New Testament in a Year
ಅನೇಕ ಸಾಮ್ಯಗಳ ಮೂಲಕ ಯೇಸುವಿನ ಉಪದೇಶ
(ಮಾರ್ಕ 4:30-34; ಲೂಕ 13:18-21)
31 ನಂತರ ಯೇಸು ಜನರಿಗೆ ಮತ್ತೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯ ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು. 32 ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣ ಬೀಜವಾಗಿದೆ. ಆದರೆ ಅದು ಬೆಳೆದಾಗ ತೋಟದ ಗಿಡಗಳಿಗಿಂತಲೂ ದೊಡ್ಡದಾಗಿರುವುದು. ಅದು ಮರವಾದಾಗ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಮಾಡಿಕೊಳ್ಳುವಷ್ಟು ದೊಡ್ಡದಾಗಿರುತ್ತದೆ.”
33 ಬಳಿಕ ಯೇಸು ಜನರಿಗೆ ಇನ್ನೊಂದು ಸಾಮ್ಯವನ್ನು ಹೇಳಿದನು: “ಪರಲೋಕರಾಜ್ಯವು ಒಬ್ಬ ಸ್ತ್ರೀ ರೊಟ್ಟಿ ಮಾಡುವುದಕ್ಕೆ ಒಂದು ದೊಡ್ಡ ಬೋಗುಣಿಯ ಹಿಟ್ಟಿಗೆ ಬೆರೆಸಿದ ಹುಳಿಗೆ ಹೋಲಿಕೆಯಾಗಿದೆ. ಆ ಹುಳಿಯು ನಾದಿದ ಹಿಟ್ಟನ್ನೆಲ್ಲಾ ಉಬ್ಬಿಸಿತು.”
34 ಯೇಸು ಇವುಗಳನ್ನೆಲ್ಲ ಸಾಮ್ಯಗಳ ಮೂಲಕ ಹೇಳಿದನು. ಆತನು ಉಪದೇಶಿಸುವಾಗಲೆಲ್ಲಾ ಸಾಮ್ಯಗಳನ್ನು ಉಪಯೋಗಿಸುತ್ತಿದ್ದನು. 35 ಪ್ರವಾದಿ ಹೇಳಿದ್ದ ಈ ಮಾತು ಇದರಿಂದ ನೆರವೇರಿತು:
“ನಾನು ಸಾಮ್ಯಗಳ ಮೂಲಕ ಉಪದೇಶಿಸುತ್ತೇನೆ.
ಲೋಕ ಉಂಟಾದಂದಿನಿಂದ ಮರೆಯಾಗಿದ್ದ ಸಂಗತಿಗಳನ್ನು ನಾನು ಹೇಳುತ್ತೇನೆ.”(A)
ಕಠಿಣವಾದ ಸಾಮ್ಯಕ್ಕೆ ಯೇಸುವಿನ ವಿವರಣೆ
36 ನಂತರ ಯೇಸು ಜನರನ್ನು ಬಿಟ್ಟು ಮನೆಯೊಳಕ್ಕೆ ಹೋದನು. ಆತನ ಶಿಷ್ಯರು ಆತನ ಬಳಿಗೆ ಬಂದು, “ಹೊಲದಲ್ಲಿರುವ ಹಣಜಿಯನ್ನು ಕುರಿತಾದ ಸಾಮ್ಯದ ಅರ್ಥವನ್ನು ನಮಗೆ ವಿವರಿಸು” ಅಂದರು.
37 ಯೇಸು ಹೀಗೆ ಉತ್ತರಿಸಿದನು: “ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತುವವನೇ ಮನುಷ್ಯಕುಮಾರನು. 38 ಆ ಹೊಲ ಈ ಲೋಕವಾಗಿದೆ. ಒಳ್ಳೆಯ ಕಾಳುಗಳೇ ಪರಲೋಕರಾಜ್ಯಕ್ಕೆ ಸೇರಿದ ದೇವರ ಮಕ್ಕಳು. ಕೆಡುಕನಿಗೆ ಸಂಬಂಧಪಟ್ಟವರೇ ಹಣಜಿಗಳು. 39 ಹಣಜಿಯನ್ನು ಬಿತ್ತಿದ ವೈರಿಯೇ ಸೈತಾನ. ಸುಗ್ಗಿಕಾಲ ಅಂದರೆ ಲೋಕದ ಅಂತ್ಯಕಾಲ. ಕೂಡಿಸುವ ಕೆಲಸಗಾರರೇ ದೇವದೂತರು.
40 “ಹಣಜಿಗಳನ್ನು ಕಿತ್ತು ಬೆಂಕಿಯಲ್ಲಿ ಸುಟ್ಟುಬಿಡುತ್ತಾರೆ. ಈ ಲೋಕದ ಅಂತ್ಯದಲ್ಲಿ ಆಗುವಂಥದ್ದು ಇದೇ. 41 ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿಸುವನು. ಆತನ ದೂತರು ಪಾಪಕ್ಕೆ ಕಾರಣರಾದ ಮತ್ತು ಕೇಡುಮಾಡುವ ಜನರನ್ನೆಲ್ಲ ಕೂಡಿಸುವರು; ಅವರನ್ನು ಆತನ ರಾಜ್ಯದಿಂದ ಹೊರಗೆ ಹಾಕಿ 42 ಬೆಂಕಿಯ ಸ್ಥಳಕ್ಕೆ ಎಸೆದುಬಿಡುವರು. ಅಲ್ಲಿ ಅವರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು. 43 ಒಳ್ಳೆಯವರಾದರೋ ಸೂರ್ಯನಂತೆ ಪ್ರಕಾಶಿಸುತ್ತಾ ತಮ್ಮ ತಂದೆಯ ರಾಜ್ಯದಲ್ಲಿರುವರು. ನನಗೆ ಕಿವಿಗೊಡುವ ಜನರೇ, ಆಲಿಸಿರಿ!
ನಿಧಿ ಮತ್ತು ಮುತ್ತಿನ ಸಾಮ್ಯಗಳು
44 “ಪರಲೋಕರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಕೆಯಾಗಿದೆ. ಒಂದು ದಿನ ಒಬ್ಬನು ಆ ನಿಧಿಯನ್ನು ಕಂಡು ಬಹಳ ಸಂತೋಷದಿಂದ ಅದನ್ನು ಹೊಲದಲ್ಲಿ ಅಡಗಿಸಿಟ್ಟನು. ಬಳಿಕ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಂಡನು.
45 “ಪರಲೋಕರಾಜ್ಯವು ಶ್ರೇಷ್ಠವಾದ ಮುತ್ತುಗಳನ್ನು ಹುಡುಕುವ ಒಬ್ಬ ವ್ಯಾಪಾರಿಯಂತಿದೆ. 46 ಒಂದು ದಿನ ಆ ವ್ಯಾಪಾರಿಗೆ ಬಹು ಅಮೂಲ್ಯವಾದ ಒಂದು ಮುತ್ತು ಸಿಕ್ಕಿತು. ಆಗ ಅವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಂಡನು.
ಮೀನಿನ ಬಲೆಯ ಕುರಿತಾದ ಸಾಮ್ಯ
47 “ಪರಲೋಕರಾಜ್ಯವು ಸರೋವರದೊಳಗೆ ಬೀಸಿದ ಬಲೆಯಂತಿದೆ. ಆ ಬಲೆಗೆ ಅನೇಕ ಜಾತಿಯ ಮೀನುಗಳು ಸಿಕ್ಕಿಕೊಂಡವು. 48 ಆಗ ಆ ಬಲೆಯು ತುಂಬಿಹೋಯಿತು. ಬೆಸ್ತರು ಆ ಬಲೆಯನ್ನು ದಡಕ್ಕೆ ಎಳೆದುಕೊಂಡು ಬಂದು ಒಳ್ಳೆಯ ಮೀನುಗಳನ್ನೆಲ್ಲಾ ಪುಟ್ಟಿಗಳಲ್ಲಿ ತುಂಬಿಕೊಂಡು ಕೆಟ್ಟ ಮೀನುಗಳನ್ನು ಬಿಸಾಡಿದರು. 49 ಈ ಪ್ರಪಂಚದ ಅಂತ್ಯದಲ್ಲಿ ಅದೇ ರೀತಿ ಆಗುವುದು. ದೇವದೂತರು ಬಂದು ಒಳ್ಳೆಯ ಜನರಿಂದ ಕೆಟ್ಟಜನರನ್ನು ಬೇರೆ ಮಾಡುವರು. 50 ದೇವದೂತರು ಕೆಟ್ಟಜನರನ್ನು ಬೆಂಕಿಯ ಸ್ಥಳದೊಳಕ್ಕೆ ಎಸೆಯುವರು. ಆ ಸ್ಥಳದಲ್ಲಿ ಜನರು ಗೋಳಾಡುತ್ತಾ ನೋವಿನಿಂದ ತಮ್ಮ ಹಲ್ಲುಗಳನ್ನು ಕಡಿಯುವರು.”
51 ಯೇಸು ತನ್ನ ಶಿಷ್ಯರಿಗೆ, “ನೀವು ಈ ವಿಷಯಗಳನ್ನೆಲ್ಲಾ ಅರ್ಥಮಾಡಿಕೊಂಡಿರೋ?” ಎಂದು ಕೇಳಿದನು.
ಅದಕ್ಕೆ ಶಿಷ್ಯರು, “ನಾವು ಅರ್ಥಮಾಡಿಕೊಂಡೆವು” ಎಂದು ಉತ್ತರಕೊಟ್ಟರು.
52 ಆಗ ಯೇಸು ತನ್ನ ಶಿಷ್ಯರಿಗೆ, “ಹೀಗಿರಲಾಗಿ ಪರಲೋಕರಾಜ್ಯದ ವಿಷಯವಾಗಿ ಬೋಧಿಸಿದಂಥ ಪ್ರತಿಯೊಬ್ಬ ಧರ್ಮೋಪದೇಶಕನು ಒಂದು ಮನೆಯ ಯಜಮಾನನಂತಿದ್ದಾನೆ. ಆ ಮನುಷ್ಯನು ಹೊಸ ವಸ್ತುಗಳನ್ನೂ ಹಳೆಯ ವಸ್ತುಗಳನ್ನೂ ಆ ಮನೆಯಲ್ಲಿ ಶೇಖರಿಸಿಕೊಂಡು ಅವುಗಳನ್ನು ಹೊರಗೆ ತರುವನು” ಎಂದನು.
ಸ್ವಂತ ಊರಿಗೆ ಯೇಸುವಿನ ಪ್ರಯಾಣ
(ಮಾರ್ಕ 6:1-6; ಲೂಕ 4:16-30)
53 ಯೇಸು ಈ ಸಾಮ್ಯಗಳ ಮೂಲಕ ಬೋಧಿಸಿದ ನಂತರ ಅಲ್ಲಿಂದ ತನ್ನ ಸ್ವಂತ ಊರಿಗೆ ಹೋದನು. 54 ಯೇಸು ಸಭಾಮಂದಿರದಲ್ಲಿ ಬೋಧಿಸಿದಾಗ ಜನರು ಬೆರಗಾಗಿ, “ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು? 55 ಇವನು ಕೇವಲ ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳು. ಯಾಕೋಬ, ಯೋಸೇಫ, ಸಿಮೋನ ಮತ್ತು ಯೂದ ಇವನ ಸಹೋದರರು. 56 ಅವನ ಸಹೋದರಿಯರೆಲ್ಲರೂ ನಮ್ಮಲ್ಲಿ ಇದ್ದಾರೆ. ಹೀಗಿರಲು ಇವನು ಈ ಜ್ಞಾನವನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡುವ ಈ ಶಕ್ತಿಯನ್ನು ಎಲ್ಲಿಂದ ಪಡೆದುಕೊಂಡನು?” ಎಂದು ಮಾತಾಡಿಕೊಂಡು, 57 ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ.
ಯೇಸು ಅವರಿಗೆ, “ಪ್ರವಾದಿಗೆ ಪರಜನರು ಮರ್ಯಾದೆ ಸಲ್ಲಿಸುತ್ತಾರೆ; ಆದರೆ ಸ್ವಂತ ಊರಿನವರಾಗಲಿ ಸ್ವಂತ ಮನೆಯವರಾಗಲಿ ಮರ್ಯಾದೆ ಕೊಡುವುದಿಲ್ಲ” ಎಂದು ಹೇಳಿದನು. 58 ಆ ಜನರ ಅವಿಶ್ವಾಸದ ಕಾರಣ ಆತನು ಅಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International