New Testament in a Year
24 ಜನರು ಹೀಗೆ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡ ಫರಿಸಾಯರು, “ಯೇಸು ಬೆಲ್ಜೆಬೂಲನ ಶಕ್ತಿಯ ಮೂಲಕ ಜನರನ್ನು ದೆವ್ವಗಳಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದರು.
25 ಫರಿಸಾಯರು ಆಲೋಚಿಸುತ್ತಿದ್ದ ಸಂಗತಿಗಳು ಯೇಸುವಿಗೆ ತಿಳಿದಿದ್ದವು. ಆದ್ದರಿಂದ ಯೇಸು ಅವರಿಗೆ, “ತನಗೆ ವಿರೋಧವಾಗಿ ತಾನೇ ಹೋರಾಡುವ ರಾಜ್ಯವು ನಾಶವಾಗುವುದು. ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವು ಸ್ಥಿರವಾಗಿರುವುದಿಲ್ಲ. ಭೇದಭಾವ ಹೊಂದಿರುವ ಪ್ರತಿಯೊಂದು ಕುಟುಂಬವು ಅಭಿವೃದ್ಧಿಯಾಗುವುದಿಲ್ಲ. 26 ಹೀಗಿರಲು ಸೈತಾನನು ತನ್ನ ಸ್ವಂತ ದೆವ್ವಗಳನ್ನೇ ಹೊರಗೆ ಓಡಿಸಿದರೆ ಅವನು ತನ್ನಲ್ಲಿಯೇ ಒಡಕನ್ನು ಮಾಡಿದಂತಾಯಿತು. ಆಗ ಅವನು ಮತ್ತು ಅವನ ರಾಜ್ಯವು ಸ್ಥಿರವಾಗಿರಲು ಹೇಗೆ ಸಾಧ್ಯ? 27 ನಾನು ಸೈತಾನನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತೇನೆ ಎಂದು ನೀವು ಹೇಳುತ್ತೀರಿ. ಅದು ನಿಜವಾದರೆ, ನಿಮ್ಮ ಜನರು ಯಾವ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನ್ನು ತಪ್ಪಿತಸ್ಥರೆಂದು ನಿರೂಪಿಸುತ್ತಾರೆ. 28 ಆದರೆ ನಾನು ದೇವರಾತ್ಮನ ಶಕ್ತಿಯ ಮೂಲಕ ದೆವ್ವಗಳನ್ನು ಬಿಡಿಸುತ್ತೇನೆ. ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 29 ಒಬ್ಬ ವ್ಯಕ್ತಿಯು ಬಲಿಷ್ಠನೊಬ್ಬನ ಮನೆಗೆ ನುಗ್ಗಿ ಅವನ ಸ್ವತ್ತನ್ನು ಕದಿಯಬೇಕಿದ್ದರೆ, ಮೊದಲು ಅವನು ಆ ಬಲಿಷ್ಠನನ್ನು ಕಟ್ಟಿಹಾಕಬೇಕು. ಆಗ ಆ ಬಲಿಷ್ಠನ ಮನೆಯ ಸ್ವತ್ತನ್ನು ಕದಿಯಲು ಅವನಿಗೆ ಸಾಧ್ಯವಾಗುವುದು. 30 ನನ್ನೊಂದಿಗೆ ಇಲ್ಲದವನು ನನಗೆ ವಿರೋಧಿಯಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.
31 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಜನರು ಮಾಡುವ ಪ್ರತಿಯೊಂದು ಪಾಪಕ್ಕೂ ಹೇಳುವ ಪ್ರತಿಯೊಂದು ದೂಷಣೆ ಮಾತಿಗೂ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮ ದೂಷಣೆಗೆ ಕ್ಷಮಾಪಣೆ ಇಲ್ಲವೇ ಇಲ್ಲ. 32 ಮನುಷ್ಯಕುಮಾರನಿಗೆ ವಿರೋಧವಾಗಿ ಮಾತನಾಡಿದರೂ ಅದಕ್ಕೆ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ ಅದಕ್ಕೆ ಕ್ಷಮಾಪಣೆಯು ಇಹದಲ್ಲಾಗಲಿ ಪರದಲ್ಲಾಗಲಿ ಇಲ್ಲವೇ ಇಲ್ಲ.
ನಿಮ್ಮ ನಿಜಸ್ಥಿತಿಗೆ ನಿಮ್ಮ ಕಾರ್ಯಗಳೇ ಸಾಕ್ಷಿ
(ಲೂಕ 6:43-45)
33 “ನಿಮಗೆ ಒಳ್ಳೆಯ ಫಲ ಬೇಕಾಗಿದ್ದರೆ ನೀವು ಒಳ್ಳೆಯ ಮರ ಹೊಂದಿರಬೇಕು. ನಿಮ್ಮ ಮರ ಒಳ್ಳೆಯದಾಗಿಲ್ಲದಿದ್ದರೆ ಅದು ಕೆಟ್ಟ ಫಲವನ್ನೇ ಬಿಡುವುದು. ಮರವನ್ನು ಅದರಲ್ಲಿ ಬಿಡುವ ಫಲದಿಂದಲೇ ತಿಳಿದುಕೊಳ್ಳಬಹುದು. 34 ನೀವು ಹಾವುಗಳು! ನೀವು ದುಷ್ಟರು! ಒಳ್ಳೆಯದನ್ನು ನೀವು ಹೇಗೆ ಹೇಳುವಿರಿ? ನಿಮ್ಮ ಹೃದಯದಲ್ಲಿ ತುಂಬಿರುವುದನ್ನೇ ನಿಮ್ಮ ಬಾಯಿ ಮಾತಾಡುತ್ತದೆ. 35 ಒಳ್ಳೆಯವನು ತನ್ನ ಹೃದಯದಲ್ಲಿ ಒಳ್ಳೆಯವುಗಳನ್ನು ಇಟ್ಟುಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಒಳ್ಳೆಯವುಗಳನ್ನೇ ಮಾತಾಡುತ್ತಾನೆ. ಆದರೆ ದುಷ್ಟನು ತನ್ನ ಹೃದಯದಲ್ಲಿ ಕೆಟ್ಟವುಗಳನ್ನು ಶೇಖರಿಸಿಕೊಂಡಿರುತ್ತಾನೆ. ಆದ್ದರಿಂದ ಅವನು ತನ್ನ ಹೃದಯದಿಂದ ಬರುವ ಕೆಟ್ಟವುಗಳನ್ನೇ ಮಾತಾಡುತ್ತಾನೆ. 36 ಜನರು ನಿರ್ಲಕ್ಷ್ಯಭಾವದಿಂದ ಆಡಿದ ಪ್ರತಿಯೊಂದು ಮಾತಿಗೂ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕಾಗುವುದು. 37 ನಿಮ್ಮ ಮಾತುಗಳಿಂದಲೇ ನಿಮಗೆ ನೀತಿವಂತರೆಂದಾಗಲಿ ಅಪರಾಧಿಗಳೆಂದಾಗಲಿ ತೀರ್ಪು ನೀಡಲಾಗುವುದು” ಎಂದನು.
ಸೂಚಕಕಾರ್ಯಕ್ಕಾಗಿ ಯೆಹೂದ್ಯರ ಬೇಡಿಕೆ
(ಮಾರ್ಕ 8:11-12; ಲೂಕ 11:29-32)
38 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಬೋಧಕನೇ, ನೀನು ಹೇಳಿದ್ದನ್ನು ನಿರೂಪಿಸುವುದಕ್ಕಾಗಿ ಒಂದು ಸೂಚಕಕಾರ್ಯವನ್ನು ಮಾಡು” ಎಂದು ಹೇಳಿದರು.
39 ಯೇಸು, “ದುಷ್ಟರು ಮತ್ತು ಪಾಪಿಗಳು ಸೂಚಕಕಾರ್ಯವನ್ನು ಅಪೇಕ್ಷಿಸುತ್ತಾರೆ. ಆದರೆ ಅವರಿಗೆ ಒಂದು ಸೂಚಕಕಾರ್ಯವನ್ನೂ ಗುರುತಿಗಾಗಿ ತೋರಿಸಲಾಗುವುದಿಲ್ಲ. 40 ಪ್ರವಾದಿಯಾದ ಯೋನನು ಮೂರು ದಿವಸ ಹಗಲಿರುಳು ಒಂದು ದೊಡ್ಡ ಮೀನಿನ ಹೊಟ್ಟೆಯಲ್ಲಿ ಹೇಗಿದ್ದನೋ ಅದೇ ರೀತಿಯಲ್ಲಿ ಮನುಷ್ಯಕುಮಾರನು ಸಮಾಧಿಯಲ್ಲಿ ಮೂರು ದಿನ ಹಗಲಿರುಳು ಇರುವನು. ಇದಲ್ಲದೆ ಬೇರೆ ಯಾವ ಸೂಚಕಕಾರ್ಯವನ್ನು ಅವರಿಗೆ ತೋರಿಸಲಾಗುವುದಿಲ್ಲ. 41 ನ್ಯಾಯವಿಚಾರಣೆಯ ದಿನದಂದು ನಿನೆವೆ ಪಟ್ಟಣದ ಜನರು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ನಿಂತುಕೊಂಡು ನಿಮ್ಮನ್ನು ಅಪರಾಧಿಗಳೆಂದು ಘೋಷಿಸುವರು. ಏಕೆಂದರೆ ಯೋನನು ಬೋಧಿಸಿದಾಗ ಅವರು ತಮ್ಮ ಜೀವಿತವನ್ನು ಬದಲಾವಣೆ ಮಾಡಿಕೊಂಡರು. ಆದರೆ ನಾನು ನಿಮಗೆ ಹೇಳುವುದೇನೆಂದರೆ ನಾನು ಯೋನನಿಗಿಂತಲೂ ಹೆಚ್ಚಿನವನಾಗಿರುತ್ತೇನೆ.
42 “ನ್ಯಾಯತೀರ್ಪಿನ ದಿನದಂದು ದಕ್ಷಿಣ ದೇಶದ ರಾಣಿಯು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ಎದ್ದುನಿಂತು ನಿಮ್ಮನ್ನು ತಪ್ಪಿತಸ್ಥರೆಂದು (ಅಪರಾಧಿಗಳು) ನಿರೂಪಿಸುವಳು. ಏಕೆಂದರೆ, ಆ ರಾಣಿಯು ಸೊಲೊಮೋನನ ಜ್ಞಾನದ ಬೋಧನೆಯನ್ನು ಕೇಳಲು ಬಹಳ ದೂರದಿಂದ ಬಂದಳು. ನಾನಾದರೋ ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ ಎಂದು ನಿಮಗೆ ಹೇಳುತ್ತೇನೆ.
ಇಂದಿನ ದುಷ್ಟಜನರ ಸ್ಥಿತಿ
(ಲೂಕ 11:24-26)
43 “ದುರಾತ್ಮವು ಮನುಷ್ಯನಿಂದ ಹೊರಗೆ ಬಂದಾಗ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ಪ್ರಯಾಣ ಮಾಡುತ್ತದೆ. ಆದರೆ ಆ ದುರಾತ್ಮಕ್ಕೆ ಬೇಕಾದ ವಿಶ್ರಾಂತಿ ಸ್ಥಳ ಸಿಕ್ಕುವುದಿಲ್ಲ. 44 ಆಗ ಅದು, ‘ನಾನು ಬಿಟ್ಟುಬಂದ ಮನೆಗೇ ಹಿಂತಿರುಗಿ ಹೋಗುತ್ತೇನೆ’ ಎಂದು ಅಂದುಕೊಳ್ಳುತ್ತದೆ. ಬಳಿಕ ಅದು ಅವನ ಬಳಿಗೆ ಮತ್ತೆ ಬಂದಾಗ ಆ ಮನೆಯು ಇನ್ನೂ ಬರಿದಾಗಿರುತ್ತದೆ. ಚೊಕ್ಕಟವಾಗಿ ಗುಡಿಸಿ ಅಲಂಕರಿಸಲ್ಪಟ್ಟಿರುತ್ತದೆ. 45 ಆಗ ಅದು ಹೊರಗೆ ಹೋಗಿ ತನಗಿಂತಲೂ ಹೆಚ್ಚು ದುಷ್ಟರಾದ ಏಳು ದುರಾತ್ಮಗಳನ್ನು ಕರೆದುಕೊಂಡು ಬರುತ್ತದೆ. ಆ ದುರಾತ್ಮಗಳೆಲ್ಲಾ ಆ ಮನುಷ್ಯನೊಳಗೆ ಸೇರಿಕೊಂಡು ವಾಸಮಾಡಲಾರಂಭಿಸುತ್ತವೆ. ಆಗ ಆ ಮನುಷ್ಯನಿಗೆ ಮೊದಲಿಗಿಂತಲೂ ಹೆಚ್ಚಿನ ಕಷ್ಟಗಳು ಉಂಟಾಗುತ್ತವೆ. ಈ ದಿನಗಳಲ್ಲಿ ಜೀವಿಸುವ ದುಷ್ಟ ಜನರಿಗೆ ಅದೇ ರೀತಿ ಆಗುವುದು” ಎಂದನು.
ಯೇಸುವಿನ ಶಿಷ್ಯರೇ ಆತನ ಕುಟುಂಬ
(ಮಾರ್ಕ 3:31-35; ಲೂಕ 8:19-21)
46 ಯೇಸುವು ಜನರೊಂದಿಗೆ ಮಾತಾಡುತ್ತಿರುವಾಗ, ಆತನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡರು. ಅವರು ಆತನೊಂದಿಗೆ ಮಾತಾಡಬೇಕೆಂದಿದ್ದರು. 47 ಒಬ್ಬನು ಯೇಸುವಿಗೆ, “ನಿನ್ನ ತಾಯಿ ಮತ್ತು ಸಹೋದರರು ನಿನಗಾಗಿ ಹೊರಗಡೆ ಕಾದಿದ್ದಾರೆ, ಅವರು ನಿನ್ನೊಂದಿಗೆ ಮಾತಾಡಬೇಕೆಂದಿದ್ದಾರೆ” ಎಂದನು.
48 ಯೇಸು, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಉತ್ತರಕೊಟ್ಟು, 49 ತನ್ನ ಶಿಷ್ಯರ ಕಡೆಗೆ ಕೈ ತೋರಿಸಿ, “ನೋಡಿ! ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು. 50 ಪರಲೋಕದಲ್ಲಿರುವ ನನ್ನ ತಂದೆ ಇಚ್ಛಿಸುವಂಥವುಗಳನ್ನು ಮಾಡುವವನೇ ನನ್ನ ನಿಜವಾದ ಸಹೋದರ, ಸಹೋದರಿ ಮತ್ತು ತಾಯಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International