New Testament in a Year
ಉರಿಯುವ ದೀಪದಂತಿರಿ
(ಲೂಕ 8:16-18)
21 ನಂತರ ಯೇಸು ಅವರಿಗೆ, “ನೀವು ಉರಿಯುತ್ತಿರುವ ದೀಪವನ್ನು ಪಾತ್ರೆಯ ಒಳಗಾಗಲಿ ಮಂಚದ ಕೆಳಗಾಗಲಿ ಇಡುತ್ತೀರಾ? ಇಲ್ಲ! ದೀಪವನ್ನು ದೀಪಸ್ತಂಭದ ಮೇಲೆ ಇಡುವಿರಿ. 22 ಆಗ ಪ್ರತಿಯೊಂದೂ ಸ್ಪಷ್ಟವಾಗಿ ಗೋಚರವಾಗುವುದು. ರಹಸ್ಯವಾದ ಪ್ರತಿಯೊಂದೂ ಬಟ್ಟಬಯಲಾಗುವುದು. 23 ನನ್ನ ಮಾತುಗಳನ್ನು ಕೇಳುತ್ತಿರುವ ಜನರೇ, ಆಲಿಸಿರಿ! 24 ನೀವು ಕೇಳುತ್ತಿರುವ ಪ್ರತಿಯೊಂದು ವಿಷಯವನ್ನು ಎಚ್ಚರಿಕೆಯಿಂದ ಆಲೋಚಿಸಿರಿ. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು; ನೀವು ಕೊಟ್ಟದ್ದಕ್ಕಿಂತ ಹೆಚ್ಚಾಗಿ ಕೊಡುವರು. 25 ಯಾವನಲ್ಲಿ ಹೆಚ್ಚಾಗಿರುತ್ತದೆಯೋ ಅವನಿಗೆ ಇನ್ನೂ ಕೊಡಲಾಗುವುದು. ಯಾವನಲ್ಲಿ ಇರುವುದಿಲ್ಲವೋ ಅವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು” ಎಂದು ಹೇಳಿದನು.
ಬಿತ್ತಲ್ಪಟ್ಟ ಬೀಜವನ್ನು ಕುರಿತು ಯೇಸು ಹೇಳಿದ ಸಾಮ್ಯ
26 ನಂತರ ಯೇಸು, “ದೇವರ ರಾಜ್ಯವು ಭೂಮಿಯಲ್ಲಿ ಬೀಜ ಬಿತ್ತಿದ ಮನುಷ್ಯನಂತಿದೆ. 27 ಬೀಜವು ಹಗಲಿರುಳು ಬೆಳೆಯುತ್ತದೆ. ರೈತನು ಮಲಗಿರುವಾಗಲೂ ಎಚ್ಚರದಿಂದಿರುವಾಗಲೂ ಬೀಜ ಬೆಳೆಯುತ್ತಲೇ ಇರುವುದು. ಬೀಜ ಹೇಗೆ ಬೆಳೆಯುತ್ತದೆಂಬುದು ರೈತನಿಗೆ ತಿಳಿಯುವುದಿಲ್ಲ. 28 ಭೂಮಿಯು ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೇ ತಾನೇ ಉತ್ಪತ್ತಿಮಾಡುತ್ತದೆ. 29 ತೆನೆಯು ಬಲಿತಾಗ ರೈತನು ಗಿಡವನ್ನು ಕೊಯ್ಯುವನು. ಇದನ್ನೇ ಸುಗ್ಗಿಕಾಲ ಎನ್ನುವರು” ಎಂದು ಹೇಳಿದನು.
ದೇವರ ರಾಜ್ಯವು ಸಾಸಿವೆ ಕಾಳಿನಂತಿದೆ
(ಮತ್ತಾಯ 13:31-32,34-35; ಲೂಕ 13:18-19)
30 ನಂತರ ಯೇಸು, “ದೇವರ ರಾಜ್ಯದ ಬಗ್ಗೆ ವಿವರಿಸಲು ನಾನು ನಿಮಗೆ ಯಾವ ಸಾಮ್ಯವನ್ನು ಹೇಳಲಿ? 31 ದೇವರ ರಾಜ್ಯವು ಸಾಸಿವೆ ಕಾಳಿನಂತಿರುತ್ತದೆ. ನೀವು ಭೂಮಿಯಲ್ಲಿ ಬಿತ್ತುವ ಕಾಳುಗಳಲ್ಲಿ ಸಾಸಿವೆ ಕಾಳು ಅತ್ಯಂತ ಸಣ್ಣದಾಗಿದೆ. 32 ಆದರೆ ನೀವು ಈ ಕಾಳನ್ನು ಬಿತ್ತಿದಾಗ, ಅದು ಬೆಳೆದು, ನಿಮ್ಮ ತೋಟದ ಇತರ ಗಿಡಗಳಿಗಿಂತ ಅತಿ ದೊಡ್ಡದಾಗುತ್ತದೆ. ಅದಕ್ಕೆ ದೊಡ್ಡದೊಡ್ಡ ರೆಂಬೆಗಳಿರುತ್ತವೆ. ಕಾಡಿನ ಹಕ್ಕಿಗಳು ಬಂದು, ಅಲ್ಲಿ ಗೂಡುಗಳನ್ನು ಕಟ್ಟಿಕೊಂಡು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳುತ್ತವೆ” ಎಂದು ಹೇಳಿದನು.
33 ಯೇಸು ಇಂಥ ಅನೇಕ ಸಾಮ್ಯಗಳ ಮೂಲಕ ಜನರಿಗೆ ಅರ್ಥವಾಗುವಂತೆ ಉಪದೇಶಿಸಿದನು. 34 ಯೇಸುವು ಜನರಿಗೆ ಯಾವಾಗಲೂ ಸಾಮ್ಯಗಳ ಮೂಲಕ ಉಪದೇಶಿಸಿದನು. ಆದರೆ ತನ್ನ ಶಿಷ್ಯರು ಮಾತ್ರ ಇರುವಾಗ ಎಲ್ಲವನ್ನೂ ಅವರಿಗೆ ವಿವರಿಸಿ ತಿಳಿಸುತ್ತಿದ್ದನು.
ಯೇಸುವಿನ ಆಜ್ಞೆಗೆ ಬಿರುಗಾಳಿಯ ವಿಧೇಯತೆ
(ಮತ್ತಾಯ 8:23-27; ಲೂಕ 8:22-25)
35 ಆ ದಿನ ಸಂಜೆ, ಯೇಸು ತನ್ನ ಶಿಷ್ಯರಿಗೆ “ನನ್ನೊಂದಿಗೆ ಬನ್ನಿ, ಸರೋವರದ ಆಚೆದಡಕ್ಕೆ ಹೋಗೋಣ” ಎಂದು ಹೇಳಿದನು. 36 ಯೇಸು ಮತ್ತು ಆತನ ಶಿಷ್ಯರು ಅಲ್ಲಿದ್ದ ಜನರನ್ನು ಅಲ್ಲಿಯೇ ಬಿಟ್ಟುಹೋದರು. ಯೇಸು ಕುಳಿತುಕೊಂಡು ಉಪದೇಶಿಸುತ್ತಿದ್ದ ದೋಣಿಯಲ್ಲಿಯೇ ಅವರು ಹೋದರು. ಅವರೊಂದಿಗೆ ಬೇರೆ ದೋಣಿಗಳೂ ಇದ್ದವು. 37 ಅವರು ಹೋಗುತ್ತಿರಲು ಸರೋವರದ ಮೇಲೆ ಬಿರುಗಾಳಿ ಬೀಸಿತು. ಎತ್ತರವಾದ ಅಲೆಗಳು ದೋಣಿಗೆ ಅಪ್ಪಳಿಸತೊಡಗಿದ್ದರಿಂದ ದೋಣಿಯು ನೀರಿನಿಂದ ತುಂಬಿಹೋಯಿತು. 38 ಯೇಸುವು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ತಲೆಯನ್ನಿಟ್ಟು ನಿದ್ರಿಸುತ್ತಿದ್ದನು. ಶಿಷ್ಯರು ಆತನ ಬಳಿಗೆ ಹೋಗಿ, ಆತನನ್ನು ಎಬ್ಬಿಸಿ, “ಗುರುವೇ, ನೀನು ನಮ್ಮ ಬಗ್ಗೆ ಚಿಂತಿಸುವುದಿಲ್ಲವೆ? ನಾವು ಮುಳುಗಿಹೋಗುತ್ತಿದ್ದೇವೆ!” ಎಂದರು.
39 ಯೇಸು ಎಚ್ಚೆತ್ತು ಬಿರುಗಾಳಿ ಮತ್ತು ಅಲೆಗಳಿಗೆ, “ಪ್ರಶಾಂತವಾಗಿರಿ! ಮೊರೆಯದಿರಿ!” ಎಂದು ಆಜ್ಞಾಪಿಸಿದನು. ಆಗ ಬಿರುಗಾಳಿ ನಿಂತುಹೋಯಿತು ಮತ್ತು ಸರೋವರವು ಪ್ರಶಾಂತವಾಯಿತು.
40 ಯೇಸು ತನ್ನ ಶಿಷ್ಯರಿಗೆ, “ನೀವೇಕೆ ಹೆದರುತ್ತೀರಿ? ನಿಮ್ಮಲ್ಲಿ ಇನ್ನೂ ನಂಬಿಕೆಯಿಲ್ಲವೇ?” ಎಂದು ಕೇಳಿದನು.
41 ಶಿಷ್ಯರು ಬಹಳ ಭಯಪಟ್ಟು, “ಈತನು ಯಾರಿರಬಹುದು? ಗಾಳಿ ಮತ್ತು ನೀರು ಸಹ ಈತನ ಮಾತನ್ನು ಕೇಳುತ್ತವೆಯಲ್ಲಾ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International