New Testament in a Year
ಯೇಸುವಿನ ಆಗಮನ
(ಮತ್ತಾಯ 3:1-12; ಲೂಕ 3:1-9,15-17; ಯೋಹಾನ 1:19-28)
1 ದೇವಕುಮಾರನಾದ ಯೇಸು ಕ್ರಿಸ್ತನನ್ನು ಕುರಿತ ಸುವಾರ್ತೆಯ ಆರಂಭವಿದು. 2 ಪ್ರವಾದಿಯಾದ ಯೆಶಾಯನು ತನ್ನ ಪ್ರವಾದನೆಯ ಗ್ರಂಥದಲ್ಲಿ ಹೀಗೆ ಬರೆದಿದ್ದಾನೆ.
“ಇಗೋ! ನಾನು ನನ್ನ ಸಂದೇಶಕನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.
ಅವನು ನಿನಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾನೆ.”(A)
3 “‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಗೊಳಿಸಿರಿ,
ಆತನ ದಾರಿಯನ್ನು ಸುಗಮಗೊಳಿಸಿರಿ’
ಎಂದು ಒಬ್ಬ ವ್ಯಕ್ತಿಯು ಅಡವಿಯಲ್ಲಿ ಕೂಗುತ್ತಿದ್ದಾನೆ.”(B)
4 ಅಂತೆಯೇ ಸ್ನಾನಿಕ ಯೋಹಾನನು ಬಂದು, ಅಡವಿಯಲ್ಲಿ ಜನರಿಗೆ, “ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ನಿಮಗೆ ಪಾಪಕ್ಷಮೆ ಆಗುವುದು” ಎಂದು ಉಪದೇಶಿಸುತ್ತಿದ್ದನು ಮತ್ತು ದೀಕ್ಷಾಸ್ನಾನ ಕೊಡುತ್ತಾ ಇದ್ದನು. 5 ಜುದೇಯ ಮತ್ತು ಜೆರುಸಲೇಮಿನ ಜನರೆಲ್ಲರೂ ಯೋಹಾನನ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆಮಾಡಿಕೊಂಡರು. ಆಗ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಟ್ಟನು.
6 ಯೋಹಾನನು ಒಂಟೆಯ ತುಪ್ಪಟದಿಂದ ಮಾಡಿದ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಅವನು ಮಿಡತೆಗಳನ್ನು ಮತ್ತು ಕಾಡುಜೇನನ್ನು ತಿನ್ನುತ್ತಿದ್ದನು.
7 ಯೋಹಾನನು ಜನರಿಗೆ, “ನನ್ನ ತರುವಾಯ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ನಾನು ಮೊಣಕಾಲೂರಿ, ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ಯೋಗ್ಯನಲ್ಲ. 8 ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತೇನೆ, ಆದರೆ ಆತನು ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾನೆ” ಎಂದು ಬೋಧಿಸಿದನು.
ಯೇಸುವಿಗೆ ದೀಕ್ಷಾಸ್ನಾನ
(ಮತ್ತಾಯ 3:13-17; ಲೂಕ 3:21-22)
9 ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿನಿಂದ ಯೋಹಾನನಿದ್ದ ಸ್ಥಳಕ್ಕೆ ಬಂದನು. ಯೋಹಾನನು ಯೇಸುವಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. 10 ಯೇಸು ನೀರಿನಿಂದ ಮೇಲಕ್ಕೆ ಬರುತ್ತಿದ್ದಾಗ, ಆಕಾಶವು ತೆರೆಯಂತೆ ಹರಿದುಹೋಯಿತು; ಮತ್ತು ಪವಿತ್ರಾತ್ಮನು ತನ್ನ ಮೇಲೆ ಪಾರಿವಾಳದ ರೂಪದಲ್ಲಿ ಇಳಿದುಬರುತ್ತಿರುವುದನ್ನು ಕಂಡನು. 11 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ನೀನೇ ನನ್ನ ಪ್ರಿಯ ಮಗನು. ನಾನು ನಿನ್ನನ್ನು ಮೆಚ್ಚಿಕೊಂಡಿದ್ದೇನೆ” ಎಂದು ಹೇಳಿತು.
ಯೇಸುವಿಗಾದ ಪರಿಶೋಧನೆ
(ಮತ್ತಾಯ 4:1-11; ಲೂಕ 4:1-13)
12 ಆಗ ದೇವರಾತ್ಮನು ಯೇಸುವನ್ನು ಅಡವಿಗೆ ನಡೆಸಿದನು. 13 ಯೇಸು ಅಲ್ಲಿ ನಲವತ್ತು ದಿನಗಳ ಕಾಲ ಕಾಡುಮೃಗಗಳೊಂದಿಗಿದ್ದು ಸೈತಾನನಿಂದ ಪರಿಶೋಧಿಸಲ್ಪಟ್ಟನು. ಬಳಿಕ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.
ಗಲಿಲಾಯದಲ್ಲಿ ಯೇಸುವಿನ ಸೇವೆಯ ಆರಂಭ
(ಮತ್ತಾಯ 4:12-17; ಲೂಕ 4:14-15)
14 ಯೋಹಾನನನ್ನು ಸೆರೆಮನೆಗೆ ಹಾಕಿದ ಮೇಲೆ, ಯೇಸು ಗಲಿಲಾಯಕ್ಕೆ ಹೋಗಿ ಜನರಿಗೆ, 15 “ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ” ಎಂಬ ದೇವರ ಸುವಾರ್ತೆಯನ್ನು ಉಪದೇಶಿಸಿದನು.
ಯೇಸುವಿನ ಪ್ರಥಮ ಶಿಷ್ಯರು
(ಮತ್ತಾಯ 4:18-22; ಲೂಕ 5:1-11)
16 ಯೇಸು ಗಲಿಲಾಯ ಸರೋವರದ ಬಳಿ ನಡೆದುಹೋಗುತ್ತಿದ್ದಾಗ ಸೀಮೋನನನ್ನು ಮತ್ತು ಸೀಮೋನನ ಸಹೋದರನಾದ ಅಂದ್ರೆಯನನ್ನು ಕಂಡನು. ಇವರಿಬ್ಬರೂ ಬೆಸ್ತರಾಗಿದ್ದರು. ಇವರು ಮೀನುಗಳನ್ನು ಹಿಡಿಯಲು ಸರೋವರದೊಳಕ್ಕೆ ಬಲೆಯನ್ನು ಬೀಸುತ್ತಿದ್ದರು. 17 ಯೇಸು, “ಬನ್ನಿರಿ, ನನ್ನನ್ನು ಹಿಂಬಾಲಿಸಿರಿ, ನಾನು ನಿಮ್ಮನ್ನು ಬೇರೆ ವಿಧದ ಬೆಸ್ತರನ್ನಾಗಿ ಮಾಡುವೆನು. ಇನ್ನು ಮೇಲೆ ನೀವು ಒಂದುಗೂಡಿಸುವುದು ಜನರನ್ನೇ, ಮೀನುಗಳನ್ನಲ್ಲ” ಎಂದು ಅವರಿಗೆ ಹೇಳಿದನು. 18 ಆಗ ಅವರು ತಮ್ಮ ಬಲೆಗಳನ್ನು ಅಲ್ಲಿಯೇ ಬಿಟ್ಟು ಆತನನ್ನು ಹಿಂಬಾಲಿಸಿದರು.
19 ಯೇಸು ಗಲಿಲಾಯ ಸರೋವರದ ಬಳಿಯಲ್ಲಿ ಇನ್ನೂ ತಿರುಗಾಡುತ್ತಲೇ ಇದ್ದಾಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರೆಂಬ ಇಬ್ಬರು ಸಹೋದರರನ್ನು ಕಂಡನು. ಅವರು ಮೀನುಗಳನ್ನು ಹಿಡಿಯಲು ಬಲೆಯನ್ನು ಸಿದ್ಧಪಡಿಸುತ್ತಾ ತಮ್ಮ ದೋಣಿಯಲ್ಲಿದ್ದರು. 20 ಅವರ ತಂದೆಯಾದ ಜೆಬೆದಾಯನೂ ಅವನ ಕೆಲಸಗಾರರೂ ಸಹೋದರರೊಂದಿಗೆ ದೋಣಿಯಲ್ಲಿದ್ದರು. ಯೇಸು ಅವರನ್ನು ಕರೆದನು. ಕೂಡಲೇ ಅವರು ತಮ್ಮ ತಂದೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ದೆವ್ವದಿಂದ ಪೀಡಿತನಾಗಿದ್ದವನಿಗೆ ವಿಮೋಚನೆ
(ಲೂಕ 4:31-37)
21 ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಸಬ್ಬತ್‌ದಿನದಂದು ಯೇಸು ಸಭಾಮಂದಿರಕ್ಕೆ ಹೋಗಿ ಜನರಿಗೆ ಉಪದೇಶಮಾಡಿದನು. 22 ಯೇಸುವಿನ ಉಪದೇಶವನ್ನು ಕೇಳಿ ಅಲ್ಲಿದ್ದ ಜನರು ಆಶ್ಚರ್ಯಗೊಂಡರು. ಆತನು ಅವರ ಧರ್ಮೋಪದೇಶಕರಂತೆ ಉಪದೇಶಮಾಡದೆ, ಅಧಿಕಾರವುಳ್ಳವನಂತೆ ಉಪದೇಶ ಮಾಡಿದನು.
Kannada Holy Bible: Easy-to-Read Version. All rights reserved. © 1997 Bible League International