Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 9:18-38

ಮರುಜೀವ ಹೊಂದಿದ ಬಾಲಕಿ ಮತ್ತು ಗುಣಮುಖಳಾದ ಸ್ತ್ರೀ

(ಮಾರ್ಕ 5:21-43; ಲೂಕ 8:40-56)

18 ಯೇಸು ಈ ಸಂಗತಿಗಳನ್ನು ಹೇಳುತ್ತಿರುವಾಗ ಸಭಾಮಂದಿರದ ಅಧಿಕಾರಿಯೊಬ್ಬನು ಆತನ ಬಳಿಗೆ ಬಂದು ಆತನಿಗೆ ಬಾಗಿ ನಮಸ್ಕರಿಸಿ, “ನನ್ನ ಮಗಳು ಈಗ ತಾನೇ ಸತ್ತುಹೋದಳು. ನೀನು ಬಂದು ಅವಳನ್ನು ಮುಟ್ಟಿದರೆ ಅವಳು ಮತ್ತೆ ಜೀವಂತಳಾಗುವಳು” ಎಂದು ಹೇಳಿದನು.

19 ಆದ್ದರಿಂದ ಯೇಸು ಎದ್ದು ಅಧಿಕಾರಿಯ ಸಂಗಡ ಹೋದನು. ಯೇಸುವಿನ ಶಿಷ್ಯರು ಸಹ ಹೋದರು.

20 ಹನ್ನೆರಡು ವರ್ಷಗಳಿಂದ ರಕ್ತಸ್ರಾವ ಕಾಯಿಲೆ ಹೊಂದಿದ್ದ ಒಬ್ಬ ಹೆಂಗಸು ಅಲ್ಲಿದ್ದಳು. ಆ ಹೆಂಗಸು ಯೇಸುವಿನ ಹಿಂದೆಯೇ ಬಂದು ಆತನ ಮೇಲಂಗಿಯ ತುದಿಯನ್ನು ಮುಟ್ಟಿದಳು. 21 ಆ ಹೆಂಗಸು, “ನಾನು ಆತನ ಅಂಗಿಯನ್ನು ಮುಟ್ಟಿದರೆ ಸಾಕು, ನಾನು ಗುಣವಾಗಬಲ್ಲೆ” ಎಂದು ಆಲೋಚನೆ ಮಾಡಿಕೊಂಡಿದ್ದಳು.

22 ಯೇಸು ಹಿಂತಿರುಗಿ ಆ ಹೆಂಗಸನ್ನು ನೋಡಿ, “ಮಗಳೇ, ಸಂತೋಷಪಡು! ನಿನ್ನ ನಂಬಿಕೆಯಿಂದಲೇ ನಿನಗೆ ಗುಣವಾಯಿತು” ಎಂದು ಹೇಳಿದನು. ಆಗ ಅವಳು ಗುಣಮುಖಳಾದಳು.

23 ಬಳಿಕ ಯೇಸು ಅಧಿಕಾರಿಯೊಡನೆ ಮುಂದೆ ಸಾಗಿ ಅವನ ಮನೆಯೊಳಕ್ಕೆ ಹೋದನು. ಶವಸಂಸ್ಕಾರಕ್ಕಾಗಿ ಬಂದಿದ್ದ ವಾದ್ಯವೃಂದದವರಿಗೂ ಗೋಳಾಡುತ್ತಿದ್ದವರಿಗೂ ಯೇಸು, 24 “ದೂರ ಹೋಗಿರಿ, ಹುಡುಗಿ ಸತ್ತಿಲ್ಲ. ಅವಳು ನಿದ್ದೆ ಮಾಡುತ್ತಿದ್ದಾಳೆ” ಅಂದನು. ಆದರೆ ಅವರು ಯೇಸುವನ್ನು ಅಪಹಾಸ್ಯ ಮಾಡಿದರು. 25 ಜನರನ್ನು ಮನೆಯ ಹೊರಗೆ ಕಳುಹಿಸಿದ ಮೇಲೆ ಯೇಸು ಹುಡುಗಿಯ ಕೋಣೆಯ ಒಳಗೆ ಹೋದನು. ಯೇಸು ಹುಡುಗಿಯ ಕೈಯನ್ನು ಹಿಡಿದಾಗ ಆ ಹುಡುಗಿಯು ಎದ್ದುನಿಂತಳು. 26 ಈ ಸುದ್ದಿಯು ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲಾ ಹಬ್ಬಿತು.

ಅನೇಕರಿಗೆ ಸ್ವಸ್ಥತೆ

27 ಯೇಸು ಅಲ್ಲಿಂದ ಹೊರಡುತ್ತಿರುವಾಗ ಇಬ್ಬರು ಕುರುಡರು ಆತನನ್ನು ಹಿಂಬಾಲಿಸಿದರು. ಅವರು, “ದಾವೀದನ ಕುಮಾರನೇ, ನಮಗೆ ದಯೆ ತೋರು” ಎಂದು ಗಟ್ಟಿಯಾಗಿ ಕೂಗಿದರು.

28 ಯೇಸು ಮನೆಯೊಳಗೆ ಹೋದನು. ಕುರುಡರೂ ಆತನ ಸಂಗಡ ಹೋದರು. ಯೇಸು ಅವರಿಗೆ, “ನಾನು ನಿಮ್ಮನ್ನು ಗುಣಪಡಿಸಬಲ್ಲೆನೆಂದು ನೀವು ನಂಬುತ್ತೀರೋ?” ಎಂದು ಕೇಳಿದನು. ಕುರುಡರು, “ಹೌದು ಪ್ರಭುವೇ, ನಾವು ನಂಬುತ್ತೇವೆ” ಎಂದು ಉತ್ತರಕೊಟ್ಟರು.

29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನೀವು ನಂಬಿದಂತೆಯೇ ನಿಮಗೆ ಗುಣವಾಗಲಿ” ಅಂದನು. 30 ಕೂಡಲೇ ಅವರಿಗೆ ದೃಷ್ಟಿ ಬಂದಿತು. “ಈ ವಿಷಯವನ್ನು ಯಾರಿಗೂ ಹೇಳಬಾರದು” ಎಂದು ಯೇಸು ಅವರಿಗೆ ಎಚ್ಚರಿಕೆ ನೀಡಿದನು. 31 ಆದರೆ ಆ ಕುರುಡರು ಅಲ್ಲಿಂದ ಹೊರಟುಹೋಗಿ ಯೇಸುವಿನ ಸುದ್ದಿಯನ್ನು ಆ ಪ್ರದೇಶದ ಸುತ್ತಮುತ್ತಲೆಲ್ಲಾ ಹಬ್ಬಿಸಿದರು.

32 ಅವರಿಬ್ಬರು ಹೋಗುತ್ತಿರುವಾಗ ಕೆಲವರು ಬೇರೊಬ್ಬನನ್ನು ಯೇಸುವಿನ ಬಳಿಗೆ ತಂದರು. ಅವನಲ್ಲಿ ದೆವ್ವವಿದ್ದುದರಿಂದ ಅವನು ಮೂಕನಾಗಿದ್ದನು. 33 ಯೇಸು ಆ ದೆವ್ವಕ್ಕೆ ಅವನನ್ನು ಬಿಟ್ಟುಹೋಗುವಂತೆ ಆಜ್ಞಾಪಿಸಿದನು. ಅವನು ಮಾತನಾಡತೊಡಗಿದನು. ಇದನ್ನು ಕಂಡ ಜನರು ಆಶ್ಚರ್ಯಚಕಿತರಾಗಿ, “ಇಸ್ರೇಲಿನಲ್ಲಿ ಇಂಥ ಕಾರ್ಯವನ್ನು ನೋಡಿಯೇ ಇಲ್ಲ” ಅಂದರು.

34 ಆದರೆ ಫರಿಸಾಯರು, “ಇವನು ದೆವ್ವಗಳ ಒಡೆಯನ ಶಕ್ತಿಯಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಎಂದರು.

ಜನರ ವಿಷಯದಲ್ಲಿ ಯೇಸುವಿನ ದುಃಖ

35 ಯೇಸು ಊರುಗಳಲ್ಲೆಲ್ಲಾ ಮತ್ತು ಹಳ್ಳಿಗಳಲ್ಲೆಲ್ಲಾ ಸಂಚಾರ ಮಾಡಿದನು. ಯೇಸು ಅವರ ಸಭಾಮಂದಿರಗಳಲ್ಲಿ ಉಪದೇಶಿಸಿ ಪರಲೋಕರಾಜ್ಯದ ವಿಷಯವಾಗಿ ಶುಭವಾರ್ತೆಯನ್ನು ಹೇಳಿದನು. ಎಲ್ಲಾ ತರದ ರೋಗಗಳನ್ನು ಬೇನೆಗಳನ್ನು ವಾಸಿಮಾಡಿದನು. 36 ನೋವಿನಿಂದ ನರಳುತ್ತಿದ್ದ ಮತ್ತು ಅಸಹಾಯಕರಾಗಿದ್ದ ಅನೇಕ ಜನರನ್ನು ಯೇಸು ನೋಡಿ ದುಃಖಪಟ್ಟನು. ಕುರುಬನಿಲ್ಲದ ಕುರಿಗಳಂತೆ ಅವರಿದ್ದರು. 37 ಯೇಸು ತನ್ನ ಶಿಷ್ಯರಿಗೆ, “ಬೆಳೆಯು ಬಹಳ, ಆದರೆ ಕೆಲಸಗಾರರು ಸ್ವಲ್ಪ. 38 ಬೆಳೆಯ ಯಜಮಾನ ದೇವರೇ. ಆದ್ದರಿಂದ ಹೆಚ್ಚು ಕೆಲಸಗಾರರನ್ನು ಸುಗ್ಗಿಗಾಗಿ ಕಳುಹಿಸಿಕೊಡುವಂತೆ ಆತನಿಗೆ ಪ್ರಾರ್ಥನೆ ಮಾಡಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International