Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 28

ಯೇಸುವಿನ ಪುನರುತ್ಥಾನ

(ಮಾರ್ಕ 16:1-8; ಲೂಕ 24:1-12; ಯೋಹಾನ 20:1-10)

28 ಸಬ್ಬತ್ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ಧಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಹೋದರು.

ಆಗ ಭೀಕರ ಭೂಕಂಪವಾಯಿತು. ಪ್ರಭುವಿನ ದೂತನೊಬ್ಬನು ಆಕಾಶದಿಂದ ಇಳಿದುಬಂದನು. ಆ ದೇವದೂತನು ಸಮಾಧಿಯ ಬಳಿಗೆ ಹೋಗಿ, ಸಮಾಧಿಯ ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಆ ಬಂಡೆಯ ಮೇಲೆ ಕುಳಿತುಕೊಂಡನು. ದೇವದೂತನು ಮಿಂಚಿನಂತೆ ಪ್ರಕಾಶಿಸುತ್ತಿದ್ದನು. ಅವನ ಬಟ್ಟೆಗಳು ಮಂಜಿನಂತೆ ಬಿಳುಪಾಗಿದ್ದವು. ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಕಂಡು ಬಹಳವಾಗಿ ಹೆದರಿ ಭಯದಿಂದ ನಡುಗುತ್ತಾ ಸತ್ತಂತಾದರು.

ದೇವದೂತನು ಆ ಸ್ತ್ರೀಯರಿಗೆ, “ಹೆದರಬೇಡಿ, ಶಿಲುಬೆಗೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರೆಂಬುದು ನನಗೆ ತಿಳಿದಿದೆ. ಆದರೆ ಯೇಸು ಇಲ್ಲಿಲ್ಲ. ಆತನು ತಾನು ತಿಳಿಸಿದ್ದಂತೆಯೇ ಪುನರುತ್ಥಾನ ಹೊಂದಿದ್ದಾನೆ. ಬನ್ನಿ, ಆತನ ದೇಹವಿದ್ದ ಸ್ಥಳವನ್ನು ನೋಡಿ. ಬೇಗನೆ ಹೋಗಿ ಆತನ ಶಿಷ್ಯರಿಗೆ, ‘ಯೇಸು ಪುನರುತ್ಥಾನ ಹೊಂದಿದ್ದಾನೆ. ಆತನು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ನಿಮಗಿಂತ ಮುಂಚೆಯೇ ಆತನು ಅಲ್ಲಿರುತ್ತಾನೆ. ನೀವು ಆತನನ್ನು ಅಲ್ಲಿ ನೋಡುತ್ತೀರಿ’ ಎಂದು ಹೇಳಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ” ಎಂದನು.

ಕೂಡಲೇ ಆ ಸ್ತ್ರೀಯರು ಭಯದಿಂದಲೂ ಸಂತೋಷದಿಂದಲೂ ಸಮಾಧಿಯಿಂದ ಹೊರಟರು. ನಡೆದ ಸಂಗತಿಯನ್ನು ಶಿಷ್ಯರಿಗೆ ತಿಳಿಸಲು ಅವರು ಓಡಿಹೋಗುತ್ತಿರಲು, ಯೇಸು ಅವರ ಮುಂದೆ ಪ್ರತ್ಯಕ್ಷನಾಗಿ, “ನಿಮಗೆ ಶುಭವಾಗಲಿ” ಎಂದನು. ಆ ಸ್ತ್ರೀಯರು ಯೇಸುವಿನ ಬಳಿಗೆ ಹೋಗಿ, ಆತನ ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು. 10 ಯೇಸು ಆ ಸ್ತ್ರೀಯರಿಗೆ, “ಹೆದರಬೇಡಿ, ನನ್ನ ಸಹೋದರರ ಬಳಿಗೆ ಹೋಗಿ ಗಲಿಲಾಯಕ್ಕೆ ಬರಲು ತಿಳಿಸಿರಿ. ಅವರು ನನ್ನನ್ನು ಅಲ್ಲಿ ಕಾಣುವರು” ಎಂದು ಹೇಳಿದನು.

ಯೆಹೂದ್ಯ ನಾಯಕರಿಗೆ ಬಂದ ವರದಿ

11 ಆ ಸ್ತ್ರೀಯರು ಶಿಷ್ಯರಿಗೆ ತಿಳಿಸಲು ಹೋದರು. ಇತ್ತ ಸಮಾಧಿಯನ್ನು ಕಾಯುತ್ತಿದ್ದ ಕೆಲವು ಸೈನಿಕರು ನಗರದೊಳಕ್ಕೆ ಹೋಗಿ ನಡೆದ ಸಂಗತಿಯನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು. 12 ಆಗ ಮಹಾಯಾಜಕರು ಹಿರಿಯ ಯೆಹೂದ್ಯರನ್ನು ಭೇಟಿಮಾಡಿ ಚರ್ಚಿಸಿದರು ಮತ್ತು ಸೈನಿಕರಿಗೆ ಹೆಚ್ಚು ಹಣಕೊಟ್ಟು ಅವರಿಂದ ಸುಳ್ಳು ಹೇಳಿಸುವ ಉಪಾಯವನ್ನು ಮಾಡಿದರು. 13 ಅವರು ಸೈನಿಕರಿಗೆ, “ರಾತ್ರಿ ವೇಳೆಯಲ್ಲಿ ನಾವು ನಿದ್ರಿಸುತ್ತಿದ್ದಾಗ ಯೇಸುವಿನ ಶಿಷ್ಯರು ಬಂದು ಅವನ ದೇಹವನ್ನು ಕದ್ದೊಯ್ದರೆಂದು ಜನರಿಗೆ ತಿಳಿಸಿರಿ. 14 ಇದು ರಾಜ್ಯಪಾಲನಿಗೆ ಗೊತ್ತಾದರೂ ನಾವು ಅವನನ್ನು ಸಮಾಧಾನಪಡಿಸುತ್ತೇವೆ ಮತ್ತು ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು. 15 ಸೈನಿಕರು ಹಣವನ್ನು ತೆಗೆದುಕೊಂಡು, ಅವರು ಹೇಳಿದಂತೆಯೇ ಮಾಡಿದರು. ಈ ಕಥೆಯು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿಕೊಂಡಿದೆ.

ಯೇಸು ತನ್ನ ಶಿಷ್ಯರಿಗೆ ಹೇಳಿದ ಕಡೆಯ ಮಾತುಗಳು

(ಮಾರ್ಕ 16:14-18; ಲೂಕ 24:36-49; ಯೋಹಾನ 20:19-23; ಅ.ಕಾ. 1:6-8)

16 ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೊರಟು ಯೇಸು ತಿಳಿಸಿದ್ದ ಬೆಟ್ಟಕ್ಕೆ ಬಂದರು. 17 ಶಿಷ್ಯರು ಬೆಟ್ಟದ ಮೇಲೆ ಯೇಸುವನ್ನು ಕಂಡು ಆತನನ್ನು ಆರಾಧಿಸಿದರು. ಆದರೆ ಕೆಲವು ಶಿಷ್ಯರು ಆತನೇ ನಿಜವಾದ ಯೇಸು ಎಂಬುದನ್ನು ನಂಬಲಿಲ್ಲ. 18 ಆದ್ದರಿಂದ ಯೇಸು ಅವರ ಬಳಿಗೆ ಬಂದು, “ಪರಲೋಕದ ಮತ್ತು ಈ ಲೋಕದ ಅಧಿಕಾರವೆಲ್ಲವನ್ನು ನನಗೆ ಕೊಡಲಾಗಿದೆ. 19 ಆದ್ದರಿಂದ ನೀವು ಹೋಗಿ, ಲೋಕದಲ್ಲಿರುವ ಜನರೆಲ್ಲರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ. ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರಿಗೆಲ್ಲ ದೀಕ್ಷಾಸ್ನಾನ ಮಾಡಿಸಿ. 20 ನಾನು ನಿಮಗೆ ಆಜ್ಞಾಪಿಸಿದವುಗಳಿಗೆಲ್ಲಾ ವಿಧೇಯರಾಗುವಂತೆ ಜನರಿಗೆ ಉಪದೇಶಿಸಿ, ಲೋಕಾಂತ್ಯದವರೆಗೂ ಸದಾಕಾಲ ನಾನು ನಿಮ್ಮೊಂದಿಗಿರುತ್ತೇನೆ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International