Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಇಬ್ರಿಯರಿಗೆ 11:1-19

ನಂಬಿಕೆ

11 ನಂಬಿಕೆ ಎಂದರೆ ನಾವು ನಿರೀಕ್ಷೆಯಿಂದಿರುವ ಸಂಗತಿಗಳಲ್ಲಿ ಭರವಸದಿಂದಿರುವುದೂ ನಮ್ಮ ಕಣ್ಣಿಗೆ ಕಾಣದಿರುವುದನ್ನು ನಿಜವೆಂದು ತಿಳಿದುಕೊಳ್ಳುವುದೂ ಆಗಿದೆ. ಬಹಳ ಹಿಂದಿನ ಕಾಲದಲ್ಲಿ ಜೀವಿಸಿದ್ದ ಜನರಲ್ಲಿ ಈ ರೀತಿಯ ನಂಬಿಕೆಯಿದ್ದುದರಿಂದ ದೇವರು ಅವರ ವಿಷಯದಲ್ಲಿ ಸಂತೋಷಪಟ್ಟನು.

ದೇವರು ತನ್ನ ಆಜ್ಞೆಯಿಂದ ಈ ಲೋಕವನ್ನು ಸೃಷ್ಟಿಸಿದನೆಂಬುದನ್ನು ಅರ್ಥಮಾಡಿಕೊಳ್ಳಲು ನಂಬಿಕೆ ನಮಗೆ ಸಹಾಯ ಮಾಡುತ್ತದೆ. ಹೇಗೆಂದರೆ ನಮ್ಮ ಕಣ್ಣಿಗೆ ಕಾಣುವಂಥ ವಸ್ತುಗಳಿಂದ ಈ ಜಗತ್ತು ಸೃಷ್ಟಿಯಾಗಲಿಲ್ಲ.

ಕಾಯಿನ ಮತ್ತು ಹೇಬೆಲರಿಬ್ಬರೂ ದೇವರಿಗೆ ಯಜ್ಞಗಳನ್ನು ಅರ್ಪಿಸಿದರು. ಆದರೆ ಹೇಬೆಲನಲ್ಲಿ ನಂಬಿಕೆಯಿದ್ದುದರಿಂದ ಅವನು ದೇವರಿಗೆ ಉತ್ತಮವಾದ ಯಜ್ಞವನ್ನು ಅರ್ಪಿಸಿದನು. ಅವನು ಅರ್ಪಿಸಿದ ವಸ್ತುಗಳಿಂದ ತನಗೆ ಸಂತೋಷವಾಯಿತೆಂದು ದೇವರೇ ಹೇಳಿದನು. ಅವನಲ್ಲಿ ನಂಬಿಕೆಯಿದ್ದುದರಿಂದ ದೇವರು ಅವನನ್ನು ಒಳ್ಳೆಯ ಮನುಷ್ಯನೆಂದು ಕರೆದನು. ಹೇಬೆಲನು ಸತ್ತುಹೋದನು, ಆದರೂ ತನ್ನ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ.

ಹನೋಕನು ಸಾವನ್ನು ಅನುಭವಿಸದೆ ಈ ಲೋಕದಿಂದ ಮೇಲೋಕಕ್ಕೆ ಒಯ್ಯಲ್ಪಟ್ಟನು. ಪವಿತ್ರ ಗ್ರಂಥವು ಹೇಳುವಂತೆ, ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರಿಗೆ ನಿಜವಾಗಿಯೂ ಮೆಚ್ಚಿಕೆಯಾಗಿದ್ದನು. ತರುವಾಯ ಜನರಿಗೆ ಅವನು ಸಿಕ್ಕಲೇ ಇಲ್ಲ. ಅವನ ನಂಬಿಕೆಯ ದೆಸೆಯಿಂದ ದೇವರು ಅವನನ್ನು ತನ್ನೊಡನಿರಲು ಕೊಂಡೊಯ್ದನು. ನಂಬಿಕೆಯಿಲ್ಲದೆ ದೇವರನ್ನು ಯಾರೂ ಮೆಚ್ಚಿಸಲಾಗುವುದಿಲ್ಲ. ದೇವರ ಬಳಿಗೆ ಬರುವ ಯಾರೇ ಆಗಲಿ, ದೇವರು ಇದ್ದಾನೆಂತಲೂ ಆತನನ್ನು ಮನಃಪೂರ್ವಕವಾಗಿ ಹುಡುಕುವ ಜನರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆಂತಲೂ ನಂಬಬೇಕು.

ಕಣ್ಣಿಗೆ ಇನ್ನೂ ಕಾಣದಿದ್ದ ಸಂಗತಿಗಳ ಬಗ್ಗೆ ದೇವರು ನೋಹನನ್ನು ಎಚ್ಚರಿಸಿದನು. ನೋಹನು ದೇವರಲ್ಲಿ ನಂಬಿಕೆಯಿಟ್ಟಿದ್ದನು ಮತ್ತು ಭಕ್ತಿಯುಳ್ಳವನಾಗಿದ್ದನು. ಆದ್ದರಿಂದ ಅವನು ತನ್ನ ಕುಟುಂಬ ರಕ್ಷಣೆಗಾಗಿ ದೊಡ್ಡ ನಾವೆಯನ್ನು ಕಟ್ಟಿ, ಈ ಲೋಕದ ತಪ್ಪನ್ನು ತೋರ್ಪಡಿಸಿದನು. ಹೀಗೆ, ನಂಬಿಕೆಯ ಮೂಲಕ ನೀತಿವಂತರಾದ ಜನರಲ್ಲಿ ಅವನೂ ಒಬ್ಬನಾದನು.

ದೇವರು ತಾನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದ ಸ್ಥಳಕ್ಕೆ ಪ್ರಯಾಣ ಮಾಡಬೇಕೆಂದು ಅಬ್ರಹಾಮನನ್ನು ಕರೆದನು. ಆ ಸ್ಥಳವು ಎಲ್ಲಿದೆಯೆಂಬುದು ಅವನಿಗೆ ತಿಳಿದಿರಲಿಲ್ಲ. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ, ದೇವರಿಗೆ ವಿಧೇಯನಾಗಿ ಪ್ರಯಾಣ ಮಾಡಲಾರಂಭಿಸಿದನು. ದೇವರು ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ಅವನು ಪ್ರವಾಸಿಗನಂತೆ ವಾಸಮಾಡಿದ್ದು ನಂಬಿಕೆಯಿಂದಲೇ. ಅದೇ ವಾಗ್ದಾನಕ್ಕೆ ಸಹ ಭಾದ್ಯರಾಗಿದ್ದ ಇಸಾಕನೂ ಯಾಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. 10 ಅಬ್ರಹಾಮನು ಶಾಶ್ವತವಾದ ಅಡಿಪಾಯಗಳುಳ್ಳ ನಗರಕ್ಕಾಗಿ ಕಾದಿದ್ದನು. ದೇವರೇ ಸಂಕಲ್ಪಿಸಿ, ನಿರ್ಮಿಸಿದ ನಗರಕ್ಕಾಗಿ ಅವನು ಕಾದಿದ್ದನು.

11 ಅಬ್ರಹಾಮನು ಮಕ್ಕಳನ್ನು ಪಡೆಯಲಾಗದಷ್ಟು ವೃದ್ಧನಾಗಿದ್ದನು. ಸಾರಳು ಮಕ್ಕಳನ್ನು ಪಡೆಯಲು ಸಮರ್ಥಳಾಗಿರಲಿಲ್ಲ. ಆದರೆ ಅಬ್ರಹಾಮನಿಗೆ ದೇವರಲ್ಲಿ ನಂಬಿಕೆಯಿದ್ದುದರಿಂದ, ಅವರು ಮಕ್ಕಳನ್ನು ಪಡೆಯಲು ಸಮರ್ಥರಾಗುವಂತೆ ದೇವರು ಮಾಡಿದನು. 12 ಅವನು ಮೃತಪ್ರಾಯನಾಗಿದ್ದವನಂತೆ ವೃದ್ಧನಾಗಿದ್ದರೂ ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದ ಉಸುಬಿನಂತೆಯೂ ಅಸಂಖ್ಯಾತವಾಗಿ ಮಕ್ಕಳು ಹುಟ್ಟಿದರು.

13 ಈ ಮಹಾಪುರಷರೆಲ್ಲರೂ ತಾವು ಸಾಯುವವರೆಗೂ ನಂಬಿಕೆಯುಳ್ಳವರಾಗಿದ್ದರು. ದೇವರು ತನ್ನ ಜನರಿಗೆ ವಾಗ್ದಾನ ಮಾಡಿದ್ದವುಗಳನ್ನು ಆ ಜನರು ಪಡೆಯಲಿಲ್ಲ. ಮುಂದೆ ಬಹುಕಾಲದ ನಂತರ ಬರಲಿದ್ದ ಅವುಗಳನ್ನು ನೋಡಿ ಅವರು ಸಂತೋಷಗೊಂಡರು. ಅವರು ತಾವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಅಪರಿಚಿತರಂತೆ ಇದ್ದೇವೆ ಎಂಬುದನ್ನು ಒಪ್ಪಿಕೊಂಡರು. 14 ಅವರು ಹಾಗೆ ಒಪ್ಪಿಕೊಂಡಿದ್ದರಿಂದ ತಾವು ಸ್ವದೇಶಕ್ಕಾಗಿ ಕಾದಿರುವುದಾಗಿ ತೋರ್ಪಡಿಸಿಕೊಂಡಂತಾಯಿತು. 15 ಆ ಜನರು ತಾವು ಬಿಟ್ಟುಬಂದ ದೇಶದ ಮೇಲೇನಾದರೂ ಮನಸ್ಸಿಟ್ಟಿದ್ದರೆ, ಅವರು ಮರಳಿಹೋಗುತ್ತಿದ್ದರು. 16 ಆದರೆ ಆ ಜನರು ಉತ್ತಮ ದೇಶವಾದ ಪರಲೋಕಕ್ಕಾಗಿ ಕಾದಿದ್ದರು. ಆದ್ದರಿಂದ ದೇವರು ತನ್ನನ್ನು ಅವರ ದೇವರೆಂದು ಹೇಳಿಕೊಳ್ಳಲು ನಾಚಿಕೆಪಡದೆ ಅವರಿಗಾಗಿ ಒಂದು ನಗರವನ್ನು ಸಿದ್ಧಪಡಿಸಿದನು.

17-18 ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಇಸಾಕನನ್ನು ಯಜ್ಞವಾಗಿ ಸಮರ್ಪಿಸೆಂದು ದೇವರು ಅವನಿಗೆ ಹೇಳಿದನು. ಅಬ್ರಹಾಮನಲ್ಲಿ ನಂಬಿಕೆಯಿದ್ದುದರಿಂದ ವಿಧೇಯನಾದನು. ದೇವರು ಅವನಿಗೆ, “ನಿನ್ನ ಸಂತತಿಗಳವರು ಇಸಾಕನ ಮೂಲಕ ಬರುವರು”(A) ಎಂದು ಮೊದಲೇ ವಾಗ್ದಾನ ಮಾಡಿದ್ದನು. ಆದರೂ ತನ್ನ ಒಬ್ಬನೇ ಮಗನನ್ನು ಅರ್ಪಿಸಲು ಅವನು ಸಿದ್ಧನಾಗಿದ್ದನು. 19 ದೇವರು ಸತ್ತವರನ್ನು ಜೀವಂತವಾಗಿ ಎಬ್ಬಿಸಬಲ್ಲನೆಂದು ಅವನು ನಂಬಿದ್ದನು. ಇಸಾಕನನ್ನು ಕೊಲ್ಲದಂತೆ ದೇವರು ಅವನನ್ನು ತಡೆದಾಗ, ಅವನಿಗೆ ನಿಜವಾಗಿಯೂ ಇಸಾಕನನ್ನು ಸಾವಿನಿಂದ ಮರಳಿ ಪಡೆದಂತಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International