New Testament in a Year
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
(ಮತ್ತಾಯ 17:22-23; ಲೂಕ 9:43-45)
30 ನಂತರ ಯೇಸು ಮತ್ತು ಆತನ ಶಿಷ್ಯರು ಆ ಸ್ಥಳದಿಂದ ಹೊರಟು ಗಲಿಲಾಯದ ಮೂಲಕ ಪ್ರಯಾಣ ಮಾಡಿದರು. ತಾವು ಎಲ್ಲಿದ್ದೇವೆಂಬುದು ಜನರಿಗೆ ತಿಳಿಯಬಾರದೆಂಬುದು ಯೇಸುವಿನ ಉದ್ದೇಶವಾಗಿತ್ತು. 31 ಏಕೆಂದರೆ ಆತನು ತನ್ನ ಶಿಷ್ಯರಿಗೆ ಏಕಾಂತವಾಗಿ ಉಪದೇಶಿಸಬೇಕೆಂದಿದ್ದನು. ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಕೊಡುವರು. ಜನರು ಆತನನ್ನು ಕೊಲ್ಲುವರು. ಕೊಲ್ಲಲ್ಪಟ್ಟ ಮೂರನೆಯ ದಿನದಲ್ಲಿ ಆತನು ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು. 32 ಆದರೆ ಯೇಸು ಹೇಳಿದ್ದು ಶಿಷ್ಯರಿಗೆ ಅರ್ಥವಾಗಲಿಲ್ಲ. ಮತ್ತು ಅದರ ಅರ್ಥವನ್ನು ಕೇಳುವುದಕ್ಕೂ ಅವರು ಭಯಪಟ್ಟರು.
ಯಾರು ಅತ್ಯಂತ ದೊಡ್ಡವರು?
(ಮತ್ತಾಯ 18:1-5; ಲೂಕ 9:46-48)
33 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಅವರು ಒಂದು ಮನೆಯೊಳಗಿದ್ದಾಗ ಆತನು ತನ್ನ ಶಿಷ್ಯರಿಗೆ, “ಈ ದಿನ ನೀವು ದಾರಿಯಲ್ಲಿ ವಾದಮಾಡುತ್ತಿದ್ದುದ್ದನ್ನು ಕೇಳಿಸಿಕೊಂಡೆ. ನೀವು ಯಾವುದರ ಬಗ್ಗೆ ವಾದಮಾಡುತ್ತಿದ್ದಿರಿ?” ಎಂದನು. 34 ಆದರೆ ಶಿಷ್ಯರು ಉತ್ತರಿಸಲಿಲ್ಲ. ಏಕೆಂದರೆ ತಮ್ಮಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರೆಂಬುದರ ಕುರಿತು ಅವರು ವಾಗ್ವಾದ ಮಾಡಿದ್ದರು.
35 ಯೇಸು ಕುಳಿತುಕೊಂಡು, ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು ಅವರಿಗೆ, “ನಿಮ್ಮಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ಬಯಸುವವನು ಉಳಿದ ಎಲ್ಲರನ್ನು ತನಗಿಂತಲೂ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡು ಎಲ್ಲರ ಸೇವೆಮಾಡಬೇಕು” ಎಂದು ಹೇಳಿದನು.
36 ನಂತರ ಯೇಸು ಒಂದು ಚಿಕ್ಕ ಮಗುವನ್ನು ಕರೆದು, ಆ ಮಗುವನ್ನು ಶಿಷ್ಯರ ಮುಂದೆ ನಿಲ್ಲಿಸಿ, ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಅವರಿಗೆ, 37 “ನನ್ನ ಹೆಸರಿನಲ್ಲಿ ಇಂಥ ಮಕ್ಕಳನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ನನ್ನನ್ನು ಸ್ವೀಕರಿಸಿಕೊಳ್ಳುವವನು, ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಂಡಂತಾಯಿತು” ಎಂದು ಹೇಳಿದನು.
ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ
(ಲೂಕ 9:49-50)
38 ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು.
39 ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಆ ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ. 40 ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ. 41 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು.
ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ
(ಮತ್ತಾಯ 18:6-9; ಲೂಕ 17:1-2)
42 “ನನ್ನಲ್ಲಿ ನಂಬಿಕೆಯಿಟ್ಟಿರುವ ಈ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು. 43 ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಆ ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ. 44 [a] 45 ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು. 46 [b] 47 ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು. 48 ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ.
49 “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ.
50 “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ[c] ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International