Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 22:1-22

ಊಟಕ್ಕೆ ಆಹ್ವಾನಿಸಲ್ಪಟ್ಟಿದ್ದ ಜನರ ಕುರಿತಾದ ಸಾಮ್ಯ

(ಲೂಕ 14:15-24)

22 ಯೇಸು ಬೇರೆ ಕೆಲವು ವಿಷಯಗಳನ್ನು ಸಾಮ್ಯಗಳ ಮೂಲಕವಾಗಿ ಜನರಿಗೆ ತಿಳಿಸಿದನು: “ಪರಲೋಕರಾಜ್ಯವು ತನ್ನ ಮಗನ ಮದುವೆಯನ್ನು ಸಿದ್ಧಪಡಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ. ಆ ರಾಜನು ಕೆಲವು ಜನರನ್ನು ಔತಣಕ್ಕೆ ಆಹ್ವಾನಿಸಿದನು. ಅಡಿಗೆ ಸಿದ್ಧವಾದ ಬಳಿಕ ರಾಜನು ತನ್ನ ಸೇವಕರ ಮೂಲಕ ಆ ಜನರಿಗೆ ತಿಳಿಸಿದನು. ಆದರೆ ಅವರು ಔತಣಕ್ಕೆ ಬರಲಿಲ್ಲ.

“ಆಮೇಲೆ ರಾಜನು ಇನ್ನೂ ಕೆಲವು ಸೇವಕರನ್ನು ಕರೆದು, ‘ಈ ಜನರನ್ನು ನಾನು ಆಗಲೇ ಆಹ್ವಾನಿಸಿದ್ದೇನೆ. ಆದ್ದರಿಂದ ಈಗ ಔತಣವು ಸಿದ್ಧವಾಗಿದೆ. ಅಡಿಗೆಗಾಗಿ ಕೊಬ್ಬಿದ ಎತ್ತುಗಳನ್ನು ಮತ್ತು ಕರುಗಳನ್ನು ಕೊಯ್ಸಿದ್ದೇನೆ. ಎಲ್ಲವೂ ಸಿದ್ಧವಾಗಿದೆ. ಮದುವೆ ಔತಣಕ್ಕೆ ಬನ್ನಿ ಎಂದು ಅವರಿಗೆ ತಿಳಿಸಿ’ ಎಂದು ಹೇಳಿ ಕಳುಹಿಸಿದನು.

“ಅಂತೆಯೇ ಸೇವಕರು ಹೋಗಿ ಆ ಜನರಿಗೆ ತಿಳಿಸಿದರು. ಆದರೆ ಅವರು ಸೇವಕರ ಮಾತಿಗೆ ಕಿವಿಗೊಡಲಿಲ್ಲ. ಒಬ್ಬನು ತನ್ನ ಹೊಲದಲ್ಲಿ ಕೆಲಸ ಮಾಡಲು ಹೊರಟುಹೋದನು. ಬೇರೊಬ್ಬನು ತನ್ನ ವ್ಯಾಪಾರಕ್ಕಾಗಿ ಹೊರಟುಹೋದನು. ಇನ್ನು ಕೆಲವರು ಆ ಸೇವಕರನ್ನು ಹಿಡಿದು, ಹೊಡೆದು ಕೊಂದುಹಾಕಿದರು. ಆಗ ರಾಜನು ಬಹು ಕೋಪಗೊಂಡು ತನ್ನ ಸೈನ್ಯವನ್ನು ಕಳುಹಿಸಿ ಆ ಕೊಲೆಗಾರರನ್ನು ಕೊಲ್ಲಿಸಿದನು ಮತ್ತು ಅವರ ಪಟ್ಟಣವನ್ನು ಸುಟ್ಟುಹಾಕಿಸಿದನು.

“ಬಳಿಕ ರಾಜನು ತನ್ನ ಸೇವಕರಿಗೆ, ‘ಮದುವೆ ಊಟ ಸಿದ್ಧವಾಗಿದೆ. ನಾನು ಆಹ್ವಾನಿಸಿದ್ದ ಜನರು ಊಟಕ್ಕೆ ಬರುವಷ್ಟು ಒಳ್ಳೆಯವರಾಗಿರಲಿಲ್ಲ. ಆದ್ದರಿಂದ ಬೀದಿಯ ಮೂಲೆಮೂಲೆಗಳಿಗೆ ಹೋಗಿ ನೀವು ಕಂಡ ಜನರನ್ನೆಲ್ಲ ಔತಣಕ್ಕೆ ಆಹ್ವಾನಿಸಿರಿ’ ಎಂದನು. 10 ಅಂತೆಯೇ ಸೇವಕರು ಬೀದಿಬೀದಿಗಳಿಗೆ ಹೋಗಿ ತಾವು ಕಂಡ ಜನರನ್ನೆಲ್ಲಾ ಒಳ್ಳೆಯವರು, ಕೆಟ್ಟವರು ಎನ್ನದೆ ಒಟ್ಟುಗೂಡಿಸಿ ಊಟ ಸಿದ್ಧವಾಗಿದ್ದ ಸ್ಥಳಕ್ಕೆ ಕರೆತಂದರು. ಆ ಸ್ಥಳವು ಜನರಿಂದ ತುಂಬಿಹೋಯಿತು.

11 “ಆಗ ರಾಜನು ಜನರನ್ನೆಲ್ಲ ನೋಡಲು ಒಳಗೆ ಬಂದನು. ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲದ ಒಬ್ಬ ಮನುಷ್ಯನನ್ನು ರಾಜನು ಕಂಡು, 12 ‘ಸ್ನೇಹಿತನೇ, ನೀನು ಒಳಗೆ ಹೇಗೆ ಬಂದೆ? ನೀನು ಮದುವೆಗೆ ಯೋಗ್ಯವಾದ ಬಟ್ಟೆಯನ್ನು ಧರಿಸಿಕೊಂಡಿಲ್ಲವಲ್ಲಾ’ ಅಂದನು. ಆದರೆ ಅವನು ಉತ್ತರ ನೀಡಲಿಲ್ಲ. 13 ಆಗ ರಾಜನು ಕೆಲವು ಸೇವಕರಿಗೆ, ‘ಇವನ ಕೈಕಾಲು ಕಟ್ಟಿ ಹೊರಗೆ ಕತ್ತಲೆಯೊಳಕ್ಕೆ ಎಸೆಯಿರಿ’ ಅಂದನು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವರು.

14 “ಹೌದು, ಆಹ್ವಾನಿಸಲ್ಪಟ್ಟವರು ಅನೇಕರಾದರೂ ಆರಿಸಲ್ಪಟ್ಟವರು ಕೆಲವರು ಮಾತ್ರ.”

ಯೇಸುವನ್ನು ವಂಚಿಸಲು ಯೆಹೂದ್ಯ ನಾಯಕರ ಪ್ರಯತ್ನ

(ಮಾರ್ಕ 12:13-17; ಲೂಕ 20:20-26)

15 ಆಗ ಫರಿಸಾಯರು, ಅಲ್ಲಿಂದ ಹೊರಟುಹೋಗಿ ಯೇಸುವಿನ ಮಾತಿನಲ್ಲಿ ತಪ್ಪು ಕಂಡುಹಿಡಿಯಲು ಉಪಾಯಗಳನ್ನು ಮಾಡಿಕೊಂಡರು. 16 ಫರಿಸಾಯರು ಯೇಸುವನ್ನು ವಂಚಿಸುವುದಕ್ಕೆ ಕೆಲವರನ್ನು ಕಳುಹಿಸಿದರು. ಅವರಲ್ಲಿ ಕೆಲವರು ಫರಿಸಾಯರ ಹಿಂಬಾಲಕರಾಗಿದ್ದರು. ಇನ್ನು ಕೆಲವರು ಯೆಹೂದ್ಯರ ರಾಜಕೀಯ ಪಂಗಡಕ್ಕೆ ಸೇರಿದವರಾಗಿದ್ದರು. ಈ ಜನರು, “ಬೋಧಕನೇ, ನೀನು ಯಥಾರ್ಥವಂತನೆಂದು ನಾವು ಬಲ್ಲೆವು. ನೀನು ದೇವರ ಮಾರ್ಗದ ಕುರಿತು ಸತ್ಯವನ್ನೇ ಬೋಧಿಸುವೆ ಎಂಬುದು ನಮಗೆ ಗೊತ್ತಿದೆ. ಬೇರೆಯವರು ನಿನ್ನ ವಿಷಯವಾಗಿ ಏನೇ ಯೋಚಿಸಿದರೂ ನೀನು ಹೆದರುವುದಿಲ್ಲ. ನೀನು ಮುಖದಾಕ್ಷಿಣ್ಯ ಮಾಡುವುದಿಲ್ಲ. 17 ಆದ್ದರಿಂದ ನಿನ್ನ ಅಭಿಪ್ರಾಯವನ್ನು ತಿಳಿಸು. ಸೀಸರನಿಗೆ ತೆರಿಗೆ ಕೊಡುವುದು ಸರಿಯೋ ಅಥವಾ ತಪ್ಪೋ?” ಎಂದು ಕೇಳಿದರು.

18 ಈ ಜನರ ಕುತಂತ್ರವು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “ನೀವು ಕಪಟಿಗಳು! ನನ್ನನ್ನು ತಪ್ಪಿನಲ್ಲಿ ಸಿಕ್ಕಿಸಲು ಏಕೆ ಪ್ರಯತ್ನಿಸುತ್ತೀರಿ? 19 ತೆರಿಗೆಗಾಗಿ ಕೊಡುವ ಒಂದು ನಾಣ್ಯವನ್ನು ನನಗೆ ತೋರಿಸಿರಿ” ಎಂದನು. ಜನರು ಒಂದು ಬೆಳ್ಳಿಯ ನಾಣ್ಯವನ್ನು ಆತನಿಗೆ ತೋರಿಸಿದರು. 20 ಆಗ ಆತನು, “ನಾಣ್ಯದ ಮೇಲೆ ಯಾರ ಮುಖಚಿತ್ರವಿದೆ ಮತ್ತು ಯಾರ ಹೆಸರಿದೆ?” ಎಂದು ಕೇಳಿದನು.

21 ಜನರು, “ಅದು ಸೀಸರನ ಮುಖಚಿತ್ರ ಮತ್ತು ಹೆಸರು” ಎಂದು ಉತ್ತರಕೊಟ್ಟರು.

ಆಗ ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಅಂದನು.

22 ಯೇಸು ಹೇಳಿದ್ದನ್ನು ಕೇಳಿದ ಆ ಜನರು ಆಶ್ಚರ್ಯಚಕಿತರಾಗಿ ಅಲ್ಲಿಂದ ಹೊರಟುಹೋದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International