New Testament in a Year
ಸತ್ತು ಹೋಗಿದ್ದ ಹುಡುಗಿಯೊಬ್ಬಳಿಗೆ ಜೀವದಾನ ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ
(ಮತ್ತಾಯ 9:18-26; ಲೂಕ 8:40-56)
21 ಯೇಸು ದೋಣಿಯಲ್ಲಿ ಸರೋವರದ ಆಚೆ ದಡಕ್ಕೆ ಹೋದನು. ಸರೋವರದ ತೀರದಲ್ಲಿ ಅನೇಕ ಜನರು ಆತನ ಸುತ್ತಲೂ ಸೇರಿದರು. 22 ಸಭಾಮಂದಿರದ ಅಧಿಕಾರಿಯೊಬ್ಬನು ಆ ಸ್ಥಳಕ್ಕೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ಕಂಡು, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, 23 “ನನ್ನ ಚಿಕ್ಕಮಗಳು ಸಾಯುತ್ತಿದ್ದಾಳೆ. ದಯವಿಟ್ಟು ನೀನು ಬಂದು, ನಿನ್ನ ಕೈಗಳಿಂದ ಅವಳನ್ನು ಸ್ಪರ್ಶಿಸು. ಆಗ ಅವಳು ಗುಣವಾಗಿ ಬದುಕಿಕೊಳ್ಳುತ್ತಾಳೆ” ಎಂದು ಬಹಳವಾಗಿ ಬೇಡಿಕೊಂಡನು.
24 ಯೇಸು ಅಧಿಕಾರಿಯೊಂದಿಗೆ ಹೋದನು. ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಅವರು ಆತನ ಸುತ್ತಲೂ ನೂಕುತ್ತಾ ಹೋದರು.
25 ಆ ಜನರ ನಡುವೆ ಒಬ್ಬ ಸ್ತ್ರೀ ಇದ್ದಳು. ಆಕೆಗೆ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿತ್ತು. 26 ಆಕೆಯು ಬಹಳ ಸಂಕಟಪಟ್ಟಿದ್ದಳು. ಅವಳಿಗೆ ಸಹಾಯ ಮಾಡಲು ಅನೇಕ ವೈದ್ಯರು ಪ್ರಯತ್ನಿಸಿದ್ದರು. ಆಕೆಯಲ್ಲಿದ್ದ ಹಣವೆಲ್ಲವೂ ವೆಚ್ಚವಾಯಿತು. ಆದರೆ ಆಕೆಗೆ ವಾಸಿಯಾಗಲಿಲ್ಲ. ಅವಳ ಕಾಯಿಲೆಯು ಇನ್ನೂ ಹೆಚ್ಚಾಗುತ್ತಿತ್ತು.
27 ಆಕೆಗೆ ಯೇಸುವನ್ನು ಕುರಿತು ತಿಳಿದುಬಂತು. ಆದ್ದರಿಂದ ಆಕೆಯು ಜನರ ಗುಂಪಿನಲ್ಲಿ ಹಿಂದಿನಿಂದ ಬಂದು ಆತನ ಮೇಲಂಗಿಯನ್ನು ಮುಟ್ಟಿದಳು. 28 ಆ ಸ್ತ್ರೀಯು, “ಆತನ ಉಡುಪನ್ನು ಮುಟ್ಟಿದರೆ ಸಾಕು ನಾನು ಗುಣಮುಖಳಾಗುತ್ತೇನೆ” ಎಂದುಕೊಂಡದ್ದರಿಂದ 29 ಮುಟ್ಟಿದ ಕೂಡಲೆ, ಆಕೆಯ ರಕ್ತಸ್ರಾವ ನಿಂತುಹೋಯಿತು. ತನಗೆ ಗುಣವಾಯಿತೆಂಬುದು ಆಕೆಗೆ ಅರಿವಾಯಿತು. 30 ತನ್ನಿಂದ ಶಕ್ತಿಯು ಹೊರಟದ್ದು ಸಹ ಯೇಸುವಿಗೆ ತಿಳಿಯಿತು. ಆತನು ಅಲ್ಲೇ ನಿಂತು ಹಿಂತಿರುಗಿ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದನು.
31 ಶಿಷ್ಯರು ಯೇಸುವಿಗೆ, “ಅನೇಕ ಜನರು ನಿನ್ನ ಮೇಲೆ ಬೀಳುತ್ತಿದ್ದಾರೆ. ಹೀಗಿರಲು ‘ನನ್ನನ್ನು ಸ್ಪರ್ಶಿಸಿದವರು ಯಾರು?’ ಎಂದು ಕೇಳುತ್ತಿರುವೆಯಲ್ಲಾ” ಎಂದರು.
32 ಆದರೆ ಯೇಸು ತನ್ನನ್ನು ಸ್ಪರ್ಶಿಸಿದವರು ಯಾರೆಂದು ಇನ್ನೂ ನೋಡುತ್ತಲೇ ಇದ್ದನು. 33 ತನಗೆ ಗುಣವಾಯಿತೆಂಬುದು ಆ ಸ್ತ್ರೀಗೆ ತಿಳಿದಿತ್ತು. ಆದ್ದರಿಂದ ಆಕೆ ಬಂದು, ಯೇಸುವಿನ ಪಾದಗಳ ಮುಂದೆ ಅಡ್ಡಬಿದ್ದು ನಡೆದ ಸಂಗತಿಯನ್ನೆಲ್ಲಾ ಹೇಳಿದಳು. 34 ಯೇಸು ಆಕೆಗೆ, “ಮಗಳೇ, ನಿನ್ನ ನಂಬಿಕೆಯಿಂದಲೇ ನಿನಗೆ ವಾಸಿಯಾಯಿತು. ಸಮಾಧಾನದಿಂದ ಹೋಗು. ನಿನಗೆ ಇನ್ನು ಮೇಲೆ ಆ ಕಾಯಿಲೆಯ ಬಾಧೆ ಇರುವುದಿಲ್ಲ” ಎಂದು ಹೇಳಿದನು.
35 ಯೇಸು ಅಲ್ಲಿ ಇನ್ನೂ ಮಾತನಾಡುತ್ತಿದ್ದನು. ಅಷ್ಟರಲ್ಲಿ ಕೆಲವು ಜನರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಯಿಂದ ಬಂದು ಯಾಯಿರನಿಗೆ, “ನಿನ್ನ ಮಗಳು ಸತ್ತುಹೋದಳು. ಈಗ ಬೋಧಕನಿಗೆ ತೊಂದರೆ ಕೊಡುವ ಅಗತ್ಯವಿಲ್ಲ” ಎಂದು ಹೇಳಿದರು.
36 ಆದರೆ ಯೇಸು ಅವರ ಮಾತನ್ನು ಗಣನೆಗೆ ತಂದುಕೊಳ್ಳದೆ, ಸಭಾಮಂದಿರದ ಅಧಿಕಾರಿಗೆ, “ಹೆದರಬೇಡ, ನಂಬಿಕೆ ಮಾತ್ರ ಇರಲಿ” ಎಂದು ಹೇಳಿದನು.
37 ಯೇಸು ಪೇತ್ರನನ್ನು, ಯಾಕೋಬನನ್ನು ಮತ್ತು ಯಾಕೋಬನ ತಮ್ಮನಾದ ಯೋಹಾನನನ್ನು ಮಾತ್ರ ತನ್ನ ಜೊತೆಯಲ್ಲಿ ಕರೆದೊಯ್ದನು. 38 ಯೇಸು ಮತ್ತು ಈ ಶಿಷ್ಯರು ಸಭಾಮಂದಿರದ ಅಧಿಕಾರಿಯಾದ ಯಾಯಿರನ ಮನೆಗೆ ಹೋದರು. ಅಲ್ಲಿ ಅನೇಕ ಜನರು ಜೋರಾಗಿ ಅಳುತ್ತಿರುವುದನ್ನು ಯೇಸು ನೋಡಿದನು. ಅಲ್ಲಿ ಬಹಳ ಗದ್ದಲವಿತ್ತು. 39 ಯೇಸು ಮನೆಯನ್ನು ಪ್ರವೇಶಿಸಿ, ಆ ಜನರಿಗೆ, “ನೀವು ಅಳುತ್ತಿರುವುದೇಕೆ? ಇಷ್ಟೊಂದು ಗದ್ದಲ ಮಾಡುತ್ತಿರುವುದೇಕೆ? ಈ ಹುಡುಗಿ ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ” ಎಂದು ಹೇಳಿದನು. 40 ಆದರೆ ಆ ಜನರೆಲ್ಲರೂ ಯೇಸುವನ್ನು ಗೇಲಿ ಮಾಡಿದರು.
ಯೇಸು ಆ ಜನರೆಲ್ಲರನ್ನು ಹೊರಗೆ ಕಳುಹಿಸಿ, ಆ ಬಾಲಕಿಯ ತಂದೆತಾಯಿಗಳನ್ನು ಮತ್ತು ತನ್ನ ಮೂವರು ಶಿಷ್ಯರನ್ನು ಮಾತ್ರ ತನ್ನೊಂದಿಗೆ ಕರೆದುಕೊಂಡು ಆ ಬಾಲಕಿಯ ಕೊಠಡಿಯೊಳಕ್ಕೆ ಹೋದನು. 41 ಯೇಸು ಆ ಬಾಲಕಿಯ ಕೈ ಹಿಡಿದು, ಅವಳಿಗೆ, “ತಲಿಥಾ ಕೂಮ್!” ಎಂದು ಹೇಳಿದನು. (ಅಂದರೆ “ಚಿಕ್ಕ ಹುಡುಗಿಯೇ, ಎದ್ದೇಳು ಎಂದು ನಾನು ಹೇಳುತ್ತಿದ್ದೇನೆ” ಎಂದರ್ಥ.) 42 ಕೂಡಲೇ ಆ ಬಾಲಕಿ ಎದ್ದುನಿಂತು ನಡೆಯಲಾರಂಭಿಸಿದಳು. ಆ ಬಾಲಕಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವಳ ತಂದೆತಾಯಿಗಳು ಮತ್ತು ಶಿಷ್ಯರು ಅತ್ಯಾಶ್ಚರ್ಯಗೊಂಡರು. 43 ಈ ವಿಷಯವನ್ನು ಯಾರಿಗೂ ಹೇಳಕೂಡದೆಂದು ಯೇಸು ಆಕೆಯ ತಂದೆತಾಯಿಗಳಿಗೆ ಖಂಡಿತವಾಗಿ ಹೇಳಿ, “ಆ ಬಾಲಕಿಗೆ ಊಟ ಮಾಡಿಸಿರಿ” ಎಂದನು.
Kannada Holy Bible: Easy-to-Read Version. All rights reserved. © 1997 Bible League International