Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 27:51-66

51 ಆಗ ದೇವಾಲಯದ ತೆರೆಯು ಮೇಲ್ಗಡೆಯಿಂದ ತಳಭಾಗದವರೆಗೂ ಹರಿದು ಎರಡು ಭಾಗವಾಯಿತು. ಭೂಮಿಯು ನಡುಗಿತು. ಬಂಡೆಗಳು ಒಡೆದುಹೋದವು. 52 ಸಮಾಧಿಗಳು ತೆರೆದವು, ಸತ್ತುಹೋಗಿದ್ದ ಅನೇಕ ದೇವಜನರು ಸಮಾಧಿಗಳೊಳಗಿಂದ ಜೀವಂತವಾಗಿ ಮೇಲೆದ್ದರು. 53 ಯೇಸು ಪುನರುತ್ಥಾನ ಹೊಂದಿದ ಬಳಿಕ, ಅವರು ಪವಿತ್ರ ನಗರವಾದ ಜೆರುಸಲೇಮಿಗೆ ಹೋದರು. ಜನರು ಅವರನ್ನು ಕಣ್ಣಾರೆ ಕಂಡರು.

54 ಯೇಸುವನ್ನು ಕಾಯುತ್ತಿದ್ದ ಸೇನಾಧಿಪತಿ ಮತ್ತು ಸೈನಿಕರು ಭೂಕಂಪವನ್ನು ಮತ್ತು ನಡೆದದ್ದನ್ನು ಕಂಡು ಬಹಳವಾಗಿ ಹೆದರಿ, “ಈತನು ನಿಜವಾಗಿಯೂ ದೇವರ ಮಗನಾಗಿದ್ದನು!” ಎಂದು ಹೇಳಿದರು.

55 ಯೇಸುವಿನ ಸೇವೆ ಮಾಡುತ್ತಾ ಗಲಿಲಾಯದಿಂದ ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ಅನೇಕ ಸ್ತ್ರೀಯರು ದೂರದಲ್ಲಿ ನೋಡುತ್ತಾ ನಿಂತಿದ್ದರು. 56 ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೇಫನ ತಾಯಿಯಾದ ಮರಿಯಳು, ಹಾಗೂ ಯೋಹಾನ ಮತ್ತು ಯಾಕೋಬನ ತಾಯಿ ಅಲ್ಲಿದ್ದರು.

ಯೇಸುವಿನ ಸಮಾಧಿ

(ಮಾರ್ಕ 15:42-47; ಲೂಕ 23:50-56; ಯೋಹಾನ 19:38-42)

57 ಆ ಸಂಜೆ ಯೋಸೇಫ ಎಂಬ ಶ್ರೀಮಂತ ವ್ಯಕ್ತಿ ಜೆರುಸಲೇಮಿಗೆ ಬಂದನು. ಅರಿಮತಾಯ ಪಟ್ಟಣದವನಾದ ಇವನು ಯೇಸುವಿನ ಶಿಷ್ಯನಾಗಿದ್ದನು. 58 ಇವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಕೇಳಿದನು. ಯೇಸುವಿನ ದೇಹವನ್ನು ಯೋಸೇಫನಿಗೆ ಕೊಡುವಂತೆ ಪಿಲಾತನು ಸೈನಿಕರಿಗೆ ಅಪ್ಪಣೆ ಮಾಡಿದನು. 59 ಯೋಸೇಫನು ಆತನ ದೇಹವನ್ನು ತೆಗೆದುಕೊಂಡು, ಅದನ್ನು ಹೊಸ ನಾರುಮಡಿಯ ಬಟ್ಟೆಯಿಂದ ಸುತ್ತಿ 60 ಬಂಡೆಯಲ್ಲಿ ತಾನು ತೋಡಿಸಿದ್ದ ಹೊಸ ಸಮಾಧಿಯಲ್ಲಿ ಇಟ್ಟನು. ಸಮಾಧಿಯ ಬಾಗಿಲಿಗೆ ಒಂದು ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು. 61 ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಯ ಹತ್ತಿರ ಕುಳಿತುಕೊಂಡಿದ್ದರು.

ಯೇಸುವಿನ ಸಮಾಧಿಗೆ ಕಾವಲು

62 ಶುಕ್ರವಾರ ಮುಗಿದ ಮೇಲೆ ಮಹಾಯಾಜಕರು ಮತ್ತು ಫರಿಸಾಯರು ಪಿಲಾತನ ಬಳಿಗೆ ಹೋಗಿ, 63 “ಸ್ವಾಮೀ, ಆ ಸುಳ್ಳುಗಾರನು ಬದುಕಿದ್ದಾಗ, ‘ಮೂರು ದಿನಗಳ ಬಳಿಕ ನಾನು ಪುನರುತ್ಥಾನ ಹೊಂದುತ್ತೇನೆ’ ಎಂದು ಹೇಳಿದ್ದು ನಮಗಿನ್ನೂ ನೆನಪಿದೆ. 64 ಆದ್ದರಿಂದ ಮೂರು ದಿನಗಳವರೆಗೆ ಆ ಸಮಾಧಿಯನ್ನು ಭದ್ರವಾಗಿ ಕಾಯಲು ಆಜ್ಞಾಪಿಸಿರಿ. ಅವನ ಶಿಷ್ಯರು ಬಂದು, ಅವನ ದೇಹವನ್ನು ಕದ್ದುಕೊಂಡು ಹೋಗಿ, ಅವನು ಸಮಾಧಿಯಿಂದ ಮೇಲೆದ್ದಿದ್ದಾನೆ ಎಂದು ಜನರಿಗೆ ಹೇಳಬಹುದು. ಆಗ ಮೊದಲನೆಯ ಮೋಸಕ್ಕಿಂತ ಕಡೆಯದೇ ಕಡು ಮೋಸವಾದೀತು” ಎಂದು ಹೇಳಿದರು.

65 ಪಿಲಾತನು, “ಕೆಲವು ಸೈನಿಕರನ್ನು ಕರೆದುಕೊಂಡು ಹೋಗಿ, ನಿಮಗೆ ಬೇಕಾದ ರೀತಿಯಲ್ಲಿ ಸಮಾಧಿಯನ್ನು ಭದ್ರಪಡಿಸಿರಿ” ಎಂದು ಹೇಳಿದನು. 66 ಅವರು ಹೋಗಿ, ಸಮಾಧಿಗೆ ಮುದ್ರೆ ಹಾಕಿ, ಸೈನಿಕರನ್ನು ಕಾವಲಿರಿಸಿ, ಸಮಾಧಿಯನ್ನು ಸುಭದ್ರಪಡಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International