Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮಾರ್ಕ 6:1-29

ಸ್ವಂತ ಊರಿಗೆ ಯೇಸುವಿನ ಪ್ರಯಾಣ

(ಮತ್ತಾಯ 13:53-58; ಲೂಕ 4:16-30)

ಯೇಸು ಅಲ್ಲಿಂದ ಹೊರಟು, ತನ್ನ ಸ್ವಂತ ಊರಿಗೆ ಹೋದನು. ಆತನ ಶಿಷ್ಯರು ಆತನೊಂದಿಗೆ ಹೋದರು. ಸಬ್ಬತ್ ದಿನದಂದು ಯೇಸು ಸಭಾಮಂದಿರದಲ್ಲಿ ಉಪದೇಶಿಸಿದನು. ಆತನ ಉಪದೇಶವನ್ನು ಕೇಳಿ ಆಶ್ಚರ್ಯಗೊಂಡ ಅನೇಕ ಜನರು, “ಈ ಉಪದೇಶವನ್ನು ಮತ್ತು ಈ ಜ್ಞಾನವನ್ನು ಇವನು ಎಲ್ಲಿಂದ ಪಡೆದನು? ಇವನಿಗೆ ಕೊಟ್ಟವರು ಯಾರು? ಇವನಿಗೆ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿಯು ಎಲ್ಲಿಂದ ಬಂತು? ಇವನು ಕೇವಲ ಬಡಗಿಯಲ್ಲವೋ? ಇವನ ತಾಯಿ ಮರಿಯಳು. ಇವನು ಯಾಕೋಬ, ಯೋಸೆ, ಯೂದ ಮತ್ತು ಸಿಮೋನರ ಅಣ್ಣ. ಇವನ ತಂಗಿಯರು ಇಲ್ಲಿ ನಮ್ಮೊಂದಿಗಿದ್ದಾರೆ” ಎಂದು ಹೇಳಿ ಆತನನ್ನು ತಾತ್ಸಾರ ಮಾಡಿದರು.

ಯೇಸು, “ಪ್ರವಾದಿಯನ್ನು ಬೇರೆ ಜನರು ಗೌರವಿಸುತ್ತಾರೆ, ಆದರೆ ಪ್ರವಾದಿಗೆ ಸ್ವಂತ ಊರಿನಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಗೌರವ ದೊರೆಯುವುದಿಲ್ಲ” ಎಂದು ಜನರಿಗೆ ಹೇಳಿದನು. ಯೇಸು ಆ ಊರಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆತನು ತನ್ನ ಕೈಗಳನ್ನು ಕೆಲವು ಮಂದಿ ಕಾಯಿಲೆಯವರ ಮೇಲಿಟ್ಟು ಅವರ ಕಾಯಿಲೆಗಳನ್ನು ವಾಸಿಮಾಡಿದನು. ಇವುಗಳಲ್ಲದೆ ಬೇರೆ ಯಾವ ಅದ್ಭುತಕಾರ್ಯಗಳನ್ನೂ ಆತನು ಮಾಡಲಿಲ್ಲ. ಆ ಜನರಲ್ಲಿ ನಂಬಿಕೆಯಿಲ್ಲದಿರುವುದನ್ನು ಕಂಡು ಯೇಸುವಿಗೆ ಬಹಳ ಆಶ್ಚರ್ಯವಾಯಿತು. ಬಳಿಕ ಯೇಸು ಆ ಪ್ರದೇಶದ ಇತರ ಹಳ್ಳಿಗಳಿಗೆ ಹೋಗಿ ಉಪದೇಶಿಸಿದನು.

ಯೇಸು ತನ್ನ ಅಪೊಸ್ತಲರನ್ನು ಸೇವೆಗೆ ಕಳುಹಿಸಿದ್ದು

(ಮತ್ತಾಯ 10:1,5-15; ಲೂಕ 9:1-6)

ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಾಗಿ ಕರೆದು ಅವರನ್ನು ಇಬ್ಬರಿಬ್ಬರಾಗಿ ಹೊರಗೆ ಕಳುಹಿಸಿದನು. ಯೇಸು ಅವರಿಗೆ ದೆವ್ವಗಳ ಮೇಲೆ ಅಧಿಕಾರವನ್ನು ನೀಡಿದನು. ಯೇಸು ಅವರಿಗೆ ಹೇಳಿದ್ದೇನೆಂದರೆ: “ನಿಮ್ಮ ಪ್ರವಾಸಕ್ಕೆ ಏನನ್ನೂ ತೆಗೆದುಕೊಳ್ಳಬೇಡಿ. ಊರುಗೋಲನ್ನು ಮಾತ್ರ ತೆಗೆದುಕೊಳ್ಳಿ, ರೊಟ್ಟಿಯನ್ನಾಗಲಿ ಚೀಲವನ್ನಾಗಲಿ ತೆಗೆದುಕೊಳ್ಳಬೇಡಿ. ನಿಮ್ಮ ಜೇಬಿನಲ್ಲಿ ಹಣವನ್ನು ಇಟ್ಟುಕೊಳ್ಳಬೇಡಿ. ಪಾದರಕ್ಷೆಗಳನ್ನು ತೊಟ್ಟುಕೊಳ್ಳಿರಿ. ನೀವು ಧರಿಸಿಕೊಂಡಿರುವ ಉಡುಪೇ ಸಾಕು. 10 ನೀವು ಒಂದು ಮನೆಯಲ್ಲಿ ಇಳಿದುಕೊಂಡ ಮೇಲೆ ಆ ಊರನ್ನು ಬಿಡುವವರೆಗೆ ಆ ಮನೆಯಲ್ಲಿರಿ. 11 ಯಾವ ಊರಿನವರಾದರೂ ನಿಮ್ಮನ್ನು ಸ್ವೀಕರಿಸಿಕೊಳ್ಳದಿದ್ದರೆ ಮತ್ತು ನಿಮ್ಮ ಬೋಧನೆಯನ್ನು ಕೇಳದಿದ್ದರೆ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿ ಆ ಊರನ್ನು ಬಿಟ್ಟುಹೋಗಿರಿ. ಇದು ಅವರಿಗೆ ಎಚ್ಚರಿಕೆಯಾಗಿರುತ್ತದೆ.”

12 ಶಿಷ್ಯರು ಅಲ್ಲಿಂದ ಹೊರಟು, ಇತರ ಸ್ಥಳಗಳಿಗೆ ಹೋಗಿ ಜನರಿಗೆ, “ನಿಮ್ಮಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಉಪದೇಶಿಸಿದರು. 13 ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಶಿಷ್ಯರು ಬಿಡುಗಡೆ ಮಾಡಿದರು ಮತ್ತು ಕಾಯಿಲೆಯ ಜನರಿಗೆ ಎಣ್ಣೆಯನ್ನು ಹಚ್ಚಿ ಗುಣಪಡಿಸಿದರು.

ಯೇಸುವಿನ ಕುರಿತು ಹೆರೋದನ ಅಭಿಪ್ರಾಯ

(ಮತ್ತಾಯ 14:1-12; ಲೂಕ 9:7-9)

14 ಯೇಸು ಪ್ರಸಿದ್ಧನಾಗಿದ್ದುದರಿಂದ ರಾಜನಾದ ಹೆರೋದನಿಗೆ ಯೇಸುವಿನ ವಿಷಯ ತಿಳಿಯಿತು. ಕೆಲವು ಜನರು, “ಇವನು (ಯೇಸು) ಸ್ನಾನಿಕನಾದ ಯೋಹಾನ. ಇವನು ಮತ್ತೆ ಬದುಕಿಬಂದಿದ್ದಾನೆ. ಆದಕಾರಣವೇ ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದರು.

15 ಇನ್ನು ಕೆಲವರು, “ಇವನು ಎಲೀಯ”ನೆಂದು ಹೇಳಿದರು.

ಇತರ ಜನರು, “ಯೇಸು ಒಬ್ಬ ಪ್ರವಾದಿ. ಬಹುಕಾಲದ ಹಿಂದೆ ಜೀವಿಸಿದ್ದ ಪ್ರವಾದಿಗಳಂತೆ ಇವನೂ ಒಬ್ಬನು” ಎಂದು ಹೇಳಿದರು.

16 ಜನರು ಯೇಸುವಿನ ಬಗ್ಗೆ ಹೇಳುತ್ತಿದ್ದ ಈ ಮಾತುಗಳನ್ನೆಲ್ಲಾ ಕೇಳಿದ ಹೆರೋದನು, “ನಾನು ಶಿರಚ್ಛೇದನ ಮಾಡಿಸಿದ ಯೋಹಾನನು ಈಗ ಮತ್ತೆ ಬದುಕಿಬಂದಿದ್ದಾನೆ!” ಎಂದು ಹೇಳಿದನು.

ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟದ್ದರ ಬಗ್ಗೆ

17 ಯೋಹಾನನನ್ನು ಬಂಧಿಸಲು ತನ್ನ ಸೈನಿಕರಿಗೆ ಹೆರೋದನೇ ಆಜ್ಞಾಪಿಸಿದ್ದನು. ಅಂತೆಯೇ ಅವರು ಯೋಹಾನನನ್ನು ಸೆರೆಯಲ್ಲಿ ಹಾಕಿದ್ದರು. ಹೆರೋದನು ತನ್ನ ಪತ್ನಿಯಾಗಿ ಇಟ್ಟುಕೊಂಡಿದ್ದ ಹೆರೋದ್ಯಳ ನಿಮಿತ್ತ ಹೀಗೆ ಮಾಡಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಪತ್ನಿ. 18 ಯೋಹಾನನು ಹೆರೋದನಿಗೆ, “ನೀನು ನಿನ್ನ ಅಣ್ಣನ ಪತ್ನಿಯನ್ನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದನು. 19 ಆದ್ದರಿಂದ ಹೆರೋದ್ಯಳು ಯೋಹಾನನನ್ನು ದ್ವೇಷಿಸಲಾರಂಭಿಸಿ ಅವನನ್ನು ಕೊಲ್ಲಿಸಬೇಕೆಂದಿದ್ದಳು. 20 ಆದರೆ ಆಕೆಗೆ ಸಾಧ್ಯವಾಗಲಿಲ್ಲ. ಹೆರೋದನು ಯೋಹಾನನನ್ನು ಕೊಲ್ಲಿಸಲು ಭಯಪಟ್ಟನು. ಯೋಹಾನನನ್ನು ಒಳ್ಳೆಯವನೆಂದೂ ಪವಿತ್ರನೆಂದೂ ಜನರೆಲ್ಲರು ನಂಬಿದ್ದಾರೆಂಬುದು ಹೆರೋದನಿಗೆ ತಿಳಿದಿತ್ತು. ಆದ್ದರಿಂದ ಹೆರೋದನು ಯೋಹಾನನನ್ನು ರಕ್ಷಿಸಿದನು. ಹೆರೋದನು ಯೋಹಾನನ ಉಪದೇಶವನ್ನು ಕೇಳಿದಾಗಲೆಲ್ಲಾ ಗಲಿಬಿಲಿಗೊಳ್ಳುತ್ತಿದ್ದನು. ಆದರೂ ಅವನ ಉಪದೇಶವನ್ನು ಸಂತೋಷದಿಂದ ಕೇಳುತ್ತಿದ್ದನು.

21 ಒಮ್ಮೆ ಯೋಹಾನನನ್ನು ಮರಣಕ್ಕೆ ಈಡುಮಾಡುವ ಸುಸಮಯ ಹೆರೋದ್ಯಳಿಗೆ ದೊರೆಯಿತು. ಅಂದು ಹೆರೋದನ ಹುಟ್ಟುಹಬ್ಬದ ದಿನವಾಗಿತ್ತು. ಹೆರೋದನು ರಾಜಾಧಿಕಾರಿಗಳಿಗೂ ಸೇನಾಧಿಪತಿಗಳಿಗೂ ಮತ್ತು ಗಲಿಲಾಯದ ಪ್ರಮುಖರಿಗೂ ಒಂದು ಔತಣಕೂಟವನ್ನು ಏರ್ಪಡಿಸಿದನು. 22 ಹೆರೋದ್ಯಳ ಮಗಳು ಈ ಔತಣಕೂಟಕ್ಕೆ ಬಂದು ನರ್ತಿಸಿದಳು. ಹೆರೋದನಿಗೂ ಮತ್ತು ಅವನ ಜೊತೆಯಲ್ಲಿ ಊಟಮಾಡುತ್ತಿದ್ದವರಿಗೂ ಬಹಳ ಸಂತೋಷವಾಯಿತು.

ಆಗ ರಾಜ ಹೆರೋದನು ಆ ಹುಡುಗಿಗೆ, “ನಿನಗೆ ಏನು ಬೇಕಾದರೂ ಕೇಳಿಕೊ, ನಾನು ನಿನಗೆ ಕೊಡುತ್ತೇನೆ. 23 ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಕೊಡುತ್ತೇನೆ” ಎಂದು ಪ್ರಮಾಣಮಾಡಿದನು.

24 ಆ ಹುಡುಗಿಯು ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನ್ನನ್ನು ಕೇಳಿಕೊಳ್ಳಲಿ?” ಎಂದು ಕೇಳಿದಳು.

ಅವಳ ತಾಯಿ, “ಸ್ನಾನಿಕ ಯೋಹಾನನ ತಲೆಯನ್ನು ಕೇಳಿಕೊ” ಎಂದು ಹೇಳಿಕೊಟ್ಟಳು.

25 ಆ ಹುಡುಗಿ ಬೇಗನೆ ರಾಜನ ಬಳಿಗೆ ಬಂದು, “ಸ್ನಾನಿಕ ಯೋಹಾನನ ತಲೆಯನ್ನು ಒಂದು ತಟ್ಟೆಯಲ್ಲಿ ಈಗಲೇ ತರಿಸಿಕೊಡಿ, ಇದೇ ನನ್ನ ಬೇಡಿಕೆ” ಎಂದು ಹೇಳಿದಳು.

26 ರಾಜ ಹೆರೋದನು ಬಹಳ ವ್ಯಸನಗೊಂಡನು. ಆದರೆ ಅವನು ಆ ಹುಡುಗಿಗೆ ಏನು ಬೇಕಾದರೂ ಕೊಡುವೆನೆಂದು ಪ್ರಮಾಣ ಮಾಡಿದ್ದನು. ಅಲ್ಲಿ ಹೆರೋದನ ಸಂಗಡ ಊಟಮಾಡುತ್ತಿದ್ದ ಜನರು ಆ ಪ್ರಮಾಣವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ನಿರಾಕರಿಸಲು ಹೆರೋದನು ಇಚ್ಛಿಸಲಿಲ್ಲ. 27 ಆದ್ದರಿಂದ ರಾಜನು ಯೋಹಾನನ ತಲೆಯನ್ನು ಕತ್ತರಿಸಿ ತರಲು ಒಬ್ಬ ಸೈನಿಕನನ್ನು ಕಳುಹಿಸಿದನು. ಸೈನಿಕನು ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿ, 28 ಅದನ್ನು ಒಂದು ತಟ್ಟೆಯ ಮೇಲಿಟ್ಟು ತಂದು ಆ ಹುಡುಗಿಗೆ ಕೊಟ್ಟನು. ಅವಳು ಆ ತಲೆಯನ್ನು ತನ್ನ ತಾಯಿಗೆ ಕೊಟ್ಟಳು. 29 ನಡೆದ ಈ ಸಂಗತಿಯು ಯೋಹಾನನ ಶಿಷ್ಯರಿಗೆ ತಿಳಿಯಿತು. ಅವರು ಬಂದು, ಯೋಹಾನನ ದೇಹವನ್ನು ತೆಗೆದುಕೊಂಡು ಹೋಗಿ ಒಂದು ಸಮಾಧಿಯಲ್ಲಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International