New Testament in a Year
29 “ಆ ದಿನಗಳ ಸಂಕಟವು ತೀರಿದ ಕೂಡಲೇ,
‘ಸೂರ್ಯನು ಕತ್ತಲಾಗುವನು.
ಚಂದ್ರನು ಕಾಂತಿಹೀನನಾಗುವನು.
ನಕ್ಷತ್ರಗಳು ಆಕಾಶದಿಂದ ಕಳಚಿಬೀಳುವವು.
ಆಕಾಶಮಂಡಲವು ಕಂಪಿಸುವುದು.’(A)
30 “ಆಗ ಮನುಷ್ಯಕುಮಾರನ ಆಗಮನದ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಲೋಕದ ಜನರೆಲ್ಲಾ ಗೋಳಾಡುವರು. ಆಕಾಶದಲ್ಲಿ ಮೇಘಗಳ ಮೇಲೆ ಆತನು ಬರುವುದನ್ನು ಜನರೆಲ್ಲರೂ ನೋಡುವರು. ಆತನು ಶಕ್ತಿಸಾಮರ್ಥ್ಯದಿಂದಲೂ ಮಹಿಮೆಯಿಂದಲೂ ಬರುವನು. 31 ಮಹಾಶಬ್ದದ ತುತ್ತೂರಿಯ ಘೋಷಣೆಯೊಡನೆ ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸುವನು. ಆತನು ಆರಿಸಿಕೊಂಡವರನ್ನು ದೇವದೂತರು ಭೂಲೋಕದ ಎಲ್ಲಾ ಕಡೆಗಳಿಂದಲೂ ಒಟ್ಟುಗೂಡಿಸುವರು.
32 “ಅಂಜೂರದ ಮರವು ನಮಗೆ ಒಂದು ಪಾಠವನ್ನು ಕಲಿಸುತ್ತದೆ. ಅಂಜೂರದ ಮರದ ಕೊಂಬೆಗಳು ಹಸುರಾಗಿ ಎಳೆಯದಾಗಿದ್ದು ಹೊಸ ಎಲೆಗಳು ಬೆಳೆಯುವುದಕ್ಕೆ ಪ್ರಾರಂಭಿಸಿದಾಗ, ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ. 33 ನಾನು ನಿಮಗೆ ಹೇಳಿದ ಈ ಸಂಗತಿಗಳಿಗೂ ಅದು ಅನ್ವಯಿಸುತ್ತದೆ. ಈ ಸಂಗತಿಗಳೆಲ್ಲಾ ಸಂಭವಿಸುತ್ತಿರುವುದನ್ನು ನೀವು ನೋಡುವಾಗ ಆ ಸಮಯ ಹತ್ತಿರವಾಯಿತೆಂದೂ ಬರುವುದಕ್ಕೆ ಸಿದ್ಧವಾಗಿದೆಯೆಂದೂ ತಿಳಿದುಕೊಳ್ಳುವಿರಿ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. 34 ಇಂದಿನ ಜನರು ಇನ್ನೂ ಜೀವಿಸಿರುವಾಗಲೇ ಈ ಎಲ್ಲಾ ಸಂಗತಿಗಳು ಸಂಭವಿಸುತ್ತವೆ! 35 ಭೂಮಿಯೂ ಆಕಾಶವೂ ನಾಶವಾಗುತ್ತವೆ, ಆದರೆ ನಾನು ಹೇಳಿದ ಮಾತುಗಳು ನಾಶವಾಗುವುದೇ ಇಲ್ಲ!
ಆ ಸಮಯ ದೇವರೊಬ್ಬನಿಗೆ ಗೊತ್ತಿದೆ
(ಮಾರ್ಕ 13:32,35; ಲೂಕ 17:26-30,34-36)
36 “ಆ ದಿನವು ಇಲ್ಲವೆ ಆ ಸಮಯವು ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿಯದು. ಮಗನಿಗೂ ಮತ್ತು ಪರಲೋಕದಲ್ಲಿರುವ ದೇವದೂತರಿಗೂ ಆ ದಿನವು ಅಥವಾ ಆ ಸಮಯವು ಯಾವಾಗ ಬರುತ್ತದೆ ಎಂಬುದು ತಿಳಿಯದು. ತಂದೆಗೆ ಮಾತ್ರ ಗೊತ್ತಿದೆ.
37 “ನೋಹನ ಕಾಲದಲ್ಲಿ ಸಂಭವಿಸಿದಂತೆಯೇ ಮನುಷ್ಯಕುಮಾರನು ಬರುವಾಗಲೂ ಸಂಭವಿಸುತ್ತದೆ. 38 ಜಲಪ್ರಳಯಕ್ಕಿಂತ ಮುಂಚೆ ಜನರು ತಿನ್ನುತ್ತಿದ್ದರು, ಕುಡಿಯುತ್ತಿದ್ದರು, ಮದುವೆಯಾಗುತ್ತಿದ್ದರು ಮತ್ತು ತಮ್ಮ ಮಕ್ಕಳಿಗೂ ಮದುವೆ ಮಾಡಿಕೊಡುತ್ತಾ ಇದ್ದರು. ನೋಹನು ನಾವೆಯೊಳಗೆ ಹೋಗುವ ತನಕ ಜನರು ಅವುಗಳನ್ನು ಮಾಡುತ್ತಲೇ ಇದ್ದರು. 39 ಏನು ಸಂಭವಿಸುತ್ತಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಆಗ ಜಲಪ್ರಳಯವು ಬಂದು ಆ ಜನರನ್ನೆಲ್ಲಾ ನಾಶಮಾಡಿತು.
“ಮನುಷ್ಯಕುಮಾರನು ಬರುವಾಗಲೂ ಅದೇ ರೀತಿಯಾಗುವುದು. 40 ಹೊಲದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರೆ ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು. 41 ಇಬ್ಬರು ಹೆಂಗಸರು ಬೀಸುವ ಕಲ್ಲಿನಲ್ಲಿ ಧಾನ್ಯ ಬೀಸುತ್ತಿದ್ದರೆ ಅವರಲ್ಲಿ ಒಬ್ಬಳನ್ನು ತೆಗೆದುಕೊಳ್ಳಲಾಗುವುದು ಮತ್ತೊಬ್ಬಳನ್ನು ಬಿಡಲಾಗುವುದು.
42 “ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ನಿಮ್ಮ ಪ್ರಭು ಬರುವ ದಿನ ನಿಮಗೆ ತಿಳಿಯದು. 43 ಇದನ್ನು ಜ್ಞಾಪಿಸಿಕೊಳ್ಳಿ. ಕಳ್ಳನು ಯಾವಾಗ ಬರುತ್ತಾನೆಂದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ಕಳ್ಳನನ್ನು ಮನೆಯೊಳಗೆ ಬರಗೊಡಿಸುತ್ತಿರಲಿಲ್ಲ. 44 ಆದ್ದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಸಮಯದಲ್ಲಿ ಮನುಷ್ಯಕುಮಾರನು ಬರುತ್ತಾನೆ.
ಒಳ್ಳೆಯ ಸೇವಕ ಮತ್ತು ದುಷ್ಟ ಸೇವಕ
(ಮಾರ್ಕ 13:33-37; ಲೂಕ 12:41-48)
45 “ವಿವೇಕಿಯೂ ನಂಬಿಗಸ್ತನೂ ಆದ ಸೇವಕನು ಯಾರು? ಇತರ ಸೇವಕರಿಗೆ ಆಹಾರವನ್ನು ತಕ್ಕ ಸಮಯದಲ್ಲಿ ಕೊಡುವುದಕ್ಕಾಗಿ ಯಜಮಾನನು ಯಾವ ಸೇವಕನ ಮೇಲೆ ಭರವಸೆಯಿಡುತ್ತಾನೋ ಅವನೇ. 46 ತನಗೆ ಕೊಟ್ಟ ಕೆಲಸವನ್ನು ಮಾಡುತ್ತಿರುವಾಗ ಯಜಮಾನನು ಬಂದರೆ ಆ ಸೇವಕನಿಗೆ ಬಹಳ ಸಂತೋಷವಾಗುತ್ತದೆ. 47 ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ಆ ಯಜಮಾನನು ತನ್ನ ಆಸ್ತಿಗೆಲ್ಲಾ ಆ ಸೇವಕನನ್ನು ಮೇಲ್ವಿಚಾರಕನನ್ನಾಗಿ ನೇಮಿಸುವನು.
48 “ಆದರೆ ಸೇವಕನು ದುಷ್ಟನಾಗಿದ್ದರೆ ಮತ್ತು ತನ್ನ ಯಜಮಾನನು ಬೇಗನೆ ಹಿಂತಿರುಗಿ ಬರುವುದಿಲ್ಲ ಎಂದು ನೆನಸಿಕೊಂಡಿದ್ದರೆ ಅವನಿಗೆ ಏನು ಸಂಭವಿಸುತ್ತದೆ? 49 ಆ ಸೇವಕನು ಇತರ ಸೇವಕರನ್ನು ಹೊಡೆಯುತ್ತಾ ತನ್ನಂಥ ಜನರೊಂದಿಗೆ ಸೇರಿಕೊಂಡು ತಿನ್ನುತ್ತಾ ಕುಡಿಯುತ್ತಾ ಇರುವನು. 50 ಹೀಗೆ ಅವನಿನ್ನೂ ಸಿದ್ಧನಾಗಿಲ್ಲದಿರುವಾಗ ಯಜಮಾನನು ಅನಿರೀಕ್ಷಿತವಾಗಿ ಬಂದು 51 ಅವನನ್ನು ಶಿಕ್ಷಿಸಿ ಕಪಟಿಗಳಿರುವ ಸ್ಥಳಕ್ಕೆ ನೂಕಿಸುವನು. ಆ ಸ್ಥಳದಲ್ಲಿ ಜನರು ಬಾಧೆಯಿಂದ ಗೋಳಾಡುತ್ತಾ ತಮ್ಮ ಹಲ್ಲುಗಳನ್ನು ಕಡಿಯುತ್ತಾ ಇರುವರು.
Kannada Holy Bible: Easy-to-Read Version. All rights reserved. © 1997 Bible League International