Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 20:1-16

ಕೂಲಿಯಾಳುಗಳ ಕುರಿತು ಯೇಸು ಹೇಳಿದ ಸಾಮ್ಯ

20 “ಪರಲೋಕರಾಜ್ಯವು ಒಬ್ಬ ದ್ರಾಕ್ಷಿತೋಟದ ಯಜಮಾನನಿಗೆ ಹೋಲಿಕೆಯಾಗಿದೆ. ಒಂದು ಮುಂಜಾನೆ ಅವನು ತನ್ನ ತೋಟದಲ್ಲಿ ಕೆಲಸ ಮಾಡಲು ಬೇರೆ ಕೂಲಿಯಾಳುಗಳನ್ನು ಕರೆಯುವುದಕ್ಕೆ ಹೊರಟನು. ಒಂದು ದಿನಕ್ಕೆ ಒಬ್ಬ ಕೆಲಸಗಾರನಿಗೆ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಹೇಳಿ ಆ ಕೆಲಸಗಾರರನ್ನು ಅವನು ತೋಟಕ್ಕೆ ಕಳುಹಿಸಿದನು.

“ಸುಮಾರು ಒಂಭತ್ತು ಗಂಟೆಗೆ ಯಜಮಾನನು ಪೇಟೆಯ ಸ್ಥಳಕ್ಕೆ ಹೋದನು. ಏನೂ ಕೆಲಸವಿಲ್ಲದೆ ಸುಮ್ಮನೆ ನಿಂತಿದ್ದ ಕೆಲವರನ್ನು ಅವನು ಅಲ್ಲಿ ಕಂಡನು. ಅವನು ಅವರಿಗೆ, ‘ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡುವುದಾದರೆ ನಿಮ್ಮ ಕೆಲಸಕ್ಕೆ ಯೋಗ್ಯವಾದ ಕೂಲಿಯನ್ನು ಕೊಡುತ್ತೇನೆ’ ಎಂದು ಹೇಳಿದನು. ಆ ಕೂಲಿಯಾಳುಗಳು ಕೆಲಸ ಮಾಡಲು ಅವನ ತೋಟಕ್ಕೆ ಹೋದರು.

“ಆ ಯಜಮಾನನು ಅದೇ ರೀತಿ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಪೇಟೆಗೆ ಹೋದನು. ಆ ಎರಡು ಸಲವೂ ತನ್ನ ಹೊಲದಲ್ಲಿ ಕೆಲಸ ಮಾಡಲು ಬೇರೆ ಕೆಲವು ಕೂಲಿಯವರನ್ನು ಅವನು ಗೊತ್ತುಮಾಡಿದನು. ಸುಮಾರು ಐದು ಗಂಟೆಗೆ ಆ ಯಜಮಾನನು ಮತ್ತೊಮ್ಮೆ ಪೇಟೆಗೆ ಹೋದನು. ಅಲ್ಲಿ ನಿಂತಿದ್ದ ಕೆಲವರನ್ನು ಅವನು ಕಂಡು, ‘ನೀವು ದಿನವಿಡೀ ಕೆಲಸ ಮಾಡದೆ ಸುಮ್ಮನೆ ಏಕೆ ನಿಂತಿದ್ದೀರಿ?’ ಎಂದು ಕೇಳಿದನು.

“ಅದಕ್ಕೆ ಅವರು, ‘ನಮಗೆ ಯಾರೂ ಕೆಲಸ ಕೊಡಲಿಲ್ಲ’ ಎಂದು ಉತ್ತರಕೊಟ್ಟರು.

“ಆ ಯಜಮಾನನು, ‘ಹಾಗಾದರೆ ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡಿರಿ’ ಎಂದು ಹೇಳಿದನು.

“ಅಂದು ಸಾಯಂಕಾಲ, ತೋಟದ ಯಜಮಾನನು ಕೆಲಸಗಾರರನ್ನು ನೋಡಿಕೊಳ್ಳುವವನಿಗೆ, ‘ಕೂಲಿಯಾಳುಗಳನ್ನು ಕರೆದು ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದನು.

“ಐದು ಗಂಟೆಯ ಸಮಯದಲ್ಲಿ ಗೊತ್ತುಮಾಡಲ್ಪಟ್ಟ ಕೂಲಿಯಾಳುಗಳು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಪ್ರತಿಯೊಬ್ಬ ಆಳಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 10 ನಂತರ ಮೊಟ್ಟಮೊದಲು ಗೊತ್ತುಮಾಡಲ್ಪಟ್ಟಿದ್ದವರು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಬೇರೆ ಆಳುಗಳಿಗಿಂತ ತಮಗೆ ಹೆಚ್ಚು ಸಿಕ್ಕುವುದೆಂದು ಅವರು ಆಲೋಚಿಸಿಕೊಂಡಿದ್ದರು. ಆದರೆ ಅವರಿಗೂ ಸಹ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 11 ಅವರು ತಮ್ಮ ಬೆಳ್ಳಿನಾಣ್ಯವನ್ನು ತೆಗೆದುಕೊಂಡಾಗ ತೋಟದ ಯಜಮಾನನ ಬಗ್ಗೆ ಗೊಣಗುಟ್ಟುತ್ತಾ, 12 ‘ಕೊನೆಗೆ ಗೊತ್ತುಮಾಡಲ್ಪಟ್ಟ ಆಳುಗಳು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ಆದರೆ ಇವನು ಅವರಿಗೂ ನಮ್ಮಷ್ಟೇ ಕೊಟ್ಟಿದ್ದಾನೆ. ನಾವಾದರೋ ದಿನವೆಲ್ಲಾ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ’ ಎಂದರು.

13 “ತೋಟದ ಯಜಮಾನನು ಆ ಆಳುಗಳಲ್ಲಿ ಒಬ್ಬನಿಗೆ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ಒಂದು ಬೆಳ್ಳಿನಾಣ್ಯಕ್ಕಾಗಿ ಕೆಲಸ ಮಾಡಲು ಒಪ್ಪಿಕೊಂಡೆಯಲ್ಲವೇ? 14 ಆದ್ದರಿಂದ ನೀನು ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು. ನಾನು ನಿನಗೆ ಎಷ್ಟು ಕೂಲಿ ಕೊಟ್ಟೆನೋ ಅಷ್ಟೇ ಕೂಲಿಯನ್ನು ಕೊನೆಗೆ ಗೊತ್ತುಮಾಡಲ್ಪಟ್ಟವನಿಗೂ ಕೊಡಲು ಇಷ್ಟಪಡುತ್ತೇನೆ. 15 ನನ್ನ ಸ್ವಂತ ಹಣವನ್ನು ನನಗೆ ಇಷ್ಟಬಂದ ಹಾಗೆ ನಾನು ಕೊಡಬಹುದಲ್ಲವೇ? ನಾನು ಅವರಿಗೆ ಒಳ್ಳೆಯದನ್ನು ಮಾಡಿದ್ದಕ್ಕಾಗಿ ನೀನು ಹೊಟ್ಟೆಕಿಚ್ಚುಪಡುವೆಯಾ?’ ಎಂದನು.

16 “ಇದೇಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International