Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಇಬ್ರಿಯರಿಗೆ 10:19-39

ಸಮೀಪಕ್ಕೆ ಬನ್ನಿರಿ

19-20 ಸಹೋದರ ಸಹೋದರಿಯರೇ, ನಾವು ಮಹಾ ಪವಿತ್ರಸ್ಥಳವನ್ನು ಪ್ರವೇಶಿಸಲು ಸಂಪೂರ್ಣವಾಗಿ ಸ್ವತಂತ್ರರಾಗಿದ್ದೇವೆ. ಯೇಸು ನಮಗಾಗಿ ತೆರೆದಿರುವ ಹೊಸ ಮಾರ್ಗದ ಮೂಲಕ ನಾವು ಭಯವಿಲ್ಲದೆ ಪ್ರವೇಶಿಸಬಹುದು. ಅದು ಜೀವವುಳ್ಳ ಮಾರ್ಗ. ಕ್ರಿಸ್ತನ ದೇಹವೆಂಬ ತೆರೆಯ ಮೂಲಕ ಈ ಹೊಸ ಮಾರ್ಗವು ನಮ್ಮನ್ನು ಮುಂದಕ್ಕೆ ಕೊಂಡೊಯ್ಯವುದು. 21 ದೇವರ ಮನೆಯನ್ನು ಆಳಲು ನಮಗೊಬ್ಬ ಶ್ರೇಷ್ಠ ಯಾಜಕನಿರುವನು. 22 ನಾವು ತೊಳೆಯಲ್ಪಟ್ಟವರಾಗಿದ್ದು ಕೆಟ್ಟ ಮನಸ್ಸಾಕ್ಷಿಯಿಂದ ಬಿಡುಗಡೆ ಹೊಂದಿದ್ದೇವೆ. ನಮ್ಮ ದೇಹಗಳನ್ನು ಶುದ್ಧವಾದ ನೀರಿನಿಂದ ತೊಳೆಯಲಾಗಿದೆ. ಆದ್ದರಿಂದ ಪೂರ್ಣನಂಬಿಕೆಯಿಂದಲೂ ಶುದ್ಧವಾದ ಹೃದಯದಿಂದಲೂ ದೇವರ ಬಳಿಗೆ ಬರೋಣ. 23 ನಮ್ಮಲ್ಲಿರುವ ನಿರೀಕ್ಷೆಯನ್ನು ದೃಢವಾಗಿ ಕಾಯ್ದುಕೊಂಡು ಅದರ ಬಗ್ಗೆ ಜನರಿಗೆ ತಿಳಿಸುವುದರಲ್ಲಿ ದೃಢವಾಗಿರೋಣ. ದೇವರು ತನ್ನ ವಾಗ್ದಾನವನ್ನು ಈಡೇರಿಸುತ್ತಾನೆ ಎಂಬ ಭರವಸೆ ನಮ್ಮಲ್ಲಿರಬೇಕು.

ಒಬ್ಬರಿಗೊಬ್ಬರು ಸಹಾಯಮಾಡಿ ಶಕ್ತಿಯುಳ್ಳವರಾಗಿರಿ

24 ಒಬ್ಬರಿಗೊಬ್ಬರು ಹಿತಚಿಂತಕರಾಗಿರೋಣ. ಆಗ ಒಬ್ಬರಿಗೊಬ್ಬರು ಪ್ರೀತಿಯನ್ನು ತೋರ್ಪಡಿಸುವುದಕ್ಕೂ ಒಳ್ಳೆಯಕಾರ್ಯಗಳನ್ನು ಮಾಡುವುದಕ್ಕೂ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. 25 ನಾವು ಸಭೆಯಾಗಿ ಸೇರಿಬರುವುದನ್ನು ಬಿಡಬಾರದು. ಕೆಲವರು ಸಭೆಗೆ ಬರುತ್ತಿಲ್ಲ. ನಾವು ಒಟ್ಟಾಗಿ ಸೇರಿಬಂದು ಒಬ್ಬರನ್ನೊಬ್ಬರು ಬಲಪಡಿಸಬೇಕು. ಯೇಸುವು ಪ್ರತ್ಯಕ್ಷನಾಗುವ ದಿನ[a] ಸಮೀಪವಾಗುತ್ತಿರುವುದರಿಂದ ನೀವು ಇದನ್ನು ಮತ್ತಷ್ಟು ಹೆಚ್ಚಾಗಿ ಮಾಡಬೇಕು.

ಕ್ರಿಸ್ತನಿಂದ ದೂರ ಸರಿಯದಿರಿ

26 ನಾವು ಸತ್ಯವನ್ನು ತಿಳಿದುಕೊಂಡ ಮೇಲೆಯೂ ಪಾಪಗಳನ್ನು ಮಾಡುತ್ತಲೇ ಇದ್ದರೆ, ನಮ್ಮ ಪಾಪಗಳನ್ನು ಯಾವ ಯಜ್ಞವೂ ಪರಿಹರಿಸುವುದಿಲ್ಲ. 27 ನಾವು ಪಾಪಗಳಲ್ಲಿಯೇ ಮುಂದುವರಿದರೆ, ನ್ಯಾಯತೀರ್ಪಿನ ಭಯದಲ್ಲಿ ಮತ್ತು ದೇವರ ವಿರುದ್ಧವಾಗಿ ಜೀವಿಸುವವರನ್ನು ದಹಿಸುವ ಭಯಂಕರ ಬೆಂಕಿಯ ಭಯದಲ್ಲಿ ಜೀವಿಸಬೇಕಾಗುತ್ತದೆ. 28 ಮೋಶೆಯ ನಿಯಮಗಳಿಗೆ ಅವಿಧೇಯನಾದ ವ್ಯಕ್ತಿಯು ಇಬ್ಬರು ಅಥವಾ ಮೂವರು ಸಾಕ್ಷಿಗಳಿಂದ ತಪ್ಪಿತಸ್ಥನೆಂದು ನಿರ್ಧರಿಸಲ್ಪಟ್ಟರೆ, ಅವನಿಗೆ ಕ್ಷಮೆ ದೊರೆಯುತ್ತಿರಲಿಲ್ಲ. ಅವನನ್ನು ಕೊಂದುಹಾಕುತ್ತಿದ್ದರು. 29 ಹೀಗಿರಲು ದೇವರ ಮಗನನ್ನು ದ್ವೇಷಿಸುವ ಒಬ್ಬ ವ್ಯಕ್ತಿಯನ್ನು ಏನು ಮಾಡಬೇಕೆಂದು ನೀವು ಆಲೋಚಿಸುವಿರಿ? ನಿಜವಾಗಿಯೂ ಆ ವ್ಯಕ್ತಿಗೆ ಇದಕ್ಕಿಂತಲೂ ತೀವ್ರವಾದ ದಂಡನೆಯನ್ನು ವಿಧಿಸಬೇಕಲ್ಲವೇ? ಹೌದು, ಹೊಸ ಒಡಂಬಡಿಕೆಯ ರಕ್ತಕ್ಕೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ಕ್ರೂರವಾದ ದಂಡನೆಯಾಗಬೇಕು. ಆ ರಕ್ತವು ಅವನನ್ನು ಪವಿತ್ರನನ್ನಾಗಿಸಿತು. ದೇವರಾತ್ಮನ ಕೃಪೆಗೆ ಗೌರವವನ್ನು ತೋರದಿದ್ದ ಆ ವ್ಯಕ್ತಿಗೆ ತೀವ್ರವಾದ ದಂಡನೆಯಾಗಬೇಕು. 30 “ಜನರು ಮಾಡುವ ತಪ್ಪು ಕಾರ್ಯಗಳಿಗಾಗಿ ನಾನು ಅವರನ್ನು ದಂಡಿಸುತ್ತೇನೆ. ನಾನು ಮುಯ್ಯಿಗೆ ಮುಯ್ಯಿ ತೀರಿಸುತ್ತೇನೆ.”(A) ಎಂದು ದೇವರು ಹೇಳಿದ್ದು ನಮಗೆ ತಿಳಿದೇ ಇದೆ. 31 “ಪ್ರಭುವು ತನ್ನ ಜನರಿಗೆ ನ್ಯಾಯತೀರ್ಪು ನೀಡುತ್ತಾನೆ” ಎಂದು ಸಹ ದೇವರು ಹೇಳಿದ್ದಾನೆ. ಜೀವಸ್ವರೂಪನಾದ ದೇವರ ಹಿಡಿತಕ್ಕೆ ಸಿಕ್ಕಿ ಬೀಳುವುದು ಪಾಪಿಗೆ ಭಯಂಕರವಾಗಿದೆ.

ನಿಮ್ಮಲ್ಲಿರುವ ಸಂತೋಷ ಮತ್ತು ಧೈರ್ಯಗಳನ್ನು ಬಿಡಬೇಡಿ

32 ನೀವು ಸತ್ಯವನ್ನು ತಿಳಿದುಕೊಂಡ ಆ ದಿನಗಳನ್ನು ನೆನಪು ಮಾಡಿಕೊಳ್ಳಿ. ನೀವು ಅನೇಕ ಸಂಕಟಗಳಲ್ಲಿ ಹೋರಾಟ ಮಾಡಿದರೂ, ಧೃತಿಗೆಡದೆ ಮುಂದುವರಿದಿರಿ. 33 ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ. 34 ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.

35 ಹಿಂದೆ ಹೊಂದಿದ್ದ ಧೈರ್ಯವನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ. 36 ನೀವು ತಾಳ್ಮೆಯಿಂದಿರಬೇಕು, ನೀವು ದೇವರ ಚಿತ್ತಾನುಸಾರವಾಗಿ ಮಾಡಿದ ನಂತರ ಆತನ ವಾಗ್ದಾನದಂತೆ ನಿಮಗೆ ಪ್ರತಿಫಲವು ಸಿಕ್ಕೇ ಸಿಗುತ್ತದೆ. 37 ಆತನು ಹೀಗೆ ಹೇಳುತ್ತಾನೆ:

“ಸ್ವಲ್ಪಕಾಲದಲ್ಲಿಯೇ, ಬರುವಾತನು ಬರುತ್ತಾನೆ.
    ಆತನು ತಡಮಾಡುವುದಿಲ್ಲ.
38 ನೀತಿವಂತನು ನಂಬಿಕೆಯಿಂದಲೇ
    ಜೀವವನ್ನು ಹೊಂದಿಕೊಳ್ಳುವನು.
ಆದರೆ ಅವನು ಭಯದಿಂದ ಹಿಂಜರಿದರೆ
    ನಾನು ಅವನಲ್ಲಿ ಸಂತೋಷಪಡುವುದಿಲ್ಲ.”(B)

39 ಆದರೆ ನಾವು ಹಿಂಜರಿಯುವ ಜನರಲ್ಲ, ನಾಶವಾಗುವ ಜನರೂ ಅಲ್ಲ. ನಾವು ನಂಬಿಕೆಯುಳ್ಳವರಾಗಿದ್ದೇವೆ ಮತ್ತು ರಕ್ಷಣೆ ಹೊಂದಿದವರಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International