New Testament in a Year
19 ಆ ರಾತ್ರಿ ಯೇಸು ಮತ್ತು ಆತನ ಶಿಷ್ಯರು ಪಟ್ಟಣವನ್ನು ಬಿಟ್ಟುಹೋದರು.
ನಂಬಿಕೆಯ ಶಕ್ತಿ
(ಮತ್ತಾಯ 21:20-22)
20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು. 21 ಪೇತ್ರನು ಆ ಮರವನ್ನು ಜ್ಞಾಪಿಸಿಕೊಂಡು, ಯೇಸುವಿಗೆ, “ಗುರುವೇ, ನೋಡು! ನಿನ್ನೆ ನೀನು ಶಪಿಸಿದ ಅಂಜೂರದ ಮರ ಒಣಗಿಹೋಗಿದೆ!” ಎಂದನು.
22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ. 23 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ. 24 ಆದ್ದರಿಂದ ನೀವು ಪ್ರಾರ್ಥನೆಯಲ್ಲಿ ಬೇಡಿಕೊಂಡು, ಅದನ್ನೆಲ್ಲಾ ಹೊಂದಿಕೊಂಡಾಯಿತೆಂದು ನಂಬಿದರೆ, ಅದೆಲ್ಲಾ ನಿಮ್ಮದಾಗುತ್ತವೆ ಎಂದು ನಾನು ನಿಮಗೆ ಹೇಳುತ್ತೇನೆ. 25 ನೀವು ಪ್ರಾರ್ಥಿಸಲು ಸಿದ್ಧರಾಗಿರುವಾಗ, ನೀವು ಇನ್ನೊಬ್ಬನ ವಿಷಯದಲ್ಲಿ ಯಾವುದೇ ಕಾರಣದಿಂದಾಗಲಿ ಕೋಪದಿಂದಿರುವುದು ನಿಮ್ಮ ನೆನಪಿಗೆ ಬಂದರೆ, ಅವನನ್ನು ಕ್ಷಮಿಸಿಬಿಡಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವನು” ಎಂದು ಉತ್ತರಿಸಿದನು. 26 [a]
ಯೇಸುವಿನ ಅಧಿಕಾರವನ್ನು ಕುರಿತು ಯೆಹೂದ್ಯ ನಾಯಕರ ಸಂಶಯ
(ಮತ್ತಾಯ 21:23-27; ಲೂಕ 20:1-8)
27 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿಗೆ ಮತ್ತೆ ಹೋದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿದ್ದಾಗ, ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯನಾಯಕರು ಆತನ ಬಳಿಗೆ ಬಂದು, 28 “ಇವುಗಳನ್ನೆಲ್ಲ ಮಾಡಲು ನಿನಗೆ ಯಾವ ಅಧಿಕಾರವಿದೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು? ನಮಗೆ ತಿಳಿಸು!” ಎಂದರು.
29 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನ್ನ ಪ್ರಶ್ನೆಗೆ ಉತ್ತರಿಸಿದರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆ ಎಂಬುದನ್ನು ನಿಮಗೆ ತಿಳಿಸುತ್ತೇನೆ. 30 ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸಿದ್ದು ದೇವರಿಂದ ಬಂದ ಅಧಿಕಾರದಿಂದಲೋ ಅಥವಾ ಮನುಷ್ಯರಿಂದ ಬಂದ ಅಧಿಕಾರದಿಂದಲೋ? ನನಗೆ ತಿಳಿಸಿ!” ಎಂದನು.
31 ಯೆಹೂದ್ಯನಾಯಕರು ಈ ಪ್ರಶ್ನೆಯ ಬಗ್ಗೆ ಚರ್ಚಿಸಿ ಒಬ್ಬರಿಗೊಬ್ಬರು, “‘ಯೋಹಾನನು ದೀಕ್ಷಾಸ್ನಾನ ಕೊಟ್ಟದ್ದು ದೇವರಿಂದ ಬಂದ ಅಧಿಕಾರದಿಂದ’ ಎಂದು ನಾವು ಉತ್ತರಿಸಿದರೆ, ಆಗ ‘ಮತ್ತೆ ನೀವು ಏಕೆ ಯೋಹಾನನನ್ನು ನಂಬಲಿಲ್ಲ?’ ಎಂದು ಯೇಸು ಕೇಳುತ್ತಾನೆ. 32 ಆದರೆ ‘ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮನುಷ್ಯನಿಂದ ಬಂದ ಅಧಿಕಾರದಿಂದ’ ಎಂದು ಹೇಳಿದರೆ, ಆಗ ಜನರು ನಮ್ಮ ಮೇಲೆ ಕೋಪಗೊಳ್ಳುತ್ತಾರೆ” ಎಂದು ಮಾತಾಡಿಕೊಂಡರು. ಜನರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರಿಂದ ಅವರು ಜನರಿಗೆ ಭಯಪಟ್ಟರು.
33 ಆದಕಾರಣ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದು ಉತ್ತರಿಸಿದರು.
ಯೇಸು ಅವರಿಗೆ, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತಿದ್ದೇನೆಂದು ನಿಮಗೆ ಹೇಳುವುದಿಲ್ಲ” ಎಂದನು.
Kannada Holy Bible: Easy-to-Read Version. All rights reserved. © 1997 Bible League International