Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 8:1-17

ಗುಣಮುಖನಾದ ಕುಷ್ಠರೋಗಿ

(ಮಾರ್ಕ 1:40-45; 5:12-16)

ಯೇಸು ಬೆಟ್ಟದಿಂದ ಕೆಳಗೆ ಇಳಿದು ಬಂದನು. ಜನರು ಗುಂಪುಗುಂಪಾಗಿ ಆತನನ್ನು ಹಿಂಬಾಲಿಸಿದರು. ಆಗ ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದನು. ಅವನು ಯೇಸುವಿನ ಮುಂದೆ ಅಡ್ಡಬಿದ್ದು, “ಪ್ರಭುವೇ, ನೀನು ಇಷ್ಟಪಟ್ಟರೆ ನನ್ನನ್ನು ಗುಣಪಡಿಸಬಲ್ಲೆ” ಎಂದನು.

ಯೇಸು ಅವನನ್ನು ಮುಟ್ಟಿ, “ನಿನ್ನನ್ನು ಗುಣಪಡಿಸಲು ನನಗೆ ಮನಸ್ಸಿದೆ, ಗುಣವಾಗು” ಎಂದನು. ಆ ಕ್ಷಣವೇ ಅವನ ಕುಷ್ಠರೋಗ ವಾಸಿಯಾಯಿತು. ಯೇಸು ಅವನಿಗೆ, “ಇದು ಹೇಗಾಯಿತೆಂಬುದನ್ನು ಯಾರಿಗೂ ಹೇಳಬೇಡ. ಈಗ ನೀನು ಹೋಗಿ ಯಾಜಕನಿಗೆ ನಿನ್ನ ಮೈಯನ್ನು ತೋರಿಸು. ಗುಣಹೊಂದಿದವರು ಮೋಶೆಯ ಆಜ್ಞೆಗನುಸಾರವಾಗಿ ಕೊಡತಕ್ಕ ಕಾಣಿಕೆಯನ್ನು ಅರ್ಪಿಸು. ನೀನು ಗುಣವಾದದ್ದಕ್ಕೆ ಅದು ಸಾಕ್ಷಿಯಾಗಿರುವುದು” ಎಂದು ಹೇಳಿದನು.[a]

ಆರೋಗ್ಯ ಹೊಂದಿದ ಅಧಿಕಾರಿಯ ಸೇವಕ

(ಲೂಕ 7:1-10; ಯೋಹಾನ 4:43-54)

ಯೇಸು ಕಪೆರ್ನೌಮ್ ಪಟ್ಟಣಕ್ಕೆ ಹೊರಟುಹೋದನು. ಆತನು ಪಟ್ಟಣಕ್ಕೆ ಪ್ರವೇಶಿಸಿದಾಗ ಸೈನ್ಯದ ಅಧಿಕಾರಿಯೊಬ್ಬನು ಬಂದು, “ಪ್ರಭುವೇ, ನನ್ನ ಸೇವಕನು ಕಾಯಿಲೆಯಿಂದ ಹಾಸಿಗೆಯ ಮೇಲಿದ್ದಾನೆ. ಅವನು ಬಹಳ ನೋವಿನಿಂದ ನರಳುತ್ತಿದ್ದಾನೆ” ಎಂದು ಸಹಾಯಕ್ಕಾಗಿ ಬೇಡಿಕೊಂಡನು.

ಯೇಸು ಆ ಅಧಿಕಾರಿಗೆ, “ನಾನು ಬಂದು ಅವನನ್ನು ಗುಣಪಡಿಸುತ್ತೇನೆ” ಎಂದು ಹೇಳಿದನು.

ಅದಕ್ಕೆ ಆ ಅಧಿಕಾರಿ, “ಪ್ರಭುವೇ, ನನ್ನ ಮನೆಗೆ ನೀನು ಬರುವಷ್ಟು ಯೋಗ್ಯತೆ ನನಗಿಲ್ಲ. ಅವನಿಗೆ ಗುಣವಾಗಲಿ ಎಂದು ನೀನು ಆಜ್ಞಾಪಿಸಿದರೆ ಸಾಕು, ಅವನಿಗೆ ಗುಣವಾಗುವುದು. ನಾನು ಸಹ ಬೇರೆ ಅಧಿಕಾರಿಗಳ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿ ಸಿಪಾಯಿಗಳಿದ್ದಾರೆ. ನಾನು ಒಬ್ಬ ಸಿಪಾಯಿಗೆ ‘ಹೋಗು’ ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬ ಸಿಪಾಯಿಗೆ ‘ಬಾ’ ಅಂದರೆ ಅವನು ಬರುತ್ತಾನೆ. ನಾನು ನನ್ನ ಸೇವಕನಿಗೆ, ‘ಇದನ್ನು ಮಾಡು’ ಅಂದರೆ ಅವನು ವಿಧೇಯತೆಯಿಂದ ಮಾಡುತ್ತಾನೆ. ನಿನಗೂ ಇದೇ ರೀತಿಯ ಅಧಿಕಾರವಿದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದನು.

10 ಇದನ್ನು ಕೇಳಿ ಯೇಸುವಿಗೆ ಆಶ್ಚರ್ಯವಾಯಿತು. ಯೇಸು ತನ್ನ ಸಂಗಡ ಇದ್ದವರಿಗೆ, “ನಾನು ಇಸ್ರೇಲಿನಲ್ಲಿಯೂ ಸಹ ಇಷ್ಟು ನಂಬಿಕೆಯುಳ್ಳ ವ್ಯಕ್ತಿಯನ್ನು ಕಾಣಲಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಎಂದನು. 11 ಅನೇಕ ಜನರು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಿಂದ ಬರುತ್ತಾರೆ. ಅವರು ಪರಲೋಕರಾಜ್ಯದಲ್ಲಿ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂಗಡ ಕುಳಿತುಕೊಂಡು ಊಟಮಾಡುತ್ತಾರೆ. 12 ಪರಲೋಕರಾಜ್ಯವನ್ನು ಹೊಂದತಕ್ಕವರು ಹೊರಗೆ ಕತ್ತಲೆಗೆ ಎಸೆಯಲ್ಪಡುವರು. ಅಲ್ಲಿ ಅವರು ಗೋಳಾಡುವರು ಮತ್ತು ನೋವಿನಿಂದ ಹಲ್ಲುಗಳನ್ನು ಕಡಿಯುವರು” ಎಂದನು.

13 ಬಳಿಕ ಯೇಸು ಆ ಅಧಿಕಾರಿಗೆ, “ಮನೆಗೆ ಹೋಗು, ನೀನು ನಂಬಿದಂತೆಯೇ ನಿನ್ನ ಸೇವಕನಿಗೆ ಗುಣವಾಗುವುದು” ಎಂದನು. ಅದೇ ಸಮಯದಲ್ಲಿ ಅವನ ಸೇವಕನಿಗೆ ಗುಣವಾಯಿತು.

ಗುಣಮುಖರಾದ ವಿವಿಧ ಜನರು

(ಮಾರ್ಕ 1:29-34; ಲೂಕ 4:38-41)

14 ಯೇಸುವು ಪೇತ್ರನ ಮನೆಗೆ ಹೋದನು. ಅಲ್ಲಿ ಪೇತ್ರನ ಅತ್ತೆಯು ಬಹಳ ಜ್ವರದಿಂದ ಹಾಸಿಗೆಯಲ್ಲಿ ಮಲಗಿದ್ದನ್ನು ಯೇಸು ನೋಡಿದನು. 15 ಯೇಸು ಅವಳ ಕೈ ಮುಟ್ಟಿದಾಗ ಜ್ವರವು ಅವಳನ್ನು ಬಿಟ್ಟುಹೋಯಿತು. ಆಗ ಅವಳು ಮೇಲೆದ್ದು, ಆತನ ಸೇವೆಮಾಡಿದಳು.

16 ಅಂದು ಸಾಯಂಕಾಲ ಜನರು ದೆವ್ವದಿಂದ ಪೀಡಿತರಾಗಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಯೇಸುವು ಮಾತಿನಿಂದಲೇ ದೆವ್ವಗಳನ್ನು ಅವರಿಂದ ಓಡಿಸಿದನು; ಕಾಯಿಲೆಯಾಗಿದ್ದ ಜನರೆಲ್ಲರನ್ನೂ ಗುಣಪಡಿಸಿದನು.

17 “ಆತನು ನಮ್ಮ ಬೇನೆಗಳನ್ನು ತೆಗೆದುಕೊಂಡನು, ನಮ್ಮ ರೋಗಗಳನ್ನು ಹೊತ್ತುಕೊಂಡನು”(A)

ಎಂದು ಪ್ರವಾದಿಯಾದ ಯೆಶಾಯನು ಹೇಳಿದ್ದು ಇದರ ಮೂಲಕ ನೆರವೇರಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International