Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಪ್ರಕಟನೆ 8

ಏಳನೆಯ ಮುದ್ರೆ

ಕುರಿಮರಿಯಾದಾತನು ಏಳನೆಯ ಮುದ್ರೆಯನ್ನು ಒಡೆದನು. ಆಗ ಪರಲೋಕದಲ್ಲಿ ಅರ್ಧ ಗಂಟೆಯ ಕಾಲ ನಿಶ್ಯಬ್ದವಾಯಿತು. ದೇವರ ಎದುರಿನಲ್ಲಿ ಏಳು ದೇವದೂತರು ನಿಂತಿರುವುದನ್ನು ನಾನು ನೋಡಿದೆನು. ಅವರಿಗೆ ಏಳು ತುತೂರಿಗಳನ್ನು ಕೊಡಲಾಯಿತು.

ಮತ್ತೊಬ್ಬ ದೇವದೂತನು ಬಂದು, ಯಜ್ಞವೇದಿಕೆಯ ಬಳಿ ನಿಂತನು. ಈ ದೇವದೂತನು ಧೂಪವಿದ್ದ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡಿದ್ದನು. ದೇವರ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಅರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವನ್ನು ಕೊಡಲಾಯಿತು. ಈ ದೇವದೂತನು ಸಿಂಹಾಸನದ ಎದುರಿನಲ್ಲಿರುವ ಚಿನ್ನದ ಯಜ್ಞವೇದಿಕೆಯ ಮೇಲೆ ಈ ಧೂಪವನ್ನು ಇಟ್ಟನು. ಧೂಪದ ಹೊಗೆಯು ದೇವದೂತನ ಕೈಯಿಂದ ದೇವಜನರ ಪ್ರಾರ್ಥನೆಗಳೊಂದಿಗೆ ದೇವರ ಬಳಿಗೆ ಏರಿಹೋಯಿತು. ಆಗ ದೇವದೂತನು ಧೂಪವಿದ್ದ ಪಾತ್ರೆಯನ್ನು ಯಜ್ಞವೇದಿಕೆಯ ಬೆಂಕಿಯಿಂದ ತುಂಬಿಸಿ ಅದನ್ನು ಭೂಮಿಯ ಮೇಲೆ ಎಸೆದನು. ಆಗ ಮಿಂಚು ಗುಡುಗುಗಳೂ ಮತ್ತಿತರ ಧ್ವನಿಗಳೂ ಭೂಕಂಪಗಳೂ ಉಂಟಾದವು.

ಏಳು ತುತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು

ನಂತರ ಆ ಏಳು ಮಂದಿ ದೇವದೂತರು ಏಳು ತುತೂರಿಗಳನ್ನು ಊದಲು ಸಿದ್ಧರಾದರು.

ಮೊದಲನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ರಕ್ತದಲ್ಲಿ ಕಲಸಿದ್ದ ಆಲಿಕಲ್ಲುಗಳ ಮತ್ತು ಬೆಂಕಿಯ ಮಳೆಯು ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರನೆಯ ಒಂದು ಭಾಗ ಮತ್ತು ಹಸಿರು ಹುಲ್ಲೆಲ್ಲಾ ಸುಟ್ಟುಹೋದವು; ಮತ್ತು ಮರಗಳಲ್ಲಿ ಮೂರನೆಯ ಒಂದು ಭಾಗ ಸುಟ್ಟುಹೋದವು.

ಎರಡನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಟ್ಟವೋ ಎಂಬಂತಿದ್ದ ವಸ್ತುವೊಂದನ್ನು ಸಮುದ್ರದೊಳಕ್ಕೆ ಎಸೆಯಲಾಯಿತು. ಆಗ ಸಮುದ್ರದ ಮೂರನೆಯ ಒಂದು ಭಾಗ ರಕ್ತವಾಯಿತು. ಸಮುದ್ರದಲ್ಲಿದ್ದ ಜೀವಿಗಳಲ್ಲಿ ಮೂರನೆಯ ಒಂದು ಭಾಗ ಸತ್ತುಹೋದವು ಮತ್ತು ಹಡಗುಗಳಲ್ಲಿ ಮೂರನೆಯ ಒಂದು ಭಾಗ ನಾಶವಾದವು.

10 ಮೂರನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ಕೆಳಗೆ ಬಿತ್ತು. ಆ ನಕ್ಷತ್ರವು ನದಿಗಳಲ್ಲಿ ಮತ್ತು ನೀರಿನ ಬುಗ್ಗೆಗಳಲ್ಲಿ ಮೂರನೆಯ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರಕ್ಕೆ “ಕಹಿ ಮರ”[a] ಎಂದು ಹೆಸರು. ನೀರಿನಲ್ಲಿ ಮೂರನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿದು ಅನೇಕ ಜನರು ಸತ್ತುಹೋದರು.

12 ನಾಲ್ಕನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಸೂರ್ಯನಲ್ಲಿ ಮೂರನೆಯ ಒಂದು ಭಾಗ, ಚಂದ್ರನಲ್ಲಿ ಮೂರನೆಯ ಒಂದು ಭಾಗ ಮತ್ತು ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗ ಬಡಿಯಲ್ಪಟ್ಟು ಅವುಗಳಲ್ಲಿ ಮೂರನೆಯ ಒಂದು ಭಾಗ ಕತ್ತಲಾಯಿತು. ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಮೂರನೆಯ ಒಂದು ಭಾಗಕ್ಕೆ ಬೆಳಕಿಲ್ಲದಂತಾಯಿತು.

13 ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ಎತ್ತರದಲ್ಲಿ ಗರುಡ ಪಕ್ಷಿಯೊಂದು ಹಾರಾಡುತ್ತಿರುವುದನ್ನು ಕಂಡೆನು. ಆ ಪಕ್ಷಿಯು ಗಟ್ಟಿಯಾದ ಧ್ವನಿಯಲ್ಲಿ, “ತೊಂದರೆ! ತೊಂದರೆ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೊಂದರೆ! ಇತರ ಮೂರು ಮಂದಿ ದೇವದೂತರು ತಮ್ಮ ತುತೂರಿಗಳನ್ನು ಊದಿದಾಗ ವಿಪತ್ತುಗಳು ಆರಂಭವಾಗುತ್ತವೆ” ಎಂದು ಕೂಗಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International