Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 26:26-50

ಪ್ರಭುವಿನ ಭೋಜನ

(ಮಾರ್ಕ 14:22-26; ಲೂಕ 22:15-20; 1 ಕೊರಿಂಥ. 11:23-25)

26 ಅವರು ಊಟಮಾಡುತ್ತಿದ್ದಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಎಂದು ಹೇಳಿ ತನ್ನ ಶಿಷ್ಯರಿಗೆ ಕೊಟ್ಟನು.

27 ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರಸಲ್ಲಿಸಿ, “ನೀವೆಲ್ಲರೂ ಇದನ್ನು ಕುಡಿಯಿರಿ. 28 ಇದು ಹೊಸ ಒಡಂಬಡಿಕೆಯನ್ನು ಸ್ಥಾಪಿಸುವ ನನ್ನ ರಕ್ತ. ಇದು ಅನೇಕ ಜನರ ಪಾಪಗಳ ಕ್ಷಮೆಗಾಗಿ ಸುರಿಸಲ್ಪಡುವ ರಕ್ತ. 29 ನಾನು ನನ್ನ ತಂದೆಯ ರಾಜ್ಯದಲ್ಲಿ ಮತ್ತೆ ಒಟ್ಟಾಗಿ ಸೇರಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ತನಕ ಅದನ್ನು ಇನ್ನು ಕುಡಿಯುವುದೇ ಇಲ್ಲ” ಎಂದು ಹೇಳಿ ಜನರಿಗೆ ಕುಡಿಯಲು ಕೊಟ್ಟನು.

30 ಆಗ ಶಿಷ್ಯರೆಲ್ಲರೂ ಪಸ್ಕಹಬ್ಬದ ಹಾಡನ್ನು ಹಾಡಿದರು. ಬಳಿಕ ಅವರು ಆಲಿವ್ ಗುಡ್ಡಕ್ಕೆ ಹೋದರು.

ಶಿಷ್ಯರ ವಿಶ್ವಾಸದ್ರೋಹದ ಮುನ್ಸೂಚನೆ

(ಮಾರ್ಕ 14:27-31; ಲೂಕ 22:31-34; ಯೋಹಾನ 13:36-38)

31 ಆಗ ಯೇಸು ತನ್ನ ಶಿಷ್ಯರಿಗೆ, “ಇಂದು ರಾತ್ರಿ ನೀವೆಲ್ಲರೂ ನನ್ನ ದೆಸೆಯಿಂದ ನಿಮ್ಮ ವಿಶ್ವಾಸವನ್ನು ಕಳೆದುಕೊಳ್ಳುವಿರಿ.

‘ನಾನು ಕುರುಬನನ್ನು ಕೊಲ್ಲುವೆನು,
    ಆಗ ಕುರಿಗಳೆಲ್ಲಾ ಚದರಿಹೋಗುತ್ತವೆ’(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. 32 ಆದರೆ ನಾನು ಸತ್ತಮೇಲೆ ಜೀವಂತನಾಗಿ ಎದ್ದುಬರುವೆನು. ನಂತರ ನಾನು ಗಲಿಲಾಯಕ್ಕೆ ಹೋಗುವೆನು. ನೀವು ಅಲ್ಲಿಗೆ ಹೋಗುವುದಕ್ಕಿಂತ ಮುಂಚೆಯೇ ನಾನು ಅಲ್ಲಿರುವೆನು” ಎಂದು ಹೇಳಿದನು.

33 ಪೇತ್ರನು, “ಉಳಿದ ಶಿಷ್ಯರೆಲ್ಲರೂ ನಿನ್ನ ದೆಸೆಯಿಂದ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಆದರೆ ನಾನು ಮಾತ್ರ ಹಾಗೆ ಮಾಡುವುದಿಲ್ಲ” ಎಂದು ಉತ್ತರಕೊಟ್ಟನು.

34 ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಇಂದು ರಾತ್ರಿ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನ ವಿಷಯದಲ್ಲಿ ಆತನು ನನಗೆ ಗೊತ್ತೇ ಇಲ್ಲ ಎಂಬುದಾಗಿ ಮೂರು ಸಲ ಹೇಳುವೆ” ಅಂದನು.

35 ಆದರೆ ಪೇತ್ರನು, “ನಾನು ನಿನ್ನೊಂದಿಗೆ ಸತ್ತರೂ ಸರಿ, ನಿನ್ನನ್ನು ನಿರಾಕರಿಸುವುದಿಲ್ಲ” ಅಂದನು. ಉಳಿದ ಶಿಷ್ಯರು ಸಹ ಅದೇ ರೀತಿ ಹೇಳಿದರು.

ಯೇಸುವಿನ ಸಂಕಟದ ಪ್ರಾರ್ಥನೆ

(ಮಾರ್ಕ 14:32-42; ಲೂಕ 22:39-46)

36 ಅನಂತರ ಯೇಸು ತನ್ನ ಶಿಷ್ಯರೊಂದಿಗೆ ಗೆತ್ಸೆಮನೆ ಎಂಬ ಸ್ಥಳಕ್ಕೆ ಹೋದನು. ಯೇಸು ತನ್ನ ಶಿಷ್ಯರಿಗೆ, “ನಾನು ಅಲ್ಲಿಗೆ ಹೋಗಿ, ಪ್ರಾರ್ಥಿಸಿ ಬರುವ ತನಕ ಇಲ್ಲಿಯೇ ಇರಿ” ಎಂದು ಹೇಳಿದನು. 37 ಯೇಸುವು ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ತನ್ನೊಂದಿಗೆ ಕರೆದುಕೊಂಡು ಹೋದನು. ಆಗ ಯೇಸು ಬಹಳ ದುಃಖದಿಂದ ಮನಗುಂದಿದವನಾಗಿ 38 ಅವರಿಗೆ, “ನನ್ನ ಆತ್ಮವು ದುಃಖದಿಂದ ತುಂಬಿಹೋಗಿದೆ. ನನ್ನ ಹೃದಯವು ದುಃಖದಿಂದ ಒಡೆದುಹೋಗುವಂತಿದೆ. ನೀವು ನನ್ನೊಂದಿಗೆ ಎಚ್ಚರವಾಗಿದ್ದು ಇಲ್ಲೇ ಇರಿ” ಎಂದು ಹೇಳಿದನು.

39 ಬಳಿಕ ಯೇಸು ಅವರಿಂದ ಸ್ವಲ್ಪದೂರ ಹೋಗಿ ನೆಲದ ಮೇಲೆ ಬೋರಲಬಿದ್ದು, “ನನ್ನ ತಂದೆಯೇ, ಸಾಧ್ಯವಿದ್ದರೆ, ಸಂಕಟದ ಈ ಪಾತ್ರೆಯನ್ನು ನನಗೆ ಕೊಡಬೇಡ. ಆದರೆ ನನ್ನ ಇಷ್ಟದಂತಲ್ಲ, ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದನು. ಅವರು ನಿದ್ರಿಸುತ್ತಿರುವುದನ್ನು ಕಂಡು ಆತನು ಪೇತ್ರನಿಗೆ, “ನೀವು ನನ್ನೊಂದಿಗೆ ಒಂದು ಗಂಟೆಯ ಕಾಲ ಎಚ್ಚರವಾಗಿರಲು ಸಾಧ್ಯವಿಲ್ಲವೇ? 41 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಮನಸ್ಸೇನೋ ಸಿದ್ಧವಾಗಿದೆ ಆದರೆ ದೇಹಕ್ಕೆ ಬಲಸಾಲದು” ಎಂದು ಹೇಳಿದನು.

42 ಯೇಸು ಎರಡನೆಯ ಸಾರಿ ಸ್ಪಲ್ಪದೂರ ಹೋಗಿ ಪ್ರಾರ್ಥಿಸುತ್ತಾ, “ನನ್ನ ತಂದೆಯೇ, ಸಂಕಟದ ಈ ಪಾತ್ರೆಯನ್ನು ನನ್ನಿಂದ ತೆಗೆದುಕೊಳ್ಳಲು ಸಾಧ್ಯವಿಲ್ಲದಿದ್ದರೆ ಮತ್ತು ನಾನು ಅದನ್ನು ನೆರವೇರಿಸಲೇಬೇಕಿದ್ದರೆ, ನಿನ್ನ ಇಷ್ಟದಂತೆಯೇ ಆಗಲಿ” ಎಂದನು.

43 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಅವರು ಮತ್ತೆ ನಿದ್ರೆ ಮಾಡುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. 44 ಆದ್ದರಿಂದ ಯೇಸು ಮತ್ತೊಮ್ಮೆ ಅವರನ್ನು ಬಿಟ್ಟು ಸ್ವಲ್ಪ ದೂರ ಹೋಗಿ ಮೂರನೆಯ ಸಾರಿ ಅದೇ ರೀತಿ ಪ್ರಾರ್ಥಿಸಿದನು.

45 ಬಳಿಕ ಯೇಸು ತನ್ನ ಶಿಷ್ಯರ ಬಳಿಗೆ ಹಿಂದಿರುಗಿ, “ನೀವು ಇನ್ನೂ ನಿದ್ರೆ ಮಾಡುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಪಾಪಿಷ್ಠರಾದ ಜನರಿಗೆ ಮನುಷ್ಯಕುಮಾರನನ್ನು ಒಪ್ಪಿಸುವ ಕಾಲ ಸಮೀಪಿಸಿದೆ. 46 ನಾವು ಹೋಗಬೇಕು. ಎದ್ದೇಳಿ! ನನ್ನನ್ನು ವೈರಿಗಳಿಗೆ ಒಪ್ಪಿಸುವ ಮನುಷ್ಯನು ಇಲ್ಲಿಯೇ ಬರುತ್ತಿದ್ದಾನೆ” ಎಂದು ಹೇಳಿದನು.

ಯೇಸುವಿನ ಬಂಧನ

(ಮಾರ್ಕ 14:43-50; ಲೂಕ 22:47-53; ಯೋಹಾನ 18:3-12)

47 ಯೇಸು ಮಾತಾಡುತ್ತಿರವಷ್ಟರಲ್ಲೇ ಯೂದನು ಅಲ್ಲಿಗೆ ಬಂದನು. ಯೂದನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು. ಮಹಾಯಾಜಕರು ಮತ್ತು ಹಿರಿಯ ನಾಯಕರು ಕಳುಹಿಸಿದ್ದ ಅನೇಕ ಜನರು ಅವನೊಂದಿಗಿದ್ದರು. ಅವರು ಕತ್ತಿ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡಿದ್ದರು. 48 ಯೇಸು ಯಾರೆಂಬುದನ್ನು ತಿಳಿದುಕೊಳ್ಳಲು ಯೂದನು ಅವರಿಗೆ ಒಂದು ಗುರುತು ಹೇಳಿಕೊಟ್ಟಿದ್ದನು. 49 ಅಂತೆಯೇ ಯೂದನು ಯೇಸುವಿನ ಬಳಿಗೆ ಹೋಗಿ, “ಗುರುವೇ, ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.

50 ಆಗ ಯೇಸು, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸ ಇದೆಯೋ?” ಎಂದನು.

ಕೂಡಲೇ ಆ ಜನರು ಬಂದು ಯೇಸುವನ್ನು ಹಿಡಿದು, ಬಂಧಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International