Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮಾರ್ಕ 1:23-45

23 ಯೇಸು ಸಭಾಮಂದಿರದಲ್ಲಿದ್ದಾಗ, ದೆವ್ವದಿಂದ ಪೀಡಿತನಾಗಿದ್ದ ಒಬ್ಬ ಮನುಷ್ಯನು ಅಲ್ಲಿದ್ದನು. ಅವನು, 24 “ನಜರೇತಿನ ಯೇಸುವೇ! ನಮ್ಮಿಂದ ನಿನಗೆ ಏನಾಗಬೇಕಾಗಿದೆ? ನಮ್ಮನ್ನು ನಾಶಗೊಳಿಸಲು ಬಂದಿರುವೆಯಾ? ನೀನು ದೇವರಿಂದ ಬಂದ ಪರಿಶುದ್ಧನೆಂದು ನನಗೆ ಗೊತ್ತಿದೆ!” ಎಂದು ಕೂಗಿಕೊಂಡನು.

25 ಯೇಸು, “ಸುಮ್ಮನಿರು! ಅವನೊಳಗಿಂದ ಹೊರಗೆ ಬಾ!” ಎಂದು ಆಜ್ಞಾಪಿಸಿದನು. 26 ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಅರಚುತ್ತಾ ಅವನೊಳಗಿಂದ ಹೊರಬಂದಿತು.

27 ಜನರೆಲ್ಲರೂ ದಿಗ್ಭ್ರಮೆಗೊಂಡು, “ಇದೇನು? ಹೊಸದೊಂದನ್ನು ಈತನು ಅಧಿಕಾರದಿಂದ ಉಪದೇಶಿಸುತ್ತಿದ್ದಾನೆ! ಈತನ ಆಜ್ಞೆಗೆ ದೆವ್ವಗಳೂ ವಿಧೇಯವಾಗುತ್ತಿವೆ” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 28 ಯೇಸುವಿನ ಸುದ್ದಿಯು ಗಲಿಲಾಯ ಪ್ರದೇಶದ ಎಲ್ಲೆಡೆಯಲ್ಲಿಯೂ ಹರಡಿತು.

ಅನೇಕರಿಗೆ ಸ್ವಸ್ಥತೆ

(ಮತ್ತಾಯ 8:14-17; ಲೂಕ 4:38-41)

29 ಯೇಸು ಮತ್ತು ಆತನ ಶಿಷ್ಯರು ಸಭಾಮಂದಿರದಿಂದ ಹೊರಟು ಯಾಕೋಬ ಮತ್ತು ಯೋಹಾನರ ಸಂಗಡ ಸೀಮೋನ ಮತ್ತು ಅಂದ್ರೆಯರ ಮನೆಗೆ ಹೋದರು. 30 ಸೀಮೋನನ ಅತ್ತೆ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದಳು. ಅಲ್ಲಿನ ಜನರು ಅವಳ ಬಗ್ಗೆ ಯೇಸುವಿಗೆ ಹೇಳಿದರು. 31 ಆದ್ದರಿಂದ ಯೇಸು ಅವಳ ಹಾಸಿಗೆಯ ಬಳಿ ಹೋಗಿ ಆಕೆಯ ಕೈಗಳನ್ನು ಹಿಡಿದುಕೊಂಡು, ಮೇಲೇಳಲು ಸಹಾಯ ಮಾಡಿದನು. ಕೂಡಲೇ ಅವಳಿಗೆ ಗುಣವಾಯಿತು. ಆಕೆ ಎದ್ದು ಅವರಿಗೆ ಉಪಚಾರ ಮಾಡಿದಳು.

32 ಅಂದು ಸೂರ್ಯನು ಮುಳುಗಿದ ಮೇಲೆ, ಜನರು ಕಾಯಿಲೆಯವರನ್ನೂ ದೆವ್ವಗಳಿಂದ ಪೀಡಿತರಾಗಿದ್ದವರನ್ನೂ ಆತನ ಬಳಿಗೆ ಕರೆತಂದರು. 33 ಊರಿನ ಜನರೆಲ್ಲರೂ ಆ ಮನೆಯ ಮುಂದೆ ಒಟ್ಟುಗೂಡಿದರು. 34 ಯೇಸು ನಾನಾ ಬಗೆಯ ರೋಗಗಳಿಂದ ನರಳುತ್ತಿದ್ದ ಅನೇಕ ಜನರನ್ನು ಗುಣಪಡಿಸಿದನು; ದೆವ್ವಗಳಿಂದ ಪೀಡಿತರಾಗಿದ್ದ ಅನೇಕರನ್ನು ಬಿಡಿಸಿದನು. ಆದರೆ ಆ ದೆವ್ವಗಳಿಗೆ ಮಾತನಾಡಲು ಆತನು ಅವಕಾಶ ಕೊಡಲಿಲ್ಲ; ಏಕೆಂದರೆ ಯೇಸು ಯಾರೆಂಬುದು ದೆವ್ವಗಳಿಗೆ ಗೊತ್ತಿತ್ತು.

ಸುವಾರ್ತೆ ಸಾರಲು ಯೇಸುವಿನ ಸಿದ್ಧತೆ

(ಲೂಕ 4:42-44)

35 ಮರುದಿನ ಮುಂಜಾನೆ, ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ಪ್ರಾರ್ಥಿಸುವುದಕ್ಕಾಗಿ ಏಕಾಂತವಾದ ಸ್ಥಳಕ್ಕೆ ಹೋದನು. 36 ತರುವಾಯ, ಸೀಮೋನ ಮತ್ತು ಅವನ ಗೆಳೆಯರು ಯೇಸುವನ್ನು ಹುಡುಕುತ್ತಾ ಹೋದರು. 37 ಅವರು ಯೇಸುವನ್ನು ಕಂಡುಕೊಂಡು, “ಜನರೆಲ್ಲರೂ ನಿನ್ನನ್ನೇ ಎದುರು ನೋಡುತ್ತಿದ್ದಾರೆ!” ಎಂದು ಹೇಳಿದರು.

38 ಯೇಸು, “ಇಲ್ಲಿಗೆ ಸಮೀಪದಲ್ಲಿರುವ ಊರುಗಳಿಗೆ ನಾವು ಹೋಗೋಣ. ಆ ಸ್ಥಳಗಳಲ್ಲಿಯೂ ನಾನು ಉಪದೇಶಿಸಬೇಕು. ಅದಕ್ಕಾಗಿಯೇ ನಾನು ಇಲ್ಲಿಗೆ ಬಂದೆನು” ಎಂದು ಹೇಳಿದನು. 39 ಹೀಗೆ ಯೇಸು ಗಲಿಲಾಯದ ಎಲ್ಲಾ ಕಡೆಗೆ ಪ್ರವಾಸಮಾಡಿ ಸಭಾಮಂದಿರಗಳಲ್ಲಿ ಉಪದೇಶಿಸಿದನು; ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು.

ಕುಷ್ಠರೋಗಿಗೆ ಸ್ವಸ್ಥತೆ

(ಮತ್ತಾಯ 8:1-4; ಲೂಕ 5:12-16)

40 ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಮೊಣಕಾಲೂರಿ ಆತನಿಗೆ, “ನೀನು ಇಷ್ಟಪಟ್ಟರೆ, ನನ್ನನ್ನು ಗುಣಪಡಿಸಬಲ್ಲೆ” ಎಂದು ಬೇಡಿಕೊಂಡನು.

41 ಯೇಸು ಅವನಿಗಾಗಿ ದುಃಖಪಟ್ಟು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಇಷ್ಟವಿದೆ. ನಿನಗೆ ಗುಣವಾಗಲಿ” ಎಂದು ಹೇಳಿದನು. 42 ಆ ಕೂಡಲೇ ಅವನಿಗೆ ಗುಣವಾಯಿತು.

43-44 ಯೇಸು ಅವನಿಗೆ, “ನಾನು ನಿನ್ನನ್ನು ಗುಣಪಡಿಸಿದೆನೆಂದು ಯಾರಿಗೂ ಹೇಳದೆ, ನೇರವಾಗಿ ಯಾಜಕನ ಬಳಿಗೆ ಹೋಗಿ ಮೈ ತೋರಿಸು. ನೀನು ಗುಣಹೊಂದಿರುವುದರಿಂದ ಮೋಶೆಯ ಆಜ್ಞಾನುಸಾರವಾಗಿ ದೇವರಿಗೆ ಕಾಣಿಕೆಯನ್ನು ಅರ್ಪಿಸು. ನಿನಗೆ ಗುಣವಾಯಿತು ಎಂಬುದಕ್ಕೆ ಇದು ಜನರಿಗೆ ಸಾಕ್ಷಿಯಾಗಿರುವುದು” ಎಂದು ಎಚ್ಚರಿಕೆ ನೀಡಿ ಕಳುಹಿಸಿಬಿಟ್ಟನು.[a] 45 ಅವನು ಅಲ್ಲಿಂದ ಹೋಗಿ ಯೇಸುವೇ ತನ್ನನ್ನು ಗುಣಪಡಿಸಿದನೆಂದು ಜನರೆಲ್ಲರಿಗೆ ತಿಳಿಸಿದನು. ಈ ಸುದ್ದಿಯು ಎಲ್ಲೆಡೆ ಹರಡಿದ್ದರಿಂದ ಆತನು ಬಹಿರಂಗವಾಗಿ ಊರೊಳಗೆ ಹೋಗಲು ಸಾಧ್ಯವಾಗದೆ ಏಕಾಂತವಾದ ಸ್ಥಳಗಳಲ್ಲಿ ವಾಸಿಸಬೇಕಾಯಿತು. ಆದರೂ ಎಲ್ಲಾ ಕಡೆಗಳಿಂದ ಜನರು ಯೇಸುವಿದ್ದಲ್ಲಿಗೆ ಬರುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International