Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮಾರ್ಕ 7:14-37

14 ಯೇಸು ಜನರನ್ನು ಮತ್ತೆ ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಪ್ರತಿಯೊಬ್ಬರು ಕೇಳಿರಿ ಮತ್ತು ಅರ್ಥಮಾಡಿಕೊಳ್ಳಿರಿ. 15 ಒಬ್ಬ ವ್ಯಕ್ತಿಯ ಅಂತರಂಗದೊಳಕ್ಕೆ ಹೋಗಿ ಅವನನ್ನು ಅಶುದ್ಧನನ್ನಾಗಿ ಮಾಡುವಂಥದ್ದು ಯಾವುದೂ ಇಲ್ಲ. ಒಬ್ಬ ವ್ಯಕ್ತಿಯ ಒಳಗಿಂದ ಬಂದ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು. 16 [a]

17 ನಂತರ ಯೇಸು ಜನರನ್ನು ಅಲ್ಲೇ ಬಿಟ್ಟು ಮನೆಯೊಳಕ್ಕೆ ಹೋದನು. ಶಿಷ್ಯರು ಈ ಕಥೆಯ ಬಗ್ಗೆ ಯೇಸುವನ್ನು ಕೇಳಿದರು. 18 ಯೇಸು, “ನಿಮಗೂ ಅರ್ಥವಾಗುವುದಿಲ್ಲವೇ? ಒಬ್ಬ ವ್ಯಕ್ತಿಯ ಒಳಗೆ ಹೋಗುವ ಯಾವ ಪದಾರ್ಥವೂ ಅವನನ್ನು ಅಶುದ್ಧನನ್ನಾಗಿ ಮಾಡುವುದಿಲ್ಲ ಎಂಬುದು ನಿಮಗೆ ತಿಳಿದೇ ಇದೆ. 19 ಆಹಾರವು ಒಬ್ಬ ಮನುಷ್ಯನ ಹೃದಯದೊಳಕ್ಕೆ ಹೋಗದೆ ಹೊಟ್ಟೆಯೊಳಕ್ಕೆ ಹೋಗುತ್ತದೆ. ಅನಂತರ ಅದು ಅಲ್ಲಿಂದ ಹೊರಬರುತ್ತದೆ” ಎಂದು ಹೇಳಿದನು. (ಹೀಗೆ ತಿನ್ನತಕ್ಕ ಯಾವ ಆಹಾರವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದನು.)

20 ಇದಲ್ಲದೆ ಯೇಸು ಅವರಿಗೆ, “ಒಬ್ಬ ಮನುಷ್ಯನಿಂದ ಹೊರಬರುವ ಸಂಗತಿಗಳೇ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 21 ಒಬ್ಬ ವ್ಯಕ್ತಿಯ ಅಂತರಂಗದಲ್ಲಿ ಈ ಕೆಟ್ಟ ಆಲೋಚನೆಗಳೆಲ್ಲವೂ ಆರಂಭವಾಗುತ್ತವೆ: ದುರಾಲೋಚನೆ, ಲೈಂಗಿಕಪಾಪ, ಕಳ್ಳತನ, ಕೊಲೆ, 22 ವ್ಯಭಿಚಾರ, ಹಣದಾಶೆ, ಕೆಡುಕುತನ, ಭಂಡತನ, ಅಸೂಯೆ, ಚಾಡಿಕೋರತನ, ಅಹಂಕಾರ ಮತ್ತು ಬುದ್ಧಿಗೇಡಿತನ. 23 ಈ ಕೆಟ್ಟ ವಿಷಯಗಳೆಲ್ಲಾ ಮನುಷ್ಯನ ಅಂತರಂಗದಿಂದ ಬಂದು ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ” ಎಂದು ಹೇಳಿದನು.

ಯೆಹೂದ್ಯಳಲ್ಲದ ಸ್ತ್ರೀಗೆ ಯೇಸುವಿನ ಸಹಾಯ

(ಮತ್ತಾಯ 15:21-28)

24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. 25 ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. 26 ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು.

27 ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು.

28 ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು.

29 ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು.

30 ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು.

ಕಿವುಡನಿಗೆ ಸ್ವಸ್ಥತೆ

31 ನಂತರ ಯೇಸು ಟೈರ್ ಪಟ್ಟಣದ ಆ ಪ್ರದೇಶವನ್ನು ಬಿಟ್ಟು ಸಿದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿ[b] ಪ್ರದೇಶವನ್ನು ಹಾದು ಗಲಿಲಾಯ ಸರೋವರಕ್ಕೆ ಹೋದನು. 32 ಆತನು ಅಲ್ಲಿದ್ದಾಗ, ಕೆಲವರು ಕಿವುಡನೂ ತೊದಲನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ಕರೆದುತಂದು ಅವನ ಮೇಲೆ ಕೈಯಿಟ್ಟು ಗುಣಪಡಿಸಬೇಕೆಂದು ಬೇಡಿಕೊಂಡರು.

33 ಯೇಸು ಅವನನ್ನು ಜನರಿಂದ ಸ್ವಲ್ಪ ದೂರ ತನ್ನೊಂದಿಗೆ ಕರೆದೊಯ್ದು ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದನು. 34 ಬಳಿಕ ಆಕಾಶದ ಕಡೆಗೆ ನೋಡಿ, ನಿಟ್ಟುಸಿರು ಬಿಟ್ಟು, “ಎಪ್ಫಥಾ” ಎಂದು ಹೇಳಿದನು. (ಎಪ್ಫಥಾ ಎಂದರೆ “ತೆರೆಯಲಿ”) 35 ಆಗ ಅವನ ಕಿವಿಗಳು ತೆರೆದವು. ನಾಲಿಗೆ ಸಡಿಲಗೊಂಡಿತು. ಅವನು ಸ್ಪಷ್ಟವಾಗಿ ಮಾತಾಡಿದನು.

36 ಈ ಸಂಗತಿಯನ್ನು ತಿಳಿಸಕೂಡದೆಂದು ಯೇಸು ಜನರಿಗೆ ಆಜ್ಞಾಪಿಸಿದನು. ತನ್ನ ಬಗ್ಗೆ ಇತರ ಜನರಿಗೆ ತಿಳಿಸಕೂಡದಂತೆ ಯೇಸು ಯಾವಾಗಲೂ ಆಜ್ಞಾಪಿಸುತ್ತಿದ್ದನು. ಆದರೂ ಜನರು ಆತನ ಬಗ್ಗೆ ಇನ್ನೂ ಹೆಚ್ಚಾಗಿ ಹಬ್ಬಿಸಿದರು. 37 ಜನರು ನಿಜವಾಗಿಯೂ ಅತ್ಯಾಶ್ಚರ್ಯಗೊಂಡು, “ಯೇಸು ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಮಾಡುತ್ತಾನೆ. ಆತನು ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುತ್ತಾನೆ. ಮೂಕರು ಮಾತಾಡುವಂತೆ ಮಾಡುತ್ತಾನೆ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International