Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 3

ಸ್ನಾನಿಕ ಯೋಹಾನನ ಉಪದೇಶ

(ಮಾರ್ಕ 1:1-8; ಲೂಕ 3:1-9,15-17; ಯೋಹಾನ 1:19-28)

ಆ ಕಾಲದಲ್ಲಿ ಸ್ನಾನಿಕ ಯೋಹಾನನು ಜುದೇಯದ ಅಡವಿಯಲ್ಲಿ ಬೋಧಿಸುವುದಕ್ಕೆ ಪ್ರಾರಂಭಿಸಿದನು. “ಪರಲೋಕರಾಜ್ಯವು ಸಮೀಪಿಸಿತು. ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ” ಎಂದು ಅವನು ಬೋಧಿಸಿದನು.

“‘ಪ್ರಭುವಿಗಾಗಿ ಮಾರ್ಗವನ್ನು ಸಿದ್ಧಮಾಡಿರಿ;
ಆತನ ಹಾದಿಗಳನ್ನು ನೆಟ್ಟಗೆಮಾಡಿರಿ’
    ಎಂದು ಅಡವಿಯಲ್ಲಿ ಒಬ್ಬನು ಕೂಗುತ್ತಿದ್ದಾನೆ”(A)

ಎಂದು ಸ್ನಾನಿಕ ಯೋಹಾನನನ್ನೇ ಕುರಿತು ಪ್ರವಾದಿಯಾದ ಯೆಶಾಯ ಹೇಳಿದ್ದನು.

ಯೋಹಾನನ ಉಡುಪುಗಳು ಒಂಟೆಯ ಕೂದಲಿನಿಂದ ಮಾಡಲ್ಪಟ್ಟಿದ್ದವು. ಅವನಿಗೆ ಸೊಂಟದಲ್ಲಿ ತೊಗಲಿನ ನಡುಪಟ್ಟಿ ಇತ್ತು. ಅವನು ಮಿಡತೆ ಮತ್ತು ಕಾಡುಜೇನನ್ನು ಆಹಾರವಾಗಿ ತಿನ್ನುತ್ತಿದ್ದನು. ಜನರು ಯೋಹಾನನ ಉಪದೇಶವನ್ನು ಕೇಳಲು ಜೆರುಸಲೇಮಿನಿಂದಲೂ, ಜುದೇಯ ಮತ್ತು ಜೋರ್ಡನ್ ನದಿಯ ಸುತ್ತಲಿದ್ದ ಎಲ್ಲಾ ಸ್ಥಳಗಳಿಂದಲೂ ಬರುತ್ತಿದ್ದರು. ಜನರು ತಾವು ಮಾಡಿದ ಪಾಪಗಳನ್ನು ಒಪ್ಪಿಕೊಂಡ ಮೇಲೆ ಯೋಹಾನನು ಅವರಿಗೆ ಜೋರ್ಡನ್ ನದಿಯಲ್ಲಿ ದೀಕ್ಷಾಸ್ನಾನ ಕೊಡುತ್ತಿದ್ದನು.

ಅನೇಕ ಫರಿಸಾಯರು ಮತ್ತು ಸದ್ದುಕಾಯರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದರು. ಯೋಹಾನನು ಅವರನ್ನು ನೋಡಿ, “ನೀವೆಲ್ಲರು ಸರ್ಪಗಳು! ಬರಲಿರುವ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ನಿಮಗೆ ಎಚ್ಚರಿಸಿದವರು ಯಾರು? ನಿಮ್ಮ ಮನಸ್ಸು ನಿಜವಾಗಿಯೂ ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದನ್ನು ನೀವು ತಕ್ಕ ಕಾರ್ಯಗಳ ಮೂಲಕ ತೋರಿಸಿ. ‘ಅಬ್ರಹಾಮನು ನಮ್ಮ ತಂದೆ’ ಎಂದು ನೀವು ಜಂಬಪಡುವುದೇಕೆ? ದೇವರು ಅಬ್ರಹಾಮನಿಗಾಗಿ ಇಲ್ಲಿರುವ ಬಂಡೆಗಳಿಂದಲೂ ಮಕ್ಕಳನ್ನು ಸೃಷ್ಟಿಸಬಲ್ಲನು ಎಂದು ನಾನು ನಿಮಗೆ ಹೇಳುತ್ತೇನೆ. 10 ಮರಗಳನ್ನು ಕಡಿದುಹಾಕಲು ಕೊಡಲಿ ಈಗಲೇ ಸಿದ್ಧವಾಗಿದೆ. ಒಳ್ಳೆಯ ಫಲಬಿಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು.

11 “ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿಕೊಂಡಿದೆ ಎಂಬುದಕ್ಕೆ ಗುರುತಾಗಿ ನಾನು ನಿಮಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನನ್ನ ಹಿಂದೆ ಬರುವವನು ನನಗಿಂತ ಹೆಚ್ಚಿನವನು. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ನಿಮಗೆ ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ದೀಕ್ಷಾಸ್ನಾನ ಮಾಡಿಸುವನು. 12 ಆತನು ಕಾಳನ್ನು ಸ್ವಚ್ಛಗೊಳಿಸಲು ಸಿದ್ಧನಾಗಿದ್ದಾನೆ. ಆತನು ಕಾಳನ್ನು ಹೊಟ್ಟಿನಿಂದ ಬೇರ್ಪಡಿಸಿ ಒಳ್ಳೆಯ ಕಾಳುಗಳನ್ನು ಕಣಜದಲ್ಲಿ ತುಂಬಿಸಿ ಹೊಟ್ಟನ್ನು ನಂದಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವನು” ಎಂದು ಹೇಳಿದನು.

ಯೋಹಾನನಿಂದ ಯೇಸುವಿಗೆ ದೀಕ್ಷಾಸ್ನಾನ

(ಮಾರ್ಕ 1:9-11; ಲೂಕ 3:21-22)

13 ಆ ಸಮಯದಲ್ಲಿ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಗಲಿಲಾಯದಿಂದ ಜೋರ್ಡನ್ ನದಿಗೆ ಬಂದನು. 14 ಆದರೆ ಯೋಹಾನನು, “ನಾನೇ ನಿನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕಾಗಿದೆ. ಹೀಗಿರಲು ನನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ನೀನು ಬರುವುದೇಕೆ?” ಎಂದು ಹೇಳಿ ಆತನನ್ನು ತಡೆಯಲೆತ್ನಿಸಿದನು.

15 ಯೇಸು, “ಸದ್ಯಕ್ಕೆ ಒಪ್ಪಿಕೊ. ನಾವು ಯೋಗ್ಯವಾದ ಕಾರ್ಯಗಳನ್ನೆಲ್ಲ ಮಾಡಬೇಕು” ಎಂದು ಉತ್ತರಕೊಟ್ಟನು. ಆಗ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸಲು ಒಪ್ಪಿಕೊಂಡನು.

16 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದನು. ಕೂಡಲೇ ಆಕಾಶವು ತೆರೆಯಿತು. ದೇವರಾತ್ಮನು ಪಾರಿವಾಳದ ರೂಪದಲ್ಲಿ ಕೆಳಗಿಳಿದು ತನ್ನ ಮೇಲೆ ಬರುತ್ತಿರುವುದನ್ನು ಯೇಸು ಕಂಡನು. 17 ಆಗ ಪರಲೋಕದಿಂದ ಧ್ವನಿಯೊಂದು ಹೊರಟು, “ಈತನೇ (ಯೇಸು) ನನ್ನ ಪ್ರಿಯ ಮಗನು. ಈತನನ್ನು ನಾನು ಬಹಳ ಮೆಚ್ಚಿದ್ದೇನೆ” ಎಂದು ಹೇಳಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International