಲುಬೆಯಿಂದ ದೇಹವನ್ನು ಇಳಿಸಿ, ಅದನ್ನು ಆ ಬಟ್ಟೆಯಿಂದ ಸುತ್ತಿದನು. ಅನಂತರ, ಬಂಡೆಯ ಸಮಾಧಿಯಲ್ಲಿ ಅದನ್ನಿರಿಸಿ ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಮುಚ್ಚಿದನು. 47 ಮಗ್ದಲದ ಮರಿಯಳು ಹಾಗೂ ಯೋಸೆಯನ ತಾಯಿಯಾದ ಮರಿಯಳು ಸಮಾಧಿ ಮಾಡಿದ ಸ್ಥಳವನ್ನು ಗುರುತಿಸಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International