Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 10:21-42

21 “ಸಹೋದರರು ಸ್ವಂತ ಸಹೋದರರಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. ತಂದೆಯಂದಿರು ತಮ್ಮ ಸ್ವಂತ ಮಕ್ಕಳಿಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ಮರಣದಂಡನೆಗೆ ಒಪ್ಪಿಸುವರು. 22 ನೀವು ನನ್ನನ್ನು ಹಿಂಬಾಲಿಸುವುದರಿಂದ ಜನರೆಲ್ಲರೂ ನಿಮ್ಮನ್ನು ದ್ವೇಷಿಸುತ್ತಾರೆ. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು. 23 ಒಂದು ಊರಿನಲ್ಲಿ ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಊರಿಗೆ ಹೋಗಿ. ಮನುಷ್ಯಕುಮಾರನು ಪುನಃ ಬರುವುದಕ್ಕಿಂತ ಮುಂಚೆ ನೀವು ಇಸ್ರೇಲರ ಊರುಗಳಿಗೆಲ್ಲಾ ಹೋಗುವುದನ್ನು ಮುಗಿಸಿರುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.

24 “ಶಿಷ್ಯನು ಗುರುವಿಗಿಂತ ಉತ್ತಮನಲ್ಲ. ಆಳು ತನ್ನ ದಣಿಗಿಂತ ಉತ್ತಮನಲ್ಲ. 25 ಶಿಷ್ಯನು ತನ್ನ ಗುರುವಿನಂತಾದರೆ ಸಾಕು. ಆಳು ತನ್ನ ದಣಿಯಂತಾದರೆ ಸಾಕು. ಕುಟುಂಬದ ಹಿರಿಯನನ್ನೇ ಬೆಲ್ಜೆಬೂಲ (ದೆವ್ವ) ಎಂದು ಕರೆದರೆ, ಆ ಕುಟುಂಬದ ಇತರರನ್ನು ಮತ್ತಷ್ಟು ಕೆಟ್ಟ ಹೆಸರಿನಿಂದ ಕರೆಯುವುದಿಲ್ಲವೇ?

ಭಯಪಡಬೇಕಾದದ್ದು ದೇವರಿಗೆ, ಮನುಷ್ಯರಿಗಲ್ಲ

(ಲೂಕ 12:2-7)

26 “ಆದಕಾರಣ ಆ ಜನರಿಗೆ ಹೆದರಬೇಡಿ. ಮರೆಯಾಗಿರುವ ಪ್ರತಿಯೊಂದೂ ಬಹಿರಂಗವಾಗುವುದು. ಗುಪ್ತವಾಗಿರುವ ಪ್ರತಿ ಸಂಗತಿಯು ಬಯಲಾಗುವುದು. 27 ನಾನು ಕತ್ತಲೆಯಲ್ಲಿ (ರಹಸ್ಯವಾಗಿ) ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದೇನೆ. ಆದರೆ ನೀವು ಈ ಸಂಗತಿಗಳನ್ನು ಬೆಳಕಿನಲ್ಲಿ ಹೇಳಬೇಕೆಂಬುದು ನನ್ನ ಇಷ್ಟ. ನಾನು ಈ ವಿಷಯಗಳನ್ನು ನಿಮಗೆ ಮೆಲ್ಲಗೆ ಹೇಳುತ್ತಿದ್ದೇನೆ. ಆದರೆ ನೀವು ಈ ವಿಷಯಗಳನ್ನು ಜನರಿಗೆಲ್ಲ ಗಟ್ಟಿಯಾಗಿ ಹೇಳಿರಿ.

28 “ಜನರಿಗೆ ಹೆದರಬೇಡಿ. ಅವರು ಶರೀರವನ್ನು ಮಾತ್ರ ಕೊಲ್ಲಬಹುದು. ಆತ್ಮವನ್ನು ಅವರು ಕೊಲ್ಲಲಾರರು. ಶರೀರವನ್ನೂ ಆತ್ಮವನ್ನೂ ನರಕಕ್ಕೆ ಹಾಕಬಲ್ಲ ದೇವರಿಗೆ ಭಯಪಡಿರಿ. 29 ಮಾರುಕಟ್ಟೆಯಲ್ಲಿ ಎರಡು ಗುಬ್ಬಚ್ಚಿಗಳನ್ನು ಒಂದು ನಾಣ್ಯಕ್ಕೆ[a] ಮಾರುತ್ತಾರೆ. ಆದರೆ ನಿಮ್ಮ ತಂದೆಯು ಅಪ್ಪಣೆ ಕೊಡದ ಹೊರತು ಅವುಗಳಲ್ಲಿ ಒಂದಾದರೂ ಸಾಯುವುದಿಲ್ಲ. 30 ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳು ಇವೆ ಎಂಬುದು ಸಹ ದೇವರಿಗೆ ತಿಳಿದಿದೆ. 31 ಆದಕಾರಣ ಹೆದರಬೇಡಿ. ನೀವು ಅನೇಕ ಗುಬ್ಬಚ್ಚಿಗಳಿಗಿಂತಲೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.

ನಿಮ್ಮ ನಂಬಿಕೆಯ ಕುರಿತು ಬಹಿರಂಗ ಸಾಕ್ಷಿ

(ಲೂಕ 12:8-9)

32 “ಒಬ್ಬನು ಬೇರೆಯವರ ಮುಂದೆ, ತಾನು ನನ್ನವನೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನನ್ನು ನನ್ನವನೆಂದು ಹೇಳುತ್ತೇನೆ. 33 ಆದರೆ ಒಬ್ಬನು ಜನರ ಮುಂದೆ, ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನು ನನ್ನವನಲ್ಲವೆಂದು ಹೇಳುತ್ತೇನೆ.

ಯೇಸುವನ್ನು ಹಿಂಬಾಲಿಸುವವರಿಗೆ ಬರುವ ತೊಂದರೆಗಳು

(ಲೂಕ 12:51-53; 14:26-27)

34 “ಭೂಲೋಕದಲ್ಲಿ ಶಾಂತಿಯನ್ನು ಉಂಟುಮಾಡಲು ನಾನು ಬಂದಿದ್ದೇನೆಂದು ಯೋಚಿಸಬೇಡಿ. ನಾನು ಶಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಹಾಕಲು ಬಂದಿದ್ದೇನೆ. 35-36 ಈ ಪ್ರವಾದನೆ ನೆರವೇರುವಂತೆ ಮಾಡಲು ನಾನು ಬಂದಿದ್ದೇನೆ:

‘ಒಬ್ಬನಿಗೆ ಅವನ ಮನೆಯವರೇ ವೈರಿಗಳಾಗುವರು.
ಮಗನು ತಂದೆಗೆ,
ಮಗಳು ತಾಯಿಗೆ,
ಸೊಸೆಯು ಅತ್ತೆಗೆ ವೈರಿಗಳಾಗುವರು.’(A)

37 “ಯಾರಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆ ಅಥವಾ ತಾಯಿಯನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. ಯಾವನಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಇಲ್ಲವೆ ಮಗಳನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 38 ಯಾವನಾದರೂ ನನ್ನನ್ನು ಹಿಂಬಾಲಿಸುವಾಗ ಅವನಿಗೆ ಕೊಡುವಂಥ ಶಿಲುಬೆಯನ್ನು (ಸಂಕಟವನ್ನು) ಅಂಗೀಕರಿಸದಿದ್ದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 39 ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಪಡೆದುಕೊಳ್ಳುವನು.

ದೇವಜನರನ್ನು ಸ್ವಾಗತಿಸುವವನಿಗೆ ಆಶೀರ್ವಾದ

(ಮಾರ್ಕ 9:41)

40 “ನಿಮ್ಮನ್ನು ಅಂಗೀಕರಿಸುವವನು ನನ್ನನ್ನು ಸಹ ಅಂಗೀಕರಿಸುವನು. ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿದಾತನನ್ನು (ದೇವರನ್ನು) ಸಹ ಅಂಗೀಕರಿಸುವನು. 41 ಪ್ರವಾದಿಯನ್ನು ಪ್ರವಾದಿಯೆಂದು ಸಂಧಿಸಿ ಸ್ವಾಗತಿಸುವವನು ಆ ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಆ ಸತ್ಪುರುಷನಿಗೆ ಬರತಕ್ಕ ಪ್ರತಿಫಲವನ್ನು ಪಡೆಯುವನು. 42 ದೀನರಾದ ಇವರಿಗೆ ನನ್ನ ಹಿಂಬಾಲಕರೆಂಬ ನಿಮಿತ್ತ ಸಹಾಯ ಮಾಡುವವನು ಖಂಡಿತವಾಗಿಯೂ ಪ್ರತಿಫಲವನ್ನು ಪಡೆಯುವನು. ನನ್ನ ಹಿಂಬಾಲಕರಿಗೆ ಕೇವಲ ಒಂದು ಬಟ್ಟಲು ತಣ್ಣೀರನ್ನು ಕೊಟ್ಟರೂ ಸಹ ಅದಕ್ಕೆ ಬರತಕ್ಕ ಪ್ರತಿಫಲವು ತಪ್ಪುವುದೇ ಇಲ್ಲ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International