Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮಾರ್ಕ 10:32-52

ತನ್ನ ಮರಣದ ಕುರಿತು ಯೇಸುವಿನ ಮೂರನೆ ಪ್ರಕಟನೆ

(ಮತ್ತಾಯ 20:17-19; ಲೂಕ 18:31-34)

32 ಯೇಸು ಮತ್ತು ಆತನ ಜೊತೆಯಲ್ಲಿದ್ದ ಜನರು ಜೆರುಸಲೇಮಿಗೆ ಹೋಗುತ್ತಿರಲು ಯೇಸು ಅವರೆಲ್ಲರಿಗಿಂತ ಮುಂದೆ ಹೋಗುತ್ತಿದ್ದನು. ಅದನ್ನು ನೋಡಿ ಯೇಸುವಿನ ಶಿಷ್ಯರು ಬೆರಗಾದರು. ಅವರನ್ನು ಹಿಂಬಾಲಿಸಿ ಬರುತ್ತಿದ್ದ ಜನರು ಭಯಗೊಂಡರು. ಯೇಸು ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು, ಜೆರುಸಲೇಮಿನಲ್ಲಿ ತನಗೆ ಸಂಭವಿಸಲಿರುವುದನ್ನು ಅವರಿಗೆ ಹೇಳುತ್ತಾ, 33 “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೂ ಧರ್ಮೋಪದೇಶಕರಿಗೂ ಒಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆ ವಿಧಿಸಿ ಯೆಹೂದ್ಯರಲ್ಲದ ಜನರಿಗೆ ಒಪ್ಪಿಸುತ್ತಾರೆ. 34 ಆ ಜನರು ಆತನನ್ನು ನೋಡಿ ಅಪಹಾಸ್ಯ ಮಾಡುತ್ತಾರೆ, ಆತನ ಮೇಲೆ ಉಗುಳುತ್ತಾರೆ, ಆತನನ್ನು ಬಾರುಕೋಲಿನಿಂದ ಹೊಡೆಯುತ್ತಾರೆ ಮತ್ತು ಕೊಲ್ಲುತ್ತಾರೆ. ಆದರೆ ಆತನು ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುತ್ತಾನೆ” ಎಂದು ತಿಳಿಸಿದನು.

ಯಾಕೋಬ ಮತ್ತು ಯೋಹಾನರ ವಿಶೇಷ ಕೋರಿಕೆ

(ಮತ್ತಾಯ 20:20-28)

35 ನಂತರ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಳಿಗೆ ಬಂದು, “ಗುರುವೇ, ನಮ್ಮ ಒಂದು ಕೋರಿಕೆಯನ್ನು ನೀನು ನಡೆಸಿಕೊಡಬೇಕು” ಎಂದರು.

36 ಯೇಸು, “ನಿಮ್ಮ ಯಾವ ಕೋರಿಕೆಯನ್ನು ನಡೆಸಿಕೊಡಬೇಕು?” ಎಂದು ಕೇಳಿದನು.

37 ಅವರು, “ನೀನು ನಿನ್ನ ರಾಜ್ಯದಲ್ಲಿ ವೈಭವದಿಂದಿರುವಾಗ ನಮ್ಮಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ಅನುಗ್ರಹಿಸು” ಎಂದು ಉತ್ತರಿಸಿದರು.

38 ಯೇಸು, “ನೀವು ಏನು ಕೇಳುತ್ತಿದ್ದೀರಿ ಎಂಬುದು ನಿಮಗೆ ತಿಳಿದಿಲ್ಲ. ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ಕುಡಿಯಲು ನಿಮಗೆ ಸಾಧ್ಯವೇ? ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವು ಹೊಂದಲು ಸಾಧ್ಯವೇ?” ಎಂದನು.

39 ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಿಸಿದರು.

ಯೇಸು ಅವರಿಗೆ, “ನಾನು ಕುಡಿಯಬೇಕಾಗಿರುವ ಸಂಕಟದ ಪಾತ್ರೆಯಲ್ಲಿ ನೀವು ಕುಡಿಯುವಿರಿ. ನಾನು ಹೊಂದಬೇಕಾಗಿರುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ. 40 ಆದರೆ ನನ್ನ ಎಡಗಡೆ ಅಥವಾ ಬಲಗಡೆ ಕುಳಿತುಕೊಳ್ಳುವ ವ್ಯಕ್ತಿಯನ್ನು ಆರಿಸುವವನು ನಾನಲ್ಲ. ಆ ಸ್ಥಳಗಳನ್ನು ಯಾರಿಗಾಗಿ ಸಿದ್ಧಪಡಿಸಲಾಗಿದೆಯೋ ಅವರಿಗಾಗಿಯೇ ಅವುಗಳನ್ನು ಕಾದಿರಿಸಲಾಗಿದೆ” ಎಂದನು.

41 ಉಳಿದ ಹತ್ತು ಜನ ಶಿಷ್ಯರು ಇದನ್ನು ಕೇಳಿ ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು. 42 ಯೇಸು ಎಲ್ಲಾ ಶಿಷ್ಯರನ್ನು ಒಟ್ಟಾಗಿ ಕರೆದು, “ಯೆಹೂದ್ಯರಲ್ಲದವರು ಅಧಿಪತಿಗಳನ್ನು ಹೊಂದಿದ್ದಾರೆ. ಆ ಅಧಿಪತಿಗಳು ಜನರ ಮೇಲೆ ತಮಗಿರುವ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆಂಬುದು ನಿಮಗೆ ತಿಳಿದಿದೆ. ಅವರ ಪ್ರಮುಖ ನಾಯಕರುಗಳು ಜನರ ಮೇಲೆ ತಮಗಿರುವ ಅಧಿಕಾರವನ್ನೆಲ್ಲಾ ಉಪಯೋಗಿಸಲು ಇಷ್ಟಪಡುತ್ತಾರೆ. 43 ಆದರೆ ನೀವು ಅವರಂತಾಗಬಾರದು. 44 ನಿಮ್ಮಲ್ಲಿ ಪ್ರಮುಖನಾಗಬೇಕೆಂದು ಬಯಸುವವನು ಸೇವಕನಂತೆ ಮತ್ತು ಗುಲಾಮನಂತೆ ನಿಮ್ಮೆಲ್ಲರ ಸೇವೆಮಾಡಬೇಕು. 45 ಅದೇ ರೀತಿ ಮನುಷ್ಯಕುಮಾರನು ಜನರಿಂದ ಸೇವೆ ಮಾಡಿಸಿಕೊಳ್ಳಲು ಬರದೆ, ಜನರ ಸೇವೆಮಾಡಲು ಬಂದನು. ಮನುಷ್ಯಕುಮಾರನು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.

ಕುರುಡನಿಗೆ ದೃಷ್ಟಿದಾನ

(ಮತ್ತಾಯ 20:29-34; ಲೂಕ 18:35-43)

46 ನಂತರ ಅವರು ಜೆರಿಕೊ ಎಂಬ ಊರಿಗೆ ಬಂದರು. ಯೇಸು ತನ್ನ ಶಿಷ್ಯರೊಂದಿಗೆ ಮತ್ತು ಇತರ ಅನೇಕ ಜನರೊಂದಿಗೆ ಆ ಊರನ್ನು ಬಿಟ್ಟು ಹೊರಟಿದ್ದನು. ತಿಮಾಯನ ಮಗನಾದ ಬಾರ್ತಿಮಾಯ ಎಂಬ ಕುರುಡನು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದನು. 47 ನಜರೇತಿನ ಯೇಸು ಆ ಮಾರ್ಗವಾಗಿ ಹೋಗುತ್ತಿದ್ದಾನೆಂದು ಅವನು ಕೇಳಿ, “ಯೇಸುವೇ, ದಾವೀದನ ಕುಮಾರನೇ, ದಯವಿಟ್ಟು ನನ್ನನ್ನು ಕರುಣಿಸು!” ಎಂದು ಗಟ್ಟಿಯಾಗಿ ಕೂಗಿದನು.

48 ಅನೇಕ ಜನರು ಆ ಕುರುಡನನ್ನು ಗದರಿಸಿ ಕೂಗಕೂಡದೆಂದು ಅವನಿಗೆ ಹೇಳಿದರು. ಆದರೆ ಆ ಕುರುಡನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು!” ಎಂದು ಮತ್ತೆಮತ್ತೆ ಕೂಗಿದನು.

49 ಯೇಸು ನಿಂತುಕೊಂಡು, “ಅವನನ್ನು ಕರೆಯಿರಿ” ಎಂದು ಹೇಳಿದನು.

ಆದ್ದರಿಂದ ಅವರು ಆ ಕುರುಡನನ್ನು ಕರೆದು, “ಸಂತೋಷಪಡು! ಎದ್ದುನಿಲ್ಲು! ಯೇಸು ನಿನ್ನನ್ನು ಕರೆಯುತ್ತಿದ್ದಾನೆ” ಎಂದರು. 50 ಆ ಕುರುಡನು ಕೂಡಲೇ ಎದ್ದುನಿಂತು ತನ್ನ ಹೊದಿಕೆಯನ್ನು ಅಲ್ಲಿಯೇ ಬಿಟ್ಟು ಯೇಸುವಿನ ಬಳಿಗೆ ಹೋದನು.

51 ಯೇಸು, “ನನ್ನಿಂದ ನಿನಗೆ ಏನಾಗಬೇಕು?” ಎಂದು ಅವನನ್ನು ಕೇಳಿದನು.

ಆ ಕುರುಡನು, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡು” ಎಂದು ಉತ್ತರಿಸಿದನು.

52 ಯೇಸು, “ಹೋಗು, ನೀನು ನಂಬಿದ್ದರಿಂದ ನಿನಗೆ ಗುಣವಾಯಿತು” ಎಂದನು. ಆಗ ಅವನಿಗೆ ದೃಷ್ಟಿ ಬಂದಿತು. ಅವನು ಯೇಸುವನ್ನು ಆ ದಾರಿಯಲ್ಲಿ ಹಿಂಬಾಲಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International