Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 18:21-35

ಕ್ಷಮಾಪಣೆಯನ್ನು ಕುರಿತ ಸಾಮ್ಯ

21 ಆಗ ಪೇತ್ರನು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ಸಹೋದರನು ನನಗೆ ಯಾವುದಾದರೂ ತಪ್ಪು ಮಾಡುತ್ತಲೇ ಇದ್ದರೆ ನಾನು ಎಷ್ಟು ಸಲ ಅವನನ್ನು ಕ್ಷಮಿಸಬೇಕು? ನಾನು ಅವನನ್ನು ಏಳು ಸಲ ಕ್ಷಮಿಸಬೇಕೋ?” ಎಂದು ಕೇಳಿದನು.

22 ಯೇಸು, “ಏಳು ಸಲಕ್ಕಿಂತಲೂ ಹೆಚ್ಚಾಗಿ ಕ್ಷಮಿಸಬೇಕು. ಅವನು ನಿನಗೆ ಎಪ್ಪತ್ತೇಳು ಸಲ ತಪ್ಪು ಮಾಡಿದರೂ ನೀನು ಅವನನ್ನು ಕ್ಷಮಿಸುತ್ತಲೇ ಇರಬೇಕೆಂದು ನಾನು ನಿನಗೆ ಹೇಳುತ್ತೇನೆ” ಎಂದನು.

23 “ಪರಲೋಕರಾಜ್ಯವು ತನ್ನ ಸೇವಕರು ತನಗೆ ಕೊಡಬೇಕಿದ್ದ ಸಾಲದ ಹಣವನ್ನು ವಸೂಲಿ ಮಾಡಲು ತೀರ್ಮಾನಿಸಿದ ಒಬ್ಬ ರಾಜನಿಗೆ ಹೋಲಿಕೆಯಾಗಿದೆ. 24 ರಾಜನು ತನ್ನ ಹಣವನ್ನು ವಸೂಲಿ ಮಾಡುವುದಕ್ಕೆ ಪ್ರಾರಂಭಿಸಿದನು. ಒಬ್ಬ ಸೇವಕನು ಹತ್ತು ಸಾವಿರ ಬೆಳ್ಳಿಯ ನಾಣ್ಯಗಳನ್ನು ರಾಜನಿಗೆ ಸಾಲ ಕೊಡಬೇಕಿತ್ತು. 25 ಆ ಸೇವಕನು ತನ್ನ ಯಜಮಾನನಾದ ರಾಜನಿಗೆ ಹಣವನ್ನು ಕೊಡಲು ಸಮರ್ಥನಾಗಿರಲಿಲ್ಲ. ಆದ್ದರಿಂದ ಆ ಸೇವಕನನ್ನು ಮತ್ತು ಅವನಲ್ಲಿದ್ದ ಪ್ರತಿಯೊಂದನ್ನೂ ಅವನ ಹೆಂಡತಿ ಮತ್ತು ಮಕ್ಕಳ ಸಮೇತವಾಗಿ ಮಾರಿ, ಬಂದ ಹಣವನ್ನೆಲ್ಲಾ ಕೊಡಬೇಕಾದ ಸಾಲಕ್ಕೆ ವಜಾ ಮಾಡಬೇಕೆಂದು ರಾಜನು ಆಜ್ಞಾಪಿಸಿದನು.

26 “ಆಗ ಸೇವಕನು ರಾಜನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆ ತಂದುಕೊಳ್ಳಿ. ನಾನು ನಿಮಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ.’ ಎಂದು ಬೇಡಿಕೊಂಡನು. 27 ರಾಜನು ತನ್ನ ಸೇವಕನ ವಿಷಯದಲ್ಲಿ ದುಃಖಪಟ್ಟು ಅವನು ಕೊಡಬೇಕಾದ ಸಾಲವನ್ನು ಮನ್ನಿಸಿ ಅವನನ್ನು ಬಿಡುಗಡೆ ಮಾಡಿದನು.

28 “ತರುವಾಯ, ಅದೇ ಸೇವಕನು ತನಗೆ ನೂರು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕಾಗಿದ್ದ ಬೇರೊಬ್ಬ ಸೇವಕನನ್ನು ಕಂಡು ಅವನ ಕುತ್ತಿಗೆ ಹಿಡಿದು, ‘ನೀನು ನನಗೆ ಕೊಡಬೇಕಾಗಿರುವ ಹಣವನ್ನು ಕೊಡು’ ಎಂದನು.

29 “ಆ ಸೇವಕನು ಅವನ ಕಾಲಿಗೆ ಬಿದ್ದು, ‘ಸ್ವಲ್ಪ ತಾಳ್ಮೆಯಿಂದಿರು. ನಾನು ನಿನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುತ್ತೇನೆ’ ಎಂದು ಬೇಡಿಕೊಂಡನು.

30 “ಆದರೆ ಮೊದಲನೇ ಸೇವಕನು ತಾಳಿಕೊಳ್ಳಲಿಲ್ಲ. ತನಗೆ ಸಾಲ ಕೊಡಬೇಕಾಗಿದ್ದ ಸೇವಕನ ವಿಷಯದಲ್ಲಿ ನ್ಯಾಯಾಧಿಪತಿಗೆ ದೂರುಕೊಟ್ಟು ಅವನನ್ನು ಸೆರೆಮನೆಗೆ ಹಾಕಿಸಿದನು. ಆ ಸೇವಕನು ಸಾಲ ತೀರಿಸುವವರೆಗೂ ಸೆರೆಮನೆಯಲ್ಲಿ ಇರಬೇಕಾಯಿತು. 31 ಇದನ್ನು ಕಂಡ ಇತರ ಸೇವಕರೆಲ್ಲರೂ ಬಹಳವಾಗಿ ದುಃಖಪಟ್ಟು ನಡೆದ ಸಂಗತಿಯನ್ನೆಲ್ಲಾ ಯಜಮಾನನಿಗೆ ತಿಳಿಸಿದರು.”

32 “ಆಗ ಯಜಮಾನನು ತನ್ನ ಸೇವಕನನ್ನು ಒಳಗೆ ಕರೆದು, ‘ನೀನು ದುಷ್ಟ ಸೇವಕನು. ನೀನು ನನಗೆ ಹೆಚ್ಚು ಹಣ ಕೊಡಬೇಕಾಗಿತ್ತು. ಆದರೆ ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲ ನಾನು ಮನ್ನಿಸಿಬಿಟ್ಟೆ. 33 ಹೀಗಿರಲು ನಾನು ನಿನಗೆ ಕರುಣೆ ತೋರಿದಂತೆ ನಿನ್ನ ಜೊತೆ ಸೇವಕನಿಗೂ ನೀನು ಕರುಣೆ ತೋರಿಸಬೇಕಿತ್ತು’ ಎಂದು ಹೇಳಿ 34 ಬಹುಕೋಪಗೊಂಡು ಅವನನ್ನು ಶಿಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸಿದನು. ಆ ಸೇವಕನು ತನ್ನ ಸಾಲವನ್ನೆಲ್ಲಾ ತೀರಿಸುವ ತನಕ ಸೆರೆಮನೆಯಲ್ಲಿ ಇರಬೇಕಾಯಿತು.

35 “ಪರಲೋಕದ ನನ್ನ ತಂದೆಯು ನಿಮಗೆ ಮಾಡುವಂತೆಯೇ ಈ ರಾಜನು ಮಾಡಿದನು. ನೀವು ನಿಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ನಿಜವಾಗಿಯೂ ಕ್ಷಮಿಸಬೇಕು. ಇಲ್ಲದಿದ್ದರೆ ಪರಲೋಕದ ನನ್ನ ತಂದೆಯೂ ನಿಮ್ಮನ್ನು ಕ್ಷಮಿಸುವುದಿಲ್ಲ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International