New Testament in a Year
ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ
(ಮತ್ತಾಯ 8:28-34; ಲೂಕ 8:26-39)
5 ಯೇಸು ಮತ್ತು ಆತನ ಶಿಷ್ಯರು ಸರೋವರವನ್ನು ದಾಟಿ ಗೆರಸೇನರ ಪ್ರಾಂತ್ಯಕ್ಕೆ ಹೋದರು. 2 ಯೇಸು ದೋಣಿಯಿಂದ ಹೊರಕ್ಕೆ ಬಂದಾಗ, ಒಬ್ಬ ಮನುಷ್ಯನು ಸಮಾಧಿಯ ಗವಿಗಳಿಂದ ಆತನ ಬಳಿಗೆ ಬಂದನು. ಅವನಿಗೆ ದೆವ್ವಹಿಡಿದಿತ್ತು. 3 ಅವನು ಸಮಾಧಿಯ ಗವಿಗಳಲ್ಲಿ ವಾಸಿಸುತ್ತಿದ್ದನು. ಅವನನ್ನು ಕಟ್ಟಿಹಾಕಲು ಯಾರಿಗೂ ಸಾಧ್ಯವಿರಲಿಲ್ಲ. ಅವನನ್ನು ಸರಪಣಿಗಳಿಂದ ಕಟ್ಟಿದರೂ ಪ್ರಯೋಜನವಾಗುತ್ತಿರಲಿಲ್ಲ. 4 ಜನರು ಅನೇಕ ಸಾರಿ ಅವನ ಕೈ ಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದರು. ಆದರೆ ಅವನು ಅವುಗಳನ್ನೆಲ್ಲ ಕಿತ್ತೊಗೆದುಬಿಟ್ಟನು. ಅವನನ್ನು ಹತೋಟಿಗೆ ತರುವ ಬಲಿಷ್ಠನು ಅಲ್ಲಿ ಯಾರೂ ಇರಲಿಲ್ಲ. 5 ಅವನು ಹಗಲಿರುಳು ಸಮಾಧಿಯ ಗವಿಗಳ ಸುತ್ತಲು ಮತ್ತು ಬೆಟ್ಟಗಳ ಮೇಲೆ ನಡೆದಾಡುತ್ತಿದ್ದನು. ಅವನು ಕಿರುಚುತ್ತಾ ತನ್ನನ್ನು ಕಲ್ಲುಗಳಿಂದ ಜಜ್ಜಿಕೊಳ್ಳುತ್ತಿದ್ದನು.
6 ಯೇಸು ಬಹಳ ದೂರದಲ್ಲಿದ್ದಾಗಲೇ, ಅವನು ಆತನನ್ನು ಕಂಡು, ಆತನ ಬಳಿಗೆ ಓಡಿಹೋಗಿ ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿದನು. 7-8 ಯೇಸು ಅವನಿಗೆ, “ಎಲೈ ದೆವ್ವವೇ, ಅವನೊಳಗಿಂದ ಹೊರಗೆ ಬಾ” ಎಂದು ಹೇಳಿದನು. ಆಗ ಅವನು ಗಟ್ಟಿಯಾದ ಧ್ವನಿಯಿಂದ ಅರಚುತ್ತಾ, “ಯೇಸುವೇ, ಪರಾತ್ಪರನಾದ ದೇವಕುಮಾರನೇ, ನನ್ನಿಂದ ನಿನಗೆ ಏನಾಗಬೇಕಾಗಿದೆ? ದೇವರಾಣೆಯಿಟ್ಟು ಬೇಡಿಕೊಳ್ಳುತ್ತೇನೆ, ನನ್ನನ್ನು ಹಿಂಸಿಸಬೇಡ” ಎಂದು ಕೇಳಿಕೊಂಡನು.
9 ಆಗ ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದನು.
ಅವನು “ನನ್ನ ಹೆಸರು ದಂಡು,[a] ಏಕೆಂದರೆ ನನ್ನಲ್ಲಿ ಅನೇಕ ದೆವ್ವಗಳಿವೆ” ಎಂದು ಉತ್ತರಕೊಟ್ಟನು. 10 ಆ ಮನುಷ್ಯನ ಒಳಗಿದ್ದ ದೆವ್ವಗಳು ಆ ಪ್ರದೇಶದಿಂದ ತಮ್ಮನ್ನು ಹೊರಕ್ಕೆ ಕಳುಹಿಸದಂತೆ ಯೇಸುವಿನಲ್ಲಿ ಮತ್ತೆ ಮತ್ತೆ ಬೇಡಿಕೊಂಡವು.
11 ಅಲ್ಲಿಗೆ ಹತ್ತಿರವಿದ್ದ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. 12 ದೆವ್ವಗಳು ಯೇಸುವಿಗೆ, “ನಮ್ಮನ್ನು ಹಂದಿಗಳೊಳಗೆ ಕಳುಹಿಸಿಕೊಡು” ಎಂದು ಬೇಡಿಕೊಂಡವು. 13 ಯೇಸು ಅವುಗಳಿಗೆ ಅಪ್ಪಣೆ ಕೊಡಲು ಅವು ಅವನನ್ನು ಬಿಟ್ಟು, ಹಂದಿಗಳೊಳಗೆ ಹೊಕ್ಕವು. ಆಗ ಹಂದಿಗಳೆಲ್ಲಾ ಬೆಟ್ಟದಿಂದ ಇಳಿದು, ಸರೋವರದೊಳಕ್ಕೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು ಎರಡು ಸಾವಿರ ಹಂದಿಗಳಿದ್ದವು.
14 ಹಂದಿಗಳನ್ನು ಕಾಯುತ್ತಿದ್ದ ಜನರು ಪಟ್ಟಣದೊಳಕ್ಕೆ ಮತ್ತು ತೋಟಗಳಿಗೆ ಓಡಿಹೋಗಿ ಜನರಿಗೆಲ್ಲ ತಿಳಿಸಿದರು. 15 ಆಗ ಜನರು ನಡೆದ ಸಂಗತಿಯನ್ನು ನೋಡಲು ಯೇಸುವಿನ ಬಳಿಗೆ ಬಂದರು. ಅನೇಕ ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಬಟ್ಟೆ ಹಾಕಿಕೊಂಡು ಅಲ್ಲಿ ಕುಳಿತಿರುವುದನ್ನು ಅವರು ಕಂಡರು. ಅವನು ಮತ್ತೆ ಸ್ವಸ್ಥ ಬುದ್ಧಿಯುಳ್ಳವನಾಗಿದ್ದನು. ಆ ಜನರು ಅವನನ್ನು ನೋಡಿ ಹೆದರಿದರು. 16 ಅಲ್ಲಿದ್ದ ಕೆಲವು ಜನರು, ಯೇಸು ಮಾಡಿದ ಈ ಕಾರ್ಯವನ್ನು ನೋಡಿದ್ದರು. ಈ ಜನರೇ ಉಳಿದ ಜನರಿಗೆಲ್ಲರಿಗೂ ನಡೆದ ಸಂಗತಿಯನ್ನು ಅಂದರೆ ದೆವ್ವದಿಂದ ಪೀಡಿತನಾಗಿದ್ದವನಿಗೂ ದೆವ್ವಗಳಿಗೂ ಮತ್ತು ಹಂದಿಗಳಿಗೂ ಸಂಭವಿಸಿದ್ದನ್ನು ತಿಳಿಸಿದರು. 17 ಆಗ ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು.
18 ಯೇಸು ಅಲ್ಲಿಂದ ಹೋಗಲು ದೋಣಿ ಹತ್ತುವುದಕ್ಕೆ ಸಿದ್ಧನಾದಾಗ ದೆವ್ವಗಳಿಂದ ಬಿಡುಗಡೆ ಹೊಂದಿದ್ದ ಮನುಷ್ಯನು, “ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಬೇಡಿಕೊಂಡನು. 19 ಆದರೆ ಯೇಸು ಅವನನ್ನು ಕರೆದುಕೊಂಡು ಹೋಗಲು ಒಪ್ಪದೆ, “ನಿನ್ನ ಮನೆಗೂ ನಿನ್ನ ಸ್ನೇಹಿತರ ಬಳಿಗೂ ಹೋಗು. ಪ್ರಭುವು ನಿನಗೆ ಮಾಡಿದ ಒಳ್ಳೆಯದನ್ನೂ ಆತನು ನಿನಗೆ ತೋರಿದ ಕರುಣೆಯನ್ನೂ ಅವರಿಗೆ ತಿಳಿಸು” ಎಂದು ಹೇಳಿದನು.
20 ಆಗ ಅವನು ಅಲ್ಲಿಂದ ಹೊರಟುಹೋದನು ಮತ್ತು ಯೇಸು ತನಗೆ ಮಾಡಿದ ಉಪಕಾರವನ್ನು ಹತ್ತು ಪಟ್ಟಣಗಳ ಪ್ರದೇಶದ ಜನರಿಗೆ ತಿಳಿಸಿದನು. ಆ ಜನರೆಲ್ಲರೂ ಅತ್ಯಾಶ್ಚರ್ಯಪಟ್ಟರು.
Kannada Holy Bible: Easy-to-Read Version. All rights reserved. © 1997 Bible League International