Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 6:1-18

ಕೊಡುವುದರ ಕುರಿತು ಯೇಸುವಿನ ಉಪದೇಶ

“ಎಚ್ಚರವಾಗಿರಿ! ನೀವು ಒಳ್ಳೆಯ ಕಾರ್ಯಗಳನ್ನು ಜನರ ಮುಂದೆ ಮಾಡಬೇಡಿ. ಜನರು ನೋಡಲೆಂದು ನೀವು ಅವುಗಳನ್ನು ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರೆಯುವುದಿಲ್ಲ.

“ನೀವು ಬಡಜನರಿಗೆ ಮಾಡುವ ದಾನವನ್ನು ಪ್ರಕಟಿಸಬೇಡಿ. ನೀವು ಕಪಟಿಗಳಂತೆ ಮಾಡಕೂಡದು. ತಾವು ಮಾಡುವ ದಾನವನ್ನು ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಗಳಲ್ಲಿ ತುತ್ತೂರಿ ಊದಿಸುತ್ತಾರೆ. ಜನರಿಂದ ಗೌರವ ಪಡೆಯಬೇಕೆಂಬುದೇ ಅವರ ಉದ್ದೇಶ. ಆದ್ದರಿಂದ ನೀವು ಬಡಜನರಿಗೆ ಕೊಡುವಾಗ ಬಹಳ ಗುಟ್ಟಾಗಿ ಕೊಡಿ. ನೀವು ಮಾಡುವಂಥದ್ದು ಯಾರಿಗೂ ತಿಳಿಯದಿರಲಿ. ನೀವು ದಾನವನ್ನು ರಹಸ್ಯವಾಗಿ ಕೊಡಬೇಕು. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆ ನಿಮಗೆ ಪ್ರತಿಫಲ ಕೊಡುವನು.

ಪ್ರಾರ್ಥನೆಯ ಕುರಿತು ಯೇಸುವಿನ ಉಪದೇಶ

(ಲೂಕ 11:2-4)

“ನೀವು ಪ್ರಾರ್ಥಿಸುವಾಗ ಕಪಟಿಗಳ ಹಾಗೆ ಪ್ರಾರ್ಥಿಸಬೇಡಿ. ಕಪಟಿಗಳು ಸಭಾಮಂದಿರಗಳಲ್ಲಿ ಮತ್ತು ಬೀದಿಯ ಮೂಲೆಗಳಲ್ಲಿ ನಿಂತುಕೊಂಡು ಗಟ್ಟಿಯಾಗಿ ಪ್ರಾರ್ಥಿಸಲು ಇಷ್ಟಪಡುತ್ತಾರೆ. ತಾವು ಪ್ರಾರ್ಥಿಸುವುದನ್ನು ಜನರು ನೋಡಬೇಕೆಂಬುದೇ ಅವರ ಬಯಕೆ. ಅವರು ಆಗಲೇ ಅದರ ಪೂರ್ಣ ಪ್ರತಿಫಲವನ್ನು ಹೊಂದಿಕೊಂಡಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ನೀವು ಪ್ರಾರ್ಥನೆ ಮಾಡಬೇಕಾದರೆ, ನಿಮ್ಮ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು ನಿಮಗೆ ಕಾಣದಿರುವ ನಿಮ್ಮ ತಂದೆಗೆ ಪ್ರಾರ್ಥಿಸಿ. ರಹಸ್ಯದಲ್ಲಿ ನಡೆಯುವ ಕಾರ್ಯಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುವನು.

“ನೀವು ಪ್ರಾರ್ಥಿಸುವಾಗ ದೇವರನ್ನು ತಿಳಿದಿಲ್ಲದ ಜನರಂತೆ ಪ್ರಾರ್ಥಿಸಬೇಡಿ. ಅವರು ಅರ್ಥವಿಲ್ಲದ ಸಂಗತಿಗಳನ್ನು ಹೇಳುತ್ತಲೇ ಇರುತ್ತಾರೆ. ಆ ರೀತಿ ಪ್ರಾರ್ಥಿಸಬೇಡಿ. ತಾವು ಅನೇಕ ವಿಷಯಗಳನ್ನು ಹೇಳುವುದರಿಂದ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾನೆಂಬುದು ಅವರ ಆಲೋಚನೆ. ನೀವು ಅವರಂತಾಗಬೇಡಿ. ನೀವು ಕೇಳುವುದಕ್ಕೆ ಮೊದಲೇ ನಿಮಗೆ ಏನೇನು ಬೇಕು ಎಂಬುದು ನಿಮ್ಮ ತಂದೆಗೆ ತಿಳಿದಿದೆ. ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ:

‘ಪರಲೋಕದಲ್ಲಿರುವ ನಮ್ಮ ತಂದೆಯೇ,
    ನಿನ್ನ ಹೆಸರು ಪರಿಶುದ್ಧವಾಗಿರಲಿ.
10 ನಿನ್ನ ರಾಜ್ಯ ಬರಲಿ.
    ನಿನ್ನ ಚಿತ್ತ ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರಲಿ.
11 ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು.
12 ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆಯೇ
    ನಮ್ಮ ಪಾಪಗಳನ್ನು ಕ್ಷಮಿಸು.
13 ನಮ್ಮನ್ನು ಶೋಧನೆಗೆ ಒಳಪಡಿಸದೆ
    ಕೆಡುಕನಿಂದ (ಸೈತಾನನಿಂದ) ನಮ್ಮನ್ನು ರಕ್ಷಿಸು.’

14 ಹೌದು, ಬೇರೆಯವರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ. 15 ಆದರೆ ಜನರು ನಿಮಗೆ ಮಾಡಿದ ತಪ್ಪುಗಳನ್ನು ನೀವು ಕ್ಷಮಿಸದಿದ್ದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

ಉಪವಾಸದ ಕುರಿತು ಯೇಸುವಿನ ಉಪದೇಶ

16 “ನೀವು ಉಪವಾಸ ಮಾಡುವಾಗ ನಿಮ್ಮ ಮುಖವನ್ನು ಸಪ್ಪಗೆ ಮಾಡಿಕೊಳ್ಳಬೇಡಿ. ಕಪಟಿಗಳು ಹಾಗೆ ಮಾಡುತ್ತಾರೆ. ಆದರೆ ನೀವು ಕಪಟಿಗಳಂತಿರಬೇಡಿ. ತಾವು ಉಪವಾಸ ಮಾಡುತ್ತಿರುವುದಾಗಿ ಜನರಿಗೆ ತೋರ್ಪಡಿಸಿಕೊಳ್ಳಲು ಅವರು ತಮ್ಮ ಮುಖಗಳನ್ನು ವಿಕಾರಮಾಡಿಕೊಳ್ಳುತ್ತಾರೆ. ಆ ಕಪಟಿಗಳು ತಮಗೆ ಬರತಕ್ಕ ಪ್ರತಿಫಲವನ್ನು ಸಂಪೂರ್ಣವಾಗಿ ಹೊಂದಾಯಿತೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 17 ಆದ್ದರಿಂದ ನೀವು ಉಪವಾಸ ಮಾಡುವಾಗ, ಮುಖವನ್ನು ತೊಳೆದುಕೊಳ್ಳಿರಿ; ತಲೆಗೆ ಎಣ್ಣೆಯನ್ನು ಹಚ್ಚಿಕೊಳ್ಳಿರಿ. 18 ಆಗ ನೀವು ಉಪವಾಸ ಮಾಡುತ್ತಿದ್ದೀರೆಂದು ಜನರಿಗೆ ಗೊತ್ತಾಗುವುದಿಲ್ಲ. ಆದರೆ ನಿಮಗೆ ಅಗೋಚರವಾಗಿರುವ ನಿಮ್ಮ ತಂದೆಯು ನಿಮ್ಮನ್ನು ನೋಡುತ್ತಾನೆ. ರಹಸ್ಯದಲ್ಲಿ ನಡೆಯುವ ಸಂಗತಿಗಳನ್ನು ನೋಡಬಲ್ಲ ನಿಮ್ಮ ತಂದೆಯು ನಿಮಗೆ ಪ್ರತಿಫಲವನ್ನು ಕೊಡುತ್ತಾನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International