New Testament in a Year
ಕೈಬತ್ತಿದವನಿಗೆ ಸ್ವಸ್ಥತೆ
(ಮತ್ತಾಯ 12:9-14; ಲೂಕ 6:6-11)
3 ಮತ್ತೊಂದು ದಿನದಲ್ಲಿ, ಯೇಸು ಸಭಾಮಂದಿರದೊಳಕ್ಕೆ ಹೋದನು. ಅಲ್ಲಿ ಕೈಬತ್ತಿದ್ದ ಒಬ್ಬ ಮನುಷ್ಯನಿದ್ದನು. 2 ಅಲ್ಲಿದ್ದ ಕೆಲವು ಯೆಹೂದ್ಯರು, ಯೇಸುವನ್ನು ದೂಷಿಸುವುದಕ್ಕಾಗಿ ಆತನಲ್ಲಿ ಏನಾದರೂ ತಪ್ಪನ್ನು ಕಂಡುಹಿಡಿಯಲು ಎದುರು ನೋಡುತ್ತಿದ್ದರು. ಸಬ್ಬತ್‌ದಿನದಂದು ಆ ಮನುಷ್ಯನನ್ನು ಯೇಸು ಗುಣಪಡಿಸಬಹುದೆಂದು ಅವರು ಆತನ ಸಮೀಪದಲ್ಲಿಯೇ ಇದ್ದರು. 3 ಯೇಸು ಕೈಬತ್ತಿದ್ದ ಆ ಮನುಷ್ಯನಿಗೆ, “ಎದ್ದುನಿಲ್ಲು, ಜನರೆಲ್ಲರೂ ನಿನ್ನನ್ನು ನೋಡಲಿ” ಎಂದು ಹೇಳಿದನು.
4 ನಂತರ ಯೇಸು ಜನರಿಗೆ, “ಸಬ್ಬತ್‌ದಿನದಂದು ಯಾವ ಕಾರ್ಯಗಳನ್ನು ಮಾಡಬೇಕು? ಒಳ್ಳೆಯ ಕಾರ್ಯವನ್ನೇ? ಕೆಟ್ಟಕಾರ್ಯವನ್ನೇ? ಒಂದು ಜೀವವನ್ನು ರಕ್ಷಿಸಬೇಕೇ? ಅಥವಾ ನಾಶಪಡಿಸಬೇಕೇ?” ಎಂದು ಕೇಳಿದನು. ಆಗ ಅವರು ಏನೂ ಉತ್ತರ ಕೊಡಲಾರದೆ ಮೌನವಾಗಿದ್ದರು.
5 ಯೇಸು ಕೋಪಗೊಂಡು ಜನರ ಕಡೆಗೆ ನೋಡಿದನು. ಅವರ ಮೊಂಡುತನವನ್ನು ಕಂಡು ಆತನಿಗೆ ದುಃಖವಾಯಿತು. ಯೇಸು ಆ ಮನುಷ್ಯನಿಗೆ, “ನಿನ್ನ ಕೈ ಚಾಚು” ಎಂದು ಹೇಳಿದನು. ಅವನು ತನ್ನ ಕೈಯನ್ನು ಯೇಸುವಿನತ್ತ ಚಾಚಿದನು. ಕೂಡಲೇ ಅವನ ಕೈ ವಾಸಿಯಾಯಿತು. 6 ಆಗ ಫರಿಸಾಯರು ಹೊರಗೆ ಹೋಗಿ, ಹೆರೋದ್ಯರನ್ನು ಕೂಡಿಕೊಂಡು ಯೇಸುವನ್ನು ಯಾವ ರೀತಿ ಕೊಲ್ಲಬೇಕೆಂದು ಆಲೋಚಿಸಿದರು.
ಯೇಸುವನ್ನು ಹಿಂಬಾಲಿಸಿದ ಜನಸಮೂಹ
7 ಯೇಸು ತನ್ನ ಶಿಷ್ಯರೊಂದಿಗೆ ಸರೋವರಕ್ಕೆ ಹೊರಟುಹೋದನು. ಗಲಿಲಾಯದ ಅನೇಕ ಜನರು ಆತನನ್ನು ಹಿಂಬಾಲಿಸಿದರು. 8 ಅನೇಕಾನೇಕ ಜನರು ಜುದೇಯದಿಂದ, ಜೆರುಸಲೇಮಿನಿಂದ, ಇದೂಮಾಯದಿಂದ, ಜೋರ್ಡನ್ ನದಿಯ ಆಚೆಗಿರುವ ಪ್ರದೇಶದಿಂದ ಮತ್ತು ಟೈರ್, ಸೀದೋನ್‌ಗಳ ಸುತ್ತಲಿನ ಪ್ರದೇಶಗಳಿಂದ ಬಂದರು. ಯೇಸುವು ಮಾಡುತ್ತಿದ್ದ ಕಾರ್ಯಗಳ ಬಗ್ಗೆ ಅವರು ಕೇಳಿ ಬಂದಿದ್ದರು.
9 ಯೇಸು ಈ ಜನಸಮೂಹವನ್ನು ನೋಡಿ ಅವರು ತನ್ನ ಮೈಮೇಲೆ ಬಿದ್ದು ನೂಕಬಹುದೆಂದು ತನಗಾಗಿ ಒಂದು ಚಿಕ್ಕ ದೋಣಿಯನ್ನು ತಂದು ಅದನ್ನು ಸಿದ್ದಪಡಿಸುವಂತೆ ತನ್ನ ಶಿಷ್ಯರಿಗೆ ಹೇಳಿದನು. 10 ಯೇಸು ಅನೇಕ ಜನರನ್ನು ಗುಣಪಡಿಸಿದನು. ಆದ್ದರಿಂದ ಕಾಯಿಲೆಯಾಗಿದ್ದ ಜನರೆಲ್ಲರೂ ಆತನನ್ನು ಮುಟ್ಟುವುದಕ್ಕಾಗಿ ಆತನ ಮೇಲೆ ಬೀಳುತ್ತಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಕೆಲವು ಜನರು ಅಲ್ಲಿದ್ದರು. 11 ದೆವ್ವಗಳು ಯೇಸುವನ್ನು ನೋಡಿ, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, “ನೀನು ದೇವಕುಮಾರ” ಎಂದು ಜೋರಾಗಿ ಕೂಗುತ್ತಿದ್ದವು. 12 ಆದರೆ ಯೇಸು ತಾನು ಯಾರೆಂಬುದನ್ನು ಜನರಿಗೆ ತಿಳಿಸಬಾರದೆಂದು ಅವುಗಳಿಗೆ ಖಂಡಿತವಾಗಿ ಆಜ್ಞಾಪಿಸಿದನು.
ಹನ್ನೆರಡು ಮಂದಿ ಅಪೊಸ್ತಲರ ಆಯ್ಕೆ
(ಮತ್ತಾಯ 10:1-4; ಲೂಕ 6:12-16)
13 ನಂತರ ಯೇಸು ಒಂದು ಬೆಟ್ಟದ ಮೇಲಕ್ಕೆ ಹೋದನು. ಯೇಸು ಕೆಲವು ಜನರಿಗೆ ತನ್ನೊಂದಿಗೆ ಬರಲು ಹೇಳಿದನು. ಯೇಸು ಅಪೇಕ್ಷಿಸಿದ ಜನರು ಇವರೇ. ಈ ಜನರು ಯೇಸುವಿನೊಂದಿಗೆ ಮೇಲಕ್ಕೆ ಹೋದರು. 14 ಆತನು ಅವರಲ್ಲಿ ಹನ್ನೆರಡು ಮಂದಿಯನ್ನು ತನ್ನ ಅಪೊಸ್ತಲರನ್ನಾಗಿ ಆರಿಸಿಕೊಂಡನು. ಈ ಹನ್ನೆರಡು ಮಂದಿ ತನ್ನೊಂದಿಗಿರಬೇಕೆಂಬುದು ಮತ್ತು ಉಪದೇಶ ಮಾಡುವುದಕ್ಕಾಗಿ ಅವರನ್ನು ಬೇರೆ ಸ್ಥಳಗಳಿಗೆ ಕಳುಹಿಸಬೇಕೆಂಬುದು 15 ಅಲ್ಲದೆ ದೆವ್ವಗಳಿಂದ ಪೀಡಿತರಾಗಿರುವ ಜನರನ್ನು ಅವುಗಳಿಂದ ಬಿಡಿಸುವುದಕ್ಕೆ ಅವರಿಗೆ ಅಧಿಕಾರ ಕೊಡಬೇಕೆಂಬುದು ಆತನ ಅಪೇಕ್ಷೆಯಾಗಿತ್ತು. 16 ಯೇಸುವು ಈ ಹನ್ನೆರಡು ಮಂದಿಯನ್ನು ಆರಿಸಿಕೊಂಡನು:
ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರನ್ನಿತ್ತನು),
17 ಜಿಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನ (ಯೇಸು ಅವರಿಗೆ ಬೊವನೆರ್ಗೆಸ್ ಎಂಬ ಹೆಸರನ್ನಿತ್ತನು. ಈ ಹೆಸರಿಗೆ “ಸಿಡಿಲಿನ ಜನರು” ಎಂದರ್ಥ.)
18 ಅಂದ್ರೆಯ,
ಫಿಲಿಪ್ಪ,
ಬಾರ್ತೊಲೊಮಾಯ,
ಮತ್ತಾಯ,
ತೋಮ,
ಅಲ್ಫಾಯನ ಮಗನಾದ ಯಾಕೋಬ,
ತದ್ದಾಯ,
ದೇಶಾಭಿಮಾನಿಯಾದ ಸೀಮೋನ
19 ಮತ್ತು ಇಸ್ಕರಿಯೋತ ಯೂದ. ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿದವನೇ ಯೂದ.
Kannada Holy Bible: Easy-to-Read Version. All rights reserved. © 1997 Bible League International